ಬಾಲಿವುಡ್ ನಲ್ಲಿ ಮಂದಿ ಲಿವ್ ಇನ್ ಲವ್ ನಲ್ಲಿ ಮುಳುಗಿ ಹೋಗಿರುವುದು ಎಲ್ಲರಿಗೂ ತಿಳಿದ ಸಂಗತಿಯೇ! ಇದರಿಂದ ಹುಡುಗ ಅಥವಾ ಹುಡುಗಿ ಯಾರಿಗೆ ಹೆಚ್ಚು ಲಾಭ…..?
ಹಿಂದೊಂದು ಕಾಲವಿತ್ತು, ಜನ ಪ್ರೀತಿ ಪ್ರೇಮದಲ್ಲಿ ಮುಳುಗಿದಾಗ, ಮುಂದಿನ 7-7 ಜನ್ಮಗಳೂ ಆ ಸಂಬಂಧವನ್ನೂ ಉಳಿಸಿಕೊಳ್ಳುವುದಾಗಿ ಆಣೆಪ್ರಮಾಣ ಮಾಡಿ ವಾಗ್ದಾನ ನೀಡುತ್ತಿದ್ದರು. ಆದರೆ ಇಂದಿನ ಈ ಅತ್ಯಾಧುನಿಕ ಕಾಲದಲ್ಲಿ ಒಂದು ಜನ್ಮವಿಡೀ ಇರಲಿ, ಹಲವು ದಶಕಗಳಲ್ಲ, ವರ್ಷಗಳೂ ಜೊತೆಗೆ ಇರಲಾರದ ಸ್ಥಿತಿ ತಲುಪಿದ್ದಾರೆ.
ಏಕೆಂದರೆ ಈ ಕಾಲದಲ್ಲಿ ಪ್ರೀತಿ ಪ್ರೇಮಕ್ಕೆ ಬಿದ್ದವರು ಮದುವೆವರೆಗೆ ಅದನ್ನು ಮುಂದುವರಿಸುವುದು ದೊಡ್ಡ ವಿಷಯ, ಆ ಮದುವೆಯನ್ನು ಉಳಿಸಿಕೊಳ್ಳುವುದೂ ಒಂದು ಯಕ್ಷ ಪ್ರಶ್ನೆಯೇ ಆಗಿದೆ. ಇಂದಿಗೂ ಸಹ ಹಲವು ದಂಪತಿಗಳು, ಅವರು ಸಿನಿಮಾದ ಗ್ಲಾಮರ್ ಜಗತ್ತಿಗೆ ಸಂಬಂಧಿಸಿದವರೇ ಇರಲಿ ಅಥವಾ ಮಾಮೂಲಿ ಜನರೇ ಇರಲಿ, ತಮ್ಮ ದಾಂಪತ್ಯದಲ್ಲಿ ಬೇಗ ಎಡವಿ ಬೀಳುವುದನ್ನು ಎಲ್ಲೆಲ್ಲೂ ಕಾಣುತ್ತಿದ್ದೇವೆ. ಇಂದಿನ ಸಮಾಜದಲ್ಲಿ ಇದು ಸರ್ವೇ ಸಾಮಾನ್ಯ ಎಂದಾಗಿ ಹೋಗಿದೆ. ಎಷ್ಟೋ ಜೋಡಿಗಳು ತಮ್ಮ ವೈವಾಹಿಕ ಜೀವನ ಉಳಿಸಿಕೊಂಡಿದ್ದಾರೆ ಎಂದರೆ ಅದು ಕೇವಲ ಸಾಮಾಜಿಕ ಕಾಂಪ್ರಮೈಸ್
ಮಾತ್ರ ಎಂಬುದು ಎಲ್ಲರೂ ಬಲ್ಲ ಸಂಗತಿ. ಏಕೆಂದರೆ ಇಂಥ ಜೋಡಿಗಳಲ್ಲಿ ಪತಿ/ಪತ್ನಿ ಯಾರೇ ಇರಲಿ, ಮನೆಯಲ್ಲಿ ಮಕ್ಕಳ ಸಲುವಾಗಿ ಶಾಂತಿ ಸೌಹಾರ್ದತೆ ತುಂಬಿರಲಿ ಎಂಬ ಒಂದೇ ಕಾರಣಕ್ಕಾಗಿ ಹೇಗೋ ಆ ಸಂಸಾರದ ದೋಣಿ ತಳ್ಳಿಕೊಂಡು ಹೋಗುತ್ತಿರುತ್ತದೆ. ಒಮ್ಮೊಮ್ಮೆ ಅನಿವಾರ್ಯವಾಗಿ ಸತ್ಯ ಸಂಗತಿ ತಿಳಿದಿದ್ದರೂ, ಪತಿ/ಪತ್ನಿ ಮನೆಯಲ್ಲಿ ಮತ್ತೆ ಮತ್ತೆ ಜಗಳ ವಿಕೋಪಕ್ಕೆ ಹೋಗದಿರಲಿ ಎಂದು ಕಾಂಪ್ರಮೈಸ್ ಮಾಡಿಕೊಳ್ಳುತ್ತಲೇ ವೈವಾಹಿಕ ಜೀವನ ಮುಂದುವರಿಸುತ್ತಾರೆ.

