ಜೀವನದ ಸಂಧ್ಯಾಕಾಲದಲ್ಲಿ ಮಾನವರು ಎದುರಿಸುವ ಕಷ್ಟಗಳು ಅಷ್ಟಿಷ್ಟಲ್ಲ. ಅದರಲ್ಲೂ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ವೃದ್ಧರಿಗೆ ತೊಂದರೆಗಳು ಹೆಚ್ಚು. ಇಂಥವರು ಮನಶ್ಶಾಂತಿ ಪಡೆಯಲು ವೃದ್ಧಾಶ್ರಮಗಳೇ ಮೂಲ. ಬೆಳಗಾವಿಯ ಇಂಥ ಒಂದು ವೃದ್ಧಾಶ್ರಮದ ಬಗ್ಗೆ ವಿವರಗಳನ್ನು ತಿಳಿಯೋಣವೇ….?
ಮನುಷ್ಯನ ಬಾಳಿನಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯಗಳ ಅವಸ್ಥೆಗಳು ಅನಿವಾರ್ಯ. ಅವುಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಬಾಲ್ಯದಲ್ಲಿ ತಾಯಿ ತಂದೆಯರ ಸಹಾಯಹಸ್ತ ಇದ್ದೇ ಇರುತ್ತದೆ. ಮಗು ಅತ್ತಾಗ, ರಾತ್ರಿಯೆಲ್ಲ ನಿದ್ದೆ ಕೆಡಿಸಿದಾಗ, ಹಠ ಮಾಡಿದಾಗ, ಯಾವ ತಾಯಿಯೂ ಆ ಮಗುವನ್ನು ಎಲ್ಲಿಯಾದರೂ ಬಿಟ್ಟುಬರಬೇಕೆನ್ನುವ ವಿಚಾರವನ್ನು ಯಾವತ್ತೂ ಮಾಡುವುದಿಲ್ಲ. ಮುಂದೆ ಯೌವನಾವಸ್ಥೆಯಲ್ಲಿ ಹೆಂಡತಿಯಾದವಳು ಅಥವಾ ಗಂಡನಾದವನು ಮಾಡಿದ ತಪ್ಪು ಅವಾಂತರಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಸಂಸಾರ ಪಥವನ್ನು ಮುನ್ನಡೆಸುತ್ತಾರೆ. ಅಲ್ಲಿ ಪತಿಪತ್ನಿ ಪರಸ್ಪರ ಆಧಾರವಾಗಿರುತ್ತಾರೆ. ಆದರೆ ಜೀವನದ ಅತ್ಯಂತ ದುರ್ಭರ ಅವಸ್ಥೆ ಎಂದರೆ ವೃದ್ಧಾಪ್ಯ!
ವೃದ್ಧಾಪ್ಯದಲ್ಲಿ ಆರೋಗ್ಯ ಕೈಕೊಟ್ಟಿರುತ್ತದೆ. ಮಕ್ಕಳು, ಸೊಸೆಯರು ಹಾಗೂ ಮೊಮ್ಮಕ್ಕಳ ವಿಚಾರಗಳು ಹಿರಿಯರೊಂದಿಗೆ ಹೊಂದಾಣಿಕೆ ಆಗುತ್ತಿರುವುದಿಲ್ಲ.
ವೃದ್ಧಾಶ್ರಮದ ಆಸರೆ
ಹಿರಿಯರ ಕೈಯಿಂದ ಕೆಲಸ ಆಗುತ್ತಿರುವುದಿಲ್ಲ. ಕೆಲವೊಂದು ಸಲ ಅವರ ಹತ್ತಿರ ದುಡ್ಡೂ ಇರುವುದಿಲ್ಲ. ಆ ಸಮಯದಲ್ಲಿ ಅಸಹಾಯಕತೆ ಇನ್ನೂ ದಯನೀಯವಾಗಿರುತ್ತದೆ. ಇಂಥ ಸನ್ನಿವೇಶಗಳಲ್ಲಿ ವೃದ್ಧಾಶ್ರಮಗಳು ಇರಲೆಂದೇ ನನ್ನ ಅಭಿಪ್ರಾಯ. ಕನಿಷ್ಠ ಪಕ್ಷ ಅಲ್ಲಿ ತನ್ನ ಸ್ವಾಭಿಮಾನದಿಂದ, ಆತ್ಮಗೌರದಿಂದಲಾದರೂ ಬದುಕಿನ ಕೊನೆಯ ಘಟ್ಟವನ್ನು ಕಳೆಯಬಹುದು.
