ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ತಮ್ಮಲ್ಲಿ ಇಲ್ಲದುದರ ಬಗ್ಗೆ ವಿಪರೀತ ಅಹಂಕಾರ ಉಂಟಾಗಿ, ಒಣಪ್ರತಿಷ್ಠೆಗಾಗಿಯೋ ಅಥವಾ ಸ್ಟೇಟಸ್ ಗಾಗಿಯೋ ಬಡಿದಾಡುವ ದುಸ್ವಭಾವ ದಿನೇ ದಿನೇ ಹೆಚ್ಚಾಗುತ್ತಲಿದೆ. ತಮ್ಮಲ್ಲಿ ಜ್ಞಾನ, ತಿಳಿವಳಿಕೆ ಇಲ್ಲದಿದ್ದರೂ ಇದೆ ಎಂದು ಸಾಬೀತುಪಡಿಸುವ ಈ ಪರಿಗೆ ಏನು ಹೇಳುವುದು……?
ವಸ್ತ್ರ ಒಡವೆಗಳ ಮೂಲಕ ತಾವೇ ಶ್ರೀಮಂತರು ಎಂಬುದನ್ನು ತೋರಿಸುವ ಸ್ವಭಾವ, ಇಲ್ಲಸಲ್ಲದ ಒಣ ಪ್ರತಿಷ್ಠೆ ಮುಂದಕ್ಕೆ ದುರಂತವಾಗುತ್ತದೆ ಎನ್ನುವುದಕ್ಕೆ ಇದು ಅತ್ಯಂತ ಸೂಕ್ತ ದೃಷ್ಟಾಂತವಾಗಿದೆ. ಇಂತಹ ಋಣಾತ್ಮಕ ವಿಚಾರಗಳು ಅದೆಷ್ಟು ಮೂರ್ಖತನದಿಂದ, ಮೌಡ್ಯದಿಂದ ಅಷ್ಟೇ ಅಕ್ಕರೆ ತುಂಬಿದ ಪ್ರೀತಿಯಿಂದ ಕೂಡಿರುತ್ತವೆ ಎಂಬುದಕ್ಕೆ ಇದೊಂದು ಘನಘೋರ ಉದಾಹರಣೆ ಎಂದರೆ ತಪ್ಪಾಗಲಿಕ್ಕಿಲ್ಲ.
ರವಿ ಮತ್ತು ರಘು ಇಬ್ಬರೂ ಒಂದೇ ಶಾಲೆಯಲ್ಲಿ, ಒಂದೇ ತರಗತಿಯಲ್ಲಿಯೇ ಓದುತ್ತಿರುವ ಅಕ್ಕಪಕ್ಕದ ಮನೆಯ ಮಕ್ಕಳು. ಒಮ್ಮೆ ಶಾಲೆಯ ಪರೀಕ್ಷಾ ಫಲಿತಾಂಶಗಳು ಪ್ರಕಟಾದಾಗ ರವಿ ಎಲ್ಲಾ ವಿಷಯಗಳಲ್ಲೂ + ಶ್ರೇಣಿಯನ್ನು ಹಾಗೂ ರಘು A+ ಶ್ರೇಣಿಯನ್ನು ಪಡೆದುಕೊಳ್ಳುತ್ತಾರೆ.
ಫಲಿತಾಂಶ ಬರುತ್ತಿದ್ದಂತೆಯೇ ರವಿಯ ತಾಯಿ ಮಗನ ಪ್ರಗತಿ ಪತ್ರವನ್ನು ಓಣಿಯಲ್ಲೆಲ್ಲಾ ತೋರಿಸಿ ತುಂಬಾ ಅಹಂಕಾರ ಪಡುತ್ತಾ, “ನನ್ನ ಮಗ ತುಂಬಾನೇ ಬುದ್ಧಿವಂತ! ಅವನು ಎಲ್ಲದರೂ + ಅಂಕ ತೊಗೊಂಡು ಪಾಸಾಗಿದ್ದಾನೆ,” ಎಂದು ಹೇಳುತ್ತಾ ಹೋಗುತ್ತಾಳೆ.
