ಶಿಶುಗಳ ಚರ್ಮ ಬಲು ಸೂಕ್ಷ್ಮ, ನಾಜೂಕು. ಹೀಗಾಗಿ ಬೇಬಿ ಸ್ಕಿನ್ಕೇರ್ಬಗ್ಗೆ ಸಲಹೆಗಳನ್ನು ಗುರುತಿಸಿ…..

ನವಜಾತ ಶಿಶುಗಳ ಚರ್ಮ ಬಲು ನಾಜೂಕು ಹಾಗೂ ಸಂವೇದನಾಶೀಲ. ಹಿರಿಯರು ಬಳಸುವಂಥ ಸಾಬೂನು, ಶ್ಯಾಂಪೂ, ಆಯಿಲ್, ಡಿಟರ್ಜೆಂಟ್‌, ಪೌಡರ್‌ ಇತ್ಯಾದಿಗಳಲ್ಲಿನ ರಾಸಾಯನಿಕಗಳು ಅವುಗಳ ಚರ್ಮಕ್ಕೆ ಬಲು ಹಾನಿ ಉಂಟು ಮಾಡುತ್ತವೆ. ಇದರಿಂದ ಮಗುವಿನ ಚರ್ಮದಲ್ಲಿ ಉರಿ, ಡ್ರೈನೆಸ್‌, ರಾಶೆಸ್‌ ಇತ್ಯಾದಿ ಸಮಸ್ಯೆ ಕಾಡಬಹುದು. ಇದೇ ತರಹ ಸುವಾಸನೆಯುಳ್ಳ ಬೇಬಿ ಪ್ರಾಡಕ್ಟ್ಸ್ ನ್ನೂ ಎಂದೂ ಬಳಸದಿರಿ.

ಹಾಗಾದರೆ ಮಗುವಿನ ಚರ್ಮ ಸದಾ ಕೋಮಲವಾಗಿರಲು ಅನುಸರಿಸಬೇಕಾದ ಸಲಹೆಗಳೇನು? :

ಸ್ನಾನ : ಮಗು ಹುಟ್ಟಿದ ಮೊದಲ ತಿಂಗಳಲ್ಲಿ, ವಾರಕ್ಕೆ 3-4 ಸಲ ಅಗತ್ಯವಾಗಿ ಸ್ಪಂಜ್‌ ಬಾಥ್‌ ಕೊಡಿ. ಹಾಲು ಕುಡಿಸಿದ ನಂತರ ಬಾಯನ್ನು ಸ್ಪಂಜ್‌ ನಿಂದ ಒರೆಸಿರಿ. ಡೈಪರ್‌ ಬದಲಾಯಿಸಿದ ನಂತರ, ಆ ಭಾಗವನ್ನು ಸ್ಪಂಜ್‌ ನಿಂದ ನೀಟಾಗಿ ಒರೆಸಿಕೊಳ್ಳಿ. ಮಗವಿಗೆ 2ನೇ ತಿಂಗಳಲ್ಲಿ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿಸಿ, ಕುದಿನೀರು ಬೇಡ. ಮೈಲ್ಡ್  ಸೋಪ್‌, ಆ್ಯಂಟಿ ಬ್ಯಾಕ್ಟೀರಿಯಲ್ ಸೋಪ್‌ ಇತ್ಯಾದಿ ಬಳಸಲೇಬೇಡಿ. ಇಲ್ಲದಿದ್ದರೆ ಇವು ಮಗುವಿನ ಸಂವೇದನಾಶೀಲ ಚರ್ಮವನ್ನು ಹಾಳು ಮಾಡಿಯಾವು. ಸ್ನಾನದ ನಂತರ ಕಾಟನ್ನಿನ ಮೃದು ಟವೆಲ್ ‌ನಿಂದ ನಿಧಾನವಾಗಿ ಒರೆಸಬೇಕು, ಮಗುವಿನ ಕೋಮಲ ಚರ್ಮಕ್ಕೆ ಯಾವುದೇ ಹಾನಿ ಆಗದಂತೆ ಎಚ್ಚರವಹಿಸಿ.

