ಈ ಆಧುನಿಕ ದಿನಗಳಲ್ಲಿ ಮಾಡ್ ಯಾ ಸ್ಮಾರ್ಟ್ ಮಾವ್ ಲೈಫ್, ಹಳೆ ಕಾಲದ ತಾಯಿಯ ತರಹ ಅಲ್ಲದೆ ಬಿಲ್ ಕುಲ್ ಹೊಸ ಬಗೆಯದಾಗಿದೆ. ಬನ್ನಿ, ಹೇಗೆಂದು ತಿಳಿಯೋಣ…..
ಈ ಹೊಸ ಯುಗದ ತಾಯಿಯನ್ನು ಮಾಡರ್ನ್ ಮಾಮ್ ಎನ್ನಬಹುದು, ಏಕೆಂದರೆ ಮಾಡರ್ನ್ ಎಂಬುದರ ಅರ್ಥ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಆಕೆ ತಾನೂ ಹೊಂದಿಕೊಂಡು, ಮಗುವನ್ನೂ ಬೆಳೆಸುವುದಾಗಿದೆ. ಇಂದಿನ ಆಧುನಿಕ ದಿನಗಳ ತಾಯಿ ಹೀಗೆಯೇ ಹೋರಾಡುತ್ತಿದ್ದಾಳೆ. ಹೀಗಾಗಿ ಅವಳು ಮನೆಯ ಎಲ್ಲಾ ಕೆಲಸ ಕಾರ್ಯ ನಿರ್ವಹಿಸುವುದರ ಜೊತೆ, ಹೊರಗೆ ಹೋಗಿ ನೌಕರಿ ಮಾಡುವುದೂ ಅಲ್ಲದೆ, ತನ್ನ ಬಿಸ್ ನೆಸ್ ಸಹ ಸಂಭಾಳಿಸುತ್ತಿದ್ದಾಳೆ. ಮಾಡರ್ನ್ ಮಾಮ್ ನ ಈ ಎರಡು ಪಟ್ಟು ಹೊಣೆಗಾರಿಕೆಯಿಂದ ಆಕೆ ಮಾಡರ್ನ್ ಯಾ ಸ್ಮಾರ್ಟ್ ಯುಗದ, ಮಾಡರ್ನ್ ಯಾ ಸ್ಮಾರ್ಟ್ ಮಾಮ್ ಎಂದು ಸಾಬೀತಾಗಿದ್ದಾಳೆ. ಈಕೆಗೆ ಕನಿಷ್ಠ ಸಮಯದಲ್ಲಿ ಬಹಳಷ್ಟು ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕಿದೆ. ಮಗುವಿಗೆ ಸುಸಂಸ್ಕಾರ ನೀಡಿ, ಅದರ ಎಲ್ಲಾ ಪ್ರಶ್ನೆಗಳಿಗೆ ಸಕಾಲಿಕವಾಗಿ ಉತ್ತರಿಸುತ್ತಾ, ಮಕ್ಕಳನ್ನು ಸದಾ ಸಂತೋಷವಾಗಿ ಇರಿಸಿಕೊಳ್ಳಬೇಕಾಗಿದೆ. ಹೊಸ ಟೆಕ್ನಿಕ್ಸ್ ಕಲಿಯಬೇಕಿದೆ, ಅದರ ಸಮರ್ಪಕ ಬಳಕೆಯೂ ಆಗಬೇಕು.
