ಬೆಂಗಳೂರು: *ಗುಬ್ಬಿವಾಣಿ ಟ್ರಸ್ಟ್* ಆಯೋಜಿಸಿದ್ದ 2026ರ *’ಅವಳ ಹೆಜ್ಜೆ’ ಮಹಿಳಾ ಕನ್ನಡ ಕಿರುಚಿತ್ರೋತ್ಸವದಲ್ಲಿ* ನಿರ್ದೇಶಕಿ *ಸುಪ್ರಿಯಾ ಶಂಕರ ನಿಪ್ಪಾಣಿ ಅವರ “ರೊಟ್ಟಿ”* ಚಿತ್ರವು ಪ್ರತಿಷ್ಠಿತ *₹1 ಲಕ್ಷ ನಗದು* ಬಹುಮಾನದ *‘ಅವಳ ಹೆಜ್ಜೆ’ ಪ್ರಶಸ್ತಿಯನ್ನು* ಮುಡಿಗೇರಿಸಿಕೊಂಡಿದೆ.

ಸುಪ್ರಿಯಾ ಶಂಕರ ನಿಪ್ಪಾಣಿ ಅವರು ಚಲನಚಿತ್ರ ನಿರ್ದೇಶಕಿ, ಕಲಾವಿದೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ತಮ್ಮ ಪ್ರಶಸ್ತಿ ವಿಜೇತ ಕಿರುಚಿತ್ರಗಳಾದ ‘_ಅಪ್ಪ ಬೆಳ್ಳಿ ಅಲ್ಲ_’ ಮತ್ತು ‘_ರಾಜಿ_’ ಮೂಲಕ ಗುರುತಿಸಿಕೊಂಡಿದ್ದಾರೆ. ವಿವಿಧ ಭಾಷೆಗಳಲ್ಲಿ ಸಹ-ನಿರ್ದೇಶಕಿಯಾಗಿ ವ್ಯಾಪಕ ಅನುಭವ ಹೊಂದಿರುವ ಅವರು, ತಮ್ಮದೇ ಬ್ಯಾನರ್ ಅಡಿಯಲ್ಲಿ _‘ಚುರುಮುರಿಯಾ’_ ಎಂಬ ಕಲಾತ್ಮಕ ಪ್ರಭಾವಶಾಲಿ ಚಿತ್ರ ನಿರ್ಮಿಸಿದ್ದಾರೆ.

‘ಅವಳ ಹೆಜ್ಜೆ’ ಪ್ರಶಸ್ತಿಯ ಜೊತೆಗೆ, ವಿವಿಧ ವಿಶೇಷ ವಿಭಾಗಗಳಲ್ಲಿ ತಲಾ ₹10,000 ನಗದು ಬಹುಮಾನವನ್ನು ನಾಲ್ಕು ಕಿರುಚಿತ್ರಗಳಿಗೆ ನೀಡಲಾಯಿತು.
ಬೆಂಗಳೂರಿನ ಖ್ಯಾತ ಮಾಧ್ಯಮ ವೃತ್ತಿಪರರು, ಕಾಸ್ಟಿಂಗ್ ಡೈರೆಕ್ಟರ್ ಹಾಗೂ ಸ್ಕ್ರಿಪ್ಟ್ ಮೆಂಟರ್ ಆದ *ಸುನಯನಾ ಸುರೇಶ್* ಅವರ ಚೊಚ್ಚಲ ನಿರ್ದೇಶನದ ‘*ಮೌನ ರಾಗ*’ ಚಿತ್ರಕ್ಕೆ ‘*ಗೂಡಿನಿಂದ ಗಗನದಡೆಗೆ*’ ವಿಶೇಷ ವಿಭಾಗದ ಬಹುಮಾನ ಮತ್ತು ಶ್ರೇಯಾ ಸುನಿಲ್ ಅವರ ‘*ಆ ಮಾಡಿ*’ ಚಿತ್ರಕ್ಕೆ ‘ಹಾಸ್ಯ ಮತ್ತು ವಿಡಂಬನೆ*’ ವಿಭಾಗದ ನಗದು ಬಹುಮಾನ ನೀಡಲಾಯಿತು.

ಇನ್ನು ‘*ಸಾಮಾಜಿಕ ಬದಲಾವಣೆಯ ಕಥಾವಸ್ತು*’ ವಿಶೇಷ ವಿಭಾಗದಲ್ಲಿ, ಬಾಲ್ಯದ ಆಘಾತವನ್ನು ಮೆಟ್ಟಿ ನಿಲ್ಲುವ ಕಥಾಹಂದರ ಹೊಂದಿರುವ *ವನು ಪಾಟೀಲ್ ಅವರ ‘ನಿತ್ಯ*’ ಚಿತ್ರಕ್ಕೆ ಮತ್ತು ಮಾನವ-ವನ್ಯಜೀವಿ ಸಹಬಾಳ್ವೆಯನ್ನು ಬಿಂಬಿಸುವ ಸೌರಭ್ ರಾವ್ ಅವರ ‘*ಹುಲಿಯಪ್ಪ*’ ಸಾಕ್ಷ್ಯಚಿತ್ರಕ್ಕೆ ನಗದು ಬಹುಮಾನ ನೀಡಲಾಯಿತು. *ಹುಲಿಯಪ್ಪ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿಯನ್ನು ವನ್ಯಜೀವಿಗಳ ರಕ್ಷಣೆ ಮತ್ತು ಪುನರ್ವಸತಿಗೆ ಮೀಸಲಾಗಿರುವ ಸಂಸ್ಥೆಯಾದ ‘ಏವಿಯನ್ ಮತ್ತು ರೆಪ್ಟೈಲ್ ಪುನರ್ವಸತಿ ಕೇಂದ್ರ’ ಪ್ರಾಯೋಜಿಸಿದೆ*.