ತದನಂತರದಲ್ಲಿ ರಘುವಿನ ತಾಯಿ ಕೂಡಾ ಅಷ್ಟೇ ಜಂಭದಿಂದ, “ನಿನ್ನ ಮಗ A+ ಅಂಕ ಪಡೆದಿರಬಹುದೇನೋ ನಿಜ. ಆದರೆ ನನ್ನ ಮಗನ ರಕ್ತದ ಗುಂಪು ಮಾತ್ರ + ಇದೆ. ಹೀಗಾಗಿ ರವಿ ಈ ಒಂದು ಪರೀಕ್ಷೆಯಲ್ಲಿ ಮಾತ್ರ ಅದೇನೋ ಆಕಸ್ಮಿಕವಾಗಿ ಅದೃಷ್ಟಶಾತ್+ ತೊಗೊಂಡಿದ್ದಾನೆ. ಇದರಿಂದಾಗಿ ಮುಂದಿನ ಪರೀಕ್ಷೆಯಲ್ಲಿ ನನ್ನ ಮಗನೇ ಹೆಚ್ಚು ತೆಗೆದುಕೊಳ್ಳೋದು,” ಎಂದು ರವಿಯ ತಾಯಿಗಿಂತಲೂ ಹೆಚ್ಚಾಗಿ ಪ್ರಚಾರ ಮಾಡಿ, ಆಕೆಯನ್ನು ಕಸಿವಿಸಿಗೊಳ್ಳುವಂತೆ ಮಾಡುತ್ತಾಳೆ.
ಇದರಿಂದಾಗಿ ಕೊತಕೊತ ಕುದಿಯುವ ಕೋಪದಲ್ಲಿ ತನ್ನ ಮಗ ರವಿಗೆ ಆಕ್ರೋಶವಾಗಿ, “ಏ ರವಿ….! ಮುಂದಿನ ಸೆಮಿಸ್ಟರ್‌ಪರೀಕ್ಷೆಯಲ್ಲಿ ನೀನು ಹೇಗಾದ್ರೂ ಮಾಡಿ, ನಿನ್ನ ರಕ್ತ ಕೂಡಾ +ಗೆ ಪರಿವರ್ತನೆ ಆಗುವ ಹಾಗೆ ಪರೀಕ್ಷೆ ಬರೆಯಬೇಕು,” ಎಂದು ಮತ್ಸರ ತುಂಬಿದ ಮೂರ್ಖತನದ ಪರಮಾವಧಿ ಮೀರಿದ ಭಾವದೊಂದಿಗೆ ರವಿಗೆ ಬಲವಾದ ಒತ್ತಡ ಹಾಕುತ್ತಾಳೆ.
ವಿಚಲಿತನಾದ ರವಿ ತನ್ನ ರಕ್ತದ ಗುಂಪು A+ ಆಗಿದೆ. ಹಾಗೆಯೇ ಪಕ್ಕದ ಮನೆ ಗೆಳೆಯನಾದ ರಘು ಕೇವಲ A+ ಶ್ರೇಣಿಯಲ್ಲಿ ಪಾಸಾಗಿದ್ದರೂ ಕೂಡ ಅವನ ರಕ್ತದ ಗುಂಪು ಮಾತ್ರ + ಆಗಿದೆ. ಇದು ಹೇಗಾಗಿರಬಹುದು ಎಂದು ಯೋಚಿಸುತ್ತಾ ಕೀಳರಿಮೆಗೆ ಜಾರುತ್ತಾನೆ.
ಸಾಕಷ್ಟು ಅಹಂಕಾರದಿಂದ ಮೆರೆಯುತ್ತಿದ್ದ ರವಿ ತಾಯಿಗೆ, ರಘುವಿನ ತಾಯಿ, “ನಿಮ್ಮ ಮಗ ಎಷ್ಟೇ ಅಂಕ ತೊಗೊಂಡು, +ನಲ್ಲಿ ಪಾಸಾದ್ರೂ ಕೂಡ ನನ್ನ ಮಗನ ಹಾಗೆ ನಿಮ್ಮ ಮಗನ ದೇಹದಲ್ಲಿ + ರಕ್ತ ಹರಿಯುತ್ತಿಲ್ಲ. ಇದು ಆಕಸ್ಮಿಕವಾಗಿ ಬಂದಂತಹ ಫಲಿತಾಂಶ. ರಕ್ತದಲ್ಲಿ + ಇದ್ದರೆ ಜೀವನಪೂರ್ತಿ + ಶ್ರೇಣಿಯನ್ನು ಪಡೆಯಬಹುದು,” ಎಂದು ಮಾರ್ಮಿವಾಗಿ ಟಾಂಗ್ ಕೊಟ್ಟು ಅಷ್ಟೇ ವ್ಯಂಗ್ಯವಾಗಿ ಮೂದಲಿಸುತ್ತಾಳೆ.
