ಯಾವುದೇ ಪರಿಶ್ರಮವಿಲ್ಲದೆ ಎಲ್ಲಿಂದಲೂ ಲಕ್ಷ್ಮಿ ಬರುವುದಿಲ್ಲ, ಅಂದರೆ ಹಣ ಬರುವುದಿಲ್ಲ. ಅದು ನಿಮ್ಮ ಬುದ್ಧಿವಂತಿಕೆ ಹಾಗೂ ಉಳಿತಾಯದಿಂದ ಮಾತ್ರ ಸಾಧ್ಯ…..!

ದೀಪಾವಳಿ ಸಮಯದಲ್ಲಿ ಖರ್ಚು ಮಾಡುವುದು ಸಾಮಾನ್ಯ. ಆದರೆ ಇಂದಿನ ಕಾಲದಲ್ಲಿ ಉಳಿತಾಯ ಕೂಡಾ ಬಹಳ ಮುಖ್ಯ. ಈ ದೀಪಾವಳಿಯಿಂದ ನೀವು ಉಳಿತಾಯ ಮಾಡುವ ಸಂಕಲ್ಪ ಮಾಡಿದರೆ, ಅದು ನಿಮ್ಮ ಆರ್ಥಿಕ ಪ್ರಗತಿಗೆ ಒಂದು ದೊಡ್ಡ ಹೆಜ್ಜೆಯಾಗುತ್ತದೆ. ಮನೆಗೆ ಬಜೆಟ್‌ ಮಾಡುವುದು, ಅಗತ್ಯವಿದ್ದಾಗ ಮಾತ್ರ ಶಾಪಿಂಗ್‌ ಮಾಡುವುದು, ಏನನ್ನಾದರೂ ಖರೀದಿಸುವಾಗ ಚೌಕಾಶಿ ಮಾಡುವುದು ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ಮೂಲಕ ನೀವು ಬಹಳಷ್ಟು ಉಳಿತಾಯ ಮಾಡಬಹುದು.

ಆರ್ಥಿಕವಾಗಿ ಬಲಿಷ್ಟರಾಗಲು ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಈ ದೀಪಾವಳಿಯಿಂದಲೇ ನೀವು ಆರ್ಥಿಕ ಶಿಸ್ತನ್ನು ತರಲು ಪ್ರಾರಂಭಿಸಬೇಕು. ಯಾವುದೇ ಒಳ್ಳೆಯ ಕೆಲಸವನ್ನು ಪ್ರಾರಂಭಿಸಲು ದೀಪಾವಳಿಯನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಕಠಿಣ ಪರಿಶ್ರಮವಿಲ್ಲದೆ ಲಕ್ಷ್ಮಿ ಅಂದರೆ ಹಣ ಎಲ್ಲಿಂದಲೂ ಬರುವುದಿಲ್ಲ. ಅದು ನಿಮ್ಮ ಬುದ್ಧಿವಂತಿಕೆ ಮತ್ತು ಉಳಿತಾಯದಿಂದ ಮಾತ್ರ ಸಾಧ್ಯ.

ಆರ್ಥಿಕ ಶಿಸ್ತುಬದ್ಧತೆ ಕಲಿಯಿರಿ

ಹಣ ಉಳಿತಾಯ ಮಾಡುವುದು ಎಷ್ಟು ಅಗತ್ಯ ಎಂಬುದನ್ನು ಕೋವಿಡ್‌ ನಮ್ಮೆಲ್ಲರಿಗೂ ಮನವರಿಕೆ ಮಾಡಿಕೊಟ್ಟಿದೆ. ಹಾಗಾಗಿ ಉಳಿತಾಯ ಮಾಡುವುದು ಜೀವನದಲ್ಲಿ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಏಕೆಂದರೆ ಒಬ್ಬ ವ್ಯಕ್ತಿ ಬದುಕಿರುವವರೆಗೆ ಹಣದ ಅಗತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ.

ಬಜೆಟ್‌ ಮಾಡುವುದು ಹಳೇ ಸ್ಟೈಲ್ ‌ಎಂಬಂತೆ ಕಾಣಿಸಬಹುದು. ಆದರೆ ಅದು ಆರ್ಥಿಕ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಏಕೆಂದರೆ ಈ ಅಭ್ಯಾಸ ವ್ಯಕ್ತಿಗೆ ಪ್ರಯೋಜನಕಾರಿ ಆಗಿರುತ್ತದೆ.

ಡಿಸ್ಕೌಂಟ್ಲಾಭ ಪಡೆದುಕೊಳ್ಳಿ

ದೀಪಾವಳಿ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ನಾನಾ ಬಗೆಯ ವಸ್ತುಗಳ ಬೆಲೆಯಲ್ಲಿ ಡಿಸ್ಕೌಂಟ್‌ ದೊರೆಯುತ್ತದೆ. ಅವುಗಳನ್ನು ಪರಿಶೀಲಿಸುವುದು ಬಹಳ ಮುಖ್ಯ. ನೀವು ಎಲ್ಲಿಗೇ ಶಾಪಿಂಗ್‌ ಹೋದರೂ, ಇತರ ಅಂಗಡಿಗಳೊಂದಿಗೆ ಬೆಲೆಗಳನ್ನು ಹೋಲಿಕೆ ಮಾಡಿ ನೋಡಿ. ಇದು ನಿಮಗೆ ಕಡಿಮೆ ಬೆಲೆಗೆ ಉತ್ತಮ ಉತ್ಪನ್ನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಎಲೆಕ್ಟ್ರಾನಿಕ್ಸ್ ಗೃಹಪಯೋಗಿ ವಸ್ತು, ಬಟ್ಟೆ ಸಹ ಮಾರಾಟದ ಸಮಯದಲ್ಲಿ ಭಾರಿ ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಅಗತ್ಯವಾದ ವಸ್ತುಗಳನ್ನು ಮಾತ್ರ ಖರೀದಿಸಿ. ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ ಎಂಬ ಕಾರಣಕ್ಕಾಗಿ ಅನಗತ್ಯ ವಸ್ತುಗಳ ಮೇಲೆ ಅಜಾಗರೂಕತೆಯಿಂದ ಖರ್ಚು ಮಾಡಬೇಡಿ.

ಹೂಡಿಕೆಗಳನ್ನು ಮಾಡಿ

ಮನೆಯ ಬೀರುವಿನಲ್ಲಿ ಇಡುವ ಹಣ ಯಾವಾಗಲೂ ಖರ್ಚಾಗುತ್ತಲೇ ಇರುತ್ತದೆ. ಆದ್ದರಿಂದ ನೀವು ಅದನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ, ನಿಮಗೆ ಬಡ್ಡಿಯೊಂದಿಗೆ ಉತ್ತಮ ಮೊತ್ತ ಕೂಡ ದೊರೆಯುತ್ತದೆ. ಈ ದೀಪಾವಳಿಯಂದು ನೀವು ಒಂದು ಸಂಕಲ್ಪ ತೆಗೆದುಕೊಳ್ಳಬಹುದು. ಉದಾಹರಣೆಗೆ, ನೀವು ಪ್ರತಿ ತಿಂಗಳು ಮರುಕಳಿಸುವ ಠೇವಣಿಯಲ್ಲಿ ಹಣವನ್ನು ಹೂಡಬಹುದು ಅಥವಾ  ಎಸ್‌.ಐ.ಪಿ ಮೂಲಕ ಮ್ಯೂಚುಯೆಲ್ ‌ಫಂಡ್‌ ಗಳಲ್ಲಿ ಹೂಡಿಕೆ ಮಾಡಬಹುದು. ಅಂತಹ ನಿಯಮಿತ ಹೂಡಿಕೆಯು ದೀರ್ಘಾವಧಿಯಲ್ಲಿ ಸಂಪತ್ತಿನ ಸೃಷ್ಟಿಕರ್ತ ಎಂದು ಸಾಬೀತುಪಡಿಸುತ್ತದೆ. ನೀವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಗೆ ಉಳಿತಾಯ ಮಾಡಬಹುದು.

ಬಜೆಟ್ನಿರ್ಧರಿಸಿ

ದೀಪಾವಳಿಗೆ ಖರ್ಚು ಮಾಡು ಮೊದಲು, ನಿಮ್ಮ ಬಜೆಟ್‌ ನ್ನು ನಿರ್ಧರಿಸಿ ಹಾಗೂ ನೀವು ಖರ್ಚು ಮಾಡುವ ಪ್ರತಿ ಪೈಸೆಯನ್ನು ಟ್ರ್ಯಾಕ್‌ ಮಾಡಿ. ಇದು ನಿಮ್ಮ ಬಜೆಟ್‌ ನ್ನು ನಿಮ್ಮ ಖರ್ಚಿನೊಂದಿಗೆ ಹೊಂದಿಸಲು ಮತ್ತು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದುಬಾರಿ ಖರ್ಚುಗಳನ್ನು ಮುಂದೂಡಿ

