—ಬಿ. ಎನ್. ಶಶಿಕಿರಣ_

ಶತಾವಧಾನಿ ಡಾ|| ಆರ್. ಗಣೇಶ್ ಅವರಿಗೆ ಭಾರತದ ರಾಷ್ಟ್ರಪತಿಗಳಿಂದ ಪ್ರತಿಷ್ಠಿತ ಪದ್ಮಭೂಷಣ ಪುರಸ್ಕಾರ ಪ್ರದಾನವಾದುದನ್ನು ಕೇಳಿ, ನೋಡಿ ನಾಡಿನ ಜನರೆಲ್ಲ ಆನಂದಿಸಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಅವರ ಅಸೀಮ ಪ್ರತಿಭೆ-ಪಾಂಡಿತ್ಯಗಳಿಗೆ, ವೈಯಕ್ತಿಕ ಸಮುನ್ನತಿಗೆ ಬಗೆಬಾಗಿದ ಜನರು ಯಾವ ಪ್ರಶಸ್ತಿಯೂ ಸರಿಗಟ್ಟಲಾಗದ ಆದರಾಭಿಮಾನಗಳನ್ನು ಎಂದೋ ಅವರಿಗೆ ನೀಡಿದ್ದಾರೆ. ಪ್ರಕೃತ ಪುರಸ್ಕಾರವೇನಿದ್ದರೂ ನಾಡಿನ ಜನರ ಈ ಸಹಜ ಸದ್ಭಾವದ ಸಾಂಕೇತಿಕ ಅಭಿವ್ಯಕ್ತಿ ಮಾತ್ರ.

ಪುರಸ್ಕಾರ ಘೋಷಣೆಯಾದ ದಿನದಿಂದಲೂ ಗಣೇಶರಿಗೆ ಒಂದೇ ಚಿಂತೆ: “ನಾನು ಈಗಾಗಲೇ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಒಪ್ಪಿಕೊಂಡುಬಿಟ್ಟಿದ್ದೇನೆ. ಪುರಸ್ಕಾರಪ್ರದಾನದ ದಿನ ಏನಾದರೂ ಇಂಥ ಕಾರ್ಯಕ್ರಮ ಇದ್ದು ಈ ಕಾರಣಕ್ಕಾಗಿ ರದ್ದಾದರೆ ಆಯೋಜಕರಿಗೆ ತುಂಬ ಕಷ್ಟವಾಗುತ್ತದೆ. ಹಾಗೆ ಆಗದಿದ್ದರೆ ಸಾಕು.” ಅವರ ಬಯಕೆ ಹುಸಿಹೋಗದೆ ಯಾವ ಕಾರ್ಯಕ್ರಮವೂ ಇಲ್ಲದ ದಿನವೇ ಪುರಸ್ಕಾರಪ್ರದಾನ ನಿಶ್ಚಯವಾಯಿತು. ಗಣೇಶರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಕೆಲವೇ ದಿನಗಳಲ್ಲಿ ಈ ಏರ್ಪಾಡು ಮಾರ್ಪಟ್ಟಿತು; ಬೇರೆಯ ದಿನವನ್ನು ಸೂಚಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದರು. ಅವಧಾನಿಗಳಿಗೆ ಮತ್ತೆ ಆತಂಕ. ಅಂತೂ ಕಡೆಗೆ ನಿರ್ಣೀತವಾದ ದಿನ ಅವರಿಗೆ ಯಾವ ಪೂರ್ವನಿಶ್ಚಿತ ಕಾರ್ಯಕ್ರಮವೂ ಇರಲಿಲ್ಲ. ಯಾರ ಪುಣ್ಯವೋ! ಹೀಗೆ ಕೀರ್ತಿಯ ಉತ್ತುಂಗದಲ್ಲಿಯೂ ಕರ್ತವ್ಯದ ಚಿಂತೆ, ಸಂಭ್ರಮದ ಪ್ರವಾಹದಲ್ಲಿಯೂ ಸಂಯಮದ ಸ್ಮರಣೆ ಸ್ವಲ್ಪದ ಸಿದ್ಧಿಯಲ್ಲ.

