ಪ್ರತಿದಿನ ಸ್ವಲ್ಪ ಹೊತ್ತು ಸೈಕಲ್ ಓಡಿಸುವುದರಿಂದ ಅದೆಷ್ಟು ಲಾಭಗಳಿವೆ ಎನ್ನುವುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು…..!
ಕೆಲವು ವರ್ಷಗಳ ಹಿಂದಿನತನಕ ಜನರಿಗೆ ಸೈಕಲ್ ಓಡಿಸುವುದೆಂದರೆ ಏನೋ ಹಿಂಜರಿಕೆ, ಕೀಳರಿಮೆಯ ಭಾವನೆ. ಆದರೆ ಈಗ ಕಾಲ ಬದಲಾಗಿದೆ. ಯಾರ ಮನೆಯಲ್ಲಿ ಐಷಾರಾಮಿ ಕಾರು ಇದೆಯೋ, ಅವರು ಕೂಡ ಸೈಕಲ್ ಹೊಂದುವುದು ಪ್ರತಿಷ್ಠೆಯ ವಿಷಯ ಎಂದು ಭಾವಿಸುತ್ತಿದ್ದಾರೆ. ಒಂದೆಡೆ ಯುವಕರು ಚುರುಕಿನಿಂದಲೂ ಸೈಕಲ್ ಓಡಿಸುತ್ತಾರೆ. ಮತ್ತೊಂದೆಡೆ ಯುವತಿಯರು ತಮ್ಮ ದೇಹ ತೆಳ್ಳಗಿರಲೆಂದು ಸೈಕಲ್ ಚಲಾಯಿಸುತ್ತಿದ್ದಾರೆ.
ಸೈಕಲ್ ಓಡಿಸುವುದರಿಂದ ಏನೇನು ಲಾಭಗಳಿವೆ ಎನ್ನುವುದನ್ನು ತಿಳಿದುಕೊಂಡರೆ ನಿಮಗೆ ಅಚ್ಚರಿಯಾಗುತ್ತದೆ. ಪ್ರತಿದಿನ 30 ನಿಮಿಷ ಸೈಕಲ್ ಓಡಿಸುವುದರ ಲಾಭಗಳು ಏನೇನು ಎನ್ನುವುದನ್ನು ತಿಳಿದುಕೊಳ್ಳಿ :
ನೀವು ಪ್ರತಿದಿನ 2 ಕಿ.ಮೀ. ಅಥವಾ 30 ನಿಮಿಷಗಳ ಕಾಲ ಸೈಕಲ್ ಓಡಿಸಿದರೆ ನೀವು ಹೆಚ್ಚು ವರ್ಷಗಳ ಕಾಲ ಯೌವನದಲ್ಲಿರುವಂತೆ ಅನುಭವ ಪಡೆಯುವಿರಿ. ಇದಕ್ಕೆ ಕಾರಣವೇನೆಂದರೆ, ರಕ್ತ ಪರಿಚಲನೆ ಸಮರ್ಪಕವಾಗುತ್ತದೆ ಹಾಗೂ ನಿಮ್ಮ ಸ್ಛೂರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ.
ಅರ್ಧ ಗಂಟೆಗಳ ಕಾಲ ಸೈಕಲ್ ಚಾಲನೆಯಿಂದ ದೇಹದ ಎಲ್ಲ ಅಂಗಗಳು ಕ್ರಿಯಾಶೀಲವಾಗಿರುತ್ತವೆ ಹಾಗೂ ರಾತ್ರಿ ಒಳ್ಳೆಯ ನಿದ್ರೆ ಲಭಿಸುತ್ತದೆ.
ಅರ್ಧ ಗಂಟೆಯ ಸೈಕಲ್ ಚಾಲನೆಯಿಂದ ಇಮ್ಯೂನ್ ಸೆಲ್ಸ್ ಹೆಚ್ಚುವ ಆ್ಯಕ್ಟಿವ್ ಆಗಿರುತ್ತವೆ. ಜೊತೆಗೆ ನೀವು ಅನಾರೋಗ್ಯ ಪೀಡಿತರಾಗುವುದು ಕಡಿಮೆಯಾಗುತ್ತದೆ.
