ಆತ್ಮೀಯ ಗೆಳೆಯ ಹಾಗೂ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ನಂತರ ಮತ್ತೆ ಮೌನ ಮುರಿದಿರುವ ನಟಿ ಕೃಷಿ ತಾಪಂಡ, ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ…
ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ. ಆಯ್ಕೆ ಮಾಡಿಕೊಂಡದ್ದರಿಂದಲ್ಲ…
ಬೇರೆ ದಾರಿಯೇ ಇಲ್ಲದ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ತಾವು ವಾಸವಿದ್ದ ಅಪಾರ್ಟ್ಮೆಂಟ್ನಲ್ಲೇ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ನಂತರ ನಟಿಯ ವಿರುದ್ಧ ಹಲವು ರೀತಿಯ ಊಹಾಪೋಹಗಳು ಕೇಳಿಬಂದಿದ್ದವು.
ಈ ಎಲ್ಲ ಬೆಳವಣಿಗೆಗಳ ಬಳಿಕ ನಟಿ ಕೃಷಿ ತಾಪಂಡ, ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು, ನಿಮ್ಮ ವದಂತಿಗಳನ್ನು ನಿಲ್ಲಿಸಿ. ನನಗೆ ಬದುಕಲು ಬಿಡಿ ಎಂದು ಕೇಳಿಕೊಂಡಿದ್ದರು.
ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ…ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ. ಆಯ್ಕೆ ಮಾಡಿಕೊಂಡದ್ದರಿಂದಲ್ಲ..ಬೇರೆ ದಾರಿಯೇ ಇಲ್ಲದ ಕಾರಣ ಎಂದು ಬರೆದುಕೊಂಡು ಇತ್ತೀಚೆಗೆ ಅವರು ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಐದಾರು ಫೋಟೋ ಹಂಚಿಕೊಂಡಿರುವ ನಟಿ ಕೃಷಿ ತಾಪಂಡ ಮೊದಲ ಫೋಟೋದಲ್ಲಿ ಯಾವುದೋ ಕಲ್ಲಿನ ಮೇಲೆ ಆಲೋಚಿಸುತ್ತ ಕುಳಿತ ಫೋಟೋಗೆ ಅಪೂರ್ಣ ಎಂದು ಬರೆದುಕೊಂಡಿದ್ದಾರೆ. ಮತ್ತೊಂದರಲ್ಲಿ ಪ್ರಕೃತಿ, ಮಳೆ, ಶ್ವಾನ ನಿದ್ರಿಸುತ್ತಿರುವುದು, ಪಕ್ಷಿಗಳ ಓಡಾಟ, ಗಿಡಕ್ಕೆ ನೀರುಣಿಸುವಾಗ ಆಳವಾಗಿ ಚಿಂತಿಸುತ್ತಿರುವ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಅವರ ಫಾಲೋವರ್ಸ್ಗಳು ಧೈರ್ಯ ತುಂಬಿದ್ದು, ಇನ್ನು ಒಳ್ಳೆ ಕಾಲ ಬಂದೇ ಬರುತ್ತೆ ನೀವು ಅದಕ್ಕಾಗಿ ಕಾಯಬೇಕಷ್ಟೇ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಗಟ್ಟಿಯಾಗಿ ನಿಲ್ಲಿ ಎಂದಿದ್ದಾರೆ. ಸಮಯ ಎಲ್ಲವನ್ನೂ ಮರೆಸುತ್ತೆ. ಕತ್ತಲು ಕಳೆದ ಮೇಲೆ ಬೆಳಕು ಬಂದೆ ಬರುತ್ತೆ. ನೀವು ನಾನು ನೋಡಿದ ಬಲಿಷ್ಠ ಮಹಿಳೆ ಎಂದು ಅಭಿಮಾನಿಗಳು ಸಾಂತ್ವನ ಹೇಳಿದ್ದಾರೆ.