ಮಕ್ಕಳ ಜೊತೆಜೊತೆಯಲ್ಲೇ ತನ್ನನ್ನೂ, ತನ್ನ ಪರಿವಾರವನ್ನೂ ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು. ಸೋಲು ಬಂದಾಗ ಕುಗ್ಗದೆ, ಅದರಿಂದ ಪಾಠ ಕಲಿಯಬೇಕಿದೆ. ಎಲ್ಲೆಡೆ ಕಠಿಣ ಸ್ಪರ್ಧೆ ತುಂಬಿರುವ ಇಂದಿನ ದಿನಗಳಲ್ಲಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವುದು ಆಕೆಯ ಪ್ರಥಮ ಕರ್ತವ್ಯವಾಗಿದೆ. ಈ ಎಲ್ಲಾ ಚಾಲೆಂಜಸ್ ಹೊತ್ತುಕೊಂಡೇ ಇಂದಿನ ಮಾಡರ್ನ್ ಮಾಮ್ ಮುಂದುವರಿಯುತ್ತಿದ್ದಾಳೆ, ತನ್ನ ಕರ್ತವ್ಯ/ಹೊಣೆಗಾರಿಕೆ ಪೂರೈಸಲು ಅಹರ್ನಿಶಿ ದುಡಿಯುತ್ತಿದ್ದಾಳೆ.
ಮಾಡರ್ನ್ ಮಾಮ್ ಗೆ ಸವಾಲು
ಇಂದಿನ ಬಹುತೇಕ ಮಾಡರ್ನ್ ಮಾಮ್ಸ್, ಉದ್ಯೋಗಸ್ಥರೇ ಆಗಿದ್ದಾರೆ. ಈ ಕಾರಣ ಅವರ ಬಳಿ ಸದಾ ಸಮಯದ ಕೊರತೆ ಇರುತ್ತದೆ. ಹೀಗಾಗಿ ತನ್ನ ಮಕ್ಕಳಿಗಾಗಿ ಪ್ರತ್ಯೇಕ ಸಮಯ ಮೀಸಲಿಡುವುದು ಆಕೆಗೆ ದೊಡ್ಡ ಸವಾಲೇ ಸರಿ. ಅದರಿಂದಾಗಿ ಮಕ್ಕಳೊಂದಿಗೆ ಉತ್ತಮ ಕ್ವಾಲಿಟಿ ಟೈಂ ಕಳೆಯುವುದು, ನಕ್ಕು ನಲಿಯಲು ಸಮಯವೇ ಇಲ್ಲವಾಗುತ್ತದೆ. ಈ ಕಾರಣದಿಂದ ಮಕ್ಕಳು ತಾಯಿಯಿಂದ ಭಾವನಾತ್ಮಕವಾಗಿ ದೂರಾಗ ತೊಡಗುತ್ತಾರೆ. ಫ್ಯಾಮಿಲಿ ಬಾಂಡಿಂಗ್ ನ ಅಭಾವ, ಮಾತುಕಥೆಗಳ ಕೊರತೆಯಿಂದಾಗಿ ಪರಸ್ಪರರ ನಡುವಿನ ಸಹಾನುಭೂತಿ, ಪ್ರೀತಿವಾತ್ಸಲ್ಯ, ಕೌಟುಂಬಿಕ ಮೌಲ್ಯಗಳ ಅಭಾವ ಇತ್ಯಾದಿ ಕಾಡುತ್ತವೆ.
ಜೊತೆಗೆ ಆಕೆಗೆ ಮತ್ತೊಂದು ಸಮಸ್ಯೆ ಈಗ ಇನ್ನಷ್ಟು ಗಾಢವಾಗುತ್ತಿದೆ. ಅದು ಮಕ್ಕಳು ಎದುರಿಸುವ ಸಮಸ್ಯೆಗಳನ್ನು ಬಿಡಿಸುವ ಸವಾಲು. ಜೊತೆಗೆ ತಾನೇ ಮನೆಯ/ಆಫೀಸಿನ ಟೆನ್ಶನ್ ಗಳಲ್ಲಿ ತೊಳಲಾಡುತ್ತಿರುವಾಗ, ಅವನ್ನೆಲ್ಲ ಒಂಟಿಯಾಗಿ ಎದುರಿಸಬೇಕಿರುವಾಗ, ಮಕ್ಕಳಿಗೆ ಸಕಾಲಿಕ ಟೈಂ ಕೊಡಲಾಗದೆ, ಅವರು ದೈಹಿಕ/ಮಾನಸಿಕವಾಗಿ ಸೊರಗುವುದನ್ನು ಕಾಣಬೇಕಾಗುತ್ತದೆ.
