ಕಳೆದ ತಿಂಗಳಷ್ಟೇ ಕಾಶೀ, ಗಯಾ, ಪ್ರಯಾಗ್ ರಾಜ್ ಯಾತ್ರೆ ಮುಗಿಸಿ ಕಡೆಯದಾಗಿ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ಪ್ರಭು ಶ್ರೀರಾಮನ ದೇವಾಲಯಕ್ಕೆ ಕುಟುಂಬ ಸಮೇತ ಹೋಗಿದ್ದಾಗ,  ಆ ದೇವಾಲಯದ ಭವ್ಯತೆ ಅಲ್ಲಿನ ಶಿಸ್ತು, ಸಂಯಮ ಎಲ್ಲವನ್ನೂ  ನೋಡಿದಾಗ ನನಗೇ ಅರಿವಿಲ್ಲದಂತೆ 90ರ ದಶಕದಲ್ಲಿ ಆಗಷ್ಟೇ ಆರಂಭವಾಗಿದ್ದ ಅಯೋಧ್ಯಾ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿ ಮನೆ ಮನೆಗಳಿಗೂ ಹೋಗಿ ಹಣ ಸಂಗ್ರಹಣೆ ಮಾಡಿದ್ದು, ಇಟ್ಟಿಗೆಗಳನ್ನು ಸಂಗ್ರಹಿಸಿದ್ದು ನಂತರ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಫಣವಿದು ರಾಮನ ಮೇಲಾಣೆ ಮಂದಿರವಲ್ಲೇ ಕಟ್ಟುವೆವು, ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಮುಂತಾದ ಘೋಷಣೆಗಳನ್ನು ಮುಗಿಲು ಮುಟ್ಟುವಂತೆ ಕೂಗುತ್ತಿದ್ದದ್ದು, ಜನವರಿ 15 ರಿಂದ ಫೆಬ್ರವರಿ 27 2021ರ ವರೆಗೆ ಅಯೋಧ್ಯೆ ರಾಮಮಂದಿರಕ್ಕಾಗಿ ದೇಶಾದ್ಯಂತ ನಡೆದ ನಿಧಿ ಸಂಗ್ರಹ ಅಭಿಯಾನದಲ್ಲಿ ನಮ್ಮ ವಸತಿಯ ಮುಖ್ಯಸ್ಥನಾಗಿ ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಸಾವಿರಾರು ಮನೆಗಳಿಗೆ ಹೋಗಿ ಲಕ್ಷಾಂತರ ಹಣವನ್ನು ಸಂಗ್ರಹಿಸಿ ತರುತ್ತಿದ್ದ ಹಣವನ್ನು ಅದರ ಮೊಬಲಿಗೆ ಅನುವಾಗಿ ನಮ್ಮಾಕಿ ಜೋಪಾನವಾಗಿ ವಿಂಗಡಿಸಿ ಬ್ಯಾಂಕ್ ಚಲಾನ್ ಬರೆದು ಮಾರನೆಯ ದಿನ ಬೆಳಿಗ್ಗೆ ಬ್ಯಾಂಕ್ ನಲ್ಲಿ ಹಣವನ್ನು ಜಮೆ ಮಾಡಿ, ಜಮಾ ವಿವರಗಳನ್ನು ಮೊಬೈಲ್ ಆಪ್ ನಲ್ಲಿ ಭರ್ತಿ ಮಾಡಿ ಮತ್ತೆ ಅಭಿಯಾನ ಮುಂದುವರೆಸುತ್ತಿದ್ದದ್ದು, 44 ದಿನಗಳ ಕಾಲದ ಅಭಿಯಾನ ಮುಗಿದ ಎರಡು ಮೂರು ದಿನಗಳಲ್ಲಿಯೂ ಪ್ರತೀ ಪೈಸೆ ಪೈಸೆಯ ಹಣದ ಲೆಖ್ಖಾಚಾರವೆಲ್ಲವೂ ಆಪ್ ಮೂಲಕ ಸರಿಯಾಗಿ ದೇಶಾದ್ಯಂತ ನಿರೀಕ್ಷೆಗೂ ಮೀರಿ ₹2,100 ಕೋಟಿಗೂ ಹೆಚ್ಚು ಸಂಗ್ರಹವಾದ ಸಂಗತಿ ತಿಳಿದು  ಸಂತಸ ಪಟ್ಟಿದ್ದು ಎಲ್ಲವೂ ರಾಮಮಂದಿರದಲ್ಲಿ ಬಾಲರಾಮ  ದರ್ಶನ ಮಾಡುವಾಗ ನೆನಪಾಗಿದ್ದಲ್ಲದೇ, ಅಂದು ನಾವು ಪಟ್ಟ ಶ್ರಮ ಮತ್ತು ಕೊಟ್ಟ ಹಣ  ಎಲ್ಲೂ ಪೋಲಾಗದೇ, ಸತ್ಪಾತ್ರವಾಗಿ ಆಚಂದ್ರಾರ್ಕವಾಗಿ ಉಳಿಯುವಂತಾಗಿದೆ ಎಂದು ಸಂಭ್ರಮ ಪಡುವಂತಾಗಿತ್ತು.

ರಾಮಮಂದಿರದಲ್ಲಿ ಆಬಾಲ ವೃದ್ಧರಾದಿಯಾಗಿ ಸಾವಿರಾರು ಜನರ ಜೈ ಶ್ರೀರಾಂ ಜೈ ಜೈ ಶ್ರೀರಾಂ ಎಂಬ ಘೋಷಣೆಗಳ ಮಧ್ಯೆಯೂ ಯಾವುದೇ ತೊಂದರೆಗೂ ಆಸ್ಪದವಿಲ್ಲದಂತೆ, ಯಾವ ಪೂಜಾರಿಗಳು ಇಲ್ಲವೇ ಪಂಡಾಗಳ ಒತ್ತಡವಿಲ್ಲದಂತೆ, ಆ ಪೂಜೆ ಮಾಡಿಸಿ ಈ ಪೂಜೆ ಮಾಡಿಸಿ, ಸ್ಪರ್ಶ ದರ್ಶನ ಮಾಡಿ  ಎಂಬ ಯಾವುದೇ ರೀತಿಯ ಆಮೀಷಗಳಿಲ್ಲದೇ  ಇದ್ದದ್ದು ಮನಸ್ಸಿಗೆ ಮುದನೀಡಿ ರಾಮ ಲಲ್ಲನನ್ನು ದೂರದಿಂದಲೇ ನೋಡುತ್ತಿದ್ದಂತೆಯೇ  ಮನಸ್ಸಿಗೆ ಸಂತೋಷವಾಗಿ ನಮಗೇ ಅರಿವಿಲ್ಲದಂತೆಯೇ ಜೋಬಿನೊಳಗೆ ಕೈಹಾಕಿ ಕೈಗೆ ಬಂದಷ್ಟು ಹಣವನ್ನು ದೇವರ ಹುಂಡಿಯಲ್ಲಿ ಹಾಕಿ ಭಕ್ತಿಯಿಂದ ಮತ್ತೊಮ್ಮೆ ದರ್ಶನದ ಭಾಗ್ಯ ನೀಡು ಭಗವಂತಾ ಎಂದು ಬೇಡಿಕೊಂಡು ಸುಮಾರು ಮೂರ್ನಾಲ್ಕು ಘಂಟೆಗಳ ಕಾಲ ದೇವಾಲಯದ ಪ್ರತಿ ಮೂಲೆ ಮೂಲೆಯಲ್ಲೂ ಇದ್ದ ದೇವಾನು ದೇವತೆಗಳು, ವಿವಿಧ ಸಾಧುಸಂತರ  ಪ್ರತಿಮೆಗಳನ್ನು ನೋಡಿಕೊಂಡು ಹೊರಗೆ ದೇವಾಲಯದ ವತಿಯಿಂದ ನೀಡಿದ ಲಡ್ಡು ಪ್ರಸಾದವನ್ನು ಸ್ವೀಕರಿಸಿ ಹೊರಬರುತ್ತಿದ್ದಂತೆಯೇ ಜೀವನದಲ್ಲಿ ಏನೂ ಸಾಧಿಸಿದ ಭಾವನೆ ಮೂಡಿದ್ದಂತೂ ಸುಳ್ಳಲ್ಲಾ.

