ಸೀರೆ ಡ್ರೇಪಿಂಗ್ ನ ಕೆಲವು ಆಧುನಿಕ ವಿಧಾನಗಳ ಬಗ್ಗೆ ತಿಳಿಯೋಣವೋ….? ಇದರಿಂದ ನಿಮ್ಮ ಮುಂದಿನ ಪಾರ್ಟಿಗಳ ಸಂಭ್ರಮ ಹೆಚ್ಚಲಿದೆ!
ಭಾರತದಲ್ಲಿ ಹೆಂಗಸರು ತಮ್ಮ ಪ್ರಮುಖ ಉಡುಗೆಯಾಗಿ ಸೀರೆಗೆ ನೀಡುವಷ್ಟು ಮಹತ್ವವನ್ನು ಬೇರಾವುದೇ ಉಡುಗೆಗೂ ನೀಡಲಾರರು. ಆಧುನಿಕವಾಗಿ ಏನೆಲ್ಲ ಮಾಡ್ ಡ್ರೆಸೆಸ್ ಬಂದರೂ, ಅದು ಸೀರೆಯ ಸೊಬಗಿಗೆ ಸಮನವಾಗದು. ಇಡೀ ಭಾರತದಾದ್ಯಂತ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಎಲ್ಲೆಲ್ಲೂ ಭಾಷೆ, ಸಂಸ್ಕೃತಿ, ಭೌಗೋಳಿಕ ಕಾರಣಗಳಿಂದ ವೈವಿಧ್ಯತೆ ದಟ್ಟೈಸಿದ್ದರೂ, ಸೀರೆಯ ಸ್ಥಾನ ಮಾತ್ರ ಶಾಶ್ವತವಾಗಿ ಉಳಿದುಕೊಂಡಿದೆ.
ಇದರ ಜೊತೆಯಲ್ಲೇ ಆಧುನಿಕ ಫ್ಯಾಷನ್ನಿಗೆ ತಕ್ಕಂತೆ ಕೆಲವೊಂದು ಬದಲಾವಣೆಗಳೂ ಆಗತೊಡಗಿವೆ. ಕಾಲಕ್ಕೆ ತಕ್ಕಂತೆ ಸ್ಟೈಲ್, ಗ್ಲಾಮರ್ ಬೆರೆತು ಇಂದಿನ ಆಧುನಿಕ ತರುಣಿಯರೂ ಇದನ್ನೇ ಬಯಸುತ್ತಿದ್ದಾರೆ. ಮದುವೆಯಂಥ ಶುಭ ಸಮಾರಂಭಗಳಿರಲಿ, ಪಾರ್ಟಿಗಳಂಥ ಆಧುನಿಕ ಗೆಟ್ ಟು ಗೆದರ್ ಇರಲಿ, ಎಲ್ಲರೂ ಸೀರೆ ಧರಿಸಿ ಹೊರಡಲು ಬಯಸುತ್ತಾರೆ.
