ಆಟೋ, ಕಂಟೇನರ್‌ ಮತ್ತು ಥಾರ್‌ ಮಧ್ಯೆ ಡಿಕ್ಕಿಯಾಗಿ ಆರು ಮಂದಿ ಕೂಲಿಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗೇಪಲ್ಲಿ ಪಟ್ಟಣ ಹೊರವಲಯದ  ರಾಷ್ಟ್ರೀಯ ಹೆದ್ದಾರಿ 44ರ (NH44) ಗಂಗೋತ್ರಿ ಪೆಟ್ರೋಲ್‌ ಬಂಕ್‌ ಬಳಿ ಸಂಭವಿಸಿದೆ.

ಮೃತಪಟ್ಟವರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕಾಗಿ ಆಟೋದಲ್ಲಿ ಪರಗೋಡು ಗ್ರಾಮಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಆಟೋದಲ್ಲಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಉಮಾದೇವಿ (55), ವಿಜಯಮ್ಮ (40), ಅರುಣಮ್ಮ (46),  ಲಕ್ಷ್ಮಮ್ಮ (50), ಸರೋಜಮ್ಮ ಹಾಗೂ ಆಟೋ ಚಾಲಕ ಆಂಜಿನಪ್ಪ (35)  ಮೃತಪಟ್ಟಿದ್ದು, ಇನ್ನೂ 10 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಗಾದೇವಿ, ಲಕ್ಷ್ಮಿದೇವಿ, ರತ್ಮಮ್ಮ ಅವರ ಸ್ಥಿತಿ ಗಂಭೀರವಾಗಿದೆ.

ಮೊದಲಿಗೆ ಥಾರ್ ಕಾರು ಆಟೋಗೆ ಡಿಕ್ಕಿ ಹೊಡೆದಿದೆ, ಡಿಕ್ಕಿಯಿಂದಾಗಿ ನಿಯಂತ್ರಣ ತಪ್ಪಿದ ಆಪೆ ಆಟೋ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಅದರ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಯಿಂದಾಗಿ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.  ಪೊಲೀಸ್‌ ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