ರವಿಯ ತಾಯಿ ಪದೇ ಪದೇ ಹೀಗೆಯೇ ರೊಚ್ಚಿಗೆದ್ದು ಕಸಿವಿಸಿಗೊಳ್ಳುತ್ತಿದ್ದಳು. ಇದರಿಂದ ನಮಗೆ ಸಾಕಷ್ಟು ಹಿನ್ನಡೆಯಾಗಿದೆ ಎಂದು ಭಾವಿಸುತ್ತಾಳೆ. ಜೊತೆಗೆ ನಿದ್ರೆ ಕೂಡ ಮಾಡದೇ ಅದರ ಬಗ್ಗೆ ಗಂಭೀರವಾಗಿ ವಿಚಾರಿಸಲು ತೊಡಗುತ್ತಾಳೆ.
ಕೊನೆ ಕೊನೆಗೆ ಘನತೆತ್ತ ಆ ಮಹಾತಾಯಿ ಮಗನಿಗೆ ಸಿಟ್ಟಿನಿಂದ, ಆಕ್ರೋಶಭರಿತಳಾಗಿ, “ಮಗನೇ, ಇನ್ನು ಮುಂದಿನ ದಿನಗಳಲ್ಲಿ ನೀನು ಅವನ ರಕ್ತದ ಗುಂಪನ್ನು ಕೂಡ ಹಿಂದೆ ಹಾಕಿ ಅದರಲ್ಲೂ ಕೂಡ + ಶ್ರೇಣಿಯನ್ನು ಪಡೆದುಕೊಳ್ಳಬೇಕು…..” ಎಂದು ಮೂರ್ಖತನದಿಂದ ಕಟ್ಟುನಿಟ್ಟಾಗಿ ಆದೇಶಿಸುತ್ತಾಳೆ.
ಇದರಿಂದಾಗಿ ರವಿ ಮತ್ತೆ ಮತ್ತೆ ತುಂಬಾ ಗಲಿಬಿಲಿಗೆ ಒಳಗಾಗುತ್ತಾನೆ. `ಅಂಕಗಳನ್ನು ಪಡೆಯುವುದರಲ್ಲಿ ಹೇಗಾದ್ರೂ ಮಾಡಿ + ತೆಗೆದುಕೊಳ್ಳಬಹುದು. ಆದರೆ ಅವನ ರಕ್ತದಲ್ಲಿರುವ ಈ + ಅಂಶವನ್ನು ಹೇಗಪ್ಪಾ ಬದಲಾಯಿಸೋದು ಭಗವಂತ…..’ ಎಂದು ಚಿಂತಾಕ್ರಾಂತನಾಗುತ್ತಾನೆ.
`ತನ್ನ ಸಹಪಾಠಿಯಾದ ಆತ್ಮೀಯ ಗೆಳೆಯ ರಘುವಿನ ರಕ್ತವನ್ನು ಬಹುಶಃ ತಾನು ಕುಡಿದರೆ ಮಾತ್ರ ನಾನು ನನ್ನ ದೇಹದಲ್ಲಿ + ರಕ್ತವನ್ನು ಪಡೆಯಬಹುದಲ್ವಾ…..’ ಎಂಬ ದುಸ್ಸಾಹಸದ ದೂ(ದು)ರಾಲೋಚನೆಯನ್ನೂ ಕೂಡ ಮಾಡುತ್ತಾನೆ. ತದನಂತರ, ತನ್ನ A+ ರಕ್ತವನ್ನು ಅವನಿಗೆ ಧಾರೆ ಎರೆಯಬಹುದು ಎಂದು ಮುಗ್ಧವಾಗಿ ಅಷ್ಟೇ ಆಳವಾಗಿ, ಯೋಚಿಸುತ್ತಾ ಯೋಚಿಸುತ್ತಾ ಅಳಲು ಪ್ರಾರಂಭಿಸುತ್ತಾನೆ.