ದೆಹಲಿಗೆ ಕಾಲಿಡುತ್ತಲೇ ಅವರಿಗೆ ಕಂಡದ್ದು ಪಂಚತಾರಾ ಹೊಟೇಲಿನ ವೈಭವವಲ್ಲ; ಮೈತುಂಬ ಹೊಳಪುಹಳದಿಯ ಹೂಗಳನ್ನು ತಳೆದು ನಿಂತ ಆರಗ್ವಧಪಾದಪಗಳ ಸೊಬಗು. ಇದನ್ನು ರಾತ್ರಿಯ ವೇಳೆಯಲ್ಲಿಯೂ ಗಮನಿಸಿದ ಗಣೇಶರು ಮಾರನೆಯ ಮುಂಜಾನೆ ಮೊದಲು ಮಾಡಬೇಕಾದ ಕೆಲಸ ಈ ಸುಮರಾಜಿಯನ್ನು ವೀಕ್ಷಿಸುವುದೆಂದು ವಿಧಿಸಿದರು. ಹಾಗೆಯೇ ಆಯಿತು. ವಸತಿಗೃಹದಲ್ಲಿದ್ದ ಹೆಚ್ಚಿನ ಪಾಲು ಪ್ರಶಸ್ತಿಭಾಜನರು ವಿವಿಧ ಭಂಗಿಗಳಲ್ಲಿ ತಮ್ಮ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುತ್ತಿದ್ದರು; ಇತರ ಖ್ಯಾತನಾಮರೊಡನೆ ಕಾಣಿಸಿಕೊಳ್ಳಲು ತವಕಿಸುತ್ತಿದ್ದರು. ಗಣೇಶರು ಈ ನೆರವಿಯಿಂದ ಹೊರಬಿದ್ದು ಎದುರಿಗೇ ಕಂಗೊಳಿಸುತ್ತಿದ್ದ ಆರಗ್ವಧತರುಗಳನ್ನು ನೋಡಿ ನೋಡಿ ಹಿಗ್ಗಿದರು. ಅವರು ತಮ್ಮ ಚಿತ್ರವನ್ನು ಬಯಸಲಿಲ್ಲ; ಆ ಹೂಗಳ ಗೊಂಚಲನ್ನು ಹತ್ತಿರದಿಂದ ಚಿತ್ರಿಸಲು ಕೋರಿದರು. ಇದು ಅವರ ಪ್ರಕೃತಿಪ್ರೀತಿಯ ಸಂಸ್ಕೃತಿ.

i33jnokunbugmaylwfqf

ರಾಷ್ಟ್ರಪತಿಭವನದ “ಗಣತಂತ್ರಮಂಡಪ”ದಲ್ಲಿ ಪುರಸ್ಕಾರಪ್ರದಾನವಾದ ಬಳಿಕ “ಅಶೋಕಮಂಡಪ”ದಲ್ಲಿ ರಾಷ್ಟ್ರದ ಉಚ್ಚನಾಯಕರೊಡನೆ ಸಮ್ಮಾನಿತರೆಲ್ಲರ ಛಾಯಾಚಿತ್ರವನ್ನು ತೆಗೆಯಲಾಯಿತು. ಚಿತ್ರಗ್ರಹಣದ ಸಂದರ್ಭದಲ್ಲಿ ಗಣೇಶರ ಸಾಲಿನ ಆಚೆಯ ಕಡೆಗೆ ಕುಳಿತಿದ್ದ ಪ್ರಧಾನಿ ಮೋದಿ ಅನಂತರ ತಾವಾಗಿಯೇ ಗಣೇಶರ ಬಳಿ ಬಂದು ಕೈಕುಲುಕಿ ಮಾತನಾಡಿಸಿದರು. “ಅವಧಾನಿಜೀ ಕೈಸೇ ಹೈ ಆಪ್?” ಎಂದು ಉಪಕ್ರಮಿಸಿ, ಹಲವು ವರ್ಷಗಳ ಕೆಳಗೆ ತಾವು ಭೇಟಿಯಾದುದು ನೆನಪಿದಯೇ? ಎಂದು ಪ್ರಶ್ನಿಸಿದರು. ಮೋದಿ ಅವರಿನ್ನೂ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲದ — ಸುಮಾರು ಹದಿನಾರು ವರ್ಷಗಳ ಹಿಂದಿನ — ಆ ಭೇಟಿ ಗಣೇಶರಿಗೆ ಚೆನ್ನಾಗಿಯೇ ನೆನಪಿತ್ತು. ಇದನ್ನು ಸೂಚಿಸಿ ಗಣೇಶರು, “ನಮ್ಮ ದೇಶ, ಸನಾತನಧರ್ಮ ಚೆನ್ನಾಗಿರಬೇಕು ಎಂದೇ ನನ್ನ ಆಶೆ ಎಂದು ಆಗ ನಾನು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ” ಎಂದು ಭಾವಾರ್ದ್ರವಾಗಿ ನುಡಿದರು. ಮೋದಿ ಅವರಾದರೋ “ನಿಮ್ಮ ಆಶೆ ಈಡೇರುವುದೆಂದು ನಾನು ಆಗ ಹೇಳಿದ್ದೆ. ಈಗ ನೀವೇ ನೋಡುತ್ತಿರುವಿರಿ” ಎಂದರು. ಸಂಭಾಷಣೆಗೆ ಹೆಚ್ಚಿನ ಟಿಪ್ಪಣಿ ಬೇಕಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಪ್ರಧಾನಮಂತ್ರಿ ತಾವೇ ಬಂದು ಮಾತನಾಡಿಸಿದರೂ ಗಣೇಶರು ಪ್ರಶಸ್ತಿಯ ಸೊಲ್ಲೆತ್ತದೆ ದೇಶದ ಒಳಿತನ್ನು ಅವಧರಿಸಿದರು, ಎಂಬುದು. ಇದನ್ನೆಲ್ಲ ನೋಡುತ್ತಿದ್ದ ಅಲ್ಲಿಯ ಪ್ರತಿಷ್ಠಿತರು ಆ ಬಳಕ ಗಣೇಶರ ಜೊತೆ ವರ್ತಿಸುವ ರೀತಿಯೇ ಬದಲಾಯಿತು ಎಂಬುದು ಬೇರೆಯ ಮಾತು!