ಅಂದು ನಾವು ಪಟ್ಟ ಸಂಭ್ರಮದ ಸಂತಸ  ನೀರಿನ ಮೇಲಿನ ಗುಳ್ಳೆಯಂತಾಗಿ ಕೆಲವೇ ಕೆಲವು ದಿನಗಳ ನಂತರ ದೇಶದ ಕೋಟ್ಯಂತರ ಹಿಂದೂಗಳ ಭಕ್ತಿ ಮತ್ತು ಭಾವನೆಯ ಪ್ರತೀಕವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಭಕ್ತಿಯಿಂದ ನೀಡುವ ಕಾಣಿಕೆ ಹಣದ ದುರುಪಯೋಗ ಮತ್ತು ಕಳ್ಳತನದ ಆರೋಪ ನಿಜಕ್ಕೂ ಮನಸ್ಸಿನ ಮೇಲೆ  ಭಾರೀ ಪ್ರಮಾಣದಲ್ಲಿ ಘಾಸಿ ಮಾಡಿದೆ. ರಾಮಲಲ್ಲನ ಮಂದಿರಕ್ಕೆ ಪ್ರತಿದಿನವೂ ಸಾವಿರಾರು ಭಕ್ತರು ಭೇಟಿ ನೀಡಿ ನಗದು, ಚಿನ್ನ, ಬೆಳ್ಳಿ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ಕಾಣಿಕೆಯಾಗಿ ಅರ್ಪಿಸಿ,   ಅದರ ಮೂಲಕ ಪ್ರಭು ಶ್ರೀರಾಮ ಮತ್ತು ರಾಮ ಮಂದಿರದ ಮೂಲಕ ಮತ್ತಷ್ಟು ಸಮಾಜಮುಖೀ ಕಾರ್ಯಗಳು ಆಗಲಿ ಎಂದು ಭಾವಿಸಿದ್ದ ಆ ಕಾಣಿಕೆ ಹಣ ಸಂಘಟಿತ ರೀತಿಯಲ್ಲಿ ದುರುಪಯೋಗ ಮಾಡಲಾಗಿದೆ ಎಂಬ ಆರೋಪ ದೇಶಾದ್ಯಂತ ಸುದ್ದಿಯಾಗಿದ್ದು. ಈ ಕುರಿತಂತೆ ಹೆಚ್ಚಿನ ವಿಚಾರಣೆ ನಡೆಸಲು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ಆರಂಭಿಸಿದೆ.

