ಬಾಲಿವುಡ್ ನಲ್ಲಿ ಮಂದಿ ಲಿವ್ ಇನ್ ಲವ್ ನಲ್ಲಿ ಮುಳುಗಿ ಹೋಗಿರುವುದು ಎಲ್ಲರಿಗೂ ತಿಳಿದ ಸಂಗತಿಯೇ! ಇದರಿಂದ ಹುಡುಗ ಅಥವಾ ಹುಡುಗಿ ಯಾರಿಗೆ ಹೆಚ್ಚು ಲಾಭ.....?
ಹಿಂದೊಂದು ಕಾಲವಿತ್ತು, ಜನ ಪ್ರೀತಿ ಪ್ರೇಮದಲ್ಲಿ ಮುಳುಗಿದಾಗ, ಮುಂದಿನ 7-7 ಜನ್ಮಗಳೂ ಆ ಸಂಬಂಧವನ್ನೂ ಉಳಿಸಿಕೊಳ್ಳುವುದಾಗಿ ಆಣೆಪ್ರಮಾಣ ಮಾಡಿ ವಾಗ್ದಾನ ನೀಡುತ್ತಿದ್ದರು. ಆದರೆ ಇಂದಿನ ಈ ಅತ್ಯಾಧುನಿಕ ಕಾಲದಲ್ಲಿ ಒಂದು ಜನ್ಮವಿಡೀ ಇರಲಿ, ಹಲವು ದಶಕಗಳಲ್ಲ, ವರ್ಷಗಳೂ ಜೊತೆಗೆ ಇರಲಾರದ ಸ್ಥಿತಿ ತಲುಪಿದ್ದಾರೆ.
ಏಕೆಂದರೆ ಈ ಕಾಲದಲ್ಲಿ ಪ್ರೀತಿ ಪ್ರೇಮಕ್ಕೆ ಬಿದ್ದವರು ಮದುವೆವರೆಗೆ ಅದನ್ನು ಮುಂದುವರಿಸುವುದು ದೊಡ್ಡ ವಿಷಯ, ಆ ಮದುವೆಯನ್ನು ಉಳಿಸಿಕೊಳ್ಳುವುದೂ ಒಂದು ಯಕ್ಷ ಪ್ರಶ್ನೆಯೇ ಆಗಿದೆ. ಇಂದಿಗೂ ಸಹ ಹಲವು ದಂಪತಿಗಳು, ಅವರು ಸಿನಿಮಾದ ಗ್ಲಾಮರ್ ಜಗತ್ತಿಗೆ ಸಂಬಂಧಿಸಿದವರೇ ಇರಲಿ ಅಥವಾ ಮಾಮೂಲಿ ಜನರೇ ಇರಲಿ, ತಮ್ಮ ದಾಂಪತ್ಯದಲ್ಲಿ ಬೇಗ ಎಡವಿ ಬೀಳುವುದನ್ನು ಎಲ್ಲೆಲ್ಲೂ ಕಾಣುತ್ತಿದ್ದೇವೆ. ಇಂದಿನ ಸಮಾಜದಲ್ಲಿ ಇದು ಸರ್ವೇ ಸಾಮಾನ್ಯ ಎಂದಾಗಿ ಹೋಗಿದೆ. ಎಷ್ಟೋ ಜೋಡಿಗಳು ತಮ್ಮ ವೈವಾಹಿಕ ಜೀವನ ಉಳಿಸಿಕೊಂಡಿದ್ದಾರೆ ಎಂದರೆ ಅದು ಕೇವಲ ಸಾಮಾಜಿಕ ಕಾಂಪ್ರಮೈಸ್
ಮಾತ್ರ ಎಂಬುದು ಎಲ್ಲರೂ ಬಲ್ಲ ಸಂಗತಿ. ಏಕೆಂದರೆ ಇಂಥ ಜೋಡಿಗಳಲ್ಲಿ ಪತಿ/ಪತ್ನಿ ಯಾರೇ ಇರಲಿ, ಮನೆಯಲ್ಲಿ ಮಕ್ಕಳ ಸಲುವಾಗಿ ಶಾಂತಿ ಸೌಹಾರ್ದತೆ ತುಂಬಿರಲಿ ಎಂಬ ಒಂದೇ ಕಾರಣಕ್ಕಾಗಿ ಹೇಗೋ ಆ ಸಂಸಾರದ ದೋಣಿ ತಳ್ಳಿಕೊಂಡು ಹೋಗುತ್ತಿರುತ್ತದೆ. ಒಮ್ಮೊಮ್ಮೆ ಅನಿವಾರ್ಯವಾಗಿ ಸತ್ಯ ಸಂಗತಿ ತಿಳಿದಿದ್ದರೂ, ಪತಿ/ಪತ್ನಿ ಮನೆಯಲ್ಲಿ ಮತ್ತೆ ಮತ್ತೆ ಜಗಳ ವಿಕೋಪಕ್ಕೆ ಹೋಗದಿರಲಿ ಎಂದು ಕಾಂಪ್ರಮೈಸ್ ಮಾಡಿಕೊಳ್ಳುತ್ತಲೇ ವೈವಾಹಿಕ ಜೀವನ ಮುಂದುವರಿಸುತ್ತಾರೆ.