ಹೀಗಾಗಿ ಮಕ್ಕಳ ಬೆಳೆಸುವಿಕೆ (ಅಪ್ ಬ್ರಿಂಗಿಂಗ್)ಯಲ್ಲಿ ಕೇವಲ ಅವರ ದೈಹಿಕ ಪೋಷಣೆ, ಖರ್ಚುಗಳಿಗಷ್ಟೇ ಪ್ರಾಥಮಿಕತೆ ನೀಡಿದರೆ ಸಾಲದು, ಬದಲಿಗೆ ಸದಾ ತಾವು ಅವರೊಂದಿಗೆ ಇದ್ದೇವೆ ಎಂಬ ಅನುಭೂತಿ ನೀಡುತ್ತಿರಬೇಕು, ಆಗ ಮಾತ್ರ ಅವರು ಭಾವನಾತ್ಮಕವಾಗಿ ತಾಯಿತಂದೆ ಜೊತೆ ಅಂಟಿಕೊಳ್ಳುತ್ತಾರೆ, ಮಕ್ಕಳೊಂದಿಗೆ ಉತ್ತಮ ಕ್ವಾಲಿಟಿ ಟೈಂ ಕಳೆಯುವುದೂ ಅಷ್ಟೇ ಮುಖ್ಯ.
ಡಿಜಿಟಲ್ ಲೋಕದಿಂದ ದೂರವಿರಿಸಿ
ಹಿಂದೆಲ್ಲ ಮಕ್ಕಳು ಕೇವಲ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದದು, ಅದೂ ಒಂದು ನಿಗದಿತ ಅವಧಿಗೆ ಮಾತ್ರ. ಆದರೆ ಇತ್ತೀಚೆಗೆ ಇಂಟರ್ ನೆಟ್ ನ ಡಿಜಿಟಲ್ ಲೋಕದ ಕಾರಣ, ಮಕ್ಕಳ ಕೈಲಿ ಸದಾಸರ್ವದಾ ಮೊಬೈಲ್ ನ ರೀಲ್ಸ್ ಓಡುತ್ತಿರುತ್ತವೆ. ಇದರಿಂದಾಗಿ ಸುಲಭವಾಗಿ ಅವರಿಗೆ ವೆಬ್ ನ ಎಲ್ಲಾ ಮಾಹಿತಿ ಅಸೀಮಿತವಾಗಿ ದೊರಕುತ್ತಿರುತ್ತದೆ. ಇದು ಅಪ್ರತಿಬಂಧಿತ ಎಂಬುದೇ ವಿಷಾದಕರ. ಹೀಗಾಗಿ ಮಕ್ಕಳನ್ನು ಮೊಬೈಲ್ ನಿಂದ ದೂರ ಇಡುವುದು ಯಾವುದೇ ಸವಾಲಿಗೂ ಕಡಿಮೆ ಅಲ್ಲ.
ಹೀಗಿರುವಾಗ ಇಂದಿನ ಮಾಡರ್ನ್ ಮಾಮ್ ಮಕ್ಕಳನ್ನು ಸೋಶಿಯಲ್ ಮೀಡಿಯಾದಿಂದ ದೂರ ಇರಿಸಲೇಬೇಕು. ಜೊತೆಗೆ ಅವರಿಗೆ ಹೇಳಬೇಕಾದ ಮತ್ತೊಂದು ವಿಷಯ, ಡಿಜಿಟಲ್ ಇಂಟರ್ ನೆಟ್ ಲೋಕದಲ್ಲಿ ಏನನ್ನು ನೋಡಬೇಕು/ಬಾರದು ಎಂಬುದು, ಏಕೆಂದರೆ ಆ ಮುಗ್ಧ ಮಕ್ಕಳಿಗೆ ಯಾವ ಕಂಟೆಂಟ್ ನೋಡಬೇಕು/ಬಾರದು ಎಂಬುದು ಗೊತ್ತಿರುವುದಿಲ್ಲ. ಅವರ ಒಂದು ತಪ್ಪು, ಮುಂದೆ ದಾರಿ ತಪ್ಪಿಸೀತು.