ಪ್ರಾರಂಭಿಕ ತನಿಖಾ ವರದಿಗಳ ಪ್ರಕಾರ, ಕಾಣಿಕೆ ಪೆಟ್ಟಿಗೆಗಳಿಂದ ಬಂದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಎಣಿಸುವ ಮತ್ತು ಬ್ಯಾಂಕ್‌ಗೆ ಜಮಾ ಮಾಡುವ ಪ್ರಕ್ರಿಯೆಯಲ್ಲಿದ್ದ ಕೆಲ ಸಿಬ್ಬಂದಿ ಹಾಗೂ ಸಂಬಂಧಿತ ವ್ಯಕ್ತಿಗಳು ವ್ಯವಸ್ಥೆಯಲ್ಲಿದ್ದ ಲೋಪಗಳನ್ನು ದುರುಪಯೋಗ ಮಾಡಿಕೊಂಡು ಸುಮಾರು ₹7 ಕೋಟಿ ರಿಂದ ₹7.5 ಕೋಟಿ ವರೆಗೆ ಹಣವನ್ನು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು,  ತನಿಖೆ ಇನ್ನೂ ಮುಂದುವರಿದಿರುವುದರಿಂದ ನಾಪತ್ತೆಯಾದ ಹಣದ ನಿಖರ ಮೊತ್ತವನ್ನು ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿಲ್ಲ. ಆದರೆ ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಹಲವು ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಕಾಣಿಕೆಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಅಯೋಧ್ಯೆ ರಾಮಮಂದಿರಕ್ಕೆ ಪ್ರತಿದಿನವೂ ಬರುವ ಲಕ್ಷಾಂತರ ಭಕ್ತಾದಿಗಳು ಭಕ್ತಿಯಿಂದ ಮತ್ತು ಪ್ರೀತಿಯಿಂದ, ಹುಂಡಿಯೊಳಗೆ ಹಾಕುವ ಹಣ ಕೋಟಿ ಕೋಟಿಯಲ್ಲಿ ಸಂಗ್ರಹವಾಗುತ್ತದೆ. ನಿತ್ಯವೂ ಬರುವ ಭಕ್ತಾದಿಗಳ ಸಂಖ್ಯೆ ಅಷ್ಟೇ ಇಲ್ಲವೇ ಹೆಚ್ಚೇ  ಇದ್ದರೂ, ಸಂಗ್ರಹವಾಗುತ್ತಿದ್ದ ಹಣದ ಮೊತ್ತ ಕಡಿಮೆಯಾಗುತ್ತಿರುವುದನ್ನು ಗಮನಿಸಿದ  ರಾಮಮಂದಿರ ಟ್ರಸ್ಟ್ ನ ಸದಸ್ಯರಾದ ಶ್ರೀ ಕೃಷ್ಣಮೋಹನ್ ಎಂಬುವರು, ರಹಸ್ಯವಾಗಿ ಹಣದ ಆಡಿಟ್ ಮಾಡಿಸಿದ್ದಲ್ಲದೇ  ಹಣ ಎಣಿಸುವ ಕೊಣೆಯ ಸಿಸಿಟಿವಿಯ  ಹಳೇ ಫುಟೇಜ್‌ಗಳನ್ನೇ ಬಹಳ ಸೂಕ್ಷ್ಮವಾಗಿ ಜೂಮ್ ಮಾಡಿ, ಸ್ಲೋ-ಮೋಷನ್‌ನಲ್ಲಿ ರಿವೈಂಡ್ ಮಾಡಿ ನೋಡಿದಾಗ, ಅವಿನಾಶ್ ಶುಕ್ಲಾ ಅನುಕಲ್ಪ್ ಮಿಶ್ರಾ ಲವಕುಶ್ ಮಿಶ್ರಾ ಮನೀಶ್ ಕುಮಾರ್ ಯಾದವ್ ಕರುಣೇಶ್ ಪಾಂಡೆ ರಾಮಶಂಕರ್ ಮಿಶ್ರಾ ಸುಭಾಷ್ ಶ್ರೀವಾಸ್ತವ, ರಾಮಶಂಕರ್ ಯಾದವ್ (ಟಿನ್ನು ಎಂದೂ ಕರೆಯುತ್ತಾರೆ) ಈ ಎಂಟು ಎಂಟು ಹೊರಗುತ್ತಿಗೆ ನಗದು ಎಣಿಕೆ ಸಿಬ್ಬಂದಿಗಳು ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು ಭಕ್ತರು ದಾನ ಮಾಡಿದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಎಣಿಸುವ ಮತ್ತು ಸಾಗಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.