ಪತಿ ಬಿಸ್ ನೆಸ್ ಮ್ಯಾನ್ ಯಾ ಸೆಲೆಬ್ರಿಟಿ ಆಗಿದ್ದರೆ, ಪತ್ನಿ ಆದವಳು ಹೆಚ್ಚಿನ ಕಾಂಪ್ರಮೈಸ್ ಗೆ ಒಳಗಾಗ ಬೇಕಾಗುತ್ತದೆ. ಏಕೆಂದರೆ ಇಲ್ಲಿ ಪತಿಯ ಪ್ರಾಬಲ್ಯವೇ ಹೆಚ್ಚು. ಹಣ, ಪ್ರತಿಷ್ಠೆ, ಮನೆಯ ಆಡಳಿತ, ಅಪ್ಪಟ ಗೃಹಿಣಿ ಆಗಿರುವ ಪತ್ನಿ ಇಲ್ಲಿನ ಪ್ರಮುಖ ಅಂಶಗಳು. ಇಂಥ ಪತ್ನಿ ಪತಿಯ ಎಷ್ಟೋ ಬೈಗುಳ, ಗದರುವಿಕೆ, ಅಹಂಕಾರ, ದರ್ಪ, ಬೇರೆ ಅಫೇರ್ ನ ಗೊಂದಲ, ಲೇಟ್ ನೈಟ್ ಪಾರ್ಟಿಗಳ ದುರಭ್ಯಾಸ, ಕುಡುಕ ಸ್ವಭಾವ ಇತ್ಯಾದಿ ಎಲ್ಲವನ್ನೂ ಸಹಿಸಲೇಬೇಕಾಗುತ್ತದೆ. ಆಕೆ ಹಾಗೆ ಸಹನಾಮಯಿ ಆಗಿ ಉಳಿಯದಿದ್ದರೆ, ಇಷ್ಟು ವರ್ಷಗಳ ಸುದೀರ್ಘ ದಾಂಪತ್ಯ ಮುರಿದು ಬೀಳುತ್ತದೆ, ಮಕ್ಕಳ ಮೇಲೆ ಇದರ ದುಷ್ಪರಿಣಾಮ ಆಗದೇ ಇರದು.
ಹೀಗಾದಾಗ ಇಲ್ಲಿ ಪತಿ ಪತ್ನಿಯನ್ನು ತನ್ನ ಗುಲಾಮಳನ್ನಾಗಿಸಿಕೊಂಡು ದಬ್ಬಾಳಿಕೆ ನಡೆಸುತ್ತಾನೆ. ಸಹಿಸಿ ಸಾಕಾದ ಪತ್ನಿ ಎಷ್ಟೋ ವರ್ಷಗಳ ವೈವಾಹಿಕ ಜೀವನದ ನಂತರ ಅನಿವಾರ್ಯವಾಗಿ ವಿಚ್ಛೇದನದ ಕದ ತಟ್ಟುತ್ತಾಳೆ, ಈ ರೀತಿ ಅವಳು ತನ್ನ ಹೊಸ ಜೀವನದ ಗುರಿ ಕಂಡುಕೊಳ್ಳುತ್ತಾಳೆ.

ಪ್ರೀತಿ ಪ್ರೇಮ ಪ್ರಣಯ
ಅದೇ ಪತ್ನಿ ಪತಿಗಿಂತಲೂ ಹೆಚ್ಚು ಸಂಪಾದಿಸುತ್ತಿದ್ದು, ಸಂಪೂರ್ಣ ರೀತಿಯಲ್ಲಿ ಸ್ವಾವಲಂಬಿ ಆಗಿರಬಲ್ಲಳಾದರೆ, ಪತಿಯ ದರ್ಪ ದಬ್ಬಾಳಿಕೆಗಳನ್ನು ಖಂಡಿತಾ ಸಹಿಸಲಾರಳು. ಇವರಿಬ್ಬರ ನಡುವೆ ಎಷ್ಟೇ ಪ್ರೀತಿ ಪ್ರೇಮಗಳಿರಲಿ, ವಿಚ್ಛೇದನದ ಅವಕಾಶ ಹೆಚ್ಚಾಗುತ್ತದೆ. ಈ ಜಂಜಾಟವೇ ಬೇಡ, ಮದುವೆಯ ಬಂಧನದ ರಗಳೆಯೇ ಬೇಡ ಎಂದು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಹಾಯಾಗಿದ್ದು ಬಿಡುತ್ತಾರೆ. ಇದರಲ್ಲಿ ಮದುವೆಗಿರುವ ಯಾವ ಪವಿತ್ರ ಬಂಧನವೂ ಇಲ್ಲ, ಜವಾಬ್ದಾರಿ ಎಂಬುದು ಇಲ್ಲವೇ ಇಲ್ಲ.





