ಈ ಸಲದ ದೀಪಾವಳಿಗೆ ಇತರ ಎಲ್ಲರಿಗಿಂತ ನಿಮ್ಮ ಮನೆ ಹೆಚ್ಚು ಯೂನಿಕ್ಬೆಟರ್ಎನಿಸುವಂತೆ ಏಕೆ ಮಾಡಬಾರದು….? ಎಲ್ಲೆಲ್ಲೂ ಜಗಮಗಿಸುವ ಬೆಳಕು, ಉತ್ಸಾಹದ ಗಲಾಟೆ, ಸಡಗರ, ಸಂಭ್ರಮ ಹರ್ಷೋಲ್ಲಾಸ…..
ಇದುವೇ ದೀಪಾವಳಿ ಹಬ್ಬದ ಸಂತಸಮಯ ವಾತಾವರಣ. 3 ದಿನಗಳ ಈ ಹಬ್ಬದಲ್ಲಿ ಹೆಂಗಸರು ಕೇವಲ ಮೇಕಪ್, ಉಡುಗೆ ತೊಡುಗೆಗಳಿಂದ ತಮ್ಮ ಅಂದಚೆಂದ ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲ, ಬದಲಿಗೆ ತಮ್ಮ ಮನೆಯನ್ನು ವಿಶಿಷ್ಟವಾಗಿ ತೋರಿಸಿಕೊಳ್ಳಲು ವಾರದ ಹಿಂದಿನಿಂದಲೇ ತಯಾರಿ ಶುರು ಮಾಡಿಕೊಳ್ಳುತ್ತಾರೆ. ಇಡೀ ಮನೆಯ ಸ್ವಚ್ಛತೆ, ಶುಭ್ರತೆಯೊಂದಿಗೆ, ಹಬ್ಬಕ್ಕೆ ಬೇಕಾದ ಎಲ್ಲಾ ಡೆಕೋರೇಶನ್ ಗಳಿಂದ ತಮ್ಮ ಮನೆಗೆ ಅಚ್ಚುಕಟ್ಟಾದ ಗೃಹಾಲಂಕಾರ ಒದಗಿಸಲು ತೊಡಗುತ್ತಾರೆ.
ಇದಕ್ಕಾಗಿ ಎಲ್ಲರೂ ಎಂದಿನಂತೆಯೇ ಕಲರ ಫುಲ್ ಲೈಟ್ಸ್ ನ ಸೀರಿಯಲ್ ಸೆಟ್, ಸೆಂಟೆಡ್ ಕ್ಯಾಂಡಲ್ಸ್, ಬಗೆಬಗೆಯ ಹಣತೆಗಳಿಂದ ತಮ್ಮ ಮನೆಯ ಮೂಲೆ ಮೂಲೆಯನ್ನೂ ಬೆಳಗಿಸುತ್ತಾರೆ. ಈ ಬಾರಿ ಎಂದಿನ ಅಲಂಕಾರದ ಬದಲಿಗೆ, ಇತರ ಎಲ್ಲರಿಗಿಂತಲೂ ನಿಮ್ಮ ಮನೆ ಅತಿ ವಿಶಿಷ್ಟ, ಅನನ್ಯ, ಅನುಪಮ ಗೃಹಾಲಂಕಾರ ಹೊಂದಿರುವಂತೆ ಏಕೆ ಮಾಡಬಾರದು? ಹೀಗಾಗಿ ಇಲ್ಲಿನ ಸಲಹೆ ಅನುಸರಿಸಿ ಈ ಸಲ ನಿಮ್ಮ ಮನೆಗೆ ಯೂನಿಕ್ ಲುಕ್ ಕೊಡಿಸಿ :
ಡೆಕೋರೇಶನ್ನಿನ ಬೊಂಬಾಟ್ ಐಡಿಯಾ