ರಾಮನ ಹೆಸರಿನಲ್ಲಿ ಸಂಗ್ರಹವಾಗುತ್ತಿದ್ದ ಹಣವನ್ನು ಆರೋಪಿಗಳು ಎಣಿಕೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಮತ್ತು ಸಿಸಿಟಿವಿ ಕಣ್ಗಾವಲು ತಪ್ಪಿಸುವ ಮೂಲಕವೂ ಪ್ರತೀ ದಿನವೂ  ಸಾವಿರಾರು/ಲಕ್ಷಾಂತರ ಹಣವನ್ನು ಮತ್ತು ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕದ್ದೊಯ್ಚಿದ್ದಾರೆ. ಕಾವಲು ಕಾಯಬೇಕಾದ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ, ಸುಮಾರು ದಿನಗಳಿಂದಲೂ 8 ಜನ ಸೇರಿ ಪಕ್ಕಾ ಸಿಂಡಿಕೇಟ್ ಮಾಡಿಕೊಂಡು ವ್ಯವಸ್ಥಿತವಾದ ಷಡ್ಯಂತ್ರದ ರಚಿಸಿಕೊಂಡು ಹಣ ಎಣಿಸುವಾಗ ಸಿಸಿಟಿವಿ ಕ್ಯಾಮೆರಾದ ‘ಡೆಡ್ ಆಂಗಲ್’ (ಕ್ಯಾಮೆರಾ ಕಣ್ಣಿಗೆ ಬೀಳದ ಜಾಗ) ಯಾವುದು ಅಂತ ಇವರು ಮೊದಲೇ ತಿಳಿದು ಕೊಂಡು ಅ ಜಾಗಕ್ಕೆ ಹೋಗಿ​ 500ರ ಕಂತೆಗಳನ್ನು ತಮ್ಮ ಒಳ ಉಡುಪುಗಳಲ್ಲಿ  ಬಚ್ಚಿಟ್ಟುಕೊಳ್ಳುವುದು, ಐದು ನೂರು ರೂಪಾಯಿಯ ನೂರು ನೋಟುಗಳ ಬಂಡಲ್ ಮಾಡುವ ಬದಲು ಬೇಕೆಂದೇ 120-130 ನೋಟುಗಳ ಬಂಡಲ್ ಮಾಡಿಕೊಂಡು ಕೇವಲ ಬಂಡಲ್ ರೂಪದಲ್ಲಿ ಹಣವನ್ನು ಎಣಿಸುವ ನಾಟಕ ಮಾಡಿ ಹೊರೆಗೆ ಹೋದ ನಂತರ ದೋಚಿದ ಹಣವನ್ನು ಸಮಪಾಲಾಗಿ ಹಂಚಿಕೊಳ್ಳುತ್ತಿದ್ದ ವಿಚಾರ ತಿಳಿದು ಬಂದಿದೆ. ಈಗ ಸಿಕ್ಕಿಬಿದ್ದಿರುವವರ ಸಂಖ್ಯೆ ಕೇವಲ  ಎಂಟು ಜನರಿದ್ದರೂ ಇವರ ಜೊತೆ ಬ್ಯಾಂಕ್ ಸಿಬ್ಬಂದಿಯೂ ಸೇರಿದಂತೆ ಇನ್ನೂ ಹತ್ತು ಹಲವಾರು ಜನರು ಸೇರಿರುವ ಸಾಧ್ಯತೆ ಇದೆ.

