- ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರು ಜುಲೈ 30, 2026:ಹೃದಯದ ಬಡಿತದ ಲಯದ ಸಮಸ್ಯೆಗಳು ಸಾಮಾನ್ಯವಾಗಿ ಗಂಭೀರ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿವೆ ಎಂದು ಭಾವಿಸಲಾಗುತ್ತದೆ. ಆದರೆ, ಇದರ ಆರಂಭಿಕ ಲಕ್ಷಣಗಳು ಕೆಲವೊಮ್ಮೆ ತುಂಬಾ ಸೂಕ್ಷ್ಮವಾಗಿರಬಹುದು. ಉದಾಹರಣೆಗೆ, ಹೃದಯದ ಬಡಿತ ಅನಿಯಮಿತವಾಗಿರುವುದು, ಎದೆಯಲ್ಲಿ ಕ್ಷಣಕಾಲ ಹೃದಯ ಬಡಿತವು ಫಡಫಡಿಸುವಂತೆ ಅನಿಸುವುದು ಅಥವಾ ಹಠಾತ್ ಕೆಲ ಕ್ಷಣಗಳ ಕಾಲ ಹೃದಯ ಬಡಿತ ವೇಗವಾಗಿ ಆಗುವುದು. ಇಂತಹ ಲಕ್ಷಣಗಳು ಅರಿತ್ಮಿಯಾ (ಹೃದಯದ ಬಡಿತದ ಲಯದ ಸಮಸ್ಯೆ) ಇರುವ ಸೂಚನೆಯಾಗಿರಬಹುದು. ಈ ಸ್ಥಿತಿಯಲ್ಲಿ ಹೃದಯವು ತುಂಬಾ ವೇಗವಾಗಿ, ತುಂಬಾ ನಿಧಾನವಾಗಿ ಅಥವಾ ಅನಿಯಮಿತವಾಗಿ ಬಡಿಯುತ್ತದೆ. ಪ್ರತಿಯೊಂದು ಅನಿಯಮಿತ ಹೃದಯ ಬಡಿತವೂ ಅಪಾಯಕಾರಿಯೇ ಎಂದಲ್ಲ. ಆದರೆ ಈ ಲಕ್ಷಣಗಳು ಹೊಸದಾಗಿ ಕಾಣಿಸಿಕೊಂಡರೆ, ಮತ್ತೆ ಮತ್ತೆ ಕಾಣಿಸಿಕೊಂಡರೆ ಅಥವಾ ಆತಂಕ ಉಂಟುಮಾಡಿದರೆ, ಅರ್ಹ ಆರೋಗ್ಯ ತಜ್ಞರನ್ನು ಸಂಪರ್ಕಿಸಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.
ಅರಿತ್ಮಿಯಾ ಚಿಕಿತ್ಸೆಗೆ ಎಲ್ಲರಿಗೂ ಒಂದೇ ರೀತಿಯ ವಿಧಾನ ಅನ್ವಯಿಸುವುದಿಲ್ಲ. ಸರಿಯಾದ ಚಿಕಿತ್ಸೆಯನ್ನು ಆಯ್ಕೆ ಮಾಡುವುದು ಹೃದಯದ ಬಡಿತದ ಲಯದ ಸಮಸ್ಯೆಯ ಪ್ರಕಾರ, ಅದರ ತೀವ್ರತೆ ಮತ್ತು ರೋಗಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳು ಅಥವಾ ಔಷಧಿಗಳೇ ಹೃದಯದ ಬಡಿತವನ್ನು ಮತ್ತೆ ಸಹಜ ಸ್ಥಿತಿಗೆ ತರಲು ಸಾಕಾಗಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ, ಹೃದಯದಲ್ಲಿನ ಅಸಹಜ ವಿದ್ಯುತ್ ಸಂಕೇತಗಳನ್ನು (ಎಲೆಕ್ಟ್ರಿಕಲ್ ಸಿಗ್ನಲ್‌ಗಳು) ಸರಿಪಡಿಸಲು ವೈದ್ಯರು ವಿಶೇಷ ಚಿಕಿತ್ಸಾ ವಿಧಾನಗಳನ್ನು ಶಿಫಾರಸು ಮಾಡಬಹುದು. ಅಗತ್ಯವಿದ್ದರೆ, ಹೃದಯವು ನಿಯಮಿತವಾಗಿ ಬಡಿಯಲು ಸಹಾಯ ಮಾಡುವ ವಿಶೇಷ ಸಾಧನವನ್ನು ಅಳವಡಿಸುವ ಚಿಕಿತ್ಸೆಯನ್ನೂ ವೈದ್ಯರು ಸೂಚಿಸಬಹುದು.