ಸೈಕಲ್ ನಡೆಸುವುದರಿಂದ ದೇಹದ ಎಲ್ಲ ಮಾಂಸಖಂಡಗಳು ಆರೋಗ್ಯವಂತ ಮತ್ತು ಬಲಿಷ್ಠವಾಗುತ್ತವೆ. ಅದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
ಸೈಕಲ್ ಓಡಿಸುವುದರಿಂದ ಮೆದುಳಿನ ಶಕ್ತಿ ತೀವ್ರಗೊಳ್ಳುತ್ತದೆ. ದಿನ ಸೈಕಲ್ ಓಡಿಸುವವರ ನಿರ್ಣಯ ಸಾಮರ್ಥ್ಯ ಸಾಮಾನ್ಯ ಜನರಿಗಿಂತ ಹೆಚ್ಚಿಗೆ ಇರುತ್ತದೆ.
ಅರ್ಧ ಗಂಟೆ ಕಾಲ ಸೈಕಲ್ ಓಡಿಸುವುದರಿಂದ ವ್ಯಕ್ತಿಯೊಬ್ಬನ ಕ್ಯಾಲೋರಿ ಎಷ್ಟೊಂದು ನಷ್ಟವಾಗುತ್ತದೆ ಎಂದರೆ, ಇದರಿಂದಾಗಿ ದೇಹದ ಹೆಚ್ಚುವರಿ ಕೊಬ್ಬು ಕಡಿಮೆಯಾಗುತ್ತದೆ.
ನಿಯಮಿತವಾಗಿ ಸೈಕಲ್ ಓಡಿಸುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಯೂನಿವರ್ಸಿಟಿ ಆಫ್ ಕೆರೊಲಿನಾದಲ್ಲಿ ನಡೆದ ಒಂದು ಸಂಶೋಧನೆಯ ಬಳಿಕ ತಿಳಿದುಬಂದ ವಿಷಯವೆಂದರೆ, ಯಾರು ವಾರದಲ್ಲಿ 5 ದಿನಗಳ ಕಾಲ, ದಿನಕ್ಕೆ ಅರ್ಧ ಗಂಟೆಯಂತೆ ಸೈಕಲ್ ಓಡಿಸುತ್ತಾರೊ ಅವರು ರೋಗ ಪೀಡಿತರಾಗುವ ಸಾಧ್ಯತೆ ಶೇ.50ರಷ್ಟು ಕಡಿಮೆಯಾಗುತ್ತದೆ. ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದರಲ್ಲಿ ಸೈಕಲ್ ಚಾಲನೆ ಅತ್ಯಂತ ಲಾಭಕರ.
ಸೈಕಲ್ ಓಡಿಸುವಾಗ ಹೃದಯದ ಗತಿ ಹೆಚ್ಚುತ್ತದೆ. ಅದರಿಂದ ರಕ್ತ ಪರಿಚಲನೆ ಸಮರ್ಪಕಗೊಳ್ಳುತ್ತದೆ. ಅದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉದ್ಭವಿಸುವುದಿಲ್ಲ. ಹೃದಯಕ್ಕೆ ಸಂಬಂಧಪಟ್ಟ ಇತರೆ ರೋಗಗಳು ಉಂಟಾಗುವ ಸಂಭವಗಳು ಕೂಡ ಕಡಿಮೆಯಾಗುತ್ತವೆ.