ಇಂದು ವೃದ್ಧಾಶ್ರಮಗಳ ಸಂಖ್ಯೆಯು ಸಾಕಷ್ಟು ವೃದ್ಧಿಸಿದೆ, ನಿಜ. ಮನೆಯಲ್ಲಿ ದೊರೆಯದ ಗೌರವಾದರಗಳೊಂದಿಗೆ ಅವರಿಗೆ ಅಗತ್ಯವಾದ ವಿಶ್ರಾಂತಿಯೂ ಇಲ್ಲಿ ದೊರಕಬಹುದು. ಅವರಿಗೆ ಬೇಕಾದ ಸ್ವಾತಂತ್ರ್ಯ ಕೂಡ ತಕ್ಕ ಮಟ್ಟಿಗೆ ಇಲ್ಲಿ ದೊರೆಯುತ್ತದೆ.
ಕೆಲವು ವೃದ್ಧಾಶ್ರಮಗಳು ಅವರಿಂದ ದುಡ್ಡು ತೆಗೆದುಕೊಂಡು ವೃದ್ಧರಿಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸುತ್ತವೆ. ಇವು ಶ್ರೀಮಂತರಿಗಾಗಿ ಇರುವಂಥ. ಇನ್ನು ಆರ್ಥಿಕ ದೃಷ್ಟಿಯಿಂದ ನೋಡಿದರೆ ಎಲ್ಲ ವೃದ್ಧರೂ ಇದ್ದವುಳ್ಳವರೇ ಆಗಿರುವುದಿಲ್ಲ. ಕೆಲವೊಮ್ಮೆ ಅಂಥವರಿಗೆ ವೃದ್ಧಾಶ್ರಮದ ತಿಂಗಳ ವೆಚ್ಚವಷ್ಟೇ ಅಲ್ಲ, ಅದರ ಡಿಪಾಜಿಟ್ ಕೂಡ ಕೊಡಲು ಸಾಧ್ಯವಾಗುವುದಿಲ್ಲ. ಅಂಥ ಬಡವರಿಗಾಗಿಯೂ ಕೆಲವು ವೃದ್ಧಾಶ್ರಮಗಳಿವೆ.

ವೃದ್ಧಾಶ್ರಮದ ಅನಿವಾರ್ಯತೆ
ಇವು ಸರ್ಕಾರದಿಂದ ಗ್ರ್ಯಾಂಟ್ ನ್ನು ಪಡೆದೋ ಅಥವಾ ಶ್ರೀಮಂತ ಜನರಿಂದ ಸಹಾಯವನ್ನು ಪಡೆದೋ ವೃದ್ಧರಿಗೆ ಪುಕ್ಕಟೆಯಾಗಿ ಸೌಕರ್ಯವನ್ನು ಒದಗಿಸುತ್ತವೆ. ಒಟ್ಟಿನಲ್ಲಿ ಬಡವರೇ ಇರಲಿ, ಶ್ರೀಮಂತರೇ ಇರಲಿ, ವೃದ್ಧರು ತಮ್ಮ ಕೊನೆಗಾಲವನ್ನು ಸುಖಶಾಂತಿ ಹಾಗೂ ಸಮಾಧಾನಗಳಿಂದ ಕಳೆಯಬೇಕೆನ್ನುವುದೇ ವೃದ್ಧಾಶ್ರಮಗಳ ಉದ್ದೇಶ.