ಪೌಡರ್‌ : ಹ್ಞಾಂ, ಇಲ್ಲೂ ಎಚ್ಚರವಹಿಸಿ. ಹಿರಿಯರ ಫೇಸ್‌ ಪೌಡರ್‌ ಬೇಡ. ಬೇಬಿ ಟಾಲ್ಕಂ ಪೌಡರ್‌ ನ್ನೇ ಬಳಸಬೇಕು. ಸುವಾಸನೆ ತುಂಬಿದ, ಹೆಚ್ಚಿನ ರಾಸಾಯನಿಕ ಬೆರೆಸಲ್ಪಟ್ಟ ಪೌಡರ್‌ ಬಳಸದಿರಿ, ಡೈಪರ್‌ ಏರಿಯಾಗೆ ಪೌಡರ್‌ ಬೇಡ.

ಮಸಾಜ್‌ : ನವಜಾತ, ಸಣ್ಣ ಶಿಶುಗಳ ಮೈ ಚರ್ಮ ಬಲು ನಾಜೂಕು. ಹೀಗಾಗಿ ಅವುಗಳ ಮಸಾಜ್‌ ಮಾಡುವ ಮೊದಲು ಮಸಾಜ್‌ ಮಾಡುವ ಟೆಕ್ನಿಕ್ಸ್, ಎಂಥ ಬೇಬಿ ಆಯಿಲ್ ಬಳಸಬೇಕು ಇತ್ಯಾದಿ ಚೆಕ್‌ ಮಾಡಿ. ಎಷ್ಟು ಹೊತ್ತು ಮಸಾಜ್‌ ಮಾಡಬೇಕು, ಯಾವಾಗ ಮಾಡಬಾರದು ಇತ್ಯಾದಿಗಳ ಮಾಹಿತಿ ಅಗತ್ಯವಾಗಿ ಸಂಗ್ರಹಿಸಿ. ಮಕ್ಕಳ ವಿಶೇಷ ಅಗತ್ಯಗಳ ಅನುಸಾರ, ಮಸಾಜ್‌ ನ ವಿಭಿನ್ನ ಟೆಕ್ನಿಕ್ಸ್ ಬಳಸಿಕೊಳ್ಳಿ.

ಮಸಾಜ್‌ ನ ಸಾಮಾನ್ಯ ವಿಧಾನ ಅನುಸರಿಸುವುದೇ ಸರಿ. ನಿಮ್ಮ ತಾಯಿ, ಅತ್ತೆ ಅಥವಾ ಹಿರಿಯ ಮಹಿಳೆಯರಿಂದ ಇದನ್ನು ಕಲಿತು ಅನುಸರಿಸಿ. ಮಕ್ಕಳದು ಬಲು ಸೆನ್ಸಿಟಿವ್ ‌ಸ್ಕಿನ್‌, ಹೀಗಾಗಿ ಹಾರ್ಶ್‌ ಕೆಮಿಕಲ್ಸ್ ಬೆರೆತ ಬೇಬಿ ಆಯಿಲ್ ‌ಬಳಸಲೇಬೇಡಿ. ಗಾಣವಾಡಿದ ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಶಿಶುಗಳ ಚರ್ಮಕ್ಕೆ ಬಲು ಹಿತಕರ. ಕಾಲು ಚಾಚಿ, ಅದರ ಮೇಲೆ ದಪ್ಪ ಟರ್ಕಿ ಟವೆಲ್ ಹರಡಿಕೊಂಡು, ಮಗುವನ್ನು ಮಲಗಿಸಿಕೊಂಡು (ಅಂಗಾತ ಹಾಗೂ ಬೋರಲು), ಎಣ್ಣೆ ಹಚ್ಚಿ ನೀವುತ್ತಾ, ನೀಟಾಗಿ ಮಸಾಜ್ ಮಾಡಿ.

ಡೈಪರ್ನ್ಯಾಪೀಸ್‌ : ಮಗುವಿಗಾಗಿ ನ್ಯಾಪಿ ಆರಿಸುವಾಗ ಬಲು ಎಚ್ಚರಿಕೆ ವಹಿಸಿ. ಇದನ್ನು ಕೊಳ್ಳುವಾಗ, ಅದರ ಫಿಟ್ಟಿಂಗ್ಸ್ ಸವರಿ ಇದೆ ತಾನೇ ಎಂದು ಪರೀಕ್ಷಿಸಿ. ಅದರ ಹೀರಿಕೊಳ್ಳುವ ಗುಣ ಹಿರಿದಾಗಿರಬೇಕು. ಅದರ ಫ್ಯಾಬ್ರಿಕ್‌ ಮಗುವಿನ ಸೆನ್ಸಿಟಿವ್ ‌ಸ್ಕಿನ್‌ ಗೆ ಹಾನಿ ಉಂಟು ಮಾಡುವಂತಿರಬಾರದು.