ಇವರೇ ನಿಜವಾದ ಆರೋಪಿಗಳು ಎಂದು ನಿರೂಪಿಸಲು ಇವಷ್ಟೇ ಅಂಶಗಳು ಸಾಕಾಗುವುದಿಲ್ಲ ಎಂಬುದನ್ನು ಅರಿತ ಕೃಷ್ಣಮೋಹನ್ ಆವರಉ ರಾಮ ಮಂದಿರದಲ್ಲಿ ಹಣ ಎಣಿಸುವ ಈ ಸಿಬ್ಬಂದಿಗೆ ತಿಂಗಳ ಅಂದಾಜು ಸಂಬಳ ಸುಮಾರು 20-30 ಸಾವಿರ ಇರುವಾಗ, ಇದ್ದಕ್ಕಿದ್ದಂತೆಯೇ ಅವರೆಲ್ಲರೂ  ಐಶಾರಾಮಿ ಕಾರುಗಳಲ್ಲಿ ಓಡಾಡೋದು, ಅಯೋಧ್ಯೆ ಸುತ್ತಮುತ್ತಲೂ ಮನೆ ಮತ್ತು ಜಮೀನು ಖರೀಧಿಸಿದ ಇಲ್ಲವೇ  ಅವರ ಹತ್ತಿರದ ಸಂಬಧೀಕರ ಹೆಸರಿನಲ್ಲಿ ಅಸ್ತಿ ಖರೀಧಿಸಿದ ವಿಷಯವನ್ನು ಸಂಗ್ರಹಿದ ನಂತರ ಅದೊಮ್ಮೆ ಇದ್ದಕ್ಕಿದ್ದಂತೆಯೇ ಇವರೆಲ್ಲರೂ ಹಣವನ್ನು ಎಣಿಸುತ್ತಿದ್ದ ಕೋಣಿಗೆ ಹೋಗಿ ಅವರ ಜೇಬು/ಬಟ್ಟೆಬಳನ್ನು ಪರೀಕ್ಷಿಸಿದಾಗ ಅವರ ಬಳಿ ಸಿಕ್ಕ  ಹಣದಿಂದಾಗಿ ಅವರ ಅಸಲಿ ಬಣ್ಣ ಬಯಲಾಗಿದೆ. ವಿಚಾರವೆಲ್ಲವೂ ತಿಳಿದು ಕೂಡಲೇ ಸ್ಥಳೀಯ ಪೋಲೀಸರಿಗೆ ಈ ವಿಷಯ ತಿಳಿಸಿ, ಆ ಎಲ್ಲಾ ಎಂಟು ಆರೋಪಿಗಳನ್ನೂ ಪೋಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ದೇವಾಲಯದ ದೇಣಿಗೆ ದುರುಪಯೋಗದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಮತ್ತು ಎಫ್‌ಐಆರ್ ನಂತರ ನೈತಿಕ ಆಧಾರದ ಮೇಲೆ ಅಯೋಧ್ಯಾ ರಾಮ ಮಂದಿರವನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಇಬ್ಬರು ಪ್ರಮುಖ ಸದಸ್ಯರಾದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ  ತಮ್ಮ ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ತಿಳಿಸಿದ್ದಾರೆ.  ಇವೆಲ್ಲದರ ನಡುವೆ ಭಕ್ತರು ನೀಡಿದ್ದ ಬೆಳ್ಳಿ ಇಟ್ಟಿಗೆಗಳು ಮತ್ತು ಇತರೇ ಆಭರಣಗಳು ಸೇರಿದಂತೆ ಉಳಿದೆಲ್ಲಾ ಬೆಲೆಬಾಳುವ ವಸ್ತುಗಳು ಮತ್ತೊಂದು ಕೋಣೆಯಲ್ಲಿ ಸುರಕ್ಷಿತವಾಗಿವೆ ಎಂದು  ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ಭರವಸೆ ನೀಡಿದೆಯಾದರೂ ಅದನ್ನು ನಂಬುವ ಸ್ಥಿತಿಯಲ್ಲಿ ಭಕ್ತತು ಇಲ್ಲವಾಗಿದ್ದಾರೆ.