ದೀಪಾವಳಿಯ ಜೋಶ್ ನಲ್ಲಿ ನೀವು ಮಾರುಕಟ್ಟೆಗೆ ಹೋಗಿ ನೋಡಿದಾಗ, ಒಂದಕ್ಕಿಂತ ಒಂದು ಮಿಗಿಲಾದ ಗೃಹಾಲಂಕಾರದ ಸಾಮಗ್ರಿ ಸಿಗುತ್ತವೆ. ಆದರೆ ನಿಮ್ಮ ಮನೆಯ ಅಗತ್ಯಗಳಿಗೆ ತಕ್ಕಂತೆ ಮಾತ್ರವೇ ಇಂಥ ವಸ್ತುಗಳನ್ನು ಆರಿಸಿ. ಅನಗತ್ಯ ವಸ್ತು ಕೊಂಡು ತಂದು ಗೃಹಾಲಂಕಾರದ ನೆಪದಲ್ಲಿ ಎಲ್ಲೆಡೆ ಎಲ್ಲವನ್ನೂ ತುಂಬಿಸಿ, ಮನೆಯನ್ನು ಸಂಗ್ರಹಾಲಯ ಮಾಡಿಬಿಡಬೇಡಿ! ಇದರ ಬದಲು ನೀವು ಕೆಲವು ಯೂನಿಕ್ ಐಡಿಯಾ ಫಾಲೋ ಮಾಡಿದರೆ ಮಾತ್ರ, ನಿಮ್ಮ ಮನೆಯ ಅಲಂಕಾರ ಸ್ಪೆಷಲ್ ಎನಿಸಲು ಸಾಧ್ಯ. ಹೀಗಾಗಿ ಈ ಸಲದ ಅಲಂಕಾರ ಮನೆಯ ಮೇನ್ ಗೇಟಿನಿಂದಲೇ ಶುರುವಾಗಲಿ.
ಮೇನ್ ಗೇಟ್ ನಿಂದ ಅಲಂಕಾರ ಶುರು
ದೀಪಾವಳಿ ಹಬ್ಬಕ್ಕಾಗಿ ಗೃಹಾಲಂಕಾರದ ಮೊದಲ ಹೆಜ್ಜೆ ಎಂದರೆ, ಮೆಯ್ನ್ ಗೇಟ್ ಮುಂದೆ ಪೇಂಟ್ ನಿಂದ ಬ್ಯೂಟಿಫುಲ್ ರಂಗೋಲಿ ಬಿಡಿಸಿ. ಇದು ಅತಿಥಿಗಳಿಗೆ ಬಲು ಆತ್ಮೀಯ ಸ್ವಾಗತ ಕೋರುತ್ತದೆ. ರಂಗೋಲಿ ದೊಡ್ಡದಿದ್ದಷ್ಟೂ ಹಬ್ಬ ಗ್ರಾಂಡಾಗಿ ಜರುಗುತ್ತಿದೆ ಎಂದೇ ಅರ್ಥ. ಸ್ವತಃ ಪೇಂಟಿಂಗ್ ನಿಂದ ರಂಗೋಲಿ ಬಿಡಸುವುದು ಕಷ್ಟ ಎನಿಸಿದರೆ, ಅತ್ಯಾಕರ್ಷಕ ವಿನ್ಯಾಸಗಳಿರುವ ಸ್ಟಿಕರ್ ರಂಗೋಲಿ ತಂದು ಅಂಟಿಸಿ, ಆನಂದಿಸಿ. ಈ ಬಾರಿ ಕ್ರಿಯೇಟಿವ್ ಆಗಿರಲು ಬಯಸಿದರೆ, ಫ್ಲೋಟಿಂಗ್ ರಂಗೋಲಿ ರೆಡಿ ಮಾಡಿ. ಇದು ದೊಡ್ಡ ಬಟ್ಟಲಲ್ಲಿ ತುಂಬಿಸಿದ ನೀರು, ಅದರಲ್ಲಿ ತೇಲುವ ಹೂಗಳಿಂದ ಸಿದ್ಧಗೊಳ್ಳುತ್ತದೆ.