ಬೇರೆ ಬೇರೆ ಅಧ್ಯಯನಗಳಿಂದ ತಿಳಿದುಬಂದ ಸಂಗತಿಯೇನೆಂದರೆ, ಸೈಕಲ್ ಓಡಿಸುವವರು ಬೇರೆಯವರಿಗೆ ಹೋಲಿಸಿದರೆ ಒತ್ತಡ ಹಾಗೂ ಖಿನ್ನತೆಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಸೈಕ್ಲಿಂಗ್ ನಿಂದ ಬ್ಲಡ್ ಸೆಲ್ಸ್ ಹಾಗೂ ತ್ವಚೆಗೆ ಆಮ್ಲಜನಕ ಪೂರೈಕೆ ಸಮರ್ಪಕವಾಗಿ ಆಗುತ್ತದೆ. ಇದರಿಂದ ಚರ್ಮ ಇನ್ನಷ್ಟು ಹೊಳಪುಳ್ಳದಾಗಿ ಗೋಚರಿಸುತ್ತದೆ. ಬೇರೆ ಸಮವಯಸ್ಕರಿಗೆ ಹೋಲಿಸಿದರೆ, ಅವರು ಚಿರ ಯೌವನ ಹೊಂದಿರುವಂತೆ ಕಂಡುಬರುತ್ತಾರೆ. ಕೇವಲ ಯಂಗ್ ಆಗಿ ಕಂಡುಬರುವುದು ಅಷ್ಟೇ ಅಲ್ಲ, ದೇಹ ವಾಸ್ತವದಲ್ಲಿ ಮತ್ತಷ್ಟು ಯೌವನ ಪಡೆದುಕೊಳ್ಳುತ್ತದೆ. ತಮ್ಮ ಸ್ಟೆಮಿನಾ ಹೆಚ್ಚಾಗಿದೆ ಹಾಗೂ ದೇಹದಲ್ಲಿ ಹೊಸ ಶಕ್ತಿ ಸ್ಛೂರ್ತಿಯ ಸಂಚಲನವಾಗುತ್ತಿದೆ ಎಂಬ ಅನುಭವ ಪಡೆದುಕೊಳ್ಳುತ್ತಾರೆ.
ಯಾರಿಗೆ ಸೈಕ್ಲಿಂಗ್ ನ ಅಭ್ಯಾಸವಿರುತ್ತದೋ ಅವರಿಗೆ ಕಾಲು ಮತ್ತು ಪಾದಗಳು ಬಹಳ ಬಲಿಷ್ಠವಾಗಿರುತ್ತವೆ. ಅಂದಹಾಗೆ ಸೈಕ್ಲಿಂಗ್ ನಿಂದ ಕಾಲುಗಳಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಇಡೀ ದೇಹಕ್ಕೂ ಅದು ಒಳ್ಳೆಯ ಎಕ್ಸರ್ ಸೈಜ್‌ನಂತೆ.
ಸೈಕ್ಲಿಂಗ್ ನ ಅತಿ ದೊಡ್ಡ ಲಾಭವೆಂದರೆ, ಇದರಿಂದ ದೇಹದ ಎಲ್ಲ ಅಂಗಗಳ ನಡುವೆ ಒಳ್ಳೆಯ ಸಮನ್ವಯತೆ ಸ್ಥಾಪನೆಯಾಗುತ್ತದೆ. ಕಾಲು, ಕೈ, ಕಣ್ಣು ಇವುಗಳ ನಡುವೆ ಒಳ್ಳೆಯ ಹೊಂದಾಣಿಕೆ ಉಂಟಾಗುವುದು ದೇಹದ ಸಂಪೂರ್ಣ ಸಮತೋಲನಕ್ಕೆ ಒಳ್ಳೆಯದು. ಇಷ್ಟೇ ಅಲ್ಲ, ನೀವು ಸ್ಕೂಟಿ ಅಥವಾ ಬೈಕ್ ಚಲಾಯಿಸುವುದನ್ನು ಕಲಿಯಬೇಕೆಂದಿದ್ದರೆ, ಸೈಕ್ಲಿಂಗ್ ನ ಮಾಹಿತಿ ನಿಮಗೆ ಉಪಯೋಗಕ್ಕೆ ಬರುತ್ತದೆ. ಸೈಕಲ್ ಓಡಿಸುವುದರಿಂದ ಮನಸ್ಸಿನಲ್ಲಿ ಅದೇನೊ ಖುಷಿಯ ಅನುಭವ ಉಂಟಾಗುತ್ತದೆ. ನಾನು ಪರಿಸರ ಸಮತೋಲನ ಕಾಪಾಡುವಲ್ಲಿ ನೆರವಾದೆ ಎಂಬ ಭಾವನೆಯೂ ನಿಮಗೆ ಬರುತ್ತದೆ. ಸೈಕಲ್ ಚಲಾಯಿಸುವುದರ ಮತ್ತೊಂದು ಅರ್ಥ ನಾವು ನಮ್ಮ ಭೂಮಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದೇವೆ ಎಂಬುದು ಕೂಡ ಆಗಿದೆ.