ಸೀಸನ್‌ ಯಾವುದೇ ಇರಲಿ, ಕಾಟನ್‌/ಲಿನೆನ್‌ ನ್ಯಾಪಿ ಎಲ್ಲಕ್ಕಿಂತಲೂ ಉತ್ತಮ. ಈ ಫ್ಯಾಬ್ರಿಕ್‌ ಆರ್ದ್ರತೆಯನ್ನು ಬಲು ಬೇಗ ಹೀರಬಲ್ಲದು. ಎಷ್ಟೋ ಉತ್ತಮ ಗುಣಮಟ್ಟದ ಡಿಸ್ಪೋಸೆಬಲ್ ನ್ಯಾಪಿ ಸಹ ಮಾರುಕಟ್ಟೆಯಲ್ಲಿ ಲಭ್ಯ. ಪ್ರತಿ 3-4 ಗಂಟೆಗೊಮ್ಮೆ ನ್ಯಾಪಿ ಬದಲಾಯಿಸಿ, 5 ಗಂಟೆಗಿಂತ ಹೆಚ್ಚು ಖಂಡಿತಾ ಬೇಡ. ಎಷ್ಟು ಬೇಗ ನ್ಯಾಪಿ ಬದಲಾಯಿಸುತ್ತೀರೋ, ಇನ್‌ ಫೆಕ್ಷನ್‌ ಟೆನ್ಶನ್ಸ್ ಅಷ್ಟೇ ಕಡಿಮೆ!

ಬಟ್ಟೆಯ ನ್ಯಾಪಿ ಮಕ್ಕಳನ್ನು ಡ್ರೈ ಕಂಫರ್ಟೆಬಲ್ ಆಗಿಡುತ್ತದೆ. ಇವು ಮೃದುವಾದ ಮೈಕ್ರೋಫೈಬರ್‌ ನಿಂದ ರೂಪುಗೊಂಡಿರುತ್ತವೆ. ಇದರ ಹೀರುವಿಕೆಯ ಗುಣಮಟ್ಟ ಹಿರಿದಾಗಿರುತ್ತದೆ.

ಕೆಳಗಿನ ವಿಷಯಗಳನ್ನು ಮರೆಯಬೇಡಿ :

ಬಟ್ಟೆ : ಶಿಶುಗಳಿಗಾಗಿ ಬಟ್ಟೆ ಖರೀದಿಸುವಾಗ, ಅದನ್ನು ಧರಿಸಿ ಮಗು ಎಷ್ಟು ಸ್ಮಾರ್ಟ್‌ ಆಗಿ ಮಿಂಚಬಲ್ಲದೋ ಎಂದು ಮಾತ್ರ ಗಮನಿಸಬೇಡಿ. ಅದು ಬಲು ಮೃದು, ಆರಾಮದಾಯಕ ಆಗಿರಬೇಕು. ಇವು ಒಗೆಯಲಿಕ್ಕೂ ಈಝಿ ಆಗಿರಬೇಕು.

ಮಗುವಿನ ತ್ವಚೆಗೆ ಒಂದಿಷ್ಟೂ ಹಾನಿ ಆಗದಂಥ ಫ್ಯಾಬ್ರಿಕ್ಕೇ ಆಗಿರಬೇಕು. ಈ ನಿಟ್ಟಿನಲ್ಲಿ ಕಾಟನ್‌ ಬಲು ಉತ್ತಮ ಆಯ್ಕೆ. ಆದರೆ ಒಮ್ಮೊಮ್ಮೆ ಇವು ತುಸು ಶ್ರಿಂಕ್‌ ಆಗುತ್ತವೆ. ಹೊರ ಹಾಗೂ ಒಳಭಾಗಕ್ಕೆ ಬೇರೆ ಬೇರೆ ಡ್ರೆಸ್‌ ಆರಿಸುವ ಬದಲು, ಇವೆರಡೂ ಇರುವಂಥ ಒನ್‌ ಪೀಸ್‌ ಡ್ರೆಸ್‌ ಆರಿಸಿ. ಇನ್ನು ತೊಡಿಸಿ, ಕಳಚುವುದೂ ಸುಲಭ. ಇದರಿಂದ ಮಗುವಿನ ಮೈ ಮೇಲೆ ಗೀಚಿದಂತಾಗುವುದಿಲ್ಲ.

