ಅದೊಮ್ಮೆ ಮಾಸ್ತಿಯವರು ಧರ್ಮಸ್ಥಳದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಚಾರ್ಮಾಡಿ ಘಾಟ್ ಮೂಲಕ ಜಿ.ಪಿ. ರಾಜರತ್ನಂ ಅವರ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದರು.
*ದಾರಿಯಲ್ಲವರಿಗೆ ಬಾಯಾರಿಕೆಯಾಯ್ತು. ಆಚೀಚೆ ಗಮನಿಸುತ್ತಾ ಹೋಗುವಾಗ ರಸ್ತೆ ಸಮೀಪದ ಹಳ್ಳಿಯ ಮುಂದಿನ ಬಾವಿಯಿಂದ ಒಬ್ಬ ನೀರು ಸೇದುತ್ತಿರವುದನ್ನು ನೋಡಿ, ಕಾರಿಂದ ಇಳಿದು ಬಾವಿಯ ಬಳಿ ಹೋದರು. ನೀರು ಸೇದುತ್ತಿದ್ದ ವ್ಯಕ್ತಿಗೆ ಕುಡಿಯಲು ನೀರು ಕೇಳಿದರು.*
*ಆ ರೈತ ಬಾವಿಯಿಂದ ನೀರು ಸೇದಿದ ಮತ್ತು ಆ ನೀರನ್ನು ಮಾಸ್ತಿಯವರಿಗೆ ಕುಡಿಯಲು ಕೊಡುವ ಬದಲು ಅಲ್ಲಿಯೇ ಪಕ್ಕದಲ್ಲಿದ್ದ ನೀರಿನ ತೊಟ್ಟಿಗೆ ಸುರಿದು, ಮತ್ತೊಂದು ಕೊಡಪಾನ ನೀರು ಸೇದಿ “ಬನ್ನಿ ಸ್ವಾಮಿ, ನೀರು ಕುಡೀರಿ” ಎಂದ.*

*ಮಾಸ್ತಿಯವರು ತಮಗೆ ಸಾಕಾಗುವಷ್ಟು ಬೊಗಸೆಯಲ್ಲಿ ನೀರು ಕುಡಿದ ನಂತರ ಆ ರೈತ ಕೊಡಪಾನದಲ್ಲಿ ಉಳಿದ ನೀರನ್ನು ಮತ್ತೆ ಆ ತೊಟ್ಟಿಗೆ ಹಾಕಿದ. ಮಾಸ್ತಿಯವರು ಆತನಿಗೆ ಒಂದಷ್ಟು ಹಣ ಕೊಡಲು ಮುಂದಾದರು. ಆದರೆ ಆತ ಖಡಾಖಂಡಿತವಾಗಿ ನಿರಾಕರಿಸಿದ್ದಲ್ಲದೇ, “ಅಲ್ಲ ಸ್ವಾಮಿ, ನಾವು ಕುಡಿಯೋ ನೀರಿಗೆ ದುಡ್ಡಿಸ್ಕಂಡ್ರೆ ಆ ದೇವ್ರಂತ ವ್ಯಕ್ತಿಗೆ ಅನ್ಯಾಯ ಮಾಡ್ದಂಗೆ” ಎಂದ. ಅದಕ್ಕೆ ಮಾಸ್ತಿ ಅವರು “ಯಾರಪ್ಪ ಆ ದೇವ್ರಂಥ ವ್ಯಕ್ತಿ” ಎಂದು ಕೇಳಿದರು.*
*”ಹಿಂದೆ ಬರಗಾಲ ಬಂದಿತ್ತು. ಆಗ ಕುಡಿಯಲು ನೀರಿರಲಿಲ್ಲ. ನಮ್ಮ ಚಿಕ್ಕಮಂಗ್ಳೂರಲ್ಲಿ ಒಬ್ರು ಡಿಸಿ ಇದ್ರು. ಊರ್ಗೆ ಬರ್ಗಾಲ ಬಂದೈತೆ, ಒಂದು ಬಾವಿ ತೋಡ್ಸಿ ಕೊಡಿ ಸಾಮಿ ಅಂತ ಕೇಳ್ದ್ವು, ಅದಕ್ಕೆ ಒಪ್ಪಿದ ಅವ್ರು