ಎಂತಹ ಸೈಕಲ್ ಖರೀದಿಸಬೇಕು?
ಸೈಕಲ್ ಎಂತಹದ್ದಿರಬೇಕು ಎನ್ನುವುದು ಕೂಡ ಮಹತ್ವದ ವಿಷಯವಾಗಿದೆ. ಒಂದು ವೇಳೆ ನೀವು ಪ್ರತಿದಿನ ಸೈಕಲ್ ಓಡಿಸುವವರಾಗಿದ್ದರೆ ಎಂತಹ ಸೈಕಲ್ ಖರೀದಿಸಬೇಕೆಂದರೆ, ಬಹುದೂರ ಓಡಿಸಿದರೂ ನಿಮಗೆ ಯಾವುದೇ ರೀತಿಯ ದಣಿವು ಎಬ್ಬಿಸಬಾರದು.
ಒಂದು ವೇಳೆ ನೀವು ಪ್ರತಿಯೊಂದು ಕೆಲಸವನ್ನು ಸೈಕಲ್ ಮುಖಾಂತರವೇ ಮಾಡಲು ಇಚ್ಛಿಸುತ್ತೀರಿ ಎಂದರೆ, ಕೆಲವು ಸಂಗತಿಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯ. ಶೋರೂಮ್ ನಲ್ಲಿ ಹಲವು ಬಗೆಯ ಫ್ಯಾನ್ಸಿ ಸೈಕಲ್ ಗಳು ಇರುತ್ತವೆ. ಅವುಗಳ ಆಕರ್ಷಣೆಯಲ್ಲಿ ಜನ ಹೇಗೆ ಮರುಳಾಗುತ್ತಾರೆ ಎಂದರೆ, ತಮ್ಮ ಅಗತ್ಯವನ್ನು ಬದಿಗೊತ್ತಿ ದುಬಾರಿ ಸೈಕಲ್ ಖರೀದಿಸುತ್ತಾರೆ. ಆ ಬಳಿಕ ಪಶ್ಚಾತ್ತಾಪಪಡುತ್ತಾರೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 45 ಪ್ರಕಾರದ ಸೈಕಲ್ ಗಳಿರುತ್ತವೆ. ಯಾವ ಸೈಕಲ್ ನ್ನು ಖರೀದಿಸಬೇಕು ಎನ್ನುವುದು ಅದರ ಉದ್ದೇಶವನ್ನು ಅವಲಂಬಿಸಿರುತ್ತದೆ. ನೀವು ರಸ್ತೆಯ ಮೇಲೆ ಓಡಿಸಬೇಕೊ ಅಥವಾ ಪಾರ್ಕ್ ನಲ್ಲಿ 2 ಗಂಟೆ ಅಥವಾ 4 ಗಂಟೆ ಮಾರುಕಟ್ಟೆಗೆ ಹೋಗಬೇಕಿದೆಯೋ ಅಥವಾ ನಾರ್ಮಲ್ ಸೈಕ್ಲಿಂಗ್ ಮಾಡಬೇಕಿದೆ ಇವೆಲ್ಲವನ್ನು ಗಮನಿಸಬೇಕು.
