ಸಂಬಂಧಗಳಿಗೆ ಹೊಸ ದೃಷ್ಟಿಕೋನ ನೀಡುವ ಮೂಲಕ ಹಬ್ಬವನ್ನು ಹೇಗೆ ಆಚರಿಸಬಹುದು ಎಂಬ ಮಾಹಿತಿ ಇಲ್ಲಿದೆ…..

ಹಬ್ಬದ ಸೀಸನ್‌ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಕೆಲವು ಮನೆಗಳಲ್ಲಿ ವೈಟ್‌ ವಾಶ್‌ ಮಾಡುವ ಬಗ್ಗೆ ಚರ್ಚೆ ನಡೆಸುತ್ತಾರೆ. ಕೆಲವರು ಡೆಕೋರೇಶನ್‌ ಕೆಲಸಗಳನ್ನು ಹಂಚಿಕೊಳ್ಳುವಲ್ಲಿ ತಯಾರಿ ನಡೆಸುತ್ತಿದ್ದರೆ, ಮತ್ತೆ ಕೆಲವರು ಉಡುಗೊರೆಗಳ ಬಗ್ಗೆ ಚಿಂತಿತರಾಗಿರುತ್ತಾರೆ. ಯಾರಿಗೆ ಏನು ಕೊಡಬೇಕು? ನಾವು ಕೊಡುವ ಉಡುಗೊರೆ ಅವರಿಗೆ ಇಷ್ಟವಾಗುತ್ತದೆಯೇ? ನಿಜ ಹೇಳಬೇಕೆಂದರೆ ಕಳೆದ ವರ್ಷದ ಹಬ್ಬದಲ್ಲಿ ರೀಟಾ ತನ್ನ ಅತ್ತೆ ಮತ್ತು ಅತ್ತಿಗೆಗೆ ನೀಡಿದ ಉಡುಗೊರೆಗಳು ಅವರಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ.

ಅತ್ತೆಗೆ ಬನಾರಸಿ ಸೀರೆ ಇಷ್ಟ. ಆದರೆ ರೀಟಾ ಅವರಿಗೆ ಕಾಟನ್‌ ಸೀರೆ ಉಡುಗೊರೆಯಾಗಿ ನೀಡಿದ್ದಳು. ಇದರಿಂದ ಅತ್ತೆಗೆ ಬಹಳ ಬೇಸರವಾಗಿತ್ತು. ಅವರ ಇಷ್ಟಾನಿಷ್ಟಗಳನ್ನು ಚೆನ್ನಾಗಿ ಅರಿತಿದ್ದ ರೀಟಾ ಏಕೆ ಅಂತಹ ಉಡುಗೊರೆಯನ್ನು ಕೊಟ್ಟಳು?

ಮತ್ತೊಂದೆಡೆ, ರೀಟಾಳ ಮೂಡ್‌ ಕೂಡಾ ಹಾಳಾಯಿತು. ಇಡೀ ದಿನ ಮನೆಯನ್ನು ಅಲಂಕರಿಸುವುದರಲ್ಲಿ, ವಿವಿಧ ಭಕ್ಷ್ಯಗಳನ್ನು ತಯಾರಿಸುವುದರಲ್ಲಿ ಕಳೆದು ಹೋಗಿತ್ತು. ಇದರೊಂದಿಗೆ ಆಕೆ ನೀಡಿದ ಉಡುಗೊರೆಯೂ ಸರಿಯಾಗಿರಲಿಲ್ಲ. ಇಷ್ಟು ಮಾತ್ರವಲ್ಲ, ಅವರ ಅತ್ತೆ ಸಹ ತನ್ನ ಸೊಸೆಯದು ಹಾಗೂ ನನ್ನ ಆಲೋಚನೆಗಳು ವಿಭಿನ್ನ ಎಂದು ಹೇಳುವ ಮೂಲಕ ಎಲ್ಲಾ ಸಂಬಂಧಿಕರ ಮುಂದೆ ತಮಗೆ ಉಡುಗೊರೆ ಇಷ್ಟವಾಗದಿದ್ದರ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

ಹೀಗಿರುವಾಗ, ಸಂಬಂಧಿಕರು ಮತ್ತು ಸ್ನೇಹಿತರಿಂದ ತುಂಬಿದ್ದ ಮನೆಯ ವಾತಾವರಣ ಸ್ವಲ್ಪ ಬೇಸರ ತಂದಿತ್ತು. ರೀಟಾ ಹಬ್ಬಕ್ಕಾಗಿ ಅಷ್ಟೊಂದು ಕಷ್ಟಪಟ್ಟು ತಯಾರಿ ನಡೆಸಿದ್ದರೂ ಸಹ ಹಬ್ಬವನ್ನು ಆನಂದಿಸಲು ಅವಳಿಗೆ ಸಾಧ್ಯವಾಗಲಿಲ್ಲ. ಅತಿಥಿಗಳ ಆತಿಥ್ಯದಲ್ಲಿ ಯಾವುದೇ ಕೊರತೆ ಆಗದಂತೆ ಅವಳು ಅಡುಗೆಮನೆ ಮತ್ತು ಊಟದ ಕೋಣೆಯನ್ನು ಸರಿಯಾಗಿ ನಿರ್ವಹಿಸಿದ್ದಳು.