ಆಧುನಿಕ ಹೆಣ್ಣುಮಕ್ಕಳು ಇದನ್ನು ಬಯಸುವುದು ಮಾತ್ರವಲ್ಲ, ಉಡುವ ಶೈಲಿ (ಡ್ರೇಪಿಂಗ್)ಯಲ್ಲಿ ನಾನಾ ಪ್ರಯೋಗಗಳನ್ನೂ ಮಾಡುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಸೀರೆ ಡ್ರೇಪಿಂಗ್ ನ ಎಷ್ಟು ವೈವಿಧ್ಯಮಯ ವಿಧಾನಗಳಿವೆಯೋ ಎಣಿಸೋದು ಕಷ್ಟ. ಇದು ಅವರ ಸ್ಟೈಲ್‌ಬ್ಯೂಟಿ ವಿತ್ ಗ್ಲಾಮರ್ ಹೆಚ್ಚಿಸುವಲ್ಲಿ ಅಷ್ಟೇ ಪ್ರಧಾನ ಪಾತ್ರ ವಹಿಸುತ್ತಿದೆ. ಹಾಗಿದ್ದರೆ ಆಧುನಿಕ ಸೀರೆ ಡ್ರೇಪಿಂಗ್ ನ ವಿವಿಧ ವಿಧಾನಗಳ ಬಗ್ಗೆ ಸಂಪೂರ್ಣ ವಿವರ ತಿಳಿಯೋಣವೇ?:

ಬೆಲ್ಟ್ ಜೊತೆ ಸೀರೆ ಡ್ರೇಪಿಂಗ್
ಇದಂತೂ ಬಹಳ ಸಿಂಪಲ್ ಲುಕ್ಸ್ ಒದಗಿಸುತ್ತದೆ. ಸೀರೆಯನ್ನು ಸಾಂಪ್ರದಾಯಿಕ ವಿಧಾನದಲ್ಲಿ ಉಟ್ಟು, ಅದಕ್ಕೆ ತಕ್ಕಂತೆ ಮ್ಯಾಚ್ ಆಗುವ ಒಂದು ಬೆಲ್ಟ್ ನ್ನು, ಸೀರೆಯ ಮೇಲ್ಭಾಗ ಹಾಗೂ ಬ್ಲೌಸ್ ನ ಕೆಳಭಾಗಕ್ಕೆ ಬರುವಂತೆ ಸೊಂಟದ ಬಳಿ ಧರಿಸಬೇಕು. ನೀವು ಕಲರ್ ಕಾಂಬಿನೇಶನ್ ಇರುವಂಥ ಬೆಲ್ಟ್ ನ್ನೇ ನೋಡಿ ಆರಿಸಿ.
ಸೀರೆ ಡ್ರೇಪಿಂಗ್ ವಿತ್ ಲೆಗ್ಗಿಂಗ್ಸ್
ಇತ್ತೀಚೆಗೆ ಸೀರೆಯನ್ನು ಲೆಗ್ಗಿಂಗ್ಸ್ ಜೊತೆ ಸಹ ಕ್ಯಾರಿ ಮಾಡಬಹುದಾಗಿದೆ. ಇದರಲ್ಲಿ ಸೀರೆಯ ಒಳಗೆ ಧರಿಸುವಂಥ ಪೆಟಿಕೋಟ್ ಬದಲಿಗೆ ಧರಿಸುವ ಲೆಗ್ಗಿಂಗ್ಸ್ ನ ಕಲರ್, ಉಡುವ ಸೀರೆಗೆ ಮ್ಯಾಚಿಂಗ್ ಆಗಿದ್ದರೆ ಒಳಿತು. ಇಂಡೋವೆಸ್ಟರ್ನ್ ರೀತಿಯಲ್ಲಿ ರೂಪುಗೊಂಡ ಈ ಸೀರೆಯ ಸ್ಟೈಲ್ ಬಲು ಪಾಪ್ಯುಲರ್ ದುಪಟ್ಟಾ ಸೀರೆ ಡ್ರೇಪಿಂಗ್ ಅಂದ್ರೆ…. ಇದನ್ನು ದುಪಟ್ಟಾದಿಂದ ತಯಾರಿಸಿದ ಸೀರೆ ಅಂದುಕೊಳ್ಳಬೇಡಿ! ಬದಲಿಗೆ ಈ ಲುಕ್ ನಲ್ಲಿ ಮ್ಯಾಚಿಂಗ್ ಪ್ಯಾಂಟ್, ಬ್ಲೌಸ್ ಜೊತೆ ಸೀರೆಯ ಬಳಕೆಯನ್ನು ದುಪಟ್ಟಾ ತರಹ ಡ್ರೇಪ್ ಮಾಡುವುದಾಗಿದೆ. ಇದು ಮಾಡರ್ನ್‌ಗ್ಲಾಮರಸ್ ಲುಕ್ಸ್ ನೀಡುತ್ತದೆ.