ಅನಂತರ ರಾಷ್ಟ್ರಪತಿಭವನದ ಹೊರಗೆ ರಕ್ಷಣೆಯ ಸಿಬ್ಬಂದಿಗೆ ಒಪ್ಪಿಸಿದ್ದ ತಮ್ಮ ಮೊಬೈಲುಗಳನ್ನು ಹಿಂಪಡೆದ ಸಮ್ಮಾನಿತರೆಲ್ಲರೂ ಪದಕಗಳನ್ನು ಹಿಗ್ಗಿನಿಂದ ಎದೆಯ ಮೇಲೆ ಮೆರೆಸುತ್ತ ಮತ್ತೊಮ್ಮೆ “ಚಿತ್ರೋತ್ಸವ”ಕ್ಕೆ ಮೊದಲುಮಾಡಿದರು. ಗಣೇಶರ ಗಮನ ಬೇರೆಡೆಯೇ ಇತ್ತು. ಆ ಅಭ್ಯರ್ಹಿತ ಭವನದ ಮುಖದ್ವಾರದಲ್ಲಿಯೇ ಮೌರ್ಯರ ಕಾಲದ ಅಶೋಕಸ್ತಂಭದ ಭಾಗವಾದ ವೃಷಭವೊಂದರ ಭವ್ಯ ಶಿಲಾಮೂರ್ತಿ ನೆಲೆಗೊಂಡಿದೆ. ಇದನ್ನು ಹಸಿದ ಕಂಗಳಿಂದ ಹೀರುತ್ತಿದ್ದ ಗಣೇಶರು ಸಿಬ್ಬಂದಿಯ ಅನುಮತಿ ಪಡೆದು, ಎಲ್ಲ ಕಡೆಗಳಿಂದಲೂ ಅದರ ಚಿತ್ರಗಳನ್ನು ತೆಗೆಯಲು ಹೇಳಿದರು. ಆ ಮಹಾವೃಷಭದ ಉದಾತ್ತಶಾಂತ ಮುಖಮುದ್ರೆ, ಅಪ್ಪಟ ಭಾರತೀಯವಾದ ಗಂಗೆದೊಗ್ಗಲು, ಪಟಿಷ್ಠ ಶರೀರ, ಸಹಜಸುಂದರವಾದ ಹಿಳಲು-ಗೊರಸುಗಳು — ಇವೆಲ್ಲವನ್ನೂ ಉತ್ಸಾಹದಿಂದ ಬಣ್ಣಿಸತ್ತದ್ದ ಗಣೇಶರನ್ನು ರಾಷ್ಟ್ರಪತಿಭವನದ ಸಿಬ್ಬಂದಿ ಗೌರವದಿಂದ ಗಮನಿಸುತ್ತಿದ್ದರು. ಅತ್ತ ತಮ್ಮದೇ ಚಿತ್ರಚರಿತಗಳಲ್ಲಿ ಮುಳುಗಿದ್ದ ಮಂದಿಯ ಮುಂದೆ ಗಣೇಶರ ಈ ನಡೆವಳಿಕೆ ಅವರಿಗೆ ವಿಶಿಷ್ಟವಾಗಿ ಕಂಡಿರಬೇಕು.