ದೇಶದ ನ್ಯಾಯದ ಪ್ರಕಾರ ಪ್ರತಿಯೊಬ್ಬ ಆರೋಪಿಗೂ  ಕಾನೂನು ಪ್ರಾತಿನಿಧ್ಯದ ಅರ್ಹತೆ ಇದ್ದು ತಮ್ಮ ಪರವಾಗಿ ಪ್ರಬಲವಾಗಿ ವಾದ ಮಾಡಿ ತಾವುಗಳು ನಿರ್ದೋಶಿ ಎಂದು ತೋರಿಸಿಕೊಳ್ಳುವ ಸಲುವಾಗಿ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕಿರುತ್ತದೆ. ಆದಾಗ್ಯೂ ಭಕ್ತರ ನಂಬಿಕೆಗೆ ದ್ರೂಹ ಬಗೆದಿರುವ ಆ ಎಂಡೂ ಜನರ ಪರ ವಾದ ಮಾಡದಿರಲು ಅಯೋಧ್ಯೆಯ ಸ್ಥಳೀಯ ವಕೀಲರ ಸಂಘ ಹೇಳಿಕೆ ನೀಡಿರುವುದು ಆರೋಪಿಗೆಳಿಗೆ ಮತ್ತಷ್ಟು ಭಯ ಹುಟ್ಟಿಸಿದೆ.

ಬಾಬರೀ ಮಸೀದಿಯ ಧ್ವಂಸ, ನ್ಯಾಯಾಲಯದಲ್ಲಿ ರಾಮ ಮಂದಿರದ ವಿರುದ್ಧ ಹೋರಾಟ ನಡೆಸಿದ, ರಾಮ ಎನ್ನುದೇ ಕಾಲ್ಪನಿಕ ಎಂದಿದ್ದ, ರಾಮ ಮಂದಿರದ ನಿಧಿ ಸಂಗ್ರಹಣೆಯ ಸಮಯದಲ್ಲಿ  ಒಂದು ರೂಪಾಯಿ ದಾನವನ್ನು ಮಾಡದ, ಮಂದಿರ ಕಟ್ಟುವ ಬದಲು  ಆಸ್ಪತ್ರೆ ಇಲ್ಲವೇ ಸಾರ್ವಜನಿಕ ಶೌಚಾಲಯ ಕಟ್ಟಬೇಕು ಎಂದಿದ್ದ, ಮಂದಿರದ ಉದ್ಘಾಟನೆಗೆ ಅಧಿಕೃತ ಆಹ್ವಾನವಿದ್ದರೂ  ಒಂದು ಪಂಗಡದ ಒಲೈಕೆಗಾಗಿ ಹಾಜರಾಗದ ಕೆಲವರಿಗೆ  ಈಗ ಇದ್ದಕ್ಕಿದ್ದಂತೆಯೇ ಶ್ರೀರಾಮ ಮತ್ತು ರಾಮ ಮಂದಿರದ ಬಗ್ಗೆ ವಿಪರೀತ ನಂಬಿಕೆ ಬಂದು ದೇವಾಲಯದಲ್ಲಿ  ಆಗಿರುವ ಕಳ್ಳತನದ ತನಿಖೆಯನ್ನು ಬೆಂಬಲಿಸುವ ಮೂಲಕ ತಮ್ಮ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಅಂತಹ ಗೋಸುಂಬೆಗಳನ್ನು ನೋಡಿ ಜನರು ಆಡಿಕೊಂಡು ನಗುತ್ತಿದ್ದಾರೆ. ಹಾಗೆ ನೋಡಿದರೆ ಈ ವಿಷಯದ ಕುರಿತಾಗಿ ಯಾವ ರಾಮಭಕ್ತರೂ ‍ಆರೋಪಿಗಳ ಕ್ರಮಗಳನ್ನು ಸಮರ್ಥಿಸುವ ಬದಲು,  ಇದು ಸಾರ್ವಜನಿಕ ನಂಬಿಕೆಗೆ ದ್ರೋಹವಾಗಿದ್ದು, ಕಾಣಿಕೆಗಳನ್ನು ದುರುಪಯೋಗಪಡಿಸಿಕೊಂಡ ಅಪರಾಧಿಗಳ ವಿರುದ್ಧ ತನಿಖೆಯನ್ನು ಬೆಂಬಲಿಸುತ್ತಿರುವುದಲ್ಲದೇ, ಪಾರದರ್ಶಕವಾಗಿ ತನಿಖೆ ನಡೆದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕೆಂದೇ ಬಯಸುತ್ತಿರುವುದು ಉತ್ತಮವಾದ ಬೆಳವಣಿಯಾಗಿದೆ.