ಫ್ಲೋಟಿಂಗ್ ಫ್ಲೋರ್ ಕಾರ್ನರ್ ರಂಗೋಲಿ
ಇದಕ್ಕಾಗಿ ಒಂದು ದೊಡ್ಡ ಸುಂದರ ಡಿಸೈನ್ ವುಳ್ಳ ಬಟ್ಟಲು ಆರಿಸಿ. ಇದಕ್ಕೆ ನೀರು ತುಂಬಿಸಿ. ನಂತರ ಇದಕ್ಕೆ ಹಣತೆ, ಹೂವಿನ ದಳಗಳು, ಇನ್ನಿತರ ಸುಗಂಧಭರಿತ ವಸ್ತುಗಳಿಂದ ಅಲಂಕರಿಸಿ. ಇದರಲ್ಲಿ ನೀರಿನ ಮೇಲ್ನೈ ಮೇಲೆ ಡಿಸೈನ್ ಬಿಡಿಸಬಹುದು. ಈ ಬಗೆಯ ರಂಗೋಲಿ ನಿಜಕ್ಕೂ ಒಂದು ಅನನ್ಯ ಕಲೆ. ಇದನ್ನು ಮನೆಯ ಒಳಗೆ, ಹೊರಗೆ ಎಲ್ಲಾದರೂ ಇರಿಸಿಕೊಳ್ಳಬಹುದು. ಇದನ್ನು ನೋಡುತ್ತಿದ್ದಂತೆ ತಾಜಾತನ, ಪ್ರಪಲ್ಲತೆ ಉಕ್ಕುವಂತಿರಬೇಕು. ಇನ್ನಿದಕ್ಕಿಂತ ಅಲಂಕಾರ ಬೇಕೇ?
ಇದಕ್ಕಾಗಿ ಬಹಳ ಶ್ರಮ ಪಡಬೇಕಾದ ಅಗತ್ಯವಿಲ್ಲ. ಇದರ ಜೊತೆಗೆ ಈಗ ಎಲ್ಲೆಲ್ಲೂ ಫ್ಲೋರ್ ಕಾರ್ನರ್ ರಂಗೋಲಿ ಡಿಸೈನ್ ಹೆಚ್ಚು ಪ್ರಚಲಿತ. ನಿಮ್ಮದು ಚಿಕ್ಕ ಮನೆ ಎನಿಸಿದರೆ, ಮನೆಯ ಮೂಲೆ ಮೂಲೆಯನ್ನೂ ಹಸಿರು ಎಲೆ, ಬಣ್ಣದ ಹೂಗಳಿಂದ ಸಿಂಗರಿಸಿ.
ಎಂಟ್ರೆನ್ಸ್ ನಲ್ಲಿ ತಳಿರು ತೋರಣ
ಯಾವ ಹಬ್ಬವೇ ಇರಲಿ, ಮನೆಯ ಮುಂಬಾಗಿಲಿಗೆ ತಳಿರು ತೋರಣದ ಶೃಂಗಾರ ಇಲ್ಲದಿದ್ದರೆ ಅದು ಅಪೂರ್ಣವೇ ಸರಿ. ದೀಪಾವಳಿಗಂತೂ ಅದು ಇನ್ನೂ ಗ್ರಾಂಡಾಗಿರಲಿ. ಇದರಿಂದ ಹೊರಗಿನಿಂದ ಬಂದ ಅತಿಥಿಗಳು ಮುಂಬಾಗಿಲು ನೋಡಿ ಬೆಕ್ಕಸ ಬೆರಗಾಗುವಂತೆ ನಿಮ್ಮ ಕೈಚಳಕ ಇರಬೇಕು. ಇದಕ್ಕಾಗಿ ಮಾವಿನ ಹಸಿರೆಲೆಯ ತೋರಣ, ಅದರಲ್ಲಿ ಇಳಿಬಿಟ್ಟ ಹೂಮಾಲೆ ವಿಶೇಷ ಕಳೆ ನೀಡುತ್ತವೆ. ಅಗತ್ಯ ಎನಿಸಿದರೆ ರೆಡಿಮೇಡ್ ಪ್ಲಾಸ್ಟಿಕ್ ಹಸಿರು ತೋರಣ ತಂದು ಸಹ ಕಟ್ಟಬಹುದು. ಇದು ಇಲ್ಲದಿದ್ದರೆ ದೀಪಾವಳಿಯ ಅಲಂಕಾರ ಅಪೂರ್ಣ ಎನಿಸುತ್ತದೆ.