ಎಷ್ಟೋ ಸಲ ಮಕ್ಕಳು ಮಾಹಿತಿ ಅಭಾವದ ಕಾರಣ ಅನಗತ್ಯ ಅಶ್ಲೀಲ ಫೋಟೋ, ವಿಡಿಯೋ, ಮಾಹಿತಿಗಳನ್ನು ಶೇರ್ ಮಾಡುತ್ತಾರೆ, ಕಮೆಂಟ್ಸ್ ನೀಡುತ್ತಾರೆ. ಇದನ್ನು ಗಮನಿಸಲೆಂದೇ ಇಂದಿನ ಮಾಮ್, ಹೈಟೆಕ್ ಟೆಕ್ನಿಕ್ಸ್ ಬಳಸುವುದನ್ನು ಕಲಿತಿದ್ದಾಳೆ. ಹಾಗಾಗಿ ಮಕ್ಕಳು ಎಂದಿನ ಸಂಸ್ಕಾರಗಳಿಂದ ದೂರ ಆಗಬಾರದು, ಯಾವುದೇ ತಪ್ಪು ಚಟ/ಗೀಳಿಗೆ ಬಲಿಯಾಗಬಾರದು. ಇದರ ಬದಲು ಮಕ್ಕಳು ಡಿಜಿಟಲ್ ನ ಸಮರ್ಪಕ ಉಪಯೋಗ ಪಡೆಯತಕ್ಕದ್ದು.
ಮಕ್ಕಳನ್ನು ಸ್ವಸ್ಥ/ಜಾಗರೂಕರಾಗಿಸಿ
ಮಕ್ಕಳ ಪಾಲನೆ ಪೋಷಣೆ, ಕುಟುಂಬದ ಆರೋಗ್ಯದ ಕಾಳಜಿ ವಹಿಸಬೇಕಾದುದು ತಾಯಿಯೇ ಎನ್ನಲಾಗುತ್ತದೆ. ಇಂದು ಎಷ್ಟು ವೇಗವಾಗಿ ಸಮಯ, ಪರಿಸ್ಥಿತಿ ಬದಲಾಗುತ್ತಿದೆಯೋ, ಅದೇ ವೇಗದಲ್ಲಿ ಮಕ್ಕಳ ಊಟ ತಿಂಡಿಯ ಅಭ್ಯಾಸಗಳೂ ಬದಲಾಗುತ್ತಿವೆ.
ಇಂದು ಅವರು ಅನ್ನ, ಚಪಾತಿ, ಇಡ್ಲಿ, ದೋಸೆ ಬದಲಾಗಿ ಬರ್ಗರ್, ಸ್ಯಾಂಡ್ ವಿಚ್, ಪಿಜ್ಜಾ, ಪಾಸ್ತಾಗಳನ್ನಷ್ಟೇ ಬಯಸುತ್ತಿದ್ದಾರೆ. ಜಂಕ್ ಫುಡ್ ನ್ನಷ್ಟೇ ಸೇವಿಸುವುದಾಗಿ ಹಠ ಹೂಡುತ್ತಾರೆ. ಇದರ ನೇರ ಪರಿಣಾಮ ಅವರ ಆರೋಗ್ಯದ ಮೇಲಾಗುತ್ತಿದೆ. ಮಕ್ಕಳು ಸಣ್ಣ ವಯಸ್ಸಿಗೇ ಸ್ಥೂಲಕಾಯಕ್ಕೆ ತುತ್ತಾಗುತ್ತಿದ್ದಾರೆ.