ಪತಿ ಬಿಸ್ ನೆಸ್ ಮ್ಯಾನ್ ಯಾ ಸೆಲೆಬ್ರಿಟಿ ಆಗಿದ್ದರೆ, ಪತ್ನಿ ಆದವಳು ಹೆಚ್ಚಿನ ಕಾಂಪ್ರಮೈಸ್ ಗೆ ಒಳಗಾಗ ಬೇಕಾಗುತ್ತದೆ. ಏಕೆಂದರೆ ಇಲ್ಲಿ ಪತಿಯ ಪ್ರಾಬಲ್ಯವೇ ಹೆಚ್ಚು. ಹಣ, ಪ್ರತಿಷ್ಠೆ, ಮನೆಯ ಆಡಳಿತ, ಅಪ್ಪಟ ಗೃಹಿಣಿ ಆಗಿರುವ ಪತ್ನಿ ಇಲ್ಲಿನ ಪ್ರಮುಖ ಅಂಶಗಳು. ಇಂಥ ಪತ್ನಿ ಪತಿಯ ಎಷ್ಟೋ ಬೈಗುಳ, ಗದರುವಿಕೆ, ಅಹಂಕಾರ, ದರ್ಪ, ಬೇರೆ ಅಫೇರ್ ನ ಗೊಂದಲ, ಲೇಟ್ ನೈಟ್ ಪಾರ್ಟಿಗಳ ದುರಭ್ಯಾಸ, ಕುಡುಕ ಸ್ವಭಾವ ಇತ್ಯಾದಿ ಎಲ್ಲವನ್ನೂ ಸಹಿಸಲೇಬೇಕಾಗುತ್ತದೆ. ಆಕೆ ಹಾಗೆ ಸಹನಾಮಯಿ ಆಗಿ ಉಳಿಯದಿದ್ದರೆ, ಇಷ್ಟು ವರ್ಷಗಳ ಸುದೀರ್ಘ ದಾಂಪತ್ಯ ಮುರಿದು ಬೀಳುತ್ತದೆ, ಮಕ್ಕಳ ಮೇಲೆ ಇದರ ದುಷ್ಪರಿಣಾಮ ಆಗದೇ ಇರದು.
ಹೀಗಾದಾಗ ಇಲ್ಲಿ ಪತಿ ಪತ್ನಿಯನ್ನು ತನ್ನ ಗುಲಾಮಳನ್ನಾಗಿಸಿಕೊಂಡು ದಬ್ಬಾಳಿಕೆ ನಡೆಸುತ್ತಾನೆ. ಸಹಿಸಿ ಸಾಕಾದ ಪತ್ನಿ ಎಷ್ಟೋ ವರ್ಷಗಳ ವೈವಾಹಿಕ ಜೀವನದ ನಂತರ ಅನಿವಾರ್ಯವಾಗಿ ವಿಚ್ಛೇದನದ ಕದ ತಟ್ಟುತ್ತಾಳೆ, ಈ ರೀತಿ ಅವಳು ತನ್ನ ಹೊಸ ಜೀವನದ ಗುರಿ ಕಂಡುಕೊಳ್ಳುತ್ತಾಳೆ.