ಇಂತಹ ಸ್ಥಿತಿಗಳನ್ನು ಒಂದಲ್ಲಾ ಒಂದು ಬಾರಿ ನೀವು ಎದುರಿಸಿರುತ್ತೀರಿ. ಆದರೆ ಮುಂದೆ ಇಂತಹ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಲು ಒಂದಷ್ಟು ಸಲಹೆಗಳು ಇಲ್ಲಿವೆ :

ಸ್ನೇಹದ ಹಸ್ತ ಚಾಚಿ

ಹಬ್ಬಗಳು ನಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಎನ್ನುವ ಭರವಸೆ ನೀಡುತ್ತವೆ. ಆ ಸಮಯದಲ್ಲಿ ನಾವು ನಮ್ಮ ವಿಶೇಷ ಜನರನ್ನು ಭೇಟಿ ಮಾಡಲು ಮತ್ತು ಸಂತೋಷ ಹಂಚಿಕೊಳ್ಳಲು ಅವಕಾಶ ಸಿಗುತ್ತದೆ. ಅವರಿಗೆ ಒಂದಿಷ್ಟು ಉಡುಗೊರೆ ನೀಡುವ ಮೂಲಕ ಅವರ ಮುಖದಲ್ಲಿ ಸಂತೋಷ ಹೆಚ್ಚಿಸಲು ಬಯಸುತ್ತೇವೆ. ಇಷ್ಟೆಲ್ಲಾ ಅಲಂಕಾರ, ಉಡುಗೊರೆ, ಬಟ್ಟೆಗಳ ಹುಡುಕಾಟದಲ್ಲಿ ಹಬ್ಬಗಳು ಭೌತಿಕ ವಸ್ತುಗಳಿಂದ ಮಾತ್ರವಲ್ಲ, ಸಂಬಂಧಗಳಿಂದ ಕೂಡಾ ವಿಶೇಷವಾಗಿಸಲ್ಪಡುತ್ತವೆ ಎಂಬುದನ್ನು ನಾವು ಮರೆತುಬಿಡುತ್ತೇವೆ.

ಹಾಗಾದರೆ ಈ ಬಾರಿ ಸಂಬಂಧಗಳಿಗೆ ಹೊಸ ದೃಷ್ಟಿಕೋನವನ್ನು ಏಕೆ ನೀಡಬಾರದು? ಅತ್ತೆಯನ್ನು ಅತ್ತೆ ಎಂದು ಪರಿಗಣಿಸುವ ಬದಲು ಅವರನ್ನು ನಿಮ್ಮ ಸ್ನೇಹಿತೆಯನ್ನಾಗಿ ಮಾಡಿಕೊಳ್ಳಿ. ಅತ್ತಿಗೆಯನ್ನು ಅತಿಥಿ ಎಂದು ಪರಿಗಣಿಸುವ ಬದಲು, ಅವರನ್ನು ಸ್ನೇಹಿತೆಯಂತೆ ನೋಡಿಕೊಳ್ಳಿ. ಹೇಗಾದರೂ, ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಂದು ಸಂಬಂಧಕ್ಕೂ ಸ್ನೇಹದ ಹಸ್ತ ಚಾಚುವ ಅಭ್ಯಾಸ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ಸಂಬಂಧಗಳ ಮೇಲೆ ಯಾವುದೇ ನಿರ್ಬಂಧಗಳು ಇಲ್ಲದಿದ್ದರೆ ಹೇಗೆ ಎಂದು ಊಹಿಸಿ ನೋಡಿ. ಎಲ್ಲರೂ ಪರಸ್ಪರ ಸ್ನೇಹಿತರಂತೆ ಇದ್ದರೆ ಮನೆಯಲ್ಲಿನ ಜನರ ದೃಷ್ಟಿಕೋನವೇ ಬದಲಾಗಿಬಿಡುತ್ತದೆ.