ರೋಡ್ ಸೈಕ್ಲಿಂಗ್
ಇದನ್ನು ರೇಸಿಂಗ್ ಸೈಕಲ್ ಎಂದು ಕರೆಯುತ್ತಾರೆ. ಇದು ಬಹಳ ಹಗುರವಾಗಿರುತ್ತದೆ. ಇದರ ಚಕ್ರಗಳು ಬಹಳ ತೆಳ್ಳಗಿರುತ್ತವೆ. ಸಾಮಾನ್ಯವಾಗಿ ಈ ರೀತಿಯ ಸೈಕಲ್ ನ್ನು ಉಪಯೋಗಿಸುವರೆಂದರೆ, ಅತಿ ಹೆಚ್ಚು ದೂರ ಕ್ರಮಿಸುವವರಾಗಿ ಇರುತ್ತಾರೆ. ಅವರು ಸಾಮಾನ್ಯವಾಗಿ ಪ್ರೊಫೆಶನಲ್ ಸೈಕ್ಲಿಸ್ಟ್ ಗಳಾಗಿರುತ್ತಾರೆ. ಈ ಸೈಕಲ್ ನಿಂದ ಕೆಲವೇ ಗಂಟೆಗಳಲ್ಲಿ ನೂರು ಕಿ.ಮೀ. ಅಥವಾ ಅದಕ್ಕೂ ಹೆಚ್ಚು ದೂರ ಕ್ರಮಿಸಬಹುದಾಗಿದೆ. ಇದರ ಬೆಲೆ 30,000 ರೂ.ಗಳಿಂದ ಹಲವು ಲಕ್ಷಗಳ ತನಕ ಇರುತ್ತದೆ. ಅಂದಹಾಗೆ ಇದರ ನಿರ್ವಹಣೆ ಕೂಡ ದುಬಾರಿ ಆಗಿರುತ್ತದೆ. ರೇಸಿಂಗ್ ವರ್ಕ್ ಔಟ್ ನಲ್ಲಿ ಈ ಸೈಕಲ್ ಬಹಳ ಒಳ್ಳೆಯದೆಂದು ಭಾವಿಸಲಾಗುತ್ತದೆ. ಈ ಸೈಕಲ್ ಗಳು ಹೊರದೇಶಗಳಿಂದ ಅಂದರೆ ಚೀನಾ ಮತ್ತು ವಿಯೆಟ್ನಾಂನಿಂದ ಆಮದಾಗುತ್ತವೆ. ನೀವು ನಗರದಲ್ಲಿದ್ದು, ಕೇವಲ 20-30 ಕಿ.ಮೀ. ಮಾತ್ರ ಸಂಚರಿಸುವಿರಾದರೆ ಈ ಸೈಕಲ್ ನಿಮಗಾಗಿ ಅಲ್ಲ, ನೀವು ದಿನ 100 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸುವಿರಾದರೆ, ಈ ಸೈಕಲ್ ಖರೀದಿಸಬಹುದು. ಇದರ ರಚನೆ ಹೇಗಿರುತ್ತದೆಂದರೆ, ದೀರ್ಘ ಪ್ರಯಾಣ ಮಾಡಿದರೂ ಕೂಡ ದಣಿವಾವಾಗುವುದಿಲ್ಲ.