ಪ್ರೀತಿ ಪ್ರೇಮ ಪ್ರಣಯ
ಅದೇ ಪತ್ನಿ ಪತಿಗಿಂತಲೂ ಹೆಚ್ಚು ಸಂಪಾದಿಸುತ್ತಿದ್ದು, ಸಂಪೂರ್ಣ ರೀತಿಯಲ್ಲಿ ಸ್ವಾವಲಂಬಿ ಆಗಿರಬಲ್ಲಳಾದರೆ, ಪತಿಯ ದರ್ಪ ದಬ್ಬಾಳಿಕೆಗಳನ್ನು ಖಂಡಿತಾ ಸಹಿಸಲಾರಳು. ಇವರಿಬ್ಬರ ನಡುವೆ ಎಷ್ಟೇ ಪ್ರೀತಿ ಪ್ರೇಮಗಳಿರಲಿ, ವಿಚ್ಛೇದನದ ಅವಕಾಶ ಹೆಚ್ಚಾಗುತ್ತದೆ. ಈ ಜಂಜಾಟವೇ ಬೇಡ, ಮದುವೆಯ ಬಂಧನದ ರಗಳೆಯೇ ಬೇಡ ಎಂದು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಹಾಯಾಗಿದ್ದು ಬಿಡುತ್ತಾರೆ. ಇದರಲ್ಲಿ ಮದುವೆಗಿರುವ ಯಾವ ಪವಿತ್ರ ಬಂಧನವೂ ಇಲ್ಲ, ಜವಾಬ್ದಾರಿ ಎಂಬುದು ಇಲ್ಲವೇ ಇಲ್ಲ.
ಪ್ರೇಮ ಪ್ರಣಯಗಳು ಧಂಡಿಯಾಗಿದ್ದು, ಎಲ್ಲೆ ಮೀರಿದ ಸ್ವಾತಂತ್ರ್ಯ (ಅಸಲಿಗೆ ಅದಿಲ್ಲಿ ಸ್ವೈರತೆಯೇ ಆಗಿರುತ್ತದೆ) ತುಂಬಿರುತ್ತದೆ. ಹೀಗಾಗಿ ಡೈವೋರ್ಸ್, ಕೋರ್ಟು ಕಛೇರಿಗಳ ಅಲೆದಾಟದ ರಗಳೆ ಇಲ್ಲದೆ, ಅತ್ತೆಮನೆ ತವರುಮನೆಗಳ ಜಂಜಾಟವಿಲ್ಲದೆ ಮನ ಬಯಸಿದಷ್ಟು ದಿನ ಒಬ್ಬನ ಜೊತೆ ಹಾಯಾಗಿದ್ದು ಬಿಡುವುದೇ ಈ ಲಿವ್ ಇನ್! ಪ್ರೇಮಕಾಮಗಳು ಒಂದೇ ಎಂಬ ಭ್ರಮೆಯಲ್ಲಿ ಎಲ್ಲವೂ ಚೆನ್ನಾಗಿರುವ ತನಕ ಈ ಸಂಬಂಧ ಮುಂದುವರಿಯುತ್ತದೆ. ಈ ಕಾರಣದಿಂದಲೇ ಸೆಲೆಬ್ರಿಟಿ ಮಾತ್ರವಲ್ಲದೆ, ಮಾಮೂಲಿ ಜನ ಸಹ ಮದುವೆ ಬೇಡ, ಮಜಾ ನೀಡು ಲಿವ್ ಇನ್ ಇದ್ದರೆ ಸಾಕು ಎಂದು ಬಯಸುತ್ತಿದ್ದಾರೆ.
ಹಾಗಾದರೆ…. ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿ, ನಮ್ಮ ಭಾರತೀಯ ಸಮಾಜದಲ್ಲೂ ಜನರಿಗೆ ಮದುವೆ ಕುರಿತ ನಂಬಿಕೆಯೇ ಹೋಗಿಬಿಟ್ಟಿದೆಯೇ ಎನಿಸುತ್ತದೆ. ಮದುವೆ ಅಂದ್ರೆ ಅದು ಕೇವಲ ಒಂದು ಬಂಧನ ಮಾತ್ರವಾಗಿ ಉಳಿದಿದೆಯೇ? ಲಿವ್ ಇನ್ ನಲ್ಲಿ ಯಾರಿಗೆ ಏನೇನು ಲಾಭ ನಷ್ಟ? ಹಾಗಾದರೆ ಇದರಿಂದ ಗಂಡಿಗೆ ಲಾಭ ಹೆಚ್ಚೋ ಹೆಣ್ಣಿಗೋ….? ಈ ಎಲ್ಲವನ್ನೂ ವಿಶ್ಲೇಷಿಸಿ ನೋಡೋಣ :