ಮಣ್ಣಿನ ಮಡಕೆಗಳ ಅಲಂಕಾರ
ಅದೇ ರೀತಿ ಮನೆಯ ಎಂಟ್ರೆನ್ಸ್ ನಲ್ಲಿ, ಅಂಗಳದ ಬದಿಯಲ್ಲಿ ಮಣ್ಣಿನ ಚಿಕ್ಕ ಚಿಕ್ಕ ಮಡಕೆ ತೂಗುಬಿಟ್ಟು ಸಹ ಅಲಂಕಾರ ಮಾಡಬಹುದು. ಇದಕ್ಕಾಗಿ ರೆಡಿಮೇಡ್ ಸೆಟ್ ಆಗಿ ಸಿಗುವಂಥ ಒಂದರೊಳಗೆ ಒಂದು ಹಿಡಸು ಮಣ್ಣಿನ ಮಡಕೆ ತಂದು ತೂಗುಬಿಡಿ. ಇದನ್ನು ಅಂಗಳದಲ್ಲಿ ಅಲ್ಲಲ್ಲಿ ತೂಗುಬಿಟ್ಟು, ಇದರ ಮೇಲೆ ಬಣ್ಣ ಬಣ್ಣದ ಚಿತ್ತಾರ, ಪೇಂಟಿಂಗ್ ಮಾಡಿಸಿ. ಮಣಿ, ಮಿರರ್ ವರ್ಕ್ ಇದ್ದರೆ ಇನ್ನೂ ಸೊಗಸು. ಈ ಸ್ಟೈಲ್ ಎಲ್ಲರನ್ನೂ ಪ್ರಭಾವಿತಗೊಳಿಸುತ್ತದೆ. ಜನ ಮುಕ್ತ ಮನಸ್ಸಿನಿಂದ ನಿಮ್ಮನ್ನು ಹೊಗಳುತ್ತಾರೆ.
ಡೆಕೋರೇಟಿವ್ ಲೈಟಿಂಗ್ ಲ್ಯಾಂಪ್
ಈ ಸಂದರ್ಭದಲ್ಲಿ ಮನೆಯ ಒಳಗೆ/ಹೊರಗಿನ ಅಲಂಕಾರಕ್ಕಾಗಿ ದೀಪಾವಳಿ ಲೈಟಿಂಗ್ ಡಿಸ್ ಪ್ಲೇ ಜೊತೆ ಎಂಜಾಯ್ ಮಾಡಿ. ಇದಕ್ಕಾಗಿ ಟೇಬಲ್ ಲ್ಯಾಂಪ್, ಹ್ಯಾಂಗಿಂಗ್ ಲ್ಯಾಂಪ್, ಫ್ಲೋರ್ ಲ್ಯಾಂಪ್ ಇತ್ಯಾದಿ ಬಳಸಿಕೊಳ್ಳಿ. ಟೇಬಲ್ ಲ್ಯಾಂಪ್ ನ್ನು ನೀವು ಸೈಡ್ ಟೇಬಲ್, ಶೆಲ್ಫ್ ಯಾ ಫ್ಲೋರ್ ನಲ್ಲಿ ಇಡಬಹುದು. ಡೈನಿಂಗ್ ಟೇಬಲ್ ಮೇಲೆ ಯಾ ಮನೆಯ ಎಂಟ್ರೆನ್ಸ್ ನಲ್ಲಿ ಹ್ಯಾಂಗಿಂಗ್ ಲ್ಯಾಂಪ್ ಬಲು ಅಂದವಾಗಿ ಕಂಗೊಳಿಸುತ್ತದೆ. ಲಿವಿಂಗ್/ಬೆಡ್ ರೂಮುಗಳಿಗಾಗಿ ಫ್ಲೋರ್ ಲ್ಯಾಂಪೇ ಬೆಸ್ಟ್! ನೀವು ಇನ್ನು ಬೇರೆ ಬೇರೆ ಪ್ಲೇಸ್ ಮೆಂಟ್ ಗಳಿಗಾಗಿ ಪ್ರಯೋಗಿಸುತ್ತಾ, ವಿಭಿನ್ನ ಕಲರಿನ ಬಲ್ಬ್ ಅಳವಡಿಸಿದರೆ, ಮನೆಯ ಸೊಬಗು 4 ಪಟ್ಟು ಹೆಚ್ಚುತ್ತದೆ.
