ಕಥೆ - ಸವಿತಾ ಪ್ರಭಾಕರ್
ದಾಯಾದಿ ಮಕ್ಕಳಾದ ಮಧು, ಗೀತಾ ಅಕ್ಕತಂಗಿಯರಿಗಿಂತ ಹೆಚ್ಚಾಗಿ ತರಲೆ ಮಾಡುವ ಸ್ನೇಹಿತೆಯರಾಗಿದ್ದರು. ಅವರು ಮಾಡಿದ ತರಲೆಗಳಿಂದಾಗಿ ಇತರರಿಗೆ ನೋವಾಗದಂತೆ ಎಚ್ಚರ ವಹಿಸಿದ್ದರು. ಮುಂದೆ ನಡೆದದ್ದೇನು.....?
``ಲೇ ಗೀತಾ.... ಕಾರ್ ನಲ್ಲೇ ಹೋಗೋಣ ಅಂದ್ರೆ ನೀನು ಕೇಳ್ಲಿಲ್ಲ, ಈಗ ನೋಡು, ಈ ಬಿಸಿಲಿನಲ್ಲಿ ಬಸ್ ಗೋಸ್ಕರ ಕಾದು ಕಾದು ಸಾಕಾಗ್ತಾ ಇದೆ....''
``ಇಂಥ ಅನುಭವ ಕೂಡ ಮಜವಾಗಿರುತ್ತೆ ಕಣೇ.... ಸದಾ ಕಾರ್ ನಲ್ಲೇ ಓಡಾಡ್ತಾ ಇದ್ರೆ ಹೀಗೆ ಬಿಸಿಲು ಕಾಯಿಸಿಕೊಳ್ಳುವ ಎಕ್ಸ್ ಪೀರಿಯನ್ಸ್ ಸಿಗುತ್ತಾ ಹೇಳು ಮಧು....?''
ಆ ಇಬ್ಬರು ಹುಡುಗಿಯರ ಮಾತು ಕೇಳ್ತಾ ನಿಂತಿದ್ದ ಒಬ್ಬ ವಯಸ್ಸಾದ ಹೆಂಗಸು, ``ಅದ್ಯಾಕಮ್ಮ ಮನೇಲಿ ಕಾರಿಟ್ಕೊಂಡು ಬಸ್ ನಲ್ಲಿ ಓಡಾಡೋ ಕಷ್ಟ ತಂದ್ಕೊಡಿದ್ದೀರಿ.... ಸುಮ್ನೇ ಕಾರ್ ನಲ್ಲೇ ಬರಬಾರ್ದಾ.....?'' ಎಂದರು.
``ಹ್ಞೂಂ.... ನಮ್ಮನೇಲಿ ಒಂದಲ್ಲ ಅಂತ ಎರಡು ಕಾರುಗಳಿವೆ. ಆದ್ರೆ ಬಸ್ ನಲ್ಲೇ ಹೋಗೋಣ ಅಂತ ಇವಳದ್ದೇ ಹಠ.''
ಅಷ್ಟರಲ್ಲಿ ಬಸ್ ಬಂತು, ಇಬ್ಬರು ಹುಡುಗಿಯರೂ ನಗುತ್ತಾ ಬಸ್ ಹತ್ತಿದರು. ಬಸ್ ನಲ್ಲಿ ಕೂತು ತಾವಾಡಿದ ಮಾತುಗಳನ್ನು ಅದಕ್ಕೆ ಪ್ರತಿಕ್ರಿಯಿಸಿದ ಪಾಪದ ಆ ಹೆಂಗಸಿನ ಕಳಕಳಿಯನ್ನೂ ನೆನೆಸಿಕೊಂಡು ಗಟ್ಟಿಯಾಗಿ ನಕ್ಕರು. ನಿಜವಾದ ವಿಷಯ ಏನು ಅಂದ್ರೆ ಅವರ ಮನೇಲಿ ಎರಡಿರಲೀ ಒಂದು ಕಾರು ಕೂಡಾ ಇರಲಿಲ್ಲ. ಆದರೂ ಪ್ರತಿನಿತ್ಯ ಈ ತರಹದ ತರಲೆ ಮಾತಾಡಿಕೊಂಡು ನಕ್ಕು ಹಗುರವಾಗುವುದು ಅಂದ್ರೆ ಅವರಿಗೆ ತುಂಬಾ ಇಷ್ಟ.