ಮನಸ್ಸನ್ನು ಹಗುರಗೊಳಿಸುವ ಫನ್ಗೇಮ್ಸ್

ನಿಮ್ಮ ಸ್ನೇಹಿತರೆಲ್ಲರೂ ಕಿಟಿಪಾರ್ಟಿಗೆ ಹೋದಾಗ ಅಲ್ಲಿ ಹೊಸ ಹೊಸ ಆಟಗಳನ್ನು ಆಡುತ್ತೀರಿ. ಅಲ್ಲಿ ಆತಿಥೇಯರು ಅಥವಾ ಅತಿಥಿಗಳು ಯಾರೂ ಇರುವುದಿಲ್ಲ. ಪಾರ್ಟಿಯನ್ನು ಯಶಸ್ವಿಗೊಳಿಸಲು ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಹಾಗೂ ಸಂತೋಷಪಡುತ್ತಾರೆ. ಸರಳ ಆಟಗಳು ನಿಮ್ಮ ಮನೆಯ ಪಾರ್ಟಿಗೆ ರಂಗು ತುಂಬಲು ಸಹಾಯ ಮಾಡುತ್ತವೆ.

ಉದಾಹರಣೆಗೆ ಹುವಾ ಹೂಪ್‌ ಚಾಲೆಂಜ್‌ (ಹುವಾ ಹೂಪ್‌ ನ್ನು ಸೊಂಟದ ಸುತ್ತಲೂ ಹೆಚ್ಚು ಸಮಯ ತಿರುಗಿಸುವವರು ವಿಜೇತರು), ಪಿಂಗ್‌ ಪಾಂಗ್‌ (ಮೇಜಿನ ಒಂದು ಬದಿಯಲ್ಲಿ ಪ್ಲಾಸ್ಟಿಕ್‌ ಕಪ್‌ ಗಳನ್ನು ಪಿರಮಿಡ್‌ ಮಾಡುವುದು. ಇದರಲ್ಲಿ ಎಲ್ಲರಿಗೂ ಮೂರು ಅವಕಾಶಗಳು ಸಿಗುತ್ತವೆ. ಇದರಲ್ಲಿ ಹೆಚ್ಚು ಕಪ್‌ ಜೋಡಿಸುವವರು ವಿಜೇತರು), ತಂಬೋಲಾ ಸೇರಿದಂತೆ ಮತ್ತಿತರೆ ಆಟಗಳನ್ನು ಆಡಬಹುದು.

ಇದರಿಂದ ನಿಮ್ಮ ಮನೆಗೆ ಬಂದ ಅತಿಥಿಗಳು ಬಹಳ ಸಂತೋಷಪಡುತ್ತಾರೆ. ಹೌದು, ವಿಜೇತರನ್ನು ಪ್ರೋತ್ಸಾಹಿಸಲು ನೀವು ಚಾಕ್ಲೇಟ್‌ ಗಳಂತಹ ಉಡುಗೊರೆಗಳನ್ನು ಇಟ್ಟುಕೊಳ್ಳಬೇಕು. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಈ ಆಟಗಳನ್ನು ಆನಂದಿಸಬಹುದು.

ನಿರೀಕ್ಷೆಗಳು ಬೇಡ

ನೀವು ನಿಮ್ಮ ಸ್ನೇಹಿತರನ್ನು ಪಾರ್ಟಿಯಲ್ಲಿ ಭೇಟಿಯಾಗಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವಂತೆ, ಹಬ್ಬದ ಸಮಯದಲ್ಲಿ ನಿಮ್ಮ ಸಂಬಂಧಿಗಳಲ್ಲಿರುವ ಭಾರವಾದ ಭಾವನೆಗಳನ್ನು ತೆಗೆದುಹಾಕಲು ಪ್ರಯತ್ನಿಸಿ. ನಿಮ್ಮ ಆಲೋಚನೆ ಮತ್ತು ಇಷ್ಟಗಳನ್ನು ಹಂಚಿಕೊಳ್ಳಿ. ಸ್ನೇಹದಲ್ಲಿ ಹೇಗೆ ಯಾವುದೇ ನಿರೀಕ್ಷೆಗಳಿಲ್ಲ ಎಂಬತಿದೆಯೋ ಅದೇ ನಿಯಮವನ್ನು ಸಂಬಂಧಗಳಿಗೂ ಅನ್ವಯಿಸಿ.