ಡಿಸೈನರ್ ಮಣ್ಣಿನ ಲ್ಯಾಂಪ್
ಈ ಸಲದ ಹಬ್ಬಕ್ಕಾಗಿ ನೀವು ಹಣತೆಗಳನ್ನು ಹೊರತುಪಡಿಸಿ ಮಣ್ಣಿನ ಲ್ಯಾಂಪ್ ಸಹ ಬಳಸಿಕೊಳ್ಳಿ. ಇದರ ಒಳಗೆ ಕಲರ್ ಫುಲ್ ಕ್ಯಾಂಡಲ್ ಇರಿಸಿ. ಅದರ ಕಣ್ ಕುಕ್ಕುವ ಬೆಳಕು ಲ್ಯಾಂಪಿನ ಡಿಸೈನ್ ಗಳಿಂದ ಹೊರಗೆ ಹರಡಿದಾಗ, ಇದರ ಕಾಂತಿಯಿಂದ ಇಡೀ ಮನೆ ಬೆಳಗುತ್ತದೆ! ಇದರಿಂದ ನೀವು ಮನೆಯ ಬಾಲ್ಕನಿ, ಮಹಡಿ ಭಾಗ ಸಹ ಅಲಂಕರಿಸಬಹುದು. ಇವು ಮಾರ್ಕೆಟ್ ನಲ್ಲಿ ಸುಲಭವಾಗಿ ಸಿಗ್ತುತವೆ.
ಲಾಟೀನು ಹಾಗೂ ಜಾರ್ ಹಣತೆ
ಈ ಸಲದ ಹಬ್ಬಕ್ಕೆ ನೀವು ನಿಮ್ಮ ಮನೆಗೆ ಕ್ಲಾಸಿಕ್ ಲುಕ್ ನೀಡಬಯಸಿದರೆ, ನೀವು ಮಣ್ಣಿನ ಹಣತೆ ಹಚ್ಚುವುದರ ಜೊತೆಗೆ, ತುಸು ವಿಭಿನ್ನ ಬಗೆಯ ಹಣತೆಗಳನ್ನೂ ಬಳಸಿಕೊಳ್ಳಿ. ಇದಕ್ಕಾಗಿ ನೀವು ಲಾಟೀನು ಶೈಲಿಯ ಹಣತೆಗಳನ್ನು ಕೊಳ್ಳಿರಿ. ಇವು ಮಾರ್ಕೆಟ್ ನಲ್ಲಿ ವಿಭಿನ್ನ ಬಣ್ಣಗಳಲ್ಲಿ ಸುಲಭವಾಗಿ ಸಿಗುತ್ತವೆ. ಇದರಿಂದ ನೀವು ದೀಪ ಹಚ್ಚಿ, ಮನೆಯನ್ನು ಅಲಂಕರಿಸಿ. ಇದರ ಬೆಳಕು ದೂರ ದೂರದವರೆಗೂ ಹರಡುತ್ತದೆ, ಮನೆ ನಿಜ ಅರ್ಥದಲ್ಲಿ ಜಗಮಗಿಸ ತೊಡಗುತ್ತದೆ!
