ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯದ ಸೋಲಿನ ಬಳಿಕ ಗುಜರಾತ್ ಟೈಟಾನ್ಸ್ ತಂಡವು ಮತ್ತೊಂದು ಆಘಾತ ಎದುರಿಸಿದ್ದು, ಆಟಗಾರರು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು,ಸ್ವಲ್ಪದರಲ್ಲಿ ಆಟಗಾರರು ಬಚಾವ್ ಆಗಿದ್ದಾರೆ. ಎಲ್ಲಾ ಆಟಗಾರರನ್ನು ಸ್ಥಳಾಂತರಿಸಿದ್ದರಿಂದ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಭಾನುವಾರ ರಾತ್ರಿ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಿಂದ ಹೋಟೆಲ್ ಗೆ ಮರಳುತ್ತಿದ್ಧಾಗ ಈ ಘಟನೆ ಸಂಭವಿಸಿದೆ.
ಬೆಂಕಿಯ ಪರಿಣಾಮ, ಆಟಗಾರರು ಸುಮಾರು ಒಂದು ಗಂಟೆ ಕಾಲ ರಸ್ತೆ ಬದಿಯಲ್ಲೇ ಕಾಯಬೇಕಾಯಿತು. ನಂತರ ಮತ್ತೊಂದು ಬಸ್ ವ್ಯವಸ್ಥೆ ಮಾಡಿ ಎಲ್ಲರನ್ನೂ ಸುರಕ್ಷಿತವಾಗಿ ಹೋಟೆಲ್ ಗೆ ಕಳುಹಿಸಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಫೈನಲ್ ಪಂದ್ಯದಲ್ಲಿ 5 ವಿಕೆಟ್ ಗಳ ಸೋಲು ಕಂಡ ಕೆಲವೇ ಗಂಟೆಗಳಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಈ ಆಘಾತ ಎದುರಾಗಿದ್ದು, ಸದ್ಯ ಎಲ್ಲ ಆಟಗಾರರೂ ಸುರಕ್ಷಿತರಾಗಿದ್ದಾರೆ ಎಂದು ಫ್ರಾಂಚೈಸಿ ಖಚಿತಪಡಿಸಿದೆ.





