ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಉಪ್ಪಿ ದಾದ ಎಂ.ಬಿ.ಬಿ.ಎಸ್ ಸಿನಿಮಾದಲ್ಲಿ ಛಾಪು ಮೂಡಿಸಿದ್ದ ಬಹುಭಾಷಾ ನಟಿ ಉಮಾ ಶಂಕರಿ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ಈ ಆಘಾತಕಾರಿ ಸುದ್ದಿಯನ್ನು ಉಮಾ ಶಂಕರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಅವರ ಈ ಭಾವನಾತ್ಮಕ ಪೋಸ್ಟ್ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ತೀವ್ರ ಕಳವಳ ಉಂಟುಮಾಡಿದೆ.
ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಉಮಾ ಶಂಕರಿ ಮದುವೆಯ ನಂತರ ನಟನೆಯಿಂದ ದೂರ ಉಳಿದಿದ್ದರು. ಇದೀಗ ತಮಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಎರಡನೇ ಸುತ್ತಿನ ಕಿಮೊಥೆರಪಿ ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ನಾನು ಎರಡನೇ ಸುತ್ತಿನ ಕೀಮೋಥೆರಪಿ ಮತ್ತು ಇಮ್ಯೂನೋಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದ್ದು, ಪ್ರತಿಯೊಂದು ದಿನವನ್ನೂ ಧೈರ್ಯದಿಂದ ಎದುರಿಸುತ್ತಿದ್ದೇನೆ. ಆದಾಗ್ಯೂ, ನೋವಿನಿಂದ ಕೂಡಿರುವ ಭಾರವಾದ ದಿನಗಳನ್ನು ಹೇಗೆ ನಿಭಾಯಿಸಬೇಕೆಂದು ನಾನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಕಷ್ಟದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತಿರುವ ಕುಟುಂಬಸ್ಥರಿಗೆ ಹಾಗೂ ಅಪಾರ ಪ್ರೀತಿ ಮತ್ತು ಧೈರ್ಯ ನೀಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದು, ತಾವು ಚಿಕಿತ್ಸೆಗೆ ಸ್ಪಂದಿಸುತ್ತಾ ಗುಣಮುಖರಾಗುವತ್ತ ಸಂಪೂರ್ಣ ಗಮನ ಹರಿಸುತ್ತಿದ್ದೇನೆ ಎಂದು ತಮ್ಮ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.