ಸೀಸನ್‌ ಗೆ ತಕ್ಕಂತೆ ಮಗುವಿಗೆ ಪಾಜಾಮ ತೊಡಿಸಿ. ಬೇಸಿಗೆಯಲ್ಲಿ ತುಸು ತೆಳ್ಳಗಿನ, ಚಳಿಗಾಲದಲ್ಲಿ ತುಸು ದಪ್ಪನೆಯ ಪಾಜಾಮಾ ಉತ್ತಮ ಆಯ್ಕೆ. ಇವು ತುಂಬಾ ಟೈಟ್‌ ಯಾ ಎಲಾಸ್ಟಿಕ್‌ ಅಳವಡಿಸಿದ್ದಾಗಿರಬಾರದು.

ಒಗೆಯುವಿಕೆ : ಮಗುವಿನ ಚರ್ಮ ತೀರಾ ಸೂಕ್ಷ್ಮ. ಹೀಗಾಗಿ ಮಕ್ಕಳ ಬಟ್ಟೆ ಒಗೆಯಲು ಸಾಮಾನ್ಯ ಡಿಟರ್ಜೆಂಟ್ಸ್ ಬಳಸಬೇಡಿ. ಬಣ್ಣಬಣ್ಣದ, ಸುವಾಸನೆ ಬೆರೆತ ಡಿಟರ್ಜೆಂಟ್ಸ್ ನ್ನಂತೂ ಬಳಸಲೇಬಾರದು. ಉಣ್ಣೆ ಬಟ್ಟೆ ಒಗೆಯಲು ಬಳಸುವಂಥ ಡಿಟರ್ಜೆಂಟ್ಸ್ ನ್ನೇ ಬಳಸಿಕೊಳ್ಳಿ. ಒಗೆದ ನಂತರ ಶಿಶುಗಳ ಬಟ್ಟೆಯನ್ನು ನೀರಿನಲ್ಲಿ ಚೆನ್ನಾಗಿ ಜಾಲಿಸಿ. ಆಗ ಅವುಗಳಲ್ಲಿ ಒಂದಿಷ್ಟೂ ಡಿಜರ್ಟೆಂಟ್ ಅಂಶ ಉಳಿದಿರಬಾರದು. ಎಂದಿಗಿಂತಲೂ ನಿಮ್ಮ ಮಗುವಿನ ಚರ್ಮ ಹೈ ಸೆನ್ಸಿಟಿವ್ ‌ಆಗಿದ್ದರೆ, ಆಗ ಕೇವಲ ಬೇಬಿ ಸ್ಪೆಸಿಫಿಕ್ ಡಿಟರ್ಜೆಂಟ್‌ ನ್ನಷ್ಟೇ ಬಳಸಬೇಕಾದೀತು.

ರಾಶೆಸ್‌ : ಮಗುವಿಗೆ ಬಹಳ ಹೊತ್ತಿನ ತನಕ ನ್ಯಾಪಿ ತೊಡಿಸಿರುವುದರಿಂದ, ಅದರ ನಿತಂಬ, ಸೊಂಟ, ತೊಡೆ ಸಂಧಿ ಬಳಿ ಕೆಂಪು ಕೆಂಪಾದ ರಾಶೆಸ್‌ ಕಾಣಿಸುವುದು ಸಹಜ. ಚರ್ಮ ಫೇಡ್ ‌ಆಗುವಂಥ ಕಡೆ ಈ ಬಾಧೆ ಹೆಚ್ಚು. ಇದಕ್ಕೆ ಮುಖ್ಯ ಕಾರಣ ಬಹಳ ಹೊತ್ತಿನವರೆಗೂ ಉಳಿದುಬಿಡುವ ಆರ್ದ್ರತೆಯ ಅಂಶ. ನ್ಯಾಪಿಯನ್ನು ಅತಿ ಟೈಟಾಗಿ ಬಿಗಿಯುವುದು ಸಹ ಮತ್ತೊಂದು ಕಾರಣ, ಸರಿಯಾಗಿ ಒಗೆಯದಿರುವುದು ಬೇರೆ ಕಾರಣ. ಅದರಲ್ಲಿನ ಸೋಪ್‌/ಡಿಟರ್ಜೆಂಟ್‌ ಅಂಶದ ಕೆಮಿಕಲ್ಸ್ ನಿಂದ ಈ ಬಾಧೆ ತಪ್ಪದು.

