ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಮೊದಲ ವಿಡಿಯೊ ಸಾಂಗ್ ‘ತಬಾಹಿ’ ಬುಧವಾರ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಬೆಳಿಗ್ಗೆ 11.33ಕ್ಕೆ ಬಿಡುಗಡೆಯಾದ ಈ ಹಾಡಿನಲ್ಲಿ ಯಶ್ ಹಾಗೂ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರ ಬೋಲ್ಡ್ ಮತ್ತು ಗ್ಲಾಮರಸ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಲಿರಿಕಲ್ ಸಾಂಗ್ ಉತ್ತಮ ಪ್ರತಿಕ್ರಿಯೆ ಪಡೆದಿದ್ದರೆ, ಇದೀಗ ಬಿಡುಗಡೆಯಾಗಿರುವ ವಿಡಿಯೊ ಸಾಂಗ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಡಿನುದ್ದಕ್ಕೂ ಯಶ್ ಮತ್ತು ಕಿಯಾರಾ ನಡುವಿನ ರೊಮ್ಯಾಂಟಿಕ್ ದೃಶ್ಯಗಳು, ಅದ್ದೂರಿ ಸೆಟ್‌ಗಳು ಗಮನ ಸೆಳೆಯುತ್ತಿವೆ.
ಚಿತ್ರದಲ್ಲಿ ಯಶ್ ‘ರಾಯ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ ‘ರುಮಿ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಡಿನ ಕೆಲವು ದೃಶ್ಯಗಳಲ್ಲಿ ನಟಿ ನಯನತಾರಾ ಕೂಡ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಯಶ್ ಇಂತಹ ಬೋಲ್ಡ್ ಆಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
‘ತಬಾಹಿ’ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಹಾಡಿನ ದೃಶ್ಯ ವೈಭವ, ನೃತ್ಯ ಸಂಯೋಜನೆ ಮತ್ತು ಛಾಯಾಗ್ರಹಣ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿವೆ.
ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಇದೀಗ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ಈ ಚಿತ್ರವನ್ನು ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಈಗ ಬಿಡುಗಡೆಯಾಗಿರುವ ‘ತಬಾಹಿ’ ವಿಡಿಯೊ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.