ಆ ಬಳಿಕ ಅದು ಹೇಗೋ ನನ್ನ ಕೋರಿಕೆಯನ್ನು ಮನ್ನಿಸಿ ತಮ್ಮ ಒಂದು ಚಿತ್ರವನ್ನು — ಒಂದೆಂದರೆ ಒಂದೇ ಚಿತ್ರವನ್ನು — ಗ್ರಹಿಸಲು ಸಮ್ಮತಿಸಿದರು. ಅನಂತರ ಕಾರನ್ನು ಹತ್ತುವ ಮುನ್ನವೇ ಪದಕವನ್ನು ತೆಗೆದಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ.

ಮಾರನೆಯ ದಿನ ಎಲ್ಲರನ್ನೂ ಹುತಾತ್ಮರ ಸ್ಮಾರಕ, ರಾಷ್ಟ್ರಪತಿಭವನ ಮತ್ತು ಪ್ರಧಾನಮಂತ್ರಿ ಸಂಗ್ರಹಾಲಯಗಳಿಗೆ ಕರೆದೊಯ್ಯಲಾಯಿತು. ಹುತಾತ್ಮರ ಸ್ಮಾರಕಕ್ಕೆ ಹೋಗುವ ಹೊತ್ತಿಗೆ ಸೂರ್ಯನು ಅಕ್ಷರಶಃ ಬೆಂಗದಿರನೇ ಆಗಿದ್ದ. ದೆಹಲಿಯ ತಾಪವನ್ನು ಹೇಳಬೇಕೇ — ಅದೂ ಗ್ರೀಷ್ಮದಲ್ಲಿ! ಬಸ್ಸಿನಿಂದ ಇಳಿದು ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ “ಥಂಡಾ ಪಾನಿ ಚಾಹಿಯೇ”, “ಜಲಪಾನ್ ವ್ಯವಸ್ಥಾ ನಹಿ ಹೈ ಕ್ಯಾ?” ಎಂಬ ದನಿಗಳು ಕೇಳಿಬರಲರಾಂಭಿಸಿದುವು. ಗಣೇಶರು ಮಾತ್ರ ಅಲ್ಲಿಯ ಯೋಧಮುಖ್ಯರು ನೀಡಿದ ವಿವರಣೆಯನ್ನು ಅವಧಾನವಿರಿಸಿ ಆಲಿಸಿದರು. ಅನಂತರ ಸ್ಮಾರಕಕ್ಕೆ ಕೈಮುಗಿದು ಬಂದರು. ಬಸ್ಸಿನಲ್ಲಿ ಕುಳಿತ ಬಳಿಕ ನೀರು ಕುಡಿದು ದಣಿವಾರಿಸಿಕೊಂಡರು. ಆಗ ಅವರು ಹೇಳಿದ್ದು: “ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ಪುಣ್ಯಾತ್ಮರ ಮುಂದೆ ಕೆಲವು ಕಾಲ ಬಿಸಿಲಲ್ಲಿ ನಿಲ್ಲಲಾರದೆ ನಮಗೆ ತೊಂದರೆ ಎಂದೆಲ್ಲ ಹೇಳುವುದು ಮಹಾ ಅಪಚಾರವಾಗುತ್ತದೆ.”

ಹೀಗೆ ಗಣೇಶರ “ಪದ್ಮಪುರಾಣ” ಸಂಪನ್ನವಾಯಿತು. ಈ ಘಟನೆಗಳ ನಡುವೆ ಅವರಿಗೆ ಸಂದ ಪ್ರಶಸ್ತಿಗೇ ಪುರಸ್ಕಾರ ಸಲ್ಲದಿದ್ದದ್ದು ಚೋದ್ಯ! ಅಥವಾ ಅದೇ ಸಹಜ.

*ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ*

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