ದಪ್ಪ ಟಯರ್ ನ ಲಾಭಗಳು
ಇತ್ತೀಚಿನ ದಿನಗಳಲ್ಲಿ ಈ ಸೈಕಲ್ ನ ಟ್ರೆಂಡ್ ಜೋರಾಗಿದೆ. ದಪ್ಪ ಟಯರ್ ಇರುವುದರಿಂದ ಇದನ್ನು `ಪ್ಯಾಚ್ ಟಯರ್ ಬೈಕ್’ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇಂತಹ ಸೈಕಲ್ ಗಳನ್ನು ಮರಳಿನ ಪ್ರದೇಶ ಅಥವಾ ಮಂಜುಗಡ್ಡೆ ಇವರು ಕಡೆ ಬಳಸಲಾಗುತ್ತದೆ. ಇಂತಹ ಸ್ಥಳಗಳಲ್ಲಿ ಇದು ಬಹಳ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಸಾಮಾನ್ಯ ರಸ್ತೆಗಳಲ್ಲಿ ಇದು ಅಷ್ಟು ಯಶಸ್ವಿಯಾಗಿ ಕೆಲಸ ಮಾಡುವುದಿಲ್ಲ. ಸಾಮಾನ್ಯ ರಸ್ತೆಗಳಲ್ಲಿ ಇದನ್ನು ಓಡಿಸಲು ಸಾಕಷ್ಟು ಶಕ್ತಿ ಬಳಸಬೇಕಾಗಿ ಬರುತ್ತದೆ. ಯಾರಿಗಾದರೂ ತಮ್ಮ ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಅನ್ನಿಸಿದರೆ, ಅಂಥವರು ಈ ಸೈಕಲ್ ನ್ನು ಖರೀದಿಸಬಹುದು. ಈ ಸೈಕಲ್ ಗಳ ಬೆಲೆ 10-20 ಸಾವಿರ ರೂ.ತನಕ ಇರುತ್ತದೆ.
ಮೌಂಟೇನ್ ಸೈಕಲ್
ಇವನ್ನು ಎಲ್ಲಿಯಾದರೂ ಓಡಿಸಬಹುದು. ಇವೇ ಸೈಕಲ್ ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಸಾಮಾನ್ಯವಾಗಿ ಪ್ರತಿದಿನ ಸೈಕ್ಲಿಂಗ್ ಮಾಡುವವರು ಇದನ್ನು ಬಳಸಬಹುದು. ಈ ಸೈಕಲ್ ಗಳು ಸಾಮಾನ್ಯ ರಸ್ತೆಗಳ ಜೊತೆಗೆ ಬೆಟ್ಟ ಪ್ರದೇಶ, ಕಾಡಿನ ರಸ್ತೆ, ಹೊಲ ಗದ್ದೆಗಳ ಕಿರಿದಾದ ದಾರಿಯಲ್ಲಿ ಸಾಗುವವರು ಇಂತಹ ಸೈಕಲ್ ಗಳನ್ನು ಬಳಸಬಹುದು. ಒಳ್ಳೆಯ ಹಿಡಿತ, ಆರಾಮದಾಯಕ ಮತ್ತು ಗೇರ್ ನ ವೆರೈಟಿ ಇರುವುದರ ಕಾರಣದಿಂದ ಜನರು ಇದನ್ನು ಬಹಳ ಇಷ್ಟಪಡುತ್ತಾರೆ. ಇದನ್ನು ಅಡ್ವೆಂಚರ್ ಸೈಕಲ್ ಎಂದೂ ಕರೆಯುತ್ತಾರೆ. ಇದರ ಟಯರ್ ಗಳು ದಪ್ಪಗಿರುತ್ತವೆ. ಬೆಟ್ಟ ಪ್ರದೇಶಗಳಲ್ಲಿ ಇವನ್ನು ಬಹಳ ಎಚ್ಚರಿಕೆಯಿಂದ ಓಡಿಸಬೇಕು. ಏಕೆಂದರೆ ಇದರಲ್ಲಿ ಬ್ಯಾಲೆನ್ಸಿಂಗ್ ಅಥವಾ ಡಿಸ್ಕ್ ಬ್ರೇಕ್ ವೇಗವಾಗಿ ಹಾಕುವುದರಿಂದ ಬೀಳುವ ಅಪಾಯವಿರುತ್ತದೆ. ಇದರ ಬೆಲೆ 10,000 ದಿಂದ 20,000 ರೂ.ಗಳ ತನಕ ಇರುತ್ತದೆ.
– ಪೂರ್ಣಿಮಾ