ಆ ಹುಡುಗಿಯರು ಬರೀ ಸ್ನೇಹಿತೆಯರಲ್ಲ ಅಥವಾ ಸ್ವಂತ ಅಕ್ಕ ತಂಗಿಯರೂ ಅಲ್ಲ.... ಸ್ನೇಹಿತೆಯರಂತಿರುವ ಅಕ್ಕತಂಗಿಯರು. ಅಂದರೆ ಅಣ್ಣ ತಮ್ಮಂದಿರ ಮಕ್ಕಳು.
ಮಧುರಾ ಅಣ್ಣ ರಾಜೀವನ ಮಗಳು, ಗೀತಾ ತಮ್ಮ ವೇಣುಗೋಪಾಲನ ಮಗಳು. ಗೀತಾ ಮಧುರಾಳಿಗಿಂತ ನಾಲ್ಕು ತಿಂಗಳು ಚಿಕ್ಕವಳು ಅಷ್ಟೇ. ಬಾಲ್ಯದಿಂದಲೂ ಒಂದೇ ಶಾಲೆ, ಒಂದೇ ಕ್ಲಾಸ್, ಒಂದೇ ಬೆಂಚು, ಮನೆ ತುಂಬಾ ಜನ.... ಬಾಯಿ ತುಂಬಾ ಮಾತು.... ಬದುಕಿನ ಸ್ವಾರಸ್ಯವನ್ನು ತುಂಬಾ ಚೆನ್ನಾಗಿ ಸವಿಯುತ್ತಿದ್ದ ತುಂಟ ಹುಡುಗಿಯರು. ಅವರ ಹವ್ಯಾಸ ಪ್ರಜ್ಞೆಯನ್ನು ಮೆಚ್ಚಿ ತುಂಬಾ ಎಂಜಾಯ್ ಮಾಡ್ತಾ ಇದ್ದರು ಅಂದ್ರೆ, ಅವರ ಮನೆಯಲ್ಲೇ ಇದ್ದ ಇವರ ಸೋದರತ್ತೆಯ ಮಕ್ಕಳು ಉಮೇಶ ಮತ್ತು ರಮೇಶ.
ಇವರ ಮನೆಯ ಎದುರುಗಡೆ ಮನೆಯಲ್ಲಿದ್ದರು ಅಮರನಾಥ್ ಮತ್ತು ರೇಖಾ ದಂಪತಿಗಳು. ಅವರ ಮದುವೆಯಾಗಿ ಆರು ತಿಂಗಳಾಗಿತ್ತು. ತುಂಬಾ ಲವಲವಿಕೆಯ ದಂಪತಿಗಳು. ರೇಖಾ ಅಂತೂ ಸದಾ ನಗುನಗುತ್ತಲೇ ಇರುವ ಹುಡುಗಿ. ಅಪರೂಪಕ್ಕೆ ಒಮ್ಮೊಮ್ಮೆ ಇವರ ಮನೆಗೂ ಬರುತ್ತಿದ್ದಳು.
ಈ ಗಂಡ ಹೆಂಡತಿಯ ನಡುವೆ ಏನಾದರೂ ತಂದಿಟ್ಟು ಮಜಾ ತಗೋಬಹುದಲ್ಲ ಅಂತ ಆಲೋಚಿಸಿಕೊಂಡರು ಈ ಹುಡುಗಾಟದ ಹುಡುಗಿಯರು. ಒಂದು ದಿವಸ ರೇಖಾ ಇಲ್ಲದ ಸಮಯ ನೋಡಿಕೊಂಡು ಅಮರನಾಥನ ಮನೆಗೆ ಹೋಗಿ, ``ಸರ್, ನೀವು ಆಗಾಗ ಕವನಗಳನ್ನು ಬರೀತಾ ಇರ್ತೀರಂತೆ ಹೌದಾ....?'' ಅಂತ ಕೇಳಿದರು.





