ಸುಂದರವಾಗಿ ಕಂಗೊಳಿಸಬೇಕೆಂಬ ಹಕ್ಕು ಹೆಣ್ಣಿಗಿರುವಂತೆಯೇ ಗಂಡಿಗೂ ಇರುತ್ತದೆ ಎಂಬುದನ್ನು ಅಲ್ಲಗಳೆಯಬಾರದು……!
`ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ!’ ಎಂಬ ನಾಣ್ಣುಡಿ ಹೆಣ್ಣಿಗೆ ಸಿಂಗರಿಸಿಕೊಳ್ಳುವುದರಲ್ಲಿರುವ ಆಸಕ್ತಿಯನ್ನು ಅನಾದಿ ಕಾಲದಿಂದಲೂ ಎತ್ತಿಹಿಡಿದಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಮೇಕಪ್ ಮಾಡಿಕೊಂಡು ನಿಮ್ಮ ವ್ಯಕ್ತಿತ್ವ, ನಿಮ್ಮ ಹಿರಿಮೆ, ಆತ್ಮವಿಶ್ವಾಸಕ್ಕೆ ಕಲಶವಿಟ್ಟಂತೆ ಮಾಡಿಕೊಳ್ಳುವುದರಲ್ಲಿ ಯಾವ ಹಿಂಜರಿಕೆಯೂ ಬೇಡ. ಹೆಚ್ಚಿಗೇನೂ ಅಲ್ಲದಿದ್ದರೂ ಪಾರ್ಲರ್ ಗೆ ಹೋಗಿ ಐ ಬ್ರೋಸ್ ತಿದ್ದಿ ತೀಡಿಸಿ, ಹೇರ್ ಕಟ್ ಮಾಡಿಸಿ, ಹೇರ್ ಸ್ಟೈಲ್ ಬದಲಾಯಿಸಿಕೊಳ್ಳಿ. ಇದರಿಂದ ನಿಮ್ಮ ಬೆಡಗು ಎಷ್ಟೋ ಹೆಚ್ಚುತ್ತದೆ. ಹೊರಗಿನ ಫಂಕ್ಷನ್ಸ್ ಗಾಗಿ ಗ್ರಾಂಡ್ ಸಿಂಗಾರದ ಬದಲು, ಡಾರ್ಕ್ ಕಲರ್ ಲಿಪ್ ಸ್ಟಿಕ್ ಹಾಗೂ ಕಾಡಿಗೆ ತೀಡಿಕೊಂಡು, ಕೂದಲನ್ನು ಹಾಗೇ ಓಪನ್ ಆಗಿ ಬಿಡಿ.
ಹೀಗೆ ಪಾರ್ಟಿಗೆ ಹೋದಾಗ, ನೀವು ಅಲ್ಲಿನ ಆಕರ್ಷಣೆಯ ಕೇಂದ್ರಬಿಂದು ಆಗುವಿರಿ. ಆಭರಣಗಳನ್ನು ಹೇರಿಕೊಂಡ ಹೆಂಗಸಿಗಿಂತ, ವೈಟ್ ಮೇಕಪ್ ನಿಂದ ಸಿಂಗಾರಗೊಂಡ ಹೆಣ್ಣು ಹೆಚ್ಚು ಬ್ಯೂಟಿ ಎನಿಸುತ್ತಾಳೆ.
ಸೌಂದರ್ಯದಿಂದ ಆತ್ಮವಿಶ್ವಾಸ
ಲೈಟ್ ಮೇಕಪ್ ಹಾಗೂ ತಿಂಗಳಿಗೊಮ್ಮೆ ಪಾರ್ಲರ್ ಗೆ ಹೋಗುವುದರಿಂದ, ಸಾಮಾನ್ಯವಾಗಿ ಕಂಡುಬರುವಂಥ ಹೆಣ್ಣು ಸಹ ಸೌಂದರ್ಯದಿಂದ ಕೂಡಿರುವಂತೆ ಕಂಗೊಳಿಸುತ್ತಾಳೆ, ಜೊತೆಗೆ ಆಕೆಯ ಆತ್ಮವಿಶ್ವಾಸ ಸಹಜವಾಗಿ ಹೆಚ್ಚುತ್ತದೆ. ನಿಮ್ಮ ದೇಹವನ್ನು ಸದಾ ಶುಭ್ರವಾಗಿ, ಆಕರ್ಷಣೆಯ ಕೇಂದ್ರಬಿಂದು ಆಗಿರಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಪಾರ್ಲರ್ ಗೆ ಹೋದರೆ ಮಾತ್ರ ಸೌಂದರ್ಯ ಅಂತೇನಲ್ಲ, ಮನೆಮದ್ದು ಬಳಸಿ ಸಹ ನಿಮ್ಮ ಸೌಂದರ್ಯದಲ್ಲಿ ಹೆಚ್ಚಿನ ಅಂದ ತರಬಹುದು.
