–  ರಾಘವೇಂದ್ರ ಅಡಿಗ ಎಚ್ಚೆನ್.

ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ ರಿಚರ್ಡ್ ಆ್ಯಂಟನಿಚಿತ್ರದ ಕುರಿತು ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಮಹತ್ವದ ಅಪ್ಡೇಟ್ ನೀಡಿದ್ದಾರೆ. ಚಿತ್ರದ ಕೆಲಸ ಆರಂಭಕ್ಕೆ ಇಡೀ ತಂಡ ಸಜ್ಜಾಗಿದ್ದು, ಶೂಟಿಂಗ್ ಆರಂಭವಾಗುವುದು ಮಾತ್ರ ಬಾಕಿಯಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅಜನೀಶ್ ಲೋಕನಾಥ್, “ನಾನು ರೆಡಿ, ರಕ್ಷಿತ್ ಶೆಟ್ಟಿ ರೆಡಿ, ಇಡೀ ತಂಡ ರೆಡಿ. ಅಭಿಮಾನಿಗಳೂ ಕಾಯುತ್ತಿದ್ದಾರೆ. ಈಗ ಶೂಟಿಂಗ್ ಆರಂಭವಾಗುವುದು ಮಾತ್ರ ಬಾಕಿಯಿದೆ” ಎಂದು ಹೇಳಿದರು.

ಚಿತ್ರದ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ ಅವರು, “‘ರಿಚರ್ಡ್ ಆ್ಯಂಟನಿ’ ಸಿನಿಮಾ ಬಿಡುಗಡೆಯಾದಾಗ ಅದು ಸಾಮಾನ್ಯ ಸಿನಿಮಾ ಆಗಿರುವುದಿಲ್ಲ. ಅದು ನ್ಯೂಕ್ಲಿಯರ್ ಬಾಂಬ್‌ನಂತೆ ಸದ್ದು ಮಾಡಲಿದೆ. ರಕ್ಷಿತ್ ಶೆಟ್ಟಿ ಅತ್ಯಂತ ದೊಡ್ಡ ಕಲ್ಪನೆ ಮತ್ತು ಭಿನ್ನ ದೃಷ್ಟಿಕೋನದೊಂದಿಗೆ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ” ಎಂದು ಹೇಳಿದರು.

ಚಿತ್ರದ ಪ್ರತಿಯೊಬ್ಬ ತಂತ್ರಜ್ಞರೂ ಈ ಪ್ರಾಜೆಕ್ಟ್‌ಗಾಗಿ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದಾರೆ ಎಂದು ತಿಳಿಸಿದ ಅಜನೀಶ್, ತಾವೂ ಸಹ ಆ ಕ್ಷಣಕ್ಕಾಗಿ ಕೌಂಟ್‌ಡೌನ್ ಆರಂಭಿಸಿರುವುದಾಗಿ ಹೇಳಿದರು.

ರಕ್ಷಿತ್ ಶೆಟ್ಟಿ ಅವರ ಸೂಪರ್‌ಹಿಟ್ ಸಿನಿಮಾ ‘ಉಳಿದವರು ಕಂಡಂತೆ’ ಚಿತ್ರದ ಮುಂದುವರಿದ ಭಾಗವಾಗಿ ಮೂಡಿಬರುತ್ತಿರುವ ‘ರಿಚರ್ಡ್ ಆ್ಯಂಟನಿ’, ಅದೇ ಚಿತ್ರದ ಜನಪ್ರಿಯ ‘ರಿಚ್ಚಿ’ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಸಾಗಲಿದ್ದು, ಚಿತ್ರಕ್ಕಾಗಿ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