ಅಯೋಧ್ಯೆಯ ರಾಮ ಮಂದಿರ ಕೇವಲ ಧಾರ್ಮಿಕ ಕೇಂದ್ರವಲ್ಲ; ಅದು ಕೋಟ್ಯಂತರ ಭಾರತೀಯರ ನಂಬಿಕೆ ಮತ್ತು ಭಾವನೆಗಳ ಸಂಕೇತವಾಗಿದೆ. ಅದು ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಸಂಕೇತವಾಗಿದೆ.  ಅಂತಹ ಪವಿತ್ರ ಸ್ಥಳದಲ್ಲೇ ಕಾಣಿಕೆ ಹಣದ ದುರುಪಯೋಗದ ಆರೋಪಗಳು ಹೊರಬಂದಿರುವುದು ಭಕ್ತರ ಮನಸ್ಸಿಗೆ ಖಂಡಿತವಾಗಿಯೂ ನೋವುಂಟು ಮಾಡಿದೆ. ಈ ಪ್ರಕರಣವನ್ನು ರಾಜಕೀಯ ಬಣ್ಣ ನೀಡದೇ ಪಾರದರ್ಶಕ ಹಾಗೂ ನಿರಪೇಕ್ಷ ತನಿಖೆ ನಡೆಸಬೇಕು ಎಂಬ ಬೇಡಿಕೆ ವಿವಿಧ ಸಾಮಾಜಿಕ ವಲಯಗಳಿಂದ ಕೇಳಿಬಂದಿದೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರು ಶಿಕ್ಷೆಗೆ ಒಳಗಾಗಬೇಕು. ಅದೇ ಸಮಯದಲ್ಲಿ ತನಿಖೆ ಪೂರ್ಣಗೊಳ್ಳುವ ಮುನ್ನ ವದಂತಿಗಳು ಮತ್ತು ಪರಿಶೀಲಿಸದ ಮಾಹಿತಿಗಳನ್ನು ಹರಡುವುದನ್ನೂ ತಪ್ಪಿಸಬೇಕು. ಭಕ್ತರ ಕಾಣಿಕೆ ಕೇವಲ ಹಣವಲ್ಲ; ಅದು ಅವರ ನಂಬಿಕೆ, ಭಕ್ತಿ ಮತ್ತು ದೇವರ ಮೇಲಿನ ಅಪಾರ ವಿಶ್ವಾಸದ ಪ್ರತೀಕ. ಆ ವಿಶ್ವಾಸವನ್ನು ಕಾಪಾಡುವುದು ಪ್ರತಿಯೊಂದು ಧಾರ್ಮಿಕ ಸಂಸ್ಥೆಯ ಅತ್ಯಂತ ದೊಡ್ಡ ಜವಾಬ್ದಾರಿಯಾಗಿದ್ದು, ಅಂತಹ ಪವಿತ್ರ ಕ್ಷೇತ್ರದ ಮೇಲೆ ಯಾವುದೇ ಅನುಮಾನ ಮೂಡದಂತೆ ಆಡಳಿತ ವ್ಯವಸ್ಥೆ ಇನ್ನಷ್ಟು ಬಲಿಷ್ಠ ಪಡಿಸಬೇಕಾಗಿದೆ ಅಲ್ವೇ?

ಏನಂತೀರೀ?

ನಿಮ್ಮವನೇ

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