ಲೋಕಭವನ ಇಂದು ಐತಿಹಾಸಿಕ ಹಾಗೂ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಿತ್ತು. ಒಂದು ಡಿ.ಕೆ. ಶಿವಕುಮಾರ್ ಸಿಎಂ ಆಗಿದ್ದು. ಮತ್ತೊಂದು ತನ್ನ ತಂದೆ ಸಿಎಂ ಆಗೋದನ್ನ ಮಡದಿ ಮಕ್ಕಳು ಕಣ್ತುಂಬಿಕೊಂಡಿದ್ದು. ಜ್ಯೋತಿಷಿಯೊಬ್ಬರು ಹೇಳಿದ ಹೆಸರಿನಂತೆಯೇ ಅಂದು ಉಷಾ ಅವರನ್ನ ಮದುವೆ ಆಗಿದ್ದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮಗಳು ಬಹಳ ಮುದ್ದು. ದೊಡ್ಡ ಮಗಳು ಐಶ್ವರ್ಯ ಅಂದ್ರೆ ಪಂಚಪ್ರಾಣ. ಜೊತೆಗೆ ತನ್ನ ಅದೃಷ್ಟದ ದೇವತೆ ಅಂತಾನೇ ನಂಬಿದ್ದಾರೆ. ಇನ್ನು ಪತ್ನಿ ಉಷಾ ಅವರು ಹಾಕಿದ ಗೆರೆ ದಾಟೋದಿಲ್ಲ. ಪುತ್ರಿ ಐಶ್ವರ್ಯ ಜೊತೆ ಎರಡನೇ ಮಗಳು ಆಭರಣ ಹಾಗೂ ಪುತ್ರ ಆಕಾಶ್​​ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದರು. ಪುತ್ರಿ ಹಸಿರು ಬಣ್ಣದ ಡ್ರೆಸ್ ನಲ್ಲಿ ಬಂದಿದ್ದರೆ, ಪತ್ನಿ ಉಷಾ ಅವರು ಗೋಲ್ಡನ್ ಕಲರ್ ಸೀರೆಯಲ್ಲಿದ್ದರು. ಪುತ್ರ ಟಿಪ್ ಟಾಪ್ ಆಗಿ ಸೂಟ್ ಹಾಕಿದ್ದರು.ಕೆನೆ ಬಣ್ಣದ ರೇಷ್ಮೆ ಜುಬ್ಬಾ ಮತ್ತು ಕಾಂಗ್ರೆಸ್ ಪಕ್ಷದ ತ್ರಿವರ್ಣ ಧ್ವಜವನ್ನು ಹೊಂದಿರುವ ಶಾಲು ಧರಿಸಿದ್ದ ತಂದೆಯ ಸಂತಸದ ಓಡಾಟ ನೋಡಿ ಖುಷಿಯಾಗಿದ್ದ ಪುತ್ರಿ ಅಪ್ಪನಿಗೆ ಆಲ್ ದಿ ಬೆಸ್ಟ್ ಹೇಳಿದರು. ಕನಸು ನನಸಾಗಿದೆ ಏನ್ ಹೇಳ್ತೀರಾ ಅಂತಾ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಇದು ಕನಸಷ್ಟೇ ಅಲ್ಲ. ಇದೀಗ ಒಂದು ದೊಡ್ಡ ಜವಾಬ್ದಾರಿ ಅವರ ಮೇಲಿದೆ. ನಾನು ಕೇವಲ ಪ್ರೇಕ್ಷಕಿ ಅಷ್ಟೇ. ಇನ್ನು ಎರಡು ವರ್ಷ ಅವರ ಕೆಲಸ ಮುಖ್ಯವಾಗಿದೆ. ಅವರ ಅನುಭವ ಅವರ ಆಡಳಿತಕ್ಕೆ ಹೆಲ್ಪ್ ಆಗಲಿದೆ ಅಂತಾ ತಿಳಿಸಿದರು.