ಮಕ್ಕಳು ವಿದೇಶದಲ್ಲಿ ವಾಸವಿದ್ದಾಗ ಅಥವಾ ಮಗ ಸೊಸೆ ಇಬ್ಬರೂ ನೌಕರಿಯಲ್ಲಿದ್ದಾಗ, ಏಕಾಂಗಿಯಾಗಿ ಒಬ್ಬರೇ ಮನೆಯಲ್ಲಿರುವುದಕ್ಕಿಂತ ತನ್ನಂತೆಯೇ ಏಕಾಂಗಿಯಾಗಿ ಇರುವಂಥವರ ಜೊತೆಗೆ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಸಂಗಾತಿಗಳ ಅಗತ್ಯ ಇರುತ್ತದೆ. ಹೀಗಾಗಿ ವೃದ್ಧಾಶ್ರಮಗಳು ಕೇವಲ ಆಸರೆ ಒದಗಿಸದೇ ವೃದ್ಧರಿಗೆ ಅವಶ್ಯಕವಾಗಿರುವ ಮನಶ್ಶಾಂತಿಯನ್ನೂ ಕರುಣಿಸಬಲ್ಲವು.
ಅಂಥ ಒಂದು ವೃದ್ಧಾಶ್ರಮ ಬೆಳಗಾವಿಯ ಹೊರವಲಯದಲ್ಲಿರುವ ಬಸವನ ಕುಡಚಿಯ ದೇವರಾಜ ಅರಸು ಕಾಲನಿಯಲ್ಲಿ ತಲೆ ಎತ್ತಿರುವುದು ಸುತ್ತಮುತ್ತಣ ಜನರಿಗೆ ಒಂದು ಸಮಾಧಾನವನ್ನು ತಂದಿದೆ.
ಬೆಳಗಾವಿಯ ವೃದ್ಧಾಶ್ರಮ
ಈ ವೃದ್ಧಾಶ್ರಮದ ಹೆಸರು `ಶ್ರೀಮತಿ ಚಿನ್ನಮ್ಮ ಬಸಂತಯ್ಯ ಹಿರೆಮಠ ವೃದ್ಧಾಶ್ರಮ.’ ಇದನ್ನು ಕಾಯಕಯೋಗಿ ಮಹಾಪ್ರಸಾದಿ ಶತಾಯುಷಿ ಲಿಂ. ಡಾ. ಶಿವಬಸವ ಮಹಾಸ್ವಾಮೀಜಿಯವರು 1965ರಲ್ಲಿ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ್ ನ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ.
ಸ್ವಾಮೀಜಿಯರ ಸಂಕಲ್ಪದಂತೆ ಈ ವೃದ್ಧಾಶ್ರಮ ಬೆಳಗಾವಿಯ ಹೊರವಲಯದಲ್ಲಿ ಬಸವನ ಕುಡಚಿ ಹತ್ತಿರದ ದೇವರಾಜ ಅರಸು ಕಾಲನಿಯಲ್ಲಿ 40 ಕುಂಟೆ ಖುಲ್ಲಂ ಜಾಗದಲ್ಲಿ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ್ ನಡಿಯಲ್ಲಿ 02.10.2003ರಲ್ಲಿ ಪ್ರಾರಂಭವಾಗಿದೆ.
ವೃದ್ಧಾಶ್ರಮದ ವೈಶಿಷ್ಟ್ಯಗಳು
ಇಲ್ಲಿಯ ವಿಶೇಷತೆಗಳು ಹಲವಾರು. 60 ವರ್ಷದ ಮೇಲ್ಪಟ್ಟ ವಿಧವೆಯರು, ವಿಧುರರು, ಪರಿತ್ಯಕ್ತರು ಇಂಥವರಿಗೆ ಇಲ್ಲಿ ಆಸರೆ ದೊರಕಿದೆ. ಜಾತಿ, ಮತ, ಪಂಥ, ಲಿಂಗ ಇವುಗಳ ಭೇದಭಾವಗಳು ಇಲ್ಲಿಲ್ಲ. ಉಚಿತ ಪ್ರವೇಶ ಇಲ್ಲಿದೆ.
ಇಲ್ಲಿ ಎಲ್ಲರಿಗೂ ಊಟ, ಉಪಾಹಾರ, ವಸತಿ, ಆರೋಗ್ಯ ಸೇವೆ ಎಲ್ಲವೂ ಉಚಿತ! ಇಲ್ಲಿ ಇದುವರೆಗೂ ಒಟ್ಟು 336 ಜನ ವೃದ್ಧರು ಆಶ್ರಯ ಪಡೆದಿದ್ದಾರೆ. ಕೆಲವು ವೃದ್ಧರ ಕುಟುಂಬದವರನ್ನು ಕರೆಸಿ ಅವರೊಂದಿಗೆ ಸಮಾಲೋಚನೆ ನಡೆಸಿ ಅವರಿಗೆ ಮತ್ತೆ ತಮ್ಮದೇ ಮನೆಯ ಆಸರೆಯೂ ದೊರೆಯುವಂತೆ ಮಾಡಿದ್ದಾರೆ.