ನಮ್ಮ ಅಡುಗೆಮನೆಯಲ್ಲಿನ ಅನೇಕ ಸಾಮಗ್ರಿ, ಸೌಂದರ್ಯ ಪ್ರಸಾಧನಗಳಿಗೆ ಬಲು ಪೂರಕ. ಅಂದ್ರೆ ಹಾಲು, ಮೊಸರು, ಅರಿಶಿನ, ಜೇನು, ಜಾಯಿಕಾಯಿ, ಕೇಸರಿ, ತುಳಸಿ, ಆಲೂ, ಟೊಮೇಟೊ, ಕೊಬ್ಬರಿ ಎಣ್ಣೆ ಇತ್ಯಾದಿ. ಕೆಲವು ಸಾಮಗ್ರಿ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಫೇಸ್ ಪ್ಯಾಕ್‌ಹಚ್ಚಿಕೊಳ್ಳಬಹುದು. ಇದರಿಂದ ಚರ್ಮದಲ್ಲಿ ತಾಜಾತನ, ಲಾವಣ್ಯ ಉಕ್ಕುತ್ತದೆ.
ಹೆಣ್ಣಿನ ಇಂಥ ಸೌಂದರ್ಯಪ್ರಿಯತೆ ಅವಳ ಸುಖೀ ದಾಂಪತ್ಯಕ್ಕೊಂದು ಕಾರಣ ಹೌದು. ಬೆಳಗ್ಗಿನಿಂದ ದುಡಿದು ದಣಿದು, ಸಂಜೆ ನಂತರ ಮನೆ ತಲುಪುವ ಪತಿ, ಪತ್ನಿಯ ಈ ಅಂದದ ಬೆಡಗು ಕಂಡು ತನ್ನೆಲ್ಲ ಕಷ್ಟ ಮರೆಯುತ್ತಾನೆ. ಸೊಂಟಕ್ಕೆ ಸಿಗಿಸಿದ ಸೆರಗು, ತಲೆಗೊಂದು ಸೆಖೆಗಂಟು, ಮಸಾಲೆ ತುಂಬಿಕೊಂಡ ನೈಟಿ, ಬೆವರಿನೊಂದಿಗೆ ಫೆನಾಯಿಲ್ ವಾಸನೆ ಬೀರುತ್ತಿದ್ದರೆ, ಅಂಥ ಪತ್ನಿಯನ್ನು ಕಂಡ ಯಾವ ಪತಿಯ ಮೂಡ್ ಸರಿಹೋಗಲು ಸಾಧ್ಯ?
