ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಮುಂದುವರಿದಿದ್ದು, ಭಾರೀ ಮಳೆಗೆ ಜನಜೀವನ ತತ್ತರಿಸುವಂತಾಗಿದೆ. ವಿಶೇಷವಾಗಿ ಚಾರ್ಮಾಡಿ ಘಾಟಿ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯ ತೀವ್ರತೆಯಿಂದ ಘಾಟಿ ಭಾಗದಲ್ಲಿ ಗುಡ್ಡದ ಮೇಲಿನಿಂದ ಮಣ್ಣು ಜರಿಯುತ್ತಿರುವುದು ಆತಂಕ ಹುಟ್ಟಿಸಿವೆ. ಮಳೆ ನೀರಿನೊಂದಿಗೆ ಮಣ್ಣು ಮತ್ತು ಸಣ್ಣ ಕಲ್ಲುಗಳು ರಸ್ತೆಗೆ ಹರಿದು ಬರುತ್ತಿರುವುದರಿಂದ ಮೂಡಿಗೆರೆ-ಮಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯ ಭೀತಿ ಎದುರಾಗಿದೆ.

ಕಳೆದ ಕೆಲವು ದಿನಗಳಿಂದ ಚಿಕ್ಕಮಗಳೂರು, ಮೂಡಿಗೆರೆ, ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ಘಾಟಿ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಅದರ ಪರಿಣಾಮವಾಗಿ ಬೆಟ್ಟ-ಗುಡ್ಡಗಳ ಮಣ್ಣು ಸಡಿಲಗೊಂಡಿದ್ದು, ಹಲವೆಡೆ ಜಾರಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಚಾರ್ಮಾಡಿ ಘಾಟಿಯ ಕೆಲ ತಿರುವುಗಳಲ್ಲಿ ಮಣ್ಣು ಜರಿಯುತ್ತಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ವಿಶೇಷವಾಗಿ ರಾತ್ರಿ ಮತ್ತು ಬೆಳಗಿನ ಜಾವ ಮಳೆ ಹೆಚ್ಚಾದಾಗ ರಸ್ತೆ ಕುಸಿಯುತ್ತಿರುವುದು ಮತ್ತಷ್ಟು ಅಪಾಯಕ್ಕೆ ಕಾರಣವಾಗಿದೆ.ಚಾರ್ಮಾಡಿ ಘಾಟಿ ಮೂಡಿಗೆರೆಯನ್ನು ಮಂಗಳೂರಿನೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಈ ಹೆದ್ದಾರಿಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಮಳೆಯ ತೀವ್ರತೆಯಿಂದಾಗಿ ರಸ್ತೆ ಬದಿಯ ಗುಡ್ಡಗಳು ಸಡಿಲಗೊಂಡು ಮಣ್ಣು ರಸ್ತೆಯತ್ತ ಜಾರುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಕೆಲವು ಕಡೆ ನೀರು ವೇಗವಾಗಿ ಹರಿದು ರಸ್ತೆಯ ಬದಿಗಳಲ್ಲಿ ನಿಲ್ಲುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಭೂಕುಸಿತ ಅಥವಾ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮಳೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯ ಪ್ರಯಾಣ ತಪ್ಪಿಸುವಂತೆ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವಾಗ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಜಿಲ್ಲಾಡಳಿತ ಮತ್ತು ಹೆದ್ದಾರಿ ನಿರ್ವಹಣಾ ಸಿಬ್ಬಂದಿ ಮಣ್ಣು ಜಾರುವ ಪ್ರದೇಶಗಳ ಮೇಲೆ ನಿಗಾ ವಹಿಸಿದ್ದು, ಅಗತ್ಯವಿದ್ದಲ್ಲಿ ತಕ್ಷಣ ತೆರವು ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದಾರೆ. ಮಳೆ ಇನ್ನೂ ಕೆಲವು ದಿನ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಗುಡ್ಡ ಕುಸಿತ ಭೀತಿ ಹೆಚ್ಚಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