ಈ ಒಂದು ನಿಷ್ಪ್ರಯೋಜಕ ಯೋಚನೆ ಅವನನ್ನು ತುಂಬಾ ಘಾಸಿಗೊಳಿಸಲಾರಂಭಿಸುತ್ತದೆ. ದಿನಗಳೆದಂತೆ ಅವನನ್ನು ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡಿತು. ಇಂತಹ ಕ್ರೂರ ಆಲೋಚನೆಗಳು ಮಕ್ಕಳಿಗೆ ಬರಬಾರದೆಂದರೆ ಪಾಲಕರು ಹೃದಯ ವೈಶಾಲ್ಯತೆಯನ್ನು ಹೊಂದಿರಬೇಕು ಅನ್ನೋದಕ್ಕೆ ಇದು ಒಳ್ಳೆಯ ಉದಾಹರಣೆ ಆಗುತ್ತದೆಯಲ್ಲವೇ….?
ದಾರಿ ತೋಚದಂತಾದಾಗ ಕೊನೆಯಲ್ಲಿ ಇಬ್ಬರೂ ಸೇರಿ ತಮ್ಮ ತರಗತಿಯ ನೆಚ್ಚಿನ ಗುರುಗಳ ಹತ್ತಿರ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು, ಬಗೆಹರಿಸಲು ಮನವಿ ಮಾಡಿಕೊಳ್ಳುತ್ತಾರೆ. ಇದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡ ಗುರುಗಳು ಇಬ್ಬರು ತಾಯಂದಿರನ್ನೂ ಕರೆದು, “ನೋಡ್ರಮ್ಮಾ… ತಾಯಿ ಜಾಣತನ ಅಥವಾ ಬುದ್ಧಿವಂತಿಕೆ ಅನ್ನೋದು ರಕ್ತದಲ್ಲಾಗಲಿ, ರಕ್ತದ ಗುಂಪಿನಲ್ಲಾಗಲಿ ಇರುವುದಿಲ್ಲ. ಯಾರು ಶ್ರಮಪಡುತ್ತಾರೋ ಅವರಿಗೆ ಯಶಸ್ಸು ಅನ್ನೋದು ಸಿಕ್ಕೇ ಸಿಗುತ್ತದೆ. ನಿಮ್ಮ ನಿಮ್ಮ ಒಣಪ್ರತಿಷ್ಠೆಗಾಗಿ ಮಕ್ಕಳನ್ನು ಬಳಸಿಕೊಳ್ಳಬೇಡಿ.
“ಅದರ ಬದಲು ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ನೈತಿಕತೆಯ ತಿಳಿವಳಿಕೆ ನೀಡಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳನ್ನು ಸದೃಢರನ್ನಾಗಿ ಮಾಡುವಲ್ಲಿ ಎಲ್ಲಾ ತಾಯಂದಿರು ಹೆಚ್ಚು ಆಸಕ್ತಿ ತೋರಿಸಿ ಮಕ್ಕಳ ಬಾಳಲ್ಲಿ ಬೆಳಕಾಗಿರಿ,” ಎಂದು ಬುದ್ಧಿವಾದ ಹೇಳಿ ಮಾರ್ಗದರ್ಶನ ನೀಡಿ ಕಳಿಸಿಕೊಡುತ್ತಾರೆ.
ಪರಿಣಾಮವಾಗಿ ಇಬ್ಬರೂ ಆತ್ಮೀಯ ಗೆಳೆಯರಾದ್ದರಿಂದ ತಮ್ಮ ತಾಯಂದಿರನ್ನು ಮನವೊಲಿಸಿ, “ನಿಮ್ಮ ನಿಮ್ಮ ಈ ಒಣಪ್ರತಿಷ್ಠೆಗಾಗಿ ನಮ್ಮನ್ನು ಬಲಿಕೊಡಬೇಡಿ. ಇಲ್ಲಸಲ್ಲದ ಒಣಪ್ರತಿಷ್ಠೆಗಾಗಿ ನಮ್ಮನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಈ ರೀತಿ ನೀವು ದುಡುಕುವುದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ಹಿನ್ನೆಡೆಯಾಗುತ್ತಿದೆ. ಕ್ಷುಲ್ಲಕ ಮನೋಭಾವ ತೊರೆದು ವಿಶಾಲ ಮನೋಭಾವದೊಂದಿಗೆ ಬಾಳೋಣ ಎಂದು ಗುರುಗಳು ಹೇಳಿದ ಐಕ್ಯತೆಯನ್ನು ಬಲಪಡಿಸೋಣ. ಅದರಂತೆಯೇ ನಡೆದುಕೊಳ್ಳೋಣ,” ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತಾ ಇಬ್ಬರೂ ಆತ್ಮೀಯ ಗೆಳೆಯರು ತಮ್ಮ ತಮ್ಮ ತಾಯಂದಿರಿಗೆ ಗುರುಗಳು ಹೇಳಿದ ಮಾತಿನಂತೆ ನಡೆದುಕೊಳ್ಳೋಣ ಎಂದು ವಿನಂತಿಸಿಕೊಳ್ಳುತ್ತಾರೆ.