ಸ್ಕರ್ಟ್ ಸ್ಟೈಲ್ ಸೀರೆ ಡ್ರೇಪಿಂಗ್
ಇದು ಸ್ಕರ್ಟ್ ಜೊತೆ ಉಡುವ ಸೀರೆಯಲ್ಲ, ಬದಲಿಗೆ ಇಲ್ಲಿಯೂ ಸಹ ಸೀರೆಯನ್ನು ಸ್ಕರ್ಟ್ ಸ್ಟೈಲಿನಲ್ಲಿ ಡ್ರೇಪ್ ಮಾಡಲಾಗುತ್ತದೆ. ಇಲ್ಲಿ ಸೀರೆಗೆ ಫ್ರಿಲ್ ಲುಕ್ಸ್ ನೀಡಿ, ಸ್ಕರ್ಟ್ ತರಹ ಉಡಲಾಗುತ್ತದೆ. ನಾರ್ಮಲ್ ಲೆಂತ್ ಗಿಂತ ತುಸು ಎತ್ತರಕ್ಕೆ ಈ ಸ್ಕರ್ಟ್ ಲುಕ್ಸ್ ಎದ್ದು ಕಾಣುತ್ತದೆ. ಈ ತರಹ ಉಡಲಾದ ಸೀರೆಯು, ಹಲವು ಬಗೆಯ ಡಿಸೈನರ್ ಬ್ಲೌಸ್ ಗಳಿಗೂ ಹೊಂದುತ್ತದೆ.
ಲುಂಗಿ ಸ್ಟೈಲ್ ಸೀರೆ ಡ್ರೇಪಿಂಗ್
ಯಾವುದೇ ನೆರಿಗೆ (ಪ್ಲೀಟ್ಸ್) ಗಳಿಲ್ಲದಂತೆ, ಪಿನ್ಸ್ ಸಿಗಿಸಿದರೆ, ಲುಂಗಿ ತರಹ ಉಟ್ಟುಕೊಳ್ಳುವ ಈ ಸೀರೆಯ ಸ್ಟೈಲ್ ಬಲು ಸಿಂಪಲ್ ಹಾಗೂ ಈಝಿ ಟು ಕ್ಯಾರಿ. ನೆರಿಗೆ ಇಲ್ಲದೆ ಲುಂಗಿಯ ತರಹ ಉಡುವ ಕಾರಣ, ಜೊತೆಗೆ ಸೆರಗು ಸಹ ನೆರಿಗೆಯ ಗೋಜಿಲ್ಲದೆ, ಹೆಗಲ ಮೇಲೆ ಒರಗಿರುತ್ತದೆ. ಲೈಟ್ ಜ್ಯೂವೆಲರಿ ಜೊತೆ ಇದು ಸಾಕಷ್ಟು ಸೋಬರ್ ಲುಕ್ಸ್ ನೀಡುತ್ತದೆ.

ಇನ್ ಸೈಡ್ ಸೀರೆ ಡ್ರೇಪಿಂಗ್
ಇದರಲ್ಲಿ ಸೆರಗು ಒಳಗಿನಿಂದ ಹೊರಭಾಗಕ್ಕೆ ಬಂದಂತೆ ಕಾಣುತ್ತದೆ. ಈ ಸ್ಟೈಲ್ ನಲ್ಲಿ ಸೀರೆಯನ್ನು ಕಾಂಟ್ರಾಸ್ಟ್ ಬ್ಲೌಸ್ ಜೊತೆ ಧರಿಸಬಹುದು. ಇದಕ್ಕಾಗಿ ಸೀರೆಯ ಸೆರಗನ್ನು ಬ್ಲೌಸ್ ನಿಂದ ಬೇರೆ ಮಾಡಿ, ಸೈಡ್ ನಿಂದ ಹಿಂಭಾಗಕ್ಕೆ ತೆಗೆದುಕೊಂಡು ಹೋಗಬೇಕು.