ಇನ್ನೂ ಕೆಲವರು ವಯೋಮಾನಕ್ಕೆ ಅನುಗುಣವಾಗಿಯೋ ಅನಾರೋಗ್ಯಕ್ಕೆ ತುತ್ತಾಗಿಯೋ ಆಶ್ರಮದಲ್ಲಿಯೇ ತೀರಿಕೊಂಡದ್ದೂ ಇದೆ. ಇಲ್ಲಿ ಈಗ ಒಟ್ಟು 21 ಪುರುಷರು, 33 ಮಹಿಳೆಯರು ಹೀಗೆ ಒಟ್ಟು 54 ಹಿರಿಯ ನಾಗರಿಕರು ಇದ್ದಾರೆ.
ವೃದ್ಧಾಶ್ರಮದಲ್ಲಿನ ದಿನಚರಿ
ಅವರ ದಿನಚರಿಯು ಬೆಳಗಿನ ಪ್ರಾರ್ಥನೊಂದಿಗೆ ಪ್ರಾರಂಭವಾಗುತ್ತದೆ. ನಂತರ ಯೋಗ, ಉಪಾಹಾರ, ಚಹಾ, ಊಟ, ಹಾಸಿಗೆ, ಹೊದಿಕೆ, ಸೊಳ್ಳೆಪರದೆ, ಅಗತ್ಯ ಔಷಧೋಪಚಾರ ಎಲ್ಲವನ್ನೂ ಒದಗಿಸಲಾಗುತ್ತಿದ್ದು, ಸರ್ಕಾರದ ಯಾವುದೇ ಅನುದಾನ ಇದಕ್ಕಿಲ್ಲ. ಪೂಜ್ಯ ನಾಗನೂರು ರುದ್ರಾಕ್ಷಿ ಮಠದ ಶ್ರೀ ಶಿವಬಸವೇಶ್ವರ ಟ್ರಸ್ಟಿನ ನೆರವಿನೊಂದಿಗೆ ಹಾಗೂ ಸ್ಥಳೀಯ ಸಂಘಸಂಸ್ಥೆಗಳ, ದಾನಿಗಳ ನೆರವಿನೊಂದಿಗೆ ಕಳೆದ 28 ವರ್ಷಗಳಿಂದ ಅತ್ಯಂತ ಸುವ್ಯವಸ್ಥಿತವಾಗಿ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ.
ಅಲ್ಲದೆ ಇಲ್ಲಿ ವೃದ್ಧರ ಮನರಂಜನೆಗಾಗಿಯೂ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಪ್ರತ್ಯೇಕವಾಗಿ ಟಿವಿ, ರೇಡಿಯೋ ಹಾಗೂ ದಿನಪತ್ರಿಕೆಗಳ ವ್ಯವಸ್ಥೆಯೂ ಇದೆ. ಆಶ್ರಮದ ಸುತ್ತಲಿನ ಸ್ಥಳದಲ್ಲಿ ಅನೇಕ ಗಿಡಮರಗಳನ್ನೂ ನೆಟ್ಟು ಸುಂದರ ವಾತಾವರಣವನ್ನೂ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಆಶ್ರಮದ ನಿವಾಸಿಗಳಿಗಾಗಿ ಚಿಕ್ಕ ಪುಟ್ಟ ಪ್ರವಾಸಗಳನ್ನೂ ಕೈಗೊಳ್ಳಲಾಗುತ್ತದೆ. ಒಟ್ಟಿನಲ್ಲಿ ಇಲ್ಲಿ ವೃದ್ಧರಿಗಾಗಿ ಒಳ್ಳೆಯ ಆತ್ಮೀಯವಾದ ಕೌಟುಂಬಿಕ ವಾತಾವರಣವನ್ನು ನಿರ್ಮಿಸಲಾಗಿದೆ ಎಂದೇ ಹೇಳಬಹುದು.