ಅಂದಿನಿಂದ ಇಬ್ಬರು ತಾಯಂದಿರೂ ಮಕ್ಕಳ ಮೇಲೆ ಹೆಚ್ಚಿನ ಅಂಕ ಪಡೆಯುವ ಅತಿಯಾದ ಒತ್ತಡ ಹಾಕುವುದನ್ನು ನಿಲ್ಲಿಸುತ್ತಾರೆ. ಮಕ್ಕಳನ್ನು ನೈಜವಾಗಿ ಪ್ರೀತಿಸಲಾರಂಭಿಸುತ್ತಾರೆ. ಮಕ್ಕಳಿಗೆ ತಿಳಿವಳಿಕೆ ನೀಡಿ ಸೂಕ್ತವಾದ ಜ್ಞಾನ ನೀಡುವುದನ್ನು ಬಿಟ್ಟು ಈ ರೀತಿಯಾಗಿ ಚಿಂತೆ ಮಾಡುತ್ತಾ ಒಣಪ್ರತಿಷ್ಠೆಗಾಗಿ ಇಡೀ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂದು ಶಪಥಗೈಯ್ಯುತ್ತಾರೆ. ಅಂದಿನಿಂದ ಈ ಮಕ್ಕಳಿಬ್ಬರೂ ತರಗತಿಯಲ್ಲಿ ಟಾಪರ್ ಗಳಾಗಿ ಮುಂದುವರಿಯುತ್ತಾರೆ.
ಆದ್ದರಿಂದ ಇಂತಹ ಅಪ್ರಬುದ್ಧ ದೂ(ದು)ರಾಲೋಚನೆಗಳಿಂದ ದೂರವಿರುವ ಒಂದು ಸದ್ವಿಚಾರವನ್ನು ಎಲ್ಲಾ ಪಾಲಕರು ರಕ್ತಗತವಾಗಿಸಿಕೊಳ್ಳಬೇಕು. ನಿಮ್ಮ ಮಕ್ಕಳನ್ನು ಇನ್ನೊಬ್ಬರಿಗೆ ಹೋಲಿಸುವುದನ್ನು ಮಾತ್ರ ಯಾವತ್ತಿಗೂ ಮಾಡಬೇಡಿ. ಇದರಿಂದಾಗಿ ಅವರು ಹತಾಶರಾಗುತ್ತಾರೆ, ಕೀಳರಿಮೆಯುಂಟಾಗಿ ಅಘಾತಕ್ಕೊಳಗಾಗುತ್ತಾರೆ. ಒಬ್ಬರಲ್ಲಿರುವ ಪ್ರತಿಭೆ ಇನ್ನೊಬ್ಬರಲ್ಲಿ ಇರಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಭೆಗಳು ವಿಭಿನ್ನವಾಗಿರುತ್ತವೆ. ನಿಮ್ಮ ನೆತ್ತರಿನಲ್ಲಿ ಹರಿಯುವ ಒಣಪ್ರತಿಷ್ಠೆಯನ್ನು ಸರ್ವನಾಶ ಮಾಡಿ ಮಕ್ಕಳನ್ನು ಎತ್ತರೆತ್ತರಕ್ಕೆ ಬೆಳೆಸುವಂಥ ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಿ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಸೂಕ್ತವಾದ, ಸುಪ್ತವಾದ ಪ್ರತಿಭೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅದಕ್ಕೆ ಪ್ರೋತ್ಸಾಹ ನೀಡಿ ಬೆಳೆಸಿದ್ದಾದರೆ ಖಂಡಿತವಾಗಿಯೂ ಆ ಮಗು ಈ ದೇಶದ ಅನರ್ಘ್ಯ ರತ್ನವಾಗುತ್ತದೆ.
– ಶ್ರೀನಿವಾಸ ಎನ್. ದೇಸಾಯಿ





