ಬೆಂಗಳೂರಿನ ಬನಶಂಕರಿ ದೇವಸ್ಥಾನದ ಆವರಣದಲ್ಲಿ ವಾಹನ ನಿಲುಗಡೆಗಾಗಿ ಸುಸಜ್ಜಿತವಾದ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣವಾಗಲಿದೆ.
ಬನಶಂಕರಿ ದೇವಾಲಯಕ್ಕೆ ಪ್ರತಿನಿತ್ಯ ನೂರಾರು ಮಂದಿ ಭಕ್ತರು ಕಾರು, ದ್ವಿಚಕ್ರ ವಾಹನಗಳಲ್ಲಿ ಆಗಮಿಸುತ್ತಾರೆ. ಆದರೆ, ಪಾರ್ಕಿಂಗ್ ಸಮಸ್ಯೆಯಿಂದ ಬಹುತೇಕ ಮಂದಿ ರಸ್ತೆ ಬದಿಗಳಲ್ಲಿ ಹಾಗೂ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡುತ್ತಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಲ್ಲದೆ, ದೇವಾಲಯದ ಆವರಣದಲ್ಲಿರುವ ಜಾಗದಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ನಿಲ್ಲಿಸಲು ಅವಕಾಶವಿದೆ.
ಮಂಗಳವಾರ, ಶುಕ್ರವಾರ ಹಾಗೂ ವಿಶೇಷ ದಿನಗಳಂದು ವಾಹನಗಳ ದಟ್ಟಣೆಯೂ ಹೆಚ್ಚಾಗುತ್ತಿದೆ. ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆ ಪರಿಹರಿಸಲು ಪಾರ್ಕಿಂಗ್ ಸಂಕೀರ್ಣ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಬನಶಂಕರಿ ದೇವಸ್ಥಾನದ ಅರ್ಚಕರ ವಸತಿ ಸಮುಚ್ಛಯದ ಮುಂಭಾಗದಲ್ಲಿರುವ 100/150 ಅಡಿ ವಿಸ್ತೀರ್ಣದ ಜಾಗದಲ್ಲಿ 6-8 ಮಹಡಿಗಳ ಪಾರ್ಕಿಂಗ್ ಕಟ್ಟಣ ನಿರ್ಮಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ಪ್ರತಿ ಮಹಡಿಯಲ್ಲಿ ಸುಮಾರು 80 ಕಾರುಗಳನ್ನು ನಿಲುಗಡೆ ಮಾಡಬಹುದು. ಒಟ್ಟಾರೆ 600ರಿಂದ 700 ಕಾಲುಗಳ ನಿಲುಗಡೆಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪಾರ್ಕಿಂಗ್ ಕಟ್ಟಡ ನಿರ್ಮಾಣ ಸಂಬಂಧ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಕುರಿತು ಮಾತನಾಡಿರುವ ಬನಶಂಕರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ ಮಾತನಾಡಿ, ಬಹುಮಹಡಿ ಪಾರ್ಕಿಂಗ್ ಕಟ್ಟಡಕ್ಕೆ ತಗಲುವ ಅಂದಾಜು ವೆಚ್ಚದ ಕುರಿತು ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದಿದ್ದಾರೆ.





