– ರಾಘವೇಂದ್ರ ಅಡಿಗ ಎಚ್ಚೆನ್.

ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ, ಸರಳತೆಯ ಸಾಹುಕಾರ… ಹೀಗೆ ಹಲವು ಬಿರುದುಗಳಿಂದ ಕರೆಸಿಕೊಳ್ಳುವ ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾ.ಶಿವರಾಜ್​​​​ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ 64ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ತಮ್ಮ ಮೆಚ್ಚಿನ ತಾರೆಯರ ಜನ್ಮದಿನ ಅಂದಮೇಲೆ ಅಭಿಮಾನಿಗಳು ಅದ್ಧೂರಿ ಆಚರಣೆ ಮಾಡೋದು ಸಹಜ. ಹಾಗಾಗಿ, ಅಭಿಮಾನಿಗಳಲ್ಲಿ ಶಿವಣ್ಣ ಮನವಿಯೊಂದನ್ನು ಮಾಡಿದ್ದಾರೆ.
ಹೌದು, ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​ಗಳಲ್ಲಿ ತಮ್ಮ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್​​ಗೆ, ‘ಸಿಗೋಣ ಜುಲೈ 12ಕ್ಕೆ. ಪ್ರೀತಿ, ಅಭಿಮಾನ ಮಾತ್ರ ತಗೊಂಡ್ ಬನ್ನಿ’ ಎಂದು ಕ್ಯಾಪ್ಷನ್​​ ಕೊಟ್ಟಿದ್ದಾರೆ.
”ಹಾಯ್​​. ಎಲ್ಲರಿಗೂ ನಮಸ್ಕಾರ. ಜುಲೈ 12, ನನ್ನ ಹುಟ್ದಬ್ಬ. ನಿಮ್ಮೆಲ್ಲರಿಗೂ ಗೊತ್ತೇ ಇದೆ. ನೀವೆಲ್ಲರೂ ಬರ್ತೀರ. ಬನ್ನಿ. ಆದ್ರೆ ಈ ವರ್ಷ ನನ್ನದೊಂದು ವಿನಂತಿ ಇದೆ. ಯಾವುದೇ ತರಹದ ಉಡುಗೊರೆ ತರಲು ಹೋಗಬೇಡಿ. ವಿಶೇಷವಾಗಿ, ಕೇಕ್​, ಹಾರ, ಶಾಲು ಯಾವುದೂ ಬೇಡ. ಆದ್ರೆ ನಿಮ್ಮಗಳ ಪರವಾಗಿ ನಾನೊಂದು ಕೇಕ್​ ಕಟ್​ ಮಾಡ್ತೀನಿ. ನಿಮ್ಮ ವಿಶಸ್ಸೇ ನನಗೆ ಆಶೀರ್ವಾದ. ಎಲ್ಲರೂ ಬನ್ನಿ. ಸೇರೋಣ. ಮಜಾ ಮಾಡೋಣ”.
ಪೋಸ್ಟ್ ವೈರಲ್​ ಆಗಿದ್ದು, ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಕಾಮೆಂಟ್​​​ ಸೆಕ್ಷನ್​​ನಲ್ಲಿ ರಿಯಾಕ್ಟ್​ ಮಾಡಿದ ಓರ್ವರು, ‘ಅಪ್ಪು ಒಮ್ಮೆ ಹೇಳಿದ್ರು: ನಂಗೂ ನಮ್ ಅಣ್ಣಂಗೂ ವಯಸ್ಸೇ ಆಗಲ್ಲ. ಹ್ಯಾಪಿ ಬರ್ತ್​ಡೇ ಶಿವಣ್ಣ’ ಎಂದು ತಿಳಿಸಿದ್ದಾರೆ. ಮತ್ತೋರ್ವರು, ‘ಹ್ಯಾಪಿ ಬರ್ತ್​ಡೇ ದೇವ್ರು’ ಎಂದು ಹೇಳಿದ್ದಾರೆ.
ಹೆಚ್ಚಿನ ಕಲಾವಿದರು ತಮ್ಮ ಬ್ಯುಸಿ ಶೆಡ್ಯೂಲ್​ ನಡುವೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋಕ್ಕಾಗೋದಿಲ್ಲ. ಇದನ್ನು ಉಲ್ಲೇಖಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, ‘ಸ್ಯಾಂಡಲ್‌ವುಡ್​ನ ಬಹುತೇಕ ನಟರು ಹುಟ್ಟುಹಬ್ಬಕ್ಕೆ ಬರಬೇಡಿ, ಮನೆಯಲ್ಲಿ ಇರಲ್ಲ ಅಂತಾ ಹೇಳುತ್ತಾರೆ. ಆದರೆ ದೊಡ್ಡಮನೆಯ ಶಿವಣ್ಣ ಮಾತ್ರ ಬನ್ನಿ ಅಂತಾ ಕರೆಯುತ್ತಾರೆ. ದೊಡ್ಡಮನೆಯವರು ಅನ್ನೋದು ಮನೆಗೆ ಅಲ್ಲ, ಮನಸ್ಸಿಗೆ’ ಎಂದು ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಉಳಿದಂತೆ, ಹೆಚ್ಚಿನವರು ಹ್ಯಾಪಿ ಬರ್ತ್​​ಡೇ ಶಿವಣ್ಣ ಎಂದು ಕಾಮೆಂಟ್​ ಸೆಕ್ಷನ್​​ ಅನ್ನು ತುಂಬಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