ಹಾಗಾದರೆ ಮಗುವನ್ನು ರಾಶೆಸ್ಕಾಡದಂತೆ ಕಾಪಾಡಿಕೊಳ್ಳುವುದು ಹೇಗೆ?

ನ್ಯಾಪಿ ಏರಿಯಾವನ್ನು ಸದಾ ಶುಚಿ, ಡ್ರೈ ಆಗಿ ಇರಿಸಬೇಕು. ಒದ್ದೆ ನ್ಯಾಪಿಗಳನ್ನು ತಕ್ಷಣ ಬದಲಾಯಿಸಿ. ಅದನ್ನು ಬದಲಿಸಿದ ನಂತರ ಮಗುವಿನ ಬಾಟಮ್ ಭಾಗವನ್ನು ಬೆಚ್ಚಗಿನ ನೀರಿನಿಂದ ತೊಳೆದು, ಒರೆಸಿಡಿ.

ಮಗುವಿಗೆ ಸದಾ ಬೆಚ್ಚಗಿನ ನೀರು, ಮೈಲ್ಡ್ ಬಿಸಿ ಹರ್ಬಲ್ ಸೋಪ್‌ ಬಳಸಿಯೇ ಸ್ನಾನ ಮಾಡಿಸಬೇಕು. ಅದರ ಮೈ ಚರ್ಮ ಚೆನ್ನಾಗಿ ಒಣಗಿದ ನಂತರವೇ ನ್ಯಾಪಿ ತೊಡಿಸಿ, ಬಟ್ಟೆ ಹಾಕಿ. ದಿನದ 24 ಗಂಟೆಗಳಲ್ಲಿ ಮಗುವನ್ನು ಕನಿಷ್ಠ 8-10 ಗಂಟೆಗಳ ಕಾಲ ನ್ಯಾಪಿ ಇಲ್ಲದೆ ಇರಲು ಬಿಡಿ. ಆಗ ಅದರ ಆ ಭಾಗದ ಚರ್ಮಕ್ಕೆ ಗಾಳಿಯಾಡಲು ಅವಕಾಶ ಸಿಗುತ್ತದೆ.

ರಾಶೆಸ್ಗೆ ಮನೆಮದ್ದು : ಇದರ ಮೇಲೆ ಆ್ಯಲೋವೆರಾ ಜೆಲ್ ‌ಸವರಬೇಕು. ಇದಕ್ಕೆ ಪೆಟ್ರೋಲಿಯಂ ಜೆಲ್ಲಿ (ಉದಾ : ವ್ಯಾಸಲೀನ್‌) ಸವರಿದರೂ ಉತ್ತಮ. ಇದರ ಮೇಲೆ ಬೇಬಿ ಟಾಲ್ಕಂ ಪೌಡರ್‌ ಉದುರಿಸಿದರೂ ಒಳ್ಳೆಯದು, ಆದರೆ ಸಿಕ್ಕಾಬಟ್ಟೆ ಉದುರಿಸಬೇಡಿ, ಲೈಟ್‌ ಆಗಿರಲಿ. ಇಲ್ಲದಿದ್ದರೆ ಒಂದು ಹೋಗಿ ಇನ್ನೊಂದು ಆದೀತು.

ಮಗುವಿನ ನ್ಯಾಪಿ ಏರಿಯಾದಲ್ಲಿ ಕೆಂಪು ರಾಶೆಸ್‌ ಅತ್ಯಧಿಕ ಕಂಡುಬಂದರೆ, ಮನೆಮದ್ದು ಬಳಸಿಯೇ ಅವನ್ನು ಹೋಗಲಾಡಿಸಿ. 1 ಯಾರಾದರೂ ಅದು ತಗ್ಗದಿದ್ದಾಗ, ಮಗುವಿಗೆ ಅದರಿಂದ ಉರಿ, ನವೆ, ಕಡಿತ ಎಂದು ಕೆರೆದುಕೊಳ್ಳುತ್ತಾ ರಚ್ಚೆ ಹಿಡಿದಾಗ, ಜ್ವರ ಕಾಡಿದಾಗ ತಕ್ಷಣ ಶಿಶು ವೈದ್ಯರ ಬಳಿ ಧಾವಿಸಿ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