ಆಸ್ಪತ್ರೆಗಳ ಅನುಕೂಲ
ವೃದ್ಧರಿಗೆ ಆರೋಗ್ಯ ಅನೇಕ ಬಾರಿ ಕೈಕೊಡುವುದುಂಟು. ಹೀಗಾಗಿ ಆಸ್ಪತ್ರೆಯ ಸೌಲಭ್ಯ ಅನಿವಾರ್ಯ. ಅದಕ್ಕಾಗಿ ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯ, ಡಾ. ರಾಮಣ್ಣನವರ ಚಾರಿಟೆಬಲ್ ಟ್ರಸ್ಟ್ ಬೈಲಹೊಂಗಲ, ವಿಜಯಾ ಆಸ್ಪತ್ರೆ, ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರ ಕುಟುಂಬ ಕಲ್ಯಾಣ ಕೇಂದ್ರ ಇವುಗಳ ಮುಖಾಂತರ ಆರೋಗ್ಯ ತಪಾಸಣೆ, ಉಚಿತ ಔಷಧ ಮತ್ತು ಆ್ಯಂಬುಲೆನ್ಸ್ ಸೇವೆಗಳನ್ನು ಪಡೆದುಕೊಳ್ಳಲಾಗುತ್ತಿದೆ.
ಸಂಘಸಂಸ್ಥೆಗಳ ಸಹಾಯ
ಈ ಕಾರ್ಯದಲ್ಲಿ ಲಯನ್ಸ್ ಕ್ಲಬ್, ಎನ್.ಸಿ.ಸಿ ಘಟಕಗಳು, ಖಾಸಗಿ ವೈಧ್ಯಾಧಿಕಾರಿಗಳು, ಸಮಾಜ ಸೇವಾ ಕಾರ್ಯಕರ್ತರು, ಏರ್ ಪೋರ್ಟ್ ಸಿಬ್ಬಂದಿ ಹೀಗೆ ವಿವಿಧ ಸಂಘಟನೆಗಳು ಅನೇಕ ರೀತಿಯಿಂದ ಹಿರಿಯ ನಾಗರಿಕರ ಸೇವೆಯನ್ನು ಮಾಡುತ್ತಿದ್ದಾರೆ. ಅವರಿಗೆ ನಿತ್ಯೋಪಯೋಗಿ ವಸ್ತುಗಳು, ದವಸ ಧಾನ್ಯಗಳು ಇವುಗಳನ್ನು ಕೊಟ್ಟು ಸಹಕರಿಸುತ್ತಿದ್ದಾರೆ.
ಸಮಾಜದ ಅನೇಕ ಗಣ್ಯ ವ್ಯಕ್ತಿಗಳು ತಮ್ಮ ತಮ್ಮ ಮಕ್ಕಳ ಹಾಗೂ ತಮ್ಮ ಆತ್ಮೀಯರ ಹುಟ್ಟುಹಬ್ಬ, ತಮ್ಮ ಹಿರಿಯರ ಪುಣ್ಯದಿನದ ಸ್ಮರಣೆಗಾಗಿ ಊಟವನ್ನು ಒದಗಿಸುತ್ತಾರೆ. ಆಶ್ರಮದ ಜನರಿಗೆ ಬಟ್ಟೆಬರೆ, ಹೊದಿಕೆಗಳನ್ನೂ ಕೆಲವರು ಕಾಣಿಕೆಯಾಗಿ ನೀಡುತ್ತಾರೆ. ಈ ಯಾವುದೇ ರೀತಿಯ ನೆರವು ನೀಡಬಹುದಾದಲ್ಲಿ ದೂರವಾಣಿ ಸಂಖ್ಯೆಯು ಇಂತಿದೆ.
ಬಿ.ಎಸ್. ಚೌಗುಲಾ, ಸಂಯೋಜಕರು, ಫೋನ್ : 9663218860 ಅಥವಾ ನಾಗನೂರ ಟ್ರಸ್ಟ್. ಶಿವಬಸವೇಶ್ವರ ಟ್ರಸ್ಟ್, ಕಾರ್ಪೊರೇಶನ್ ಬ್ಯಾಂಕ್, ಪೈ ಕಾಂಪ್ಲೆಕ್ಸ್, ರಾಮದೇವ ಹೋಟೆಲ್ ಎದುರು, ಬೆಳಗಾವಿ. ಅಕೌಂಟ್ ನಂ. : 520101070574320, ಐಎಫ್ಎಸ್ಸಿಯುಬಿಐ ನಂ.920908.