ಧೋತಿ ಸ್ಟೈಲ್ ಸೀರೆ
ಟ್ಯಾಂಕ್ ಟಾಪ್ ನಂತೆ ಬ್ಲೌಸ್ ಜೊತೆ ಕಚ್ಚೆ ಪಂಚೆ (ಧೋತಿ) ತರಹ ಸೀರೆ ಉಡುವುದು ಇಂದಿನ ಆಧುನಿಕ ಸ್ಟೈಲಾಗಿದೆ. ಗಂಡಸರು ಕಚ್ಚೆ ಪಂಚೆ ಉಡುವಂತೆಯೇ ಅಕ್ಷರಶಃ ಇಲ್ಲಿ ಸೀರೆ ಉಡಲಾಗುತ್ತದೆ. ಇದು ಹೆಚ್ಚಾಗಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಉಡುವ ಸಾಂಪ್ರದಾಯಿಕ ಶೈಲಿಯಾಗಿದೆ.

ಲೆಹಂಗಾ ಸ್ಟೈಲ್ ಸೀರೆ
ಉ. ಭಾರತದಲ್ಲಿ ಈ ರೀತಿ ಸೀರೆ ಉಟ್ಟುಕೊಳ್ಳುವುದು ಬಲು ಕಾಮನ್. ಆದರೆ ಇದರ ಗ್ರೇಸ್ ಫುಲ್ ಎಲಿಗೆಂಟ್ ಲುಕ್ಸ್, ಇದನ್ನು ಟ್ರೆಂಡ್ ನಿಂದ ಹೊರಗೆ ಹೋಗಲು ಬಿಡದು. ನೀವು ಸೀರೆ ಹಾಗೂ ಲೆಹಂಗಾ ಎರಡೆರಡನ್ನೂ ಒಟ್ಟಾಗಿ ತೊಡಲು ಬಯಸಿದರೆ, ಈ ಪ್ರಯೋಗ ಮಾಡಿ ನೋಡಿ, ಇದಕ್ಕಿಂತ ಉತ್ತಮ ಆಪ್ಶನ್ ಬೇರೆ ಇಲ್ಲ. ಇದರಿಂದ ನಿಮಗೆ ಸಿಗುವ ಗ್ರೇಸ್ ಬೇರಾ ಬಗೆಯ ಡ್ರೇಪಿಂಗ್ ನಿಂದಲೂ ಸಿಗುವುದಿಲ್ಲ, ಪಾರ್ಟಿಗಳಲ್ಲಿ ಜನ ಇದನ್ನು ಕಂಡು ದಂಗುಬಡಿದು ಹೋಗುತ್ತಾರೆ!
ಬಂಗಾಳದ ಪೈಠಣಿ ಸೀರೆ ಡ್ರೇಪಿಂಗ್
ಬಂಗಾಳದ ಶೈಲಿಯ ಸೀರೆ ಡ್ರೇಪಿಂಗ್ ನಿಜಕ್ಕೂ ಅನನ್ಯ. ಸಿಲ್ಕ್ ಸೀರೆಯನ್ನು ಉತ್ತಮ ಸಾಂಪ್ರದಾಯಿಕ ಶೈಲಿಯಲ್ಲಿ ಉಟ್ಟು, ಸೆರಗನ್ನು ಹಿಂದಿನಿಂದ ಮುಂಭಾಗಕ್ಕೆ ತಂದು, ಅದನ್ನು ಹೆಗಲಿನ ಇನ್ನೊಂದು ಬದಿಗೆ ಪಿನ್ ಮಾಡಲಾಗುವ ಈ ಪರಿಯನ್ನು ಉಟ್ಟೇ ತಣಿಯಬೇಕು! ಹಿಂದೆಲ್ಲ ಹೆಂಗಸರು ಇಂಥ ಸೀರೆಯ ಗಂಟಿಗೆ ಬೀಗದ ಕೈ ಗೊಂಚಲನ್ನು ಗಂಟು ಹಾಕಿಡುತ್ತಿದ್ದರು. ಕ್ರಮೇಣ ಆ ಶೈಲಿಯಲ್ಲಿ ಆಧುನಿಕ ಬದಲಾವಣೆಗಳಾಗಿ, ಇಂದು ಬ್ಯೂಟಿಫುಲ್ ಲುಕ್ಸ್ ನೀಡುವಂತಾಗಿದೆ.
– ಚಂದ್ರಕಲಾ