ಸೆಲ್ಫ್ ಡಿಪೆಂಡ್ ಆದ ಹುಡುಗಿಯರು ಲಿವ್ ಇನ್ಹೆಚ್ಚು ಬಯಸುತ್ತಾರೆ : ಸಾಧಾರಣ ಹುಡುಗಿ ಅಥವಾ ಬಾಲಿವುಡ್ ಹೀರೋಯಿನ್ನೇ ಇರಲಿ, ಮದುವೆ ಆಗಲು ಅಥವಾ ಆ ಬಂಧನದಲ್ಲಿ ಸಿಲುಕಲು ಹೆದರುತ್ತಾಳೆ. ಮದುವೆಗೆ ಬದಲಾಗಿ ಈ ಲಿವ್ ಇನ್ ಅವಳಿಗೆ ಬೆಟರ್ ಎನಿಸುತ್ತದೆ. ಇದರ ಹಿಂದೆ ಅನೇಕ ಕಾರಣಗಳಿವೆ. ಸದಾ ಸ್ವತಂತ್ರಳಾದ ಇವಳು ಲೇಶ ಮಾತ್ರ ಜವಾಬ್ದಾರಿ ಹೊರಲು ಬಯಸುವುದಿಲ್ಲ. ಉತ್ತಮ ಸಂಪಾದನೆ ಇರುವುದರಿಂದ ಇವಳಿಗೆ ಮನೆಗೆಲಸ ಮಾಡುವುದು ಎಂದರೆ ಅಲರ್ಜಿ. ಇವಳ ಮನೆಯವರೇ ಇವಳಿಗೆ ಬೇಕಾದುದನ್ನೆಲ್ಲ ಮಾಡಿ ಕೊಡುತ್ತಾರೆ.
ಇತ್ತೀಚೆಗೆ ಹಿಂದಿ ಕಿರುತೆರೆಯ ಒಬ್ಬ ಪ್ರಸಿದ್ಧ ಹೀರೋಯಿನ್ ಇದೇ ವಿಷಯದ ಕುರಿತಾಗಿ ಮಾತನಾಡುತ್ತಾ, ಮದುವೆ ನಂತರ ಆಕೆ ಬಹಳ ದುಃಖಿ ಆದಳಂತೆ. ಹೀಗಾಗಿ ಮನೆಯ ಸಮಸ್ತ ಜವಾಬ್ದಾರಿ ಅವಳ ಹೆಗಲಿಗೇರಿತ್ತು. ಇದರಿಂದಾಗಿ ಮದುವೆ ಕಾರಣ, ಪತಿಮಕ್ಕಳ ಜವಾಬ್ದಾರಿ ಹೊರುತ್ತಾ ಆಕೆ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಳು. ಇದೇ ತರಹ ಬಾಲಿವುಡ್ ನ ಹಲವು ನಾಯಕಿಯರು ಮದುವೆ ಏನೋ ಆದರು, ಆದರೆ ಕೆಲವು ವರ್ಷಗಳ ನಂತರ ವಿಚ್ಛೇದನ ಪಡೆದರು. ಇದಕ್ಕೆ ಮುಖ್ಯ ಕಾರಣ, ಪತಿ ಬೇರೆ ಅಫೇರ್ ಹೊಂದಿದ್ದ. ಅಂಥ ಪತಿಯನ್ನು ಆದರಿಸಿ ಏನಾಗಬೇಕು ಎಂದು ಮದುವೆ ಮುರಿದುಕೊಂಡರು. ಹೀಗೆ ಒಂದೊಂದಾಗಿ ಕಾರಣ ಹುಡುಕುತ್ತಾ ಹೊರಟರೆ, ಹಿಂದಿಯ ಹಲವು ನಾಯಕಿಯರು ಮದುವೆ ಮುರಿದುಕೊಂಡ ಉದಾಹರಣೆಗಳು ಸಿಗುತ್ತವೆ.