ಈ ದೀಪಾವಳಿಗೆ ನೀವು ನಿಮ್ಮ ಹಳೆಯ ಕಾರನ್ನು ಮಾರಿ ಹೊಸ ಕಾರನ್ನು ಖರೀದಿಸುವುದು, ನಿಮ್ಮ ಮನೆಗೆ ಬಣ್ಣ ಬಳಿಯುವುದು ಅಥವಾ ಯಾವುದೇ ಇತರ ದುಬಾರಿ ಗ್ಯಾಜೆಟ್‌ ಖರೀದಿಸುವಂಥ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ಅದನ್ನು ಕನಿಷ್ಠ ಒಂದು ತಿಂಗಳು ಮುಂದೂಡಲು ಸಹ ನಿರ್ಧರಿಸಬಹುದು. ಇದು ಒಂದು ತಿಂಗಳ ನಂತರ ಆ ವಸ್ತುಗಳಿಗೆ ಖರ್ಚು ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಅನಗತ್ಯವಾಗಿ ಬಹಳಷ್ಟು ಹಣ ಖರ್ಚು ಮಾಡುವುದನ್ನು ತಪ್ಪಿಸುತ್ತದೆ.

ತಜ್ಞರ ಸಲಹೆಗಳು

ಫೈನಾನ್ಶಿಯಲ್ ಎಕ್ಸ್ ಪರ್ಟ್‌ ಹೇಳುವಂತೆ, ಹೆಚ್ಚಿನ ಜನರು ದೀಪಾವಳಿಯಂದು ಬೋನಸ್‌ ಪಡೆಯುತ್ತಾರೆ. ಆದರೆ ಆ ಹಣವನ್ನು ಖರ್ಚು ಮಾಡುವ ಬಗ್ಗೆ ಯೋಚಿಸುತ್ತಾರೆಯೇ ಹೊರತು ಉಳಿತಾಯ ಮಾಡುವುದರ ಬಗ್ಗೆ ಅಲ್ಲ. ಈ ವರ್ಷ ಖಂಡಿತವಾಗಿಯೂ ಬೋನಸ್‌ ಉಳಿಸುವ ಬಗ್ಗೆ ಯೋಚಿಸಿ. ಬೋನಸ್‌ ಹಣದಲ್ಲಿ 50% ಹೂಡಿಕೆ ಮಾಡಿ. ಅಪಾಯದ ಪ್ರೊಫೈಲ್ ‌ನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿ. ಈ ದಿಕ್ಕಿನಲ್ಲಿ ಮ್ಯೂಚುಯೆಲ್ ‌ಫಂಡ್ಸ್ ದೀರ್ಘಾವಧಿಯ ಹೂಡಿಕೆಯಾಗಿದ್ದು, ಇದು ಹಣ ಉಳಿಸಲು ಸಹಾಯ ಮಾಡುತ್ತದೆ. ಪ್ರತಿ ವರ್ಷ 50% ಬೋನಸ್‌ ಎಂದರೆ, ನೀವು 1 ಲಕ್ಷ ರೂ. ಬೋನಸ್‌ ಪಡೆದರೆ, 30 ವರ್ಷಗಳ ಕಾಲು ಮ್ಯೂಚುಯೆಲ್ ‌ಫಂಡ್‌ ಗಳಲ್ಲಿ ಪ್ರತಿ ವರ್ಷ 50 ಸಾವಿರ ರೂ. ಹೂಡಿಕೆ ಮಾಡಿದರೆ, ನಿವೃತ್ತಿ ನಂತರ ನಿಮಗೆ ಸುಮಾರು 1 ಕೋಟಿ ರೂ. ಸಿಗುತ್ತದೆ. ಇದಲ್ಲದೆ, ನೀವು ಸಾರ್ವಜನಿಕ ಭವಿಷ್ಯ ನಿಧಿ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ನಿಮಗೆ ಅದು ಇಷ್ಟವಿಲ್ಲದಿದ್ದರೆ, ನೀವು ಬ್ಯಾಂಕಿನಲ್ಲಿಯೂ ಉಳಿಸಬಹುದು. ಅಂದರೆ ದೀಪಾವಳಿಗೆ ಖರ್ಚು ಮಾಡುವುದಕ್ಕಿಂತ ಉಳಿತಾಯದ ಮೇಲೆ ಹೆಚ್ಚು ಗಮನಹರಿಸುವುದು ಮುಖ್ಯ.

ಸುಮಾ ಜಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