ಇದರ ಹೊರತಾಗಿ ನೀವು ಬಣ್ಣಬಣ್ಣದ ಬ್ಯೂಟಿಫುಲ್ ಜಾರ್ ಸ್ಟೈಲ್ ದೀಪಗಳನ್ನು ಸಹ ಬಳಸಿಕೊಳ್ಳಬಹುದು. ಇದೂ ಮಾರುಕಟ್ಟೆಯಲ್ಲಿ ಸುಲಭ ಲಭ್ಯ. ಇದರ ಒಳಗೆ ಹಣತೆ ಇರಿಸಿ, ನೀವು ನಿಮ್ಮ ಮನೆಯ ಗೃಹಾಲಂಕಾರಕ್ಕೆ ಹೆಚ್ಚಿನ ಮೆರುಗು ನೀಡಬಹುದು.
ಕಲರ್ ಫುಲ್ ಲೈಟಿಂಗ್ ರೋಲರ್
ದೀಪಾವಳಿಯ 3 ದಿನಗಳಲ್ಲೂ ಮನೆ ಶಾಂತಿಯುತವಾಗಿ ಹೊಳೆಯುತ್ತಿರಲು, ಮನೆಯೊಳಗೂ, ಹೊರಗೂ ಎಲೆಕ್ಟ್ರಿಕಲ್ ಸೀರಿಯಲ್ ಸೆಟ್ ನ ಸಣ್ಣ ಬಲ್ಬುಗಳ ಮಾಲೆ ಇಳಿಬಿಡಿ. ವಿಭಿನ್ನ ಡಿಸೈನ್ ಹಾಗೂ ಕಲರ್ಸ್ವುಳ್ಳ ರೋಲರ್ ಗಳು ಮಾರ್ಕೆಟ್ ನಲ್ಲಿ ಲಭ್ಯವಿವೆ. ಅಂದ್ರೆ ದೀಪದ ಶೇಪ್ ವುಳ್ಳ ರೋಲರ್, ಹೊತ್ತಿಕೊಂಡ ನಂತರ ಬಹಳ ಸೊಗಸಾಗಿ ಕಾಣುತ್ತದೆ. ಫೇರಿ ಲೈಟ್ಸ್ ನಿಂದ ಮನೆಯ ಹೊರಭಾಗಗಳನ್ನು ಶೋಭಾಯಮಾನಗೊಳಿಸಬಹುದು. ಕಲರ್ ಫುಲ್ ಲೈಟ್ಸ್ ಮಾತ್ರವಲ್ಲದೆ, ಪೈಪ್ ನ ರೋಲರ್ ಡೆಕೋರೇಶನ್ ಬಲು ಸುಂದರ ಎನಿಸುತ್ತದೆ. ಇದನ್ನು ನೀವು ಕಿಟಕಿ, ಕೋಣೆಗಳು, ಹಿಂಭಾಗಕ್ಕೂ ಬಳಸಿಕೊಳ್ಳಬಹುದು. ನೀವು ಬಲ್ಬ್ ನಲ್ಲಿ ಹಲವು ತರಹದ ಡಿಸೈನ್ಸ್, ಬಣ್ಣಗಳನ್ನು ಖರೀದಿಸಿ ಮನೆಯ ಅಲಂಕಾರದ ಸೊಬಗು ಹೆಚ್ಚಿಸಿ.
– ಡಿ.ಆರ್. ದಿವ್ಯಾ