ಈ ನೀಟ್ ನೆಸ್ ಕೆಲಸ ಕಷ್ಟದಾಯಕವೇನಲ್ಲ. 2 ನಿಮಿಷಗಳಲ್ಲಿ ಮುಖ ತೊಳೆದುಕೊಂಡು, ತಲೆ ಬಾಚಿ ನೇರ್ಪಡಿಸಿ, ಬಿಂದಿ ಇರಿಸಿಕೊಳ್ಳಿ. ಒಂದಿಷ್ಟು ಕಾಡಿಗೆ ತೀಡಿದರೂ ಆಯಿತು. ಇಷ್ಟು ಮಾಡಿದರೆ ಬೇಕಾದಷ್ಟಾಯಿತು. ಹೀಗೆ ಅಲಂಕರಿಸಿಕೊಂಡು, ಜೀವನವಿಡೀ ಪತಿಯ ಪ್ರೇಯಸಿಯಾಗಿ ಯಾಕಿರಬಾರದು? ಜೊತೆಗೆ, `ನೋಡು, ಈಕಿ ಎಷ್ಟು ಚೆಂದಾಗಿ ಅಲಂಕಾರದಲ್ಲಿ ಗಮನಹರಿಸುತ್ತಾಳೆ!’ ಎಂದು ಇತರರು ಹೊಗಳಲು, ನಿಮ್ಮ ಪತಿಗೆ ಬಹಳ ಹೆಮ್ಮೆ ಎನಿಸುತ್ತದೆ. ಇಂಥ ಔಟ್ ಲುಕ್ ನಿಮ್ಮೊಳಗಿನ ಆತ್ಮವಿಶ್ವಾಸವನ್ನು ಖಂಡಿತಾ ಜಾಗೃತಗೊಳಿಸುತ್ತದೆ.
ಡ್ರೆಸ್ ಅಪ್ ನ ಆಯ್ಕೆ
ಈಗೆಲ್ಲ ಸೌಂದರ್ಯದ ಮಾನದಂಡ ಎಷ್ಟೋ ಬದಲಾಗಿದೆ. ಹಿಂದೆಲ್ಲ ಈ ರೀತಿ ಅಲಂಕಾರ, ಸೌಂದರ್ಯ ಸಂವರ್ಧನೆಯ ಡಿಪಾರ್ಟ್ ಮೆಂಟ್ ನ್ನು ಕೇವಲ ಹೆಂಗಸರಿಗೆ ಮಾತ್ರ ಒಪ್ಪಿಸಲಾಗಿತ್ತು. ಆದರೆ ಈಗಿನ ಬ್ಯೂಟಿ ಉತ್ಪನ್ನಗಳು ಕೇವಲ ಹೆಂಗಸರಿಗೆ ಮಾತ್ರ ಸೀಮಿತವಲ್ಲ. ತಮ್ಮ ಸೌಂದರ್ಯವನ್ನು ಸಂವರ್ಧಿಸುವ ಹಕ್ಕು ಹೆಂಗಸರಿಗೆ ಎಷ್ಟಿದೆಯೋ, ಅಷ್ಟೇ ಹಕ್ಕು ಈಗ ಗಂಡಸರಿಗೂ ಇದೆ! ಏಕೆಂದರೆ, ಈ ಸೌಂದರ್ಯದ ಪೈಪೋಟಿ ಈಗೆಲ್ಲ ಕೇವಲ ಹೆಂಗಸರಿಗೆ ಮಾತ್ರ ಮೀಸಲಲ್ಲ, ಅದು ಗಂಡಸರಿಗೂ ಅಷ್ಟೇ ಅನ್ವಯಿಸುತ್ತದೆ.
ಗಂಡಸರೇನೂ ಕಡಿಮೆ ಅಲ್ಲ!
`ಮಿಸ್ಟರ್ ಇಂಡಿಯಾ’ದಿಂದ ಹಿಡಿದು `ಮಿಸ್ಟರ್ ಯೂನಿವರ್ಸ್’ವರೆಗಿನ ಸ್ಪರ್ಧೆಗಳಲ್ಲಿ ಈಗ ಗಂಡಸರೂ ಮುಗಿಬಿದ್ದು ಭಾಗವಹಿಸುತ್ತಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಮೆನ್ಸ್ ಬ್ಯೂಟಿ ಪಾರ್ಲರ್, ಜಿಮ್ ಗಳ ಪ್ರಭಾವದಿಂದ ಅವರೂ ಸಹ ತಾವು ಆಕರ್ಷಣೆಯಲ್ಲಿ ಹಿಂದುಳಿಯಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಏಕೆಂದರೆ ಇಂದಿನ ಆಧುನಿಕ ಹುಡುಗಿಯರು ಹೀಗೆ ಸದಾ ಶುಭ್ರವಾಗಿರುವ, ತಮ್ಮನ್ನು ತಾವು ಫಿಟ್‌ಫೈನ್ ಆಗಿರಿಸಿಕೊಂಡಿರುವಂಥ ಸುಂದರಾಂಗ ಜಾಣರನ್ನೇ ಬಯಸುತ್ತಾರೆ.