ಚಿತ್ರ ಪ್ರದರ್ಶನದ ನಂತರ, “*ಸಿನೆಮಾದಲ್ಲಿ ಅವಳ ಹೆಜ್ಜೆ : ‘ಅ – ಅಃ’ ವರೆಗೆ*” ಎಂಬ ವಿಷಯದ ಕುರಿತು ಗಂಭೀರ ಚರ್ಚಾಗೋಷ್ಠಿ ನಡೆಯಿತು. ಚಿತ್ರೋತ್ಸವದ ನಿರ್ದೇಶಕಿ *ಶಾಂತಲಾ ದಾಮ್ಲೆ* ಅವರು ನಡೆಸಿಕೊಟ್ಟ ಈ ಗೋಷ್ಠಿಯಲ್ಲಿ ಖ್ಯಾತ ನಟಿಯರಾದ *ನೀತು ಶೆಟ್ಟಿ* (‘ಗಾಳಿಪಟ’), *ಗ್ರೀಷ್ಮಾ ಶ್ರೀಧರ್* (‘ನಾನು ಕುಸುಮ’), ಚಿತ್ರ ನಿರ್ದೇಶಕಿ *ಸಂಜೋತಾ ಭಂಡಾರಿ* (‘ಪೆನ್ ಟು ಪ್ರೀಮಿಯರ್’ ಯೋಜನೆಯ ರೂವಾರಿ) ಮತ್ತು ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ *ಸಂಗೀತಾ ನಂಜುಂಡಸ್ವಾಮಿ* (‘ಬೆಳಗುತಿರಲಿ ಬೆಳ್ಳಿತೆರೆ’ ವೇದಿಕೆ) ಪಾಲ್ಗೊಂಡಿದ್ದರು. ಕಳೆದ 15 ವರ್ಷಗಳಲ್ಲಿ ಉದ್ಯಮದಲ್ಲಿ ಮಹಿಳೆಯರ ಪಾತ್ರಗಳ ವಿಕಸನವನ್ನು ಚರ್ಚಿಸಿದ ಸದಸ್ಯರು, ಭವಿಷ್ಯದ ಬೆಳವಣಿಗೆಗೆ *ಮಾರ್ಗದರ್ಶನ ಮತ್ತು ಮಹಿಳಾ ಒಗ್ಗಟ್ಟು ಪ್ರಮುಖವಾಗಿದೆ* ಎಂದು ಒತ್ತಿ ಹೇಳಿದರು. ತಮ್ಮ ಸ್ವಂತ ಅನುಭವಗಳನ್ನು ಆಧರಿಸಿ, ಅವರು ಆಕಾಂಕ್ಷಿ ವೃತ್ತಿಪರರಿಗೆ ತಾಳ್ಮೆ, ಶಿಸ್ತು ಮತ್ತು ಸಂಪೂರ್ಣ ದೃಢನಿಶ್ಚಯದಿಂದ ಉದ್ಯಮವನ್ನು ಪ್ರವೇಶಿಸಲು ಸಲಹೆ ನೀಡಿದರು.
ಚಿತ್ರೋತ್ಸವದ ಮೂಲ ಆಶಯದ ಕುರಿತು ಮಾತನಾಡಿದ ಗುಬ್ಬಿವಾಣಿ ಟ್ರಸ್ಟ್ನ ಸ್ಥಾಪಕ ಟ್ರಸ್ಟೀ *ಮಾಲವಿಕ ಗುಬ್ಬಿವಾಣಿ* ಅವರು, “ಇದು ಕೇವಲ ಒಂದು ಕಿರುಚಿತ್ರೋತ್ಸವವಲ್ಲ – ಇದು ಮಹಿಳೆಯರ ಅನುಭವಗಳು ಮತ್ತು ದೃಷ್ಟಿಕೋನಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸುವ ಒಂದು ಚಳುವಳಿಯಾಗಿದೆ. ಈ ಕಾರ್ಯಕ್ರಮದ ಯಶಸ್ಸಿನ ಆಧಾರದ ಮೇಲೆ, ನಮಗೆ ಮರುಪ್ರದರ್ಶನಕ್ಕಾಗಿ ವಿನಂತಿಗಳು ಬರುತ್ತಿವೆ.” ಎಂದು ತಿಳಿಸಿದರು.





