– ರಾಘವೇಂದ್ರ ಅಡಿಗ ಎಚ್ಚೆನ್.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ಸಿನಿಮಾ ಬಿಡುಗಡೆಯಾಗುವ ಮುನ್ನವೇ ಭಾರೀ ಚರ್ಚೆ ಹುಟ್ಟುಹಾಕಿದೆ. ವಿಶೇಷವಾಗಿ ಟೀಸರ್‌ನಲ್ಲಿ ಕಾಣಿಸಿಕೊಂಡ ಬೋಲ್ಡ್ ದೃಶ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬಂದಿದ್ದವು. ಇದೀಗ ಈ ವಿವಾದಕ್ಕೆ ನಟಿ ಪುಷ್ಪಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಟೀಸರ್ ಅಂದ್ರೆ ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸುವ ಸಣ್ಣ ಝಲಕ್ ಮಾತ್ರ. ಟೀಸರ್ ನೋಡಿ ಇಡೀ ಸಿನಿಮಾ ಜಡ್ಜ್ ಮಾಡುವುದು ಸರಿಯಲ್ಲ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಮೇಲಷ್ಟೇ ಅದರ ನಿಜವಾದ ಅರ್ಥ ಗೊತ್ತಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಕನ್ನಡ ಪ್ರೇಕ್ಷಕರಿಗೆ ಇಂತಹ ಬೋಲ್ಡ್ ಕಂಟೆಂಟ್ ಸೂಕ್ತವಲ್ಲ ಎಂಬ ಟೀಕೆಗಳಿಗೂ ಉತ್ತರಿಸಿದ ಅವರು, “ಯುವ ಜನಾಂಗ ಯಾವ ರೀತಿಯ ಸಿನಿಮಾಗಳನ್ನು ಇಷ್ಟಪಡುತ್ತದೋ, ಅದಕ್ಕೆ ತಕ್ಕಂತೆಯೇ ನಿರ್ದೇಶಕರು ಮತ್ತು ನಟರು ಕಂಟೆಂಟ್ ನೀಡುತ್ತಾರೆ. ಯಶ್ ಅವರಿಗೆ ಪ್ರೇಕ್ಷಕರ ನಾಡಿ ಗೊತ್ತಿದೆ” ಎಂದರು.

ಇದೇ ವೇಳೆ ಯಶ್ ಸಿನಿಮಾಗಳು ತಡವಾಗಿ ಬರುತ್ತಿವೆ ಎಂಬ ಚರ್ಚೆಯ ಮೇಲೂ ಪ್ರತಿಕ್ರಿಯಿಸಿದ ಪುಷ್ಪಾ, “ಇಂದು ಕನ್ನಡ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ದೊಡ್ಡ ಮಟ್ಟದ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಲು ಸಮಯ ಬೇಕಾಗುತ್ತದೆ. ಅದಕ್ಕೆ ಬೇಸರಪಡುವ ಬದಲು ಹೆಮ್ಮೆಪಡಬೇಕು” ಎಂದು ಹೇಳಿದರು.

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೈಪ್ ಸೃಷ್ಟಿಸಿದ್ದು, ಯಶ್ ಅವರ ಹೊಸ ಅವತಾರ ಹೇಗಿರಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