ಒಂದು ಕಂಡಿಸನ್ ಹಾಕಿದ್ರು, ‘ನೋಡ್ರೀ ನೀವು ಮನುಷ್ಯರು, ಬಾಯೈತೆ, ಈಗ ಬಾವಿ ಬೇಕಂತ ಕೇಳ್ತೀರ, ಬಾವಿ ತೆಗೆಸಿ ಕೊಡ್ತೇನೆ. ಆದ್ರೆ ದನಕರು, ಪ್ರಾಣಿ, ಪಕ್ಷಿಗಳಿಗೆ ಮಾತಾಡಾಕೆ ಬರಲ್ಲ, ಅವೇನು ಮಾಡ್ಬೇಕು? ಪಕ್ಕದಲ್ಲಿ ತೊಟ್ಟಿ ಮಾಡಿ. ನೀವು ನಿಮಗೆ ಒಂದು ಕೊಡಪಾನ ನೀರು ತಗೊಂಡರೆ ಆ ತೊಟ್ಟಿಗೊಂದು ಕೊಡಪಾನ ನೀರು ಹಾಕಿ, ಅಂತ ಕಂಡೀಸನ್ ಹಾಕಿ ಬಾವಿ ತೆಗೆಸಿ ಕೊಟ್ಟವ್ರೇ ಬುದ್ದಿ, ಅವರು ಮೂರು ನಾಮ ಹಾಕ್ಕೋಳ್ಳೋರು ಬುದ್ದೀ, ವಯಸ್ಸಾಗಿತ್ತು, ಮೂಡ್ಲ ದಿಕ್ಕಿನವ್ರು” ಎಂದು ರೈತ ಮಾತು ನಿಲ್ಲಿಸಿದ, ಈ ರೈತ ಹೇಳುತ್ತಿರುವುದು ತನ್ನ ಕುರಿತೇ ಎಂದು ಮಾಸ್ತಿಯವರಿಗೆ ಅರ್ಥ ಆಗಿತ್ತು. ಆ ಸಮಯದಲ್ಲಿ ಚಿಕ್ಕಮಗಳೂರಿನ ಡಿಸಿ ಆಗಿ ನಿವೃತ್ತಿ ಹೊಂದಿದ್ದರು. ಮಾಸ್ತಿಯವರಿಗೆ ಆ ರೈತನ ಮುಗ್ದತೆ, ಪ್ರಾಮಾಣಿಕತೆ ತುಂಬಾ ಸಂತೋಷ ನೀಡಿತು. ಆದರೆ ಆ ಡಿಸಿ ತಾವೇ ಎಂದು ರೈತನಿಗೆ ಹೇಳಲಿಲ್ಲ. ನಡೆದ ಘಟನೆಯನ್ನು ಜೊತೆಯಲ್ಲಿ ಬಂದಿದ್ದ ಜಿಪಿ ರಾಜರತ್ನಂ ಅವರಲ್ಲಿ ಹೇಳಿದಾಗ “ನೀವು ಆ ವ್ಯಕ್ತಿಗೆ ಹೇಳಿದ್ದರೆ ಅವನು ಇನ್ನಷ್ಟು ಖುಷಿ ಪಡುತ್ತಿದ್ದ” ಎಂದರು.*
*ನಾನು ಆ ಹುದ್ದೆಗೆ ಸಂಬಳ ಪಡೆಯುತ್ತಿದ್ದೆ, ನಾನೇನು ಧರ್ಮಾರ್ಥ ಮಾಡಲಿಲ್ಲ, ಸರ್ಕಾರದ ಹಣದಿಂದ ಮಾಡಿಸಿದೆ ಹೊರತು ನನ್ನ ಕಿಸೆಯ ಹಣದಿಂದಲ್ಲ, ಆ ರೈತನ ಮುಗ್ದತೆ, ಪ್ರಾಮಾಣಿಕತೆಯ ಮುಂದೆ ನನ್ನ ಕೆಲಸ ಏನೇನೂ ಅಲ್ಲ, ಜೊತೆಗೆ ನಾನೇ ಆ ಡಿಸಿ ಎಂದು ಹೇಳಿದರೆ ಆ ರೈತನಿಗೆ ತಳಮಳವೂ ಶುರುವಾಗುತ್ತಿತ್ತು. ಎಂದು ಮಾಸ್ತಿಯವರು ಹೇಳಿದರು.*
*ಕನ್ನಡದ ಆಸ್ತಿ ಮಾಸ್ತಿಯವರ ಸ್ಮರಣೆ ಯೊಂದಿಗೆ ಗೌರವಪೂರ್ಣ ನಮನಗಳು..*





