ಆ್ಯಂಟಿಬಯೋಟಿಕ್ ಔಷಧಗಳನ್ನು ಅಸಮರ್ಪಕವಾಗಿ ಬಳಸುವ ಮೂಲಕ, ಅದರಿಂದ ಉಂಟಾಗುವ ದುಷ್ಪರಿಣಾಮ ತಡೆಯಲು ಆರೋಗ್ಯ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ರಾಜ್ಯದಲ್ಲಿ ಸಮರ್ಪಕ ನೀತಿ ರೂಪಿಸಲು ಮುಂದಾಗಿದೆ.
ಚಿಕ್ಕಪುಟ್ಟ ಜ್ವರ, ನೋವುಗಳಿಗೆ ಮೊದಲು ತೆಗೆದುಕೊಳ್ಳುತ್ತಿದ್ದ ಆ್ಯಂಟಿಬಯೋಟಿಕ್ ಮಾತ್ರೆಗಳು ಈಗ ಪರಿಣಾಮಕಾರಿ ಎನಿಸುತ್ತಿಲ್ಲ ಎಂಬ ವಿಚಾರಗಳು ಕಂಡುಬರುತ್ತಿವೆ. ಇದಕ್ಕೆ ರೋಗಾಣುಗಳು ಆ ಮಾತ್ರೆಗಳಿಗೆ ಹೊಂದಿಕೊಂಡು ಸುಲಭವಾಗಿ ಅರಗಿಸಿಕೊಳ್ಳುತ್ತಿರುವುದು ಕಾರಣ. ಇಂತಹ ಪರಿಸ್ಥಿತಿ ರಾಜ್ಯದಲ್ಲಿ ಎಷ್ಟರ ಮಟ್ಟಿಗಿದೆ? ರೋಗಾಣು ಈ ಔಷಧಗಳಿಗೆ ಹೊಂದಿಕೊಳ್ಳಲು ಕಾರಣವೇನು? ಇದಕ್ಕೆ ಪರಿಹಾರವೇನು ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ.
ನವೆಂಬರ್ನಲ್ಲಿ ಈ ಸಂಬಂಧ ರಾಷ್ಟ್ರೀಯ ಮಾರ್ಗಸೂಚಿ ಬಂದಿದ್ದು, ರಾಜ್ಯದಲ್ಲಿ ಆರೋಗ್ಯ ಇಲಾಖೆಯು ಪ್ರತ್ಯೇಕವಾಗಿ ಕಾರ್ಯ ಯೋಜನೆ ರೂಪಿಸಿಕೊಳ್ಳಲು ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿ ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ರಾಜ್ಯಕ್ಕೆ ಅನುಗುಣವಾಗಿ ನೀತಿ ರೂಪಿಸಲಾಗುವುದು. ಈ ನೀತಿಯು ಆ್ಯಂಟಿ ಬಯೋಟಿಕ್ ಔಷಧಗಳ ಸಮರ್ಪಕ ಬಳಕೆಯಿಂದ ಹಿಡಿದು ಅವುಗಳ ವೈಜ್ಞಾನಿಕ ವಿಲೇವಾರಿವರೆಗಿನ ಅಂಶಗಳನ್ನು ಒಳಗೊಂಡಿರಲಿದೆ ಎಂದು ಆರೋಗ್ಯ ಇಲಾಖೆ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬ್ಯಾಕ್ಟೀರಿಯಾ ಅಥವಾ ಇತರ ಸೂಕ್ಷ್ಮಜೀವಿಗಳು ಔಷಧಿಗಳಿಗೆ ಬಗ್ಗದಂತೆ ಪ್ರತಿರೋಧ ಬೆಳೆಸಿಕೊಳ್ಳುವುದು, ರೋಗ ನಿರೋಧಕ ಸಾಮರ್ಥ್ಯದ ಮಾದರಿಗಳನ್ನು ಮ್ಯಾಪ್ ಮಾಡಲು ಮುಂದಾಗಿದ್ದೇವೆ. ಪ್ರದೇಶವಾರು ವ್ಯತ್ಯಾಸ, ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಲಾಗುವುದು. ಇದಕ್ಕಾಗಿ ರಾಜ್ಯಾದ್ಯಂತ ಆಯ್ದ ಕೇಂದ್ರಗಳಿಂದ ಮಾದರಿ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ಜ್ವರಪೀಡಿತರು, ಗಾಯಗೊಂಡವರು, ನೋವಿಗೆ ತುತ್ತಾದವರು ಆಸ್ಪತ್ರೆಗಳಿಗೆ ಬಂದಾಗ ಅವರನ್ನು ಸಮರ್ಪಕ ತಪಾಸಣೆಗೆ ಒಳಪಡಿಸಿ ಆ್ಯಂಟಿಬಯೋಟಿಕ್ ನೀಡಲಾಗುತ್ತದೆ. ವೈದ್ಯರ ಬಳಿ ಹೋಗದೆ, ಔಷಧ ಚೀಟಿಯಿಲ್ಲದೆ ನೇರವಾಗಿ ಔಷಧ ಮಳಿಗೆಯಲ್ಲಿ ನೋವು, ಕಾಯಿಲೆ ಹೇಳಿಕೊಂಡು ಔಷಧ ಪಡೆಯುವುದು ನಿರಂತರವಾಗಿದೆ. ಇಂತಹ ಸಂದರ್ಭದಲ್ಲಿ ಬೇಸಿಕ್ ಆ್ಯಂಟಿಬಯೋಟಿಕ್ ಮಾತ್ರೆ ಪಡೆಯದೆ ನೇರವಾಗಿ ಹೈಯರ್ ಲೆವೆಲ್ ಔಷಧ ಪಡೆಯುವ ಸಾಧ್ಯತೆ ಹೆಚ್ಚು. ಇದರಿಂದಾಗಿಯೂ ಸೂಕ್ಷ್ಮಜೀವಿಗಳು ರೋಗ ನಿರೋಧಕ ಸಾಮರ್ಥ್ಯ ಬೆಳೆಸಿಕೊಳ್ಳುತ್ತಿವೆ. ಹೀಗಾಗಿ, ರಾಜ್ಯಾದ್ಯಂತ ಔಷಧ ಮಳಿಗೆ, ಆಸ್ಪತ್ರೆಗಳಲ್ಲಿ ಸಮರ್ಪಕ ನೀತಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.