ನಿರ್ವಾಹಕರ ಮಾರ್ಗದರ್ಶನ
ಈ ಎಲ್ಲಾ ಸೇವೆಗಳನ್ನೂ ಎಂ.ಎಸ್. ಚೌಗುಲಾ ಸಂಯೋಜಿಸುತ್ತಾರೆ. ಇವರು ಬೆಳಗಾವಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರದಲ್ಲಿ ಶಿಕ್ಷಕರು ಹಾಗೂ ಬೋಧಕರಾಗಿದ್ದು, ನಿವೃತ್ತಿ ಹೊಂದಿದ್ದು ಈಗ ಈ ವೃದ್ಧಾಶ್ರಮದತ್ತ ತಮ್ಮ ಸೇವೆಯ ಒಲವನ್ನು ಹರಿಸಿದ್ದಾರೆ. ಅವರ ಸೇವೆಯು ಇಷ್ಟಕ್ಕೇ ಸೀಮಿತವಾಗಿರದೆ, ಒಂದು ಮಹಿಳಾ ಕಲ್ಯಾಣ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಅಲ್ಲಿ ಮಹಿಳೆಯರಿಗಾಗಿ ಹಾಗೂ ಮಕ್ಕಳಿಗಾಗಿ ಅನೇಕ ಸೇವಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಸಮಸ್ಯೆಗಳಿಗೆ ಪರಿಹಾರ
ಮಹಿಳೆಯರ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ, 24 ಗಂಟೆಗಳ ತುರ್ತು ದೂರವಾಣಿ ಕರೆಯ ಸೇವಾ ಸೌಲಭ್ಯ, ಕಾನೂನು ಸಲಹೆ, ಪೊಲೀಸ್ ನೆರವು ಹಾಗೂ ಮಾರ್ಗದರ್ಶನ, ಅಗತ್ಯವಿದ್ದರಿಗೆ ಉಚಿತ ವಸತಿ, ಊಟ, ಶಿಕ್ಷಣ ಹಾಗೂ ಆರೋಗ್ಯ ಸೇವೆ, ಸ್ವಯಂ ಉದ್ಯೋಗ ತರಬೇತಿ, ಇಷ್ಟೇ ಅಲ್ಲದೆ ಮಹಿಳೆಯರ ಹಾಗೂ ಮಕ್ಕಳ ಸಾಗಾಣಿಕಾ ತಡೆ ಮತ್ತು ಅವರ ಪುನರ್ವಸತಿಗಾಗಿಯೂ ಈ ಸಂಸ್ಥೆಯು ಶ್ರಮಿಸುತ್ತಿದೆ. ನಿರ್ಗತಿಕ, ಬಡವರ, ನೊಂದವರ ಹಾಗೂ ದೌರ್ಜನ್ಯ ಹಾಗೂ ಅತ್ಯಾಚಾರಕ್ಕೆ ಒಳಗಾದಂಥ ಮಹಿಳೆಯರು ಹಾಗೂ ಮಕ್ಕಳ ಸಮಸ್ಯೆಗಳಿಗೂ ಪರಿಹಾರವನ್ನು ಒದಗಿಸುತ್ತಾರೆ. ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುದಾನಿತವಾಗಿದೆ. ಇಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಅವು ಇಂತಿವೆ :
ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಶಕ್ತಿಸದನ ಪುನರ್ವಸತಿ ಕೇಂದ್ರ. ಈ ಎಲ್ಲ ಸೇವೆಗಳೂ ಉಚಿತವಾಗಿವೆ ಎನ್ನುವುದು ಸ್ತುತ್ಯಾರ್ಹ. ಇದು ಬೆಳಗಾವಿಯ ಕಣಬರ್ಗಿ ರಸ್ತೆಯಲ್ಲಿಯ ಭಾರತ ಕಾಲೋನಿಯಲ್ಲಿದೆ. ದೂರವಾಣಿ ಸಂಖ್ಯೆ : 9008004415, 9663218860, 9740470077.