ಹೀಗಾಗಿ ಇಂದಿನ ಮಾಡರ್ನ್ ಮಾಮ್, ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಬದಲಿಸಿಕೊಳ್ಳುತ್ತಾ, ಅಡುಗೆಯಲ್ಲಿ ನಾನಾ ಪ್ರಯೋಗ ಮಾಡಬೇಕಿದೆ. ಮನೆಯವರೆಲ್ಲರ ಪೌಷ್ಟಿಕ ಅಗತ್ಯ ಪೂರೈಸುವುದು ಅವಳ ಮುಖ್ಯ ಹೊಣೆಯಾಗುತ್ತದೆ. ಜೊತೆಗೆ ಬಾಲ್ಯದಿಂದಲೇ ಮಕ್ಕಳಿಗೆ ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡುತ್ತಾ, ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಸಿಕೊಡಬೇಕಾಗಿದೆ. ಹಣ್ಣು ತರಕಾರಿಗಳಲ್ಲಿ ಲಭ್ಯವಿರುವ ಪೌಷ್ಟಿಕಾಂಶಗಳ ಕುರಿತು ತಿಳಿಸಿ ಹೇಳಬೇಕಾಗುತ್ತದೆ.
ಇದಕ್ಕಾಗಿ ಇಂದಿನ ಆಧುನಿಕ ತಾಯಿತಂದೆ ಸಹ ಕೇವಲ ಪೌಷ್ಟಿಕ ಆಹಾರವನ್ನಷ್ಟೇ ಸೇವಿಸುತ್ತಿದ್ದಾರೆ. ಇದರಿಂದ ಮಕ್ಕಳು ಅವರನ್ನು ಕಂಡು ಅದೇ ಅಭ್ಯಾಸ ರೂಢಿಸಿಕೊಳ್ಳುವಂತಾಗಿದೆ. ಮಕ್ಕಳ ಸರ್ಮತೋಮುಖ ಅಭಿವೃದ್ಧಿಗಾಗಿ ಅವರಿಗೆ ಬ್ಯಾಲೆನ್ಸ್ಡ್ ಡಯೆಟ್ ನೀಡಬೇಕಾದುದು ಅತ್ಯಗತ್ಯ. ಏಕೆಂದರೆ ಮಕ್ಕಳ ಜೊತೆ ಇಡೀ ಕುಟುಂಬ ಸ್ವಸ್ಥವಾಗಿರುವಂತೆ ನೋಡಿಕೊಳ್ಳಬೇಕಾದುದು ತಾಯಿಯೇ!
ಹೊರಗಿನ ಚಟುವಟಿಕೆಗಳನ್ನು ಹೆಚ್ಚಿಸಿ
ಇತ್ತೀಚೆಗಂತೂ ಮಕ್ಕಳು ಹೊರಗೆ ಹೋಗಿ ಆಟೋಟಗಳಲ್ಲಿ ಪಾಲ್ಗೊಳ್ಳುವುದು, ಹೊರಗಿನ ಚಟುವಟಿಕೆಗಳು ಬಹಳ ಕಡಿಮೆ ಆಗಿಹೋಗಿದೆ. ಅವರು ಫ್ರೀ ಆದಾಗೆಲ್ಲ ಮೊಬೈಲ್ ಹಿಡಿದು ಕುಳಿತುಬಿಡುತ್ತಾರೆ. ಅವರು ಆಟೋಟಗಳಿಗಾಗಿ ಹೊರಗೆ ಹೋಗುವ ಬದಲು ಮೊಬೈಲ್, ವಿಡಿಯೋ ಗೇಮ್ಸ್ ನ್ನಷ್ಟೇ ಬಯಸುತ್ತಾರೆ. ಇದರಿಂದಾಗಿ ಅವರ ದೇಹದ ವಿಕಾಸ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರ ಪರಿಣಾಮ ಅವರ ಮಾನಸಿಕ/ದೈಹಿಕ ಆರೋಗ್ಯದ ಮೇಲೂ ಕಂಡುಬರುತ್ತಿದೆ. ಅತಿ ಕಡಿಮೆ ವಯಸ್ಸಿನಲ್ಲೇ ಇಂದಿನ ಮಕ್ಕಳು ಸ್ಥೂಲತೆ, ಕನ್ನಡಕ, ಟೆನ್ಶನ್, ಡಿಪ್ರೆಶನ್ ಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಒಬ್ಬ ಮಾಡರ್ನ್ ಮಾಮ್ ಮಕ್ಕಳ ಹೊರಗಿನ ಆಟೋಟ, ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸಬೇಕು. ತೀರಾ ಚಿಕ್ಕ ಮಕ್ಕಳಾದರೆ ಅವರೊಂದಿಗೆ ತಾನೂ ಆಡಿ ತೋರಿಸಿಕೊಡಬೇಕು. ಮಕ್ಕಳ ಅಚ್ಚುಮೆಚ್ಚಿನ ಗೇಮ್ಸ್ ಗುರುತಿಸಿ, ಅದರಲ್ಲಿ ಅವರ ಅಭಿರುಚಿ ಬೆಳೆಯುವಂತೆ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಿದೆ.