ಹಾಗೆಯೇ ಇಂದಿನ ಯುವಕರೂ ಸಹ ತಮ್ಮನ್ನು ತಾವು ಅಪ್ ಟು ಡೇಟ್ ಆಗಿರಿಸಿಕೊಂಡು, ಜಿಮ್ ಬಾಡಿ ಮೇಂಟೇನ್ ಮಾಡುತ್ತಾರೆ. ಸ್ಟೈಲಿಶ್ ಗಡ್ಡ, ವಿಭಿನ್ನ ಹೇರ್ ಸ್ಟೈಲ್, ಪೋನಿಟೇಲ್, ಹೇರ್ ಕಲರ್, ಕಿವಿಗಳಿಗೆ ಸ್ಟಡ್ಸ್, ಸ್ಟೈಲಿಶ್ ಡ್ರೆಸ್, ಶೂಗಳು, ಗಾಡಿಯ ವೇಗ….. ಕೇಳುವುದೇ ಬೇಡ! ಜೊತೆಗೆ ಇಂದಿನ ಯುವಕರು ಮಾಯಿಶ್ಚರೈಸರ್, ನರಿಶಿಂಗ್ ಕ್ರೀಂ, ಆಫ್ಟರ್ ಶೇವ್ ಕ್ರೀಂ, ಲೋಶನ್, ಲಿಪ್ ಬಾಮ್, ಸನ್ ಸ್ಕೀನ್, ಹೇರ್ ಕ್ರೀಂ, ಹೇರ್ ಜೆಲ್ ಇತ್ಯಾದಿಗಳೆಲ್ಲದರ ಮಾಹಿತಿ ಇರಿಸಿಕೊಂಡು ಪೈಪೋಟಿ ಮೇಲೆ ಅವನ್ನು ಕೊಳ್ಳುತ್ತಾರೆ, ಬಳಸುತ್ತಾರೆ.
ತಮ್ಮ ದೇಹದ ಮೇಲಿನ ಅನಗತ್ಯ ಕೂದಲ ನಿವಾರಣೆಗಾಗಿ ವ್ಯಾಕ್ಸಿಂಗ್, ಎಲೆಕ್ಟ್ರಾಲಿಸಿಸ್ ಗೆ ಮೊರೆಹೋಗುತ್ತಾರೆ. ಕೈ, ಕಾಲು, ಕಂಕುಳ, ಚೆಸ್ಟ್ ಬ್ಯಾಕ್ ವ್ಯಾಕ್ಸಿಂಗ್ ಹೆಸರು ಗಳಿಸಿದೆ. ಎಷ್ಟೋ ಬಗೆಯ ಕ್ಲೀನ್ ಅಪ್ಸ್ ಫೇಶಿಯಲ್ಸ್ ನ್ನು ತಮ್ಮ ಚರ್ಮ ರಕ್ಷಣೆಗೆಂದೇ ಹುಡುಗರು ಮಾಡಿಸಿಕೊಳ್ಳುತ್ತಾರೆ. ಕೈಕಾಲುಗಳ ಶುಚಿತ್ವಕ್ಕಾಗಿ ಮೆನಿಕ್ಯೂರ್‌ಪೆಡಿಕ್ಯೂರ್ ಗಳಿಗೆ ಮೊರೆಹೋಗುತ್ತಾರೆ.
ಹೀಗಿರುವಾಗ ಹೆಣ್ಣು ತನ್ನ ಮೇಕಪ್ ನಲ್ಲಿ ಹಿಂದುಳಿಯಲು ಸಾಧ್ಯವೇ? ಮೊಬೈಲ್ ಹಳೆಯದಾಗುತ್ತೆಂದು ಅದನ್ನು ಅಪ್ ಡೇಟ್ ಮಾಡಿಸುವಂತೆಯೇ, ತಮ್ಮ ವ್ಯಕಿತ್ವ ವಿಕಾಸಕ್ಕಾಗಿ ಹೆಂಗಸರು ಹಾತೊರೆದರೆ ತಪ್ಪೇನು?
– ಬಿ. ಭಾವನಾ ಭಟ್