ಹೃದಯದ ಬಡಿತ ತುಂಬಾ ನಿಧಾನವಾಗಿರುವಾಗ ಅಥವಾ ಹೃದಯದೊಳಗೆ ವಿದ್ಯುತ್ ಸಂಕೇತಗಳು ಸರಿಯಾಗಿ ಸಾಗದಿರುವಾಗ, ಪೇಸ್‌ಮೇಕರ್‌ಗಳು ಹಲವು ವರ್ಷಗಳಿಂದ ಪರಿಣಾಮಕಾರಿ ಚಿಕಿತ್ಸೆಯಾಗಿ ಬಳಸಲಾಗುತ್ತಿವೆ. ಸಾಂಪ್ರದಾಯಿಕ ಪೇಸ್‌ಮೇಕರ್‌ಗಳನ್ನು ಸಾಮಾನ್ಯವಾಗಿ ಎದೆಯ ಮೇಲ್ಭಾಗದ ಚರ್ಮದ ಕೆಳಗೆ ಅಳವಡಿಸಲಾಗುತ್ತದೆ. ನಂತರ, ‘ಲೀಡ್ಸ್’ ಎಂದು ಕರೆಯಲಾಗುವ ತೆಳುವಾದ, ರಕ್ಷಣಾತ್ಮಕ ಹೊದಿಕೆ ಹೊಂದಿರುವ ತಂತಿಗಳ ಮೂಲಕ ಅವುಗಳನ್ನು ಹೃದಯಕ್ಕೆ ಸಂಪರ್ಕಿಸಲಾಗುತ್ತದೆ. ಈ ವಿಧಾನದಲ್ಲಿ ಪೇಸ್‌ಮೇಕರ್ ಅಳವಡಿಸಿದ ನಂತರ ಎದೆಯ ಮೇಲೆ ಗುರುತು ಅಥವಾ ಸಣ್ಣ ಉಬ್ಬು ಕಾಣಿಸಬಹುದು. ಜೊತೆಗೆ, ಸುಮಾರು 8 ಜನರಲ್ಲಿ 1 ರೋಗಿಗೆ ಪೇಸ್‌ಮೇಕರ್ ಅಳವಡಿಸಿದ ಸ್ಥಳದಲ್ಲಿ ಸೋಂಕು ಉಂಟಾಗುವುದು ಅಥವಾ ಲೀಡ್ಸ್‌ಗೆ ಸಂಬಂಧಿಸಿದ ಸಮಸ್ಯೆಗಳು, ಉದಾಹರಣೆಗೆ ಲೀಡ್ ತನ್ನ ಸ್ಥಾನದಿಂದ ಜಾರುವುದು ಅಥವಾ ಮುರಿಯುವುದು ಮುಂತಾದ ತೊಂದರೆಗಳು ಕಾಣಿಸಬಹುದು.
ಇಂದು ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿ ರೋಗಿಗಳಿಗೆ ಹೊಸ ಆಶಾಕಿರಣವನ್ನು ನೀಡುತ್ತಿದೆ. ಆಯ್ದ ಕೆಲವು ರೋಗಿಗಳಿಗೆ ಲೀಡ್‌ಲೆಸ್ ಪೇಸ್‌ಮೇಕರ್ ಒಂದು ಆಧುನಿಕ ಚಿಕಿತ್ಸಾ ಆಯ್ಕೆಯಾಗಿದೆ. ಭಾರತದಲ್ಲೂ ಈಗ ಲಭ್ಯವಿರುವ ಈ ಸಣ್ಣ ಸಾಧನಗಳನ್ನು ಕಾಲಿನ ರಕ್ತನಾಳದ ಮೂಲಕ ಕ್ಯಾಥೆಟರ್ ಬಳಸಿ ನೇರವಾಗಿ ಹೃದಯದೊಳಗೆ ಅಳವಡಿಸಲಾಗುತ್ತದೆ. ಇದರಲ್ಲಿ ತಂತಿಗಳ (ಲೀಡ್ಸ್) ಅಗತ್ಯವಿರುವುದಿಲ್ಲ ಮತ್ತು ಎದೆಯ ಮೇಲೆ ಕತ್ತರಿಸುವ ಅಗತ್ಯವೂ ಇರುವುದಿಲ್ಲ. ಇದರಿಂದ ಚಿಕಿತ್ಸೆ ಹೆಚ್ಚು ಸರಳವಾಗುವುದರ ಜೊತೆಗೆ, ರೋಗಿಗೆ ಹೆಚ್ಚಿನ ಆರಾಮ ದೊರೆಯಲು ಮತ್ತು ಬೇಗ ಚೇತರಿಸಿಕೊಳ್ಳಲು ಸಹ ಸಹಾಯವಾಗುತ್ತದೆ.