ಮಕ್ಕಳ ಸಂತೃಪ್ತಿ ಮುಖ್ಯ
ಇಂದಿನ ಆಧುನಿಕ ಮಕ್ಕಳಿಗೆ ಮಾತೃತ್ವದ ವ್ಯಾಖ್ಯಾನ ತೀರಾ ವಿಭಿನ್ನವಾಗಿದೆ. ಮಕ್ಕಳಂತೂ ಇತ್ತೀಚೆಗೆ ಒಂದು ಡಿಜಿಟಲ್ ಬಾಲ್ಯ ಕಳೆಯುತ್ತಿದ್ದಾರೆ ಎಂದೇ ಹೇಳಬಹುದು. ಇಂಥ ಡಿಜಿಟಲ್ ವಾತಾವರಣದಲ್ಲಿ ಬೆಳೆಯುತ್ತಿರುವ ಅವರು ಮೊದಲಿಗೆ ಕಲಿಯುವುದೇ ಫೋನಿನ ಬಳಕೆ! ನಂತರ ಮಾತನಾಡಲು ಕಲಿಯುತ್ತಾರೆ. ಇಂದಿನ ಮಕ್ಕಳಿಗೆ ಯಾವ ಮಾಹಿತಿಯೂ ಅಪೂರ್ಣ, ಅಸ್ಪಷ್ಟವಲ್ಲ. ಸಾವಿರಾರು ಪ್ರಶ್ನೆ ಕೇಳುತ್ತಾ, ತಮ್ಮ ಮನಸ್ಸು ಅದಕ್ಕೆ ಒಪ್ಪುತ್ತಿಲ್ಲ ಎನ್ನುತ್ತಾರೆ. ಇಂಥ ಮಕ್ಕಳನ್ನು ಸಂತೃಪ್ತಿಗೊಳಿಸುವುದು ಮಾಡರ್ನ್ ಮಾಮ್ ಗೆ ಬಲು ಕಷ್ಟ. ಇಂದಿನ ಮಕ್ಕಳನ್ನು ಓಲೈಸಿ ಒಪ್ಪಿಸುವುದು ಖಂಡಿತಾ ಸುಲಭವಲ್ಲ. ಹೀಗಾಗಿ ತಾಯಿ ಅವರೊಂದಿಗೆ ಹೆಚ್ಚು ಹೆಚ್ಚು ಹೊತ್ತು ಕ್ವಾಲಿಟಿ ಟೈಂ ಕಳೆಯಬೇಕು. ಆಗ ಮಾತ್ರ ಆ ಮಕ್ಕಳನ್ನು ಶಿಸ್ತುಬದ್ಧವಾಗಿ ಬೆಳೆಸಲು, ಸ್ಟ್ರಿಕ್ಟ್ ಆಗಿ ಇರಿಸಿಕೊಳ್ಳಲು, ಹೊಸ ಹೊಸ ವಿಷಯ ಕಲಿಸಲು ಸಾಧ್ಯವಾದೀತು!
– ಬಿ. ಶೋಭಾ ಭಟ್