ಪರಸ್ಪರ ಸಂಬಂಧದಲ್ಲಿ ದುಬಾರಿ ಉಡುಗೊರೆಗಳು, ಆತಿಥ್ಯ ಅಥವಾ ಬಲವಂತದ ಗೌರವವನ್ನು ನಿರೀಕ್ಷಿಸಬೇಡಿ. ನೀವೇ ಜವಾಬ್ದಾರಿಗಳನ್ನು ತೆಗೆದುಕೊಂಡು, ಸ್ನೇಹದ ಹಸ್ತವನ್ನು ಚಾಚಿ. ತೀರ್ಪು ನೀಡದೆ ಪರಸ್ಪರ ಸ್ವೀಕರಿಸಿ. ಯಾವುದೇ ಗಡಿಬಿಡಿಯಿಲ್ಲದೆ, ಸಂಬಂಧಿಕರೆಂದು ದೋಷಗಳನ್ನು ಎಣಿಸಲು ಪ್ರಾರಂಭಿಸಬೇಡಿ. ಸ್ನೇಹಿತರಂತೆ ಗುಣಗಳನ್ನು ಎಣಿಸಲು ಮತ್ತು ಒಳ್ಳೆಯ ಕೆಲಸನ್ನು ಹೊಗಳಲು ಪ್ರಾರಂಭಿಸಿ.

ಗಿಫ್ಟ್ ಸ್ವಲ್ಪ ಭಿನ್ನವಾಗಿರಲಿ

ನಿಮ್ಮ ಸ್ನೇಹಕ್ಕೆ ಮಾಧುರ್ಯ ತುಂಬಲು ಬಯಸಿದಾಗ, ಉಡುಗೊರೆಯನ್ನು ಸ್ವಲ್ಪ ವಿಭಿನ್ನವಾಗಿ ಏಕೆ ನೀಡಬಾರದು? ನೀವು ನಿಮ್ಮ ಮಾವನಿಗೆ ಒಳ್ಳೆಯ ಟಿಶರ್ಟ್‌ ಮತ್ತು ಪ್ಯಾಂಟ್‌ ಅಥವಾ ಜಾಕೆಟ್‌ ನ್ನು ಉಡುಗೊರೆಯಾಗಿ ನೀಡಬಹುದು. ನಿಮ್ಮ ಅತ್ತೆಗೆ ಅವರ ಆಯ್ಕೆಯ ಪ್ರಕಾರ ಸೀರೆಯನ್ನು ಉಡುಗೊರೆಯಾಗಿ ನೀಡಬಹುದು.

ಸ್ನೇಹಿತರಿಗೆ ಉಡುಗೊರೆ ನೀಡಬೇಕಾದಾಗ, ಅವರನ್ನು ಸಂತೋಷಪಡಿಸುವ ಯಾವುದನ್ನಾದರೂ ನಾವು ಹುಡುಕುತ್ತೇವೆ. ಪರ್ಸನಲ್ ಮಗ್‌ ಗಳನ್ನು ನೀಡುವಾಗ ಬಹಳ ಫನ್‌ ಆಗಿರುವಂತಹ ಚಿತ್ರಗಳನ್ನು ಮುದ್ರಿಸಿಕೊಡುತ್ತೇವೆ. ಅಂತೆಯೇ ಕುಟುಂದವರಿಗೂ ಅಂತಹ ಉಡುಗೊರೆಗಳನ್ನು ಏಕೆ ನೀಡಬಾರದು? ಅವರ ಚಿತ್ರಗಳಿರುವ ಮಗ್‌, ಫೋಟೋ ಕೊಲಾಜ್‌, ಫೋಟೋ ಇರುವ ಅಥವಾ ಹೆಸರಿರುವ ಕೀ ಚೇನ್‌ ಗಳಂತಹ ಅನೇಕ ಉಡುಗೊರೆಗಳು ಕೈಗೆಟಕುವ ಬೆಲೆಯಲ್ಲಿ ಸಿಗುತ್ತವೆ. `ಪರ್ಸನ್‌ ಗಿಫ್ಟ್ ಆ್ಯಪ್ಶನ್‌’ ಎಂದು ಗೂಗಲ್ ಮಾಡಿ ನೋಡಿದರೆ, ಏನೇನು ಕೊಡಬಹುದು ಎಂಬ ದೀರ್ಘವಾದ ಪಟ್ಟಿಯೇ ನಿಮಗೆ ಸಿಗುತ್ತದೆ.

ಸಾಮಾನ್ಯವಾಗಿ ಪಾರ್ಟಿಯ ಆತಿಥೇಯರು ಅತಿಥಿಗಳು ಬರುವ ಮೊದಲೇ ಸಿದ್ಧತೆಗಳಲ್ಲಿ ನಿರತರಾಗಿರುತ್ತಾರೆ. ಪಾರ್ಟಿಯ ಸಮಯದಲ್ಲಿ ಮತ್ತು ನಂತರ ಕೆಲಸದ ಒತ್ತಡದಿಂದಾಗಿ, ಬಹಳ ಸಮಯದ ನಂತರ ಅವರಿಗೆ ಗೆಟ್‌ ಟು ಗೆದರ್‌ ನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಆತಿಥೇಯರು ಸಹ ಪಾರ್ಟಿಯನ್ನು ಆನಂದಿಸಲಿ.

ಸೌಮ್ಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