ಡಿ.ಕೆ ಶಿವಕುಮಾರ್ ಅವರ ಪತ್ನಿ ಉಷಾ ಅವರೂ ಕೂಡ, ಶುಭಾಶಯ ತಿಳಿಸಿದರು. ಈ ಕ್ಷಣ ಕಣ್ತುಂಬಿಕೊಳ್ತಿರೋದು ನನಗೆ ಖುಷಿಯಾಗ್ತಿದೆ. ಈ ಕ್ಷಣಕ್ಕೋಸ್ಕರ ಅವರಷ್ಟೇ ಅಲ್ಲ, ನಾವೂ ಕೂಡ ಕಾಯ್ತಿದ್ವಿ. ಅವರ ಪ್ರಮಾಣಿಕ ಕೆಲಸ ಹಾಗೂ ನಿರಂತರ ಹಾಕಿದ ಪರಿಶ್ರಮಕ್ಕೆ ಸಿಕ್ಕ ಫಲ ಅಂತಾ ಹೇಳಿದರು.ಜ್ಯೋತಿಷಿ ಸಲಹೆ : ಜ್ಯೋತಿಷಿಯ ಸಲಹೆಯಂತೆ ವೇದಿಕೆಯನ್ನು ಪೂರ್ವಕ್ಕೆ ಮುಖ ಮಾಡಿ ಇರಿಸಲಾಗಿತ್ತು, ಇದನ್ನು ಶುಭವೆಂದು ಪರಿಗಣಿಸಲಾಗಿದೆ. ಇನ್ನು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಡಿ.ಕೆ ಶಿವಕುಮಾರ್ ಅವರು, ಜ್ಯೋತಿಷಿ ಸಲಹೆಯಂತೆ ನಂದಿ ಬಾಗಿಲು (ಉತ್ತರ ದ್ವಾರ) ಮೂಲಕ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟರು. ಅಷ್ಟೇ, ಸಚಿವ ಸಂಪುಟ ಸಭೆ ಮುಗಿಸಿದ ಬಳಿಕ ನಡೆಸಿದ ಪತ್ರಿಕಾಗೋಷ್ಠಿ ವೇಳೆ ತಮ್ಮ ಅಧಿಕಾರಿಗಳಿಗೆ ಮುಂದಿನ ಪತ್ರಿಕಾಗೋಷ್ಠಿಯನ್ನು ಉತ್ತರ ದಿಕ್ಕಿನಲ್ಲಿ ಮುಖ ಮಾಡಿ ಕೂರುವಂತೆ ವ್ಯವಸ್ಥೆ ಮಾಡಲು ತಿಳಿಸಿದರು.

ಇನ್ನು ಲೋಕಭವನದಲ್ಲಿ ವೇದಿಕೆಗೆ ಹೋಗುವ ಮೊದಲು, ಶಿವಕುಮಾರ್ ಪ್ರಮಾಣವಚನ ಸಮಾರಂಭಕ್ಕಾಗಿ ನೆರೆದಿದ್ದ ವಿವಿಧ ಧಾರ್ಮಿಕ ನಾಯಕರ ಆಶೀರ್ವಾದ ಪಡೆದರು. ಅವರಲ್ಲಿ ಕೆಲವರು ಅವರ ಮೇಲೆ ಹೂದಳಗಳನ್ನು ಸುರಿಸಿದರೆ, ಇತರರು ಆಶೀರ್ವಾದ ಮತ್ತು ಸದ್ಭಾವನೆಯ ಸಂಕೇತವಾಗಿ ‘ರುದ್ರಾಕ್ಷ ಮಾಲೆ’ ನೀಡಿದರು.

ಸಾಕ್ಷಿಯಾದ ಕ್ರಿಕೆಟಿಗರು, ಕಲಾವಿದರು : ಪ್ರಮಾಣವಚನ ಸಮಾರಂಭದಲ್ಲಿ ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಭಾರತೀಯ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್ ಅಜರುದ್ದೀನ್, ಅನಿಲ್ ಕುಂಬ್ಳೆ, ನಟ ಧನಂಜಯ, ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಮತ್ತು ಗುರುಕಿರಣ್ ಮತ್ತು ನಟಿ-ರಾಜಕಾರಣಿ ರಮ್ಯಾ ಹಾಜರಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