ಇದಕ್ಕೆ ವಿರುದ್ಧವಾಗಿ ಕಿರುತೆರೆ ಹಿರಿತೆರೆಗಳ ನಾಯಕಿಯರು, ಎಷ್ಟೋ ವರ್ಷಗಳಿಂದ ಲಿವ್ ಇನ್ ನಲ್ಲಿದ್ದು ಬಿಟ್ಟಿದ್ದಾರೆ. ಈ ಸಂಬಂಧದಲ್ಲಿ ಅವರು ಸಂತೋಷವಾಗಿಯೇ ಇದ್ದಾರೆ, ಏಕೆಂದರೆ ಅಲ್ಲಿ ಜವಾಬ್ದಾರಿಯ ಮಾತೇ ಇಲ್ಲ, ಟೈಂ ಸೆನ್ಸ್ ಬೇಕಿಲ್ಲ, ಇದರಲ್ಲಿ ಯಾವುದೇ ಆ್ಯಟಿಟ್ಯೂಡ್ ಪ್ರಾಬ್ಲಂ ಬರುವುದಿಲ್ಲ. ಜೊತೆಗೆ ವಾಸಿಸುವ ಹುಡುಗನಿಗೆ ತಾನೇನಾದರೂ ಗಂಡನಂತೆ ದರ್ಪ ತೋರಿದರೆ, ಈ ಕ್ಷಣವೇ ಅವಳು ಮನೆ ಬಿಟ್ಟು ಹೊರಟುಬಿಡುತ್ತಾಳೆ ಎಂಬುದು ಚೆನ್ನಾಗಿಯೇ ಗೊತ್ತಿರುತ್ತದೆ. ಇವನಿಗಿಂತ ಅವಳ ಸಂಪಾದನೆ ಚೆನ್ನಾಗಿರುವುದರಿಂದ, ಇವನಿಗಿಂತ 10 ಪಟ್ಟು ಚೆನ್ನಾಗಿರುವ ಬೇರೆ ಹುಡುಗರು ಅವಳಿಗೆ ಸಿಕ್ಕೇ ಸಿಗುತ್ತಾರೆ ಎಂಬುದೂ ಗೊತ್ತಿರುತ್ತದೆ. ಇಷ್ಟು ಮಾತ್ರವಲ್ಲ, ಈ ಲಿವಿಂಗ್ ನ ಗಂಡು ಪಾತ್ರಧಾರಿ, ಆಕೆಯ ಎಲ್ಲಾ ನಖರಾ ಸಹಿಸಬೇಕಾಗುತ್ತದೆ, ಅವಳ ಎಲ್ಲಾ ಮಾತುಗಳನ್ನೂ ಜೀ ಹುಜೂರ್ ಎಂದೇ ಪಾಲಿಸುತ್ತಾನೆ. ಹೀಗಾಗಿ ಇಂಥ ಶಾರ್ಟ್ ಲಿವ್ ಇನ್ ಗಳಲ್ಲಿ ಗಂಡಿಗಿಂತ ಹೆಣ್ಣಿಗೇ ಹೆಚ್ಚು ಲಾಭ.

ಸುದೀರ್ಘ ಕಾಲದಿಂದ ಲಿವ್ ಇನ್ ನಲ್ಲಿರುವ ಬಾಲಿವುಡ್ ಸ್ಟಾರ್ಸ್ : ಕತ್ರೀನಾ ಕೈಫ್ ಮೊದಲು ಸಲ್ಮಾನ್ ಖಾನ್ ಜೊತೆಗಿದ್ದು ಸಾಕಾಗಿ, ಅವನನ್ನು ಬಿಟ್ಟು ರಣಬೀರ್ ಕಪೂರ್ ಜೊತೆ ಈ ನೆಪದಲ್ಲಿ ಕಾಲಕಳೆದಳು. ಅದೂ ಸರಿ ಹೋಗದಿದ್ದಾಗ, ಕೊನೆಗೆ ವಿಕ್ಕಿ ಕೌಶ್ ನನ್ನು ಮದುವೆಯಾಗಿ ಈಗ ಅಪ್ಪಟ ಗೃಹಿಣಿ ಆಗಿದ್ದಾಳೆ! ಇದೇ ತರಹ ರಾಣಿ ಮುಖರ್ಜಿ ಆದಿತ್ಯ ಚೋಪ್ರಾ ಜೊತೆ 6 ವರ್ಷಗಳ ಕಾಲ ಹೀಗಿದ್ದು, ನಂತರ ಸಾಕಾಗಿ ಬೇರಾರನ್ನೋ ಮದುವೆ ಆದಳು. ಕರೀನಾ ಕಪೂರ್ ತನಗಿಂತ ಎಷ್ಟೋ ಹಿರಿಯವನಾದ (ಇವಳು ಅವನ ಮೊದಲ ಮದುವೆಗೂ ಹೋಗಿದ್ದಳು) ಸೈಫ್ ಅಲಿ ಖಾನ್ ಜೊತೆ ಹಲವು ವರ್ಷ ಲಿವ್ ಇನ್ ನಲ್ಲಿದ್ದು, ಕೊನೆಗೆ ಅವನನ್ನೇ ಮದುವೆ ಆದಳು. ಅದೇ ತರಹ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ 6 ವರ್ಷಗಳ ಕಾಲ ಹೀಗಿದ್ದು, ನಂತರ ಪ್ರಪಂಚಕ್ಕೆ ತಿಳಿಯಲೆಂಬಂತೆ ಅವನನ್ನೇ ವರಿಸಿದಳು. ಹಾಗೆಯೇ ಸಲ್ಮಾನ್ ನ ದೂರದ ಅತ್ತಿಗೆಯಾದ ಮಲೈಕಾ ಅರೋರಾ ಖಾನ್, ದಿ. ಶ್ರೀದೇವಿಯ ಮಲಮಗನಾದ (ತನಗಿಂತಲೂ ಎಷ್ಟೋ ಕಿರಿಯವನಾದ) ಅರ್ಜುನ್ ಕಪೂರ್ ಜೊತೆ ಲಿವ್‌ಇನ್ ನಲ್ಲಿ ಸಾಕಷ್ಟು ವರ್ಷಗಳಿದ್ದು ಅವನಿಂದ ದೂರಾದಳು. ಕರಿಶ್ಮಾ ಕಪೂರ್ ಅಭಿಷೇಕ್ ಬಚ್ಚನ್ ಜೊತೆ 7 ವರ್ಷಗಳ ಕಾಲ ಜೊತೆಗಿದ್ದು, ಅವನೊಂದಿಗೆ ಎಂಗೇಜ್ ಮೆಂಟ್ ಸಹ ಮಾಡಿಕೊಂಡಳು. ನಂತರ ಅದನ್ನು ಮುರಿದುಕೊಂಡು ಬೇರಾರನ್ನೋ ವರಿಸಿದಳು. ಕೊನೆಗೆ ಅದೂ ಊರ್ಜಿತವಾಗದೆ ಅವನಿಂದಲೂ ವಿಚ್ಛೇದನ ಪಡೆದಳು. ಹಾಗೆಯೇ ದ. ಭಾರತದ ಹಿರಿಯ ನಟ ಕಮಲ್ ಹಾಸನ್ 2 ಬಾರಿ ವಿಚ್ಛೇದನದ ನಂತರ ಹಿರಿಯ ನಟಿ ಗೌತಮಿ ಜೊತೆ ಲಿವ್ ಇನ್ ನಲ್ಲಿದ್ದಾನೆ. ಆತನ ಮಗಳು ಶೃತಿ ಹಾಸನ್ ಕೂಡ ಸಹನಟ ಸಿದ್ಧಾರ್ಥನ ಜೊತೆ ಕೆಲವು ಕಾಲವಿದ್ದು, ನಂತರ ದೂರವಾದಳು.

ನಂತರ ಆತ ಬೇರಾರನ್ನೋ ಮದುವೆ ಆದ. ಇವಳ ಕಾರಣದಿಂದಲೇ ರಜನೀಕಾಂತ್ ಅಳಿಯ ಧನುಶ್ (2 ಮಕ್ಕಳ ತಂದೆ) ತನ್ನ ಮದುವೆ ಮುರಿದುಕೊಂಡು ಬೇರೆಯಾದ. ತೆಲುಗಿನ ನಟಿ ಸಮಂತಾ, ನಾಗಾರ್ಜುನನ ಮಗ ನಾಗಚೈತನ್ಯ ಜೊತೆ 4 ವರ್ಷಗಳ ಕಾಲ ಇದ್ದು, ಮದುವೆ ಆಗಿ ನಂತರ ವಿಚ್ಛೇದನ ಪಡೆದಳು. ಈಗ ನಾಗಚೈತನ್ಯ ಇನ್ನಾರನ್ನೋ ಮದುವೆ ಆಗಿದ್ದಾನೆ. ಜಾನ್ ಅಬ್ರಹಾಂ ಬಿಪಾಶಾ ಬಸು ಎಷ್ಟೋ ವರ್ಷ ಜೊತೆಗಿದ್ದು, ಬೇರಾಗಿ, ಬೇರೆಯವರನ್ನು ಮದುವೆಯಾಗಿ ನೆಮ್ಮದಿ ಕಂಡುಕೊಂಡರು. ಅಕ್ಷಯ್ ಕುಮಾರ್ ಅಂತೂ ಶಿಲ್ಪ ಶೆಟ್ಟಿ, ನಂತರ ರವೀನಾ ಟಂಡನ್ ಜೊತೆ ಹೀಗೆ ಕಾಲ ಕಳೆದು, ನಂತರ ರಾಜೇಶ್ ಖನ್ನಾ ಡಿಂಪಲ್ ರ ಮಗಳು ಟ್ವಿಂಕಲ್ ಖನ್ನಾಳನ್ನು ಮದುವೆಯಾದ. ಸೈಫ್ ಅಲಿಯ ತಂಗಿ ಸೋಹಾ ಅಲಿ ಸಹ ಹೀಗೆಯೇ ಪರರ ಜೊತೆಗಿದ್ದು ಬಂದಳು. ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಾಜಪೂತ್ ಜೊತೆ ಹೀಗೆ ಹಲವು ವರ್ಷ ಕಾಲ ಕಳೆದಳು. ದಿವ್ಯಾಂಕ ತ್ರಿಪಾಠಿ ಕಿರುತೆರೆಯ ಶರದ್ ಮಲ್ಹೋತ್ರಾ ಜೊತೆ ಕಾಲ ಕಳೆದು ಬಂದಳು. ಬಾಲಿವುಡ್ ನ ಲಾರಾ ದತ್ತಾ ದಕ್ಷಿಣದ ಕೇಲಿ ದೋರ್ಜಿ ಜೊತೆ ಅನೇಕ ವರ್ಷ ಕಾಲ ಕಳೆದಿದ್ದಳು.
ಗಾಯಕಿ ಅನುಷ್ಕಾ ದಾಂಡೇಕರ್ ಕರಣ್ ಕುಂದ್ರಾ ಜೊತೆ ಇದ್ದರೆ, ಪತ್ನಿ ಸೂಸನ್ ಳಿಂದ ವಿಚ್ಛೇದನ ಪಡೆದ ಹೃತಿಕ್ ರೋಶನ್ ತನ್ನ ಹೊಸ ಪ್ರೇಯಸಿ ಜೊತೆ 3 ವರ್ಷಗಳಿಂದ ಜೊತೆಯಾಗಿದ್ದಾನೆ. ವಿಶ್ವ ಸುಂದರಿ ಸುಶ್ಮಿತಾ ಸೇನ್‌ಚಿತ್ರರಂಗಕ್ಕೆ ಸೇರದ ವ್ಯಕ್ತಿಯೊಂದಿಗೆ ಹಲವು ವರ್ಷ ಕಾಲ ಲಿವ್ ಇನ್ ನಲ್ಲಿದ್ದಳು, ಮುಂದೆ ಇವರ ಸಂಬಂಧ ಸ್ನೇಹಕ್ಕಷ್ಟೇ ಸೀಮಿತವಾಯಿತು.
ಇಷ್ಟು ಮಾತ್ರವಲ್ಲದೆ ಎಷ್ಟೋ ಮಂದಿ ಬಾಲಿವುಡ್ ನಾಯಕಿಯರು ಮದುವೆ ಏನೋ ಆದರು, ಅದು ಸರಿಹೋಗದೆ, ಮುರಿದುಕೊಂಡರು. ಮಹಿಮಾ ಚೌಧರಿ, ಮನೀಶಾ ಕೊಯಿರಾಲಾ, ಚಿತ್ರಾಂಗದಾ ಸಿಂಗ್ ಮುಂತಾದವರು ಈ ಪಟ್ಟಿಗೆ ಸೇರುತ್ತಾರೆ. ಹಾಗೆಯೇ ಕಿರುತೆರೆಯ ಅನೇಕ ಪ್ರಸಿದ್ಧ ತಾರೆಯರು ಲಿವ್ ಇನ್ ನಲ್ಲಿ ಆರಾಮವಾಗಿದ್ದಾರೆ. ಜ್ಯಾಸ್ಮಿನ್ ಭಸೀನ್‌ಅಲೀ ಗೋನಿ, ತೇಜಸ್ವಿನಿ ಪ್ರಕಾಶ್ ಕರಣ್ ಕುಂದ್ರಾ…. ಹೀಗೆ ಪಟ್ಟಿ ಬೆಳೆಯುತ್ತದೆ.

– ಪ್ರತಿನಿಧಿ
ಲಿವ್ ಇನ್ ನ ನಷ್ಟಗಳು
ಇದರಿಂದ ಆಗುವ ಅತಿ ದೊಡ್ಡ ಹಾನಿ ಎಂದರೆ, ಸಮಾಜದಲ್ಲಿ ಪತಿಪತ್ನಿ ಜೋಡಿಗೆ ಸಿಗುವ ಆದರ ಮರ್ಯಾದೆ, ಲಿವ್ ಇನ್ ಜೋಡಿಗೆ ಎಂದೂ ಸಿಗುವುದಿಲ್ಲ. ಇಂಥ ಹೆಣ್ಣನ್ನು ಯಾರೂ ಮುತ್ತೈದೆ ಎಂದು ಗೌರವಿಸುವುದಿಲ್ಲ. ಈ ಸಂಬಂಧದಲ್ಲಿ ಎಷ್ಟೇ ಫ್ರೀಡಂ ಇರಲಿ, ಪ್ರೀತಿ ಪ್ರೇಮ ಇರಲಿ, ಇಂದಿಗೂ ಭಾರತೀಯ ಸಮಾಜ ಇದನ್ನು ತೆರದ ಮನದಿಂದ ಒಪ್ಪಿಕೊಳ್ಳುವುದಿಲ್ಲ, ಈ ಸಂಬಂಧಕ್ಕೆ ಯಾವುದೇ ಗೌರವಯುತ ಮಾನ್ಯತೆ ಇರುವುದಿಲ್ಲ. `ಇಟ್ಟುಕೊಂಡವಳು’ ಎಂಬ ಮಾತನ್ನು ಮಾಡರ್ನ್ ಸಮಾಜ ಹೇಳದಿದ್ದರೂ, ನೋಡುವ ದೃಷ್ಟಿ ಹಾಗೇ ಇರುತ್ತದೆ. ಈ ಸಂಬಂಧಕ್ಕೆ ಒಂದು ಗೊತ್ತು ಗುರಿ ಇರುವುದಿಲ್ಲ, ಯಾವ ಗ್ಯಾರಂಟಿಯೂ ಇಲ್ಲ! ಅವರ್ ಬಿಟ್ ಇವರ್ ಬಿಟ್ ಇವರು ಯಾರು ಎಂದೇ ಆಗುತ್ತದೆ. ಇಬ್ಬರಿಗೂ ಮನಸ್ಸು ಸರಿ ಇರುವವರೆಗೂ ಎಲ್ಲವೂ ಚೆನ್ನಾಗಿರುತ್ತದೆ, ನಂತರ ಹಳಸಿಕೊಳ್ಳುತ್ತದೆ. ಇದರಲ್ಲಿ ಒಬ್ಬರು ಬೇರಾವುದೇ ಅಫೇರ್ ಹೊಂದಿದ್ದರೂ, ಮತ್ತೊಬ್ಬರು ಅದನ್ನು ಆಕ್ಷೇಪಿಸುವ ಹಕ್ಕು ಹೊಂದಿರುವುದಿಲ್ಲ. ಪತಿ/ಪತ್ನಿಗೆ ಮಾತ್ರ ಅಂಥದ್ದನ್ನು ಪ್ರಶ್ನಿಸುವ ಹಕ್ಕಿರುತ್ತದೆ.
ಇಷ್ಟು ಮಾತ್ರವಲ್ಲದೆ ಈ ಸಂಬಂಧದಲ್ಲಿ, ಎಷ್ಟೋ ವರ್ಷಗಳಿಂದ ನಂಟು ಇದ್ದರೂ, ಯಾವ ಕ್ಷಣದಲ್ಲಿ ಬೇಕಾದರೂ ಇದರಿಂದ ತನಗೇನೂ ಆಗಬೇಕಿಲ್ಲ ಎಂದು ಗಂಡು/ಹೆಣ್ಣು ಯಾರು ಬೇಕಾದರೂ ಕೈಕೊಡವಿ ಹೊರಟು ಹೋಗಬಹುದು. ಅಕಸ್ಮಾತ್ ಇಬ್ಬರಲ್ಲಿ ಒಬ್ಬರು ಸಿರಿವಂತರಾಗಿದ್ದು, ಅವರು ನಿಧನರಾದರೆ, ಅವರ ಸಂಗಾತಿಗೆ ಖಂಡಿತಾ ಆ ಆಸ್ತಿಯಲ್ಲಿ ಏನೂ ಸಿಗುವುದಿಲ್ಲ. ಬದಲಿಗೆ ಅವರ ರಕ್ತ ಸಂಬಂಧಿಗಳಿಗೆ ಮಾತ್ರ ಕಾನೂನುಬದ್ಧವಾಗಿ ಅದು ದಕ್ಕುತ್ತದೆ. ಈ ಲಿವ್ ಇನ್ ರಿಲೇಶನ್ ಒಂದು ವಿಧದಲ್ಲಿ ಚೈನಾ ಮಾಲ್ ಇದ್ದಂಗೆ, ಬಾಳಿಕೆ ಬಂದರೆ ಹಲವು ವರ್ಷ, ಕೆಟ್ಟು ಕೆರ ಹಿಡಿದರೆ ಮೂರೇ ನಿಮಿಷ!





