– ಎಸ್. ಆರತಿ
ತನ್ನ ಸೌಂದರ್ಯ, ಸ್ಮಾರ್ಟ್ ನೆಸ್, ಅಪ್ರತಿಭ ನಟನಾ ಕೌಶಲ್ಯದಿಂದ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ದಕ್ಷಿಣದ ಸೂಪರ್ ಸ್ಟಾರ್ ಎನಿಸಿ ಇದೀಗ ಬಾಲಿವುಡ್ ನಲ್ಲಿ ಮಿಂಚುತ್ತಾ `ನ್ಯಾಶನಲ್ ಕ್ರಶ್’ ಆಗಿ, ಕಂಡುಕೊಂಡಿರುವ ಯಶಸ್ಸಿನ ಜರ್ನಿಯ ಬಗ್ಗೆ ಒಂದಿಷ್ಟು ವಿವರವಾಗಿ ತಿಳಿಯೋಣವೇ….?
ರಶ್ಮಿಕಾ ಮಂದಣ್ಣ ಕೇವಲ ಒಂದು `ಮೊಮೆಂಟ್’ನ್ನು ಜೀವಿಸುತ್ತಿಲ್ಲ, ಒಂದು ದೊಡ್ಡ `ಯಶಸ್ವಿ ಜರ್ನಿ’ಯನ್ನೆ ಇಂದು ತಮ್ಮದಾಗಿಸಿಕೊಂಡಿದ್ದಾರೆ. ವಿಭಿನ್ನ ಭಾಷೆ, ಶೈಲಿ, ಇಂಡಸ್ಟ್ರಿಗಳಲ್ಲಿ ಸತತ ಶಿಖರಕ್ಕೇರಿ ಆಕೆ ತನ್ನನ್ನು ತಾನು ಪ್ಯಾನ್ ಇಂಡಿಯಾದ ನಂಬರ್ ಒನ್ ಹೀರೋಯಿನ್ ಆಗಿ ಸ್ಥಾಪಿಸಿಕೊಂಡಿದ್ದಾರೆ. ಈಕೆ ಗಳಿಸಿರುವ ಹೆಸರು ತನ್ನ ಸಹಜತೆ, ಶಾಲೀನತೆ, ಆತ್ಮೀಯತೆಗಳ ಸಂಗಮವಾಗಿದೆ. ಹೀಗಾಗಿ ಸಹಜವಾಗಿಯೇ ದಕ್ಷಿಣದಿಂದ ಉತ್ತರಕ್ಕೇರಿದ ಈ ಪ್ರತಿಭಾನ್ವಿತೆ `ನ್ಯಾಷನಲ್ ಕ್ರಶ್’ ಎನಿಸಿದ್ದಾರೆ. ಮೂಲತಃ ಕೊಡಗಿನ ಈ ಬೆಡಗಿ ಬೆಂಗಳೂರಿನಲ್ಲಿ ಕಲಿತು ಪದವೀಧರೆ ಎನಿಸಿದರು. 2014ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ದುಮುಕಿ, ತನ್ನ ಗ್ಲಾಮರ್ ನಿಂದ ಮಿಂಚುತ್ತಲೇ ಈಕೆ 2016ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ನಾಯಕರಾಗಿದ್ದ ಪಡ್ಡೆ ಹುಡುಗರ ಡಾಲಿಂರ್ಗ್ ಚಿತ್ರ `ಕಿರೀಕ್ ಪಾರ್ಟಿ’ಯಲ್ಲಿ ಎಲ್ಲರ ಮನಸೂರೆಗೊಂಡರು. ಮುಂದೆ ಅಂಜನಿಪುತ್ರ, ಚಮಕ್ (2017) ಚಿತ್ರಗಳಿಂದ ಕನ್ನಡಿಗರಿಗೆ ಆಪ್ತರಾದರು.
ನಂತರ ನೆರೆಯ ತೆಲುಗು ಚಿತ್ರರಂಗಕ್ಕೆ 2018ರಲ್ಲಿ ಎಂಟ್ರಿ ನೀಡಿ ಚಲೋ, ಗೀತ ಗೋವಿಂದಂ, ಸರಿವೇರು ನೀಕೆವರು, ಭೀಷ್ಮ ಮುಂತಾದ ಚಿತ್ರಗಳಲ್ಲಿ ಸೈ ಎನಿಸಿಕೊಂಡರು. ಅದಾದ ನಂತರ ಹಿಂದಿರುಗಿ ನೋಡದ ಇವರು ಪುಷ್ಪಾ : ದಿ ರೈಸ್ (2021) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಲ್ಪಟ್ಟರು. ಪೀರಿಯಡ್ ಡ್ರಾಮಾ ಸೀತಾ ರಾಮಂ ಚಿತ್ರದ ನಂತರ ತಮಿಳಿನ ವಾರೀಸು, ಸುಲ್ತಾನ್ ಚಿತ್ರಗಳಲ್ಲೂ ಅಷ್ಟೇ ಹೆಸರು ಗಳಿಸಿದರು.
ಮುಂದೆ ಬಾಲಿವುಡ್ ಗೆ ಎಂಟ್ರಿ ಪಡೆದು ಗುಡ್ ಬೈ, ಮಿಶನ್ ಮಜ್ನು ಚಿತ್ರಗಳಲ್ಲಿ ಕಾಣಿಸಿದರೂ ಅವೇನೂ ಅಷ್ಟು ಯಶಸ್ಸು ಗಳಿಸಲಿಲ್ಲ. ಅನಿಮಲ್, ಚಾಲಾ, ಎಲ್ಲದಕ್ಕೂ ಮಿಗಿಲಾದ ಪುಷ್ಪಾ-2 : ದಿ ರೂಲ್ ತೆಲುಗಿನ ಮೂಲಕ, ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವೆಲ್ಲದರ ಫಲವಾಗಿ, ತೆಲುಗಿನಲ್ಲಿ ಬೆಸ್ಟ್ ಫಿಲ್ಮ್ ಫೇರ್ ಕ್ರಿಟಿಕಲ್ಸ್ ಅವಾರ್ಡ್ ಪಡೆದರು.
2024 ಹಾಗೂ 2025 ರಶ್ಮಿಕಾ ಪಾಲಿಗೆ ಬಲು ಯಶಸ್ವೀ ವರ್ಷಗಳೆಂದೇ ಸಾಬೀತಾಯಿತು. `ಪುಷ್ಪಾ-2′ ಚಿತ್ರದ ಅಖಂಡ ಯಶಸ್ಸಿನ ನಂತರ ಆಕೆಯ ಲವಲವಿಕೆಯ ರೊಮ್ಯಾಂಟಿಕ್ ಶ್ರೀವಲ್ಲಿ ಪಾತ್ರ ಇಡೀ ಬೆಳ್ಳಿತೆರೆಯಲ್ಲಿ ಚಮತ್ಕಾರ ಮಾಡಿತು. ಹಾಗೆಯೇ `ಕುಬೇರ’ ಚಿತ್ರದಲ್ಲಿ ದೇಶದ ಅತಿ ಗಣ್ಯ ತಾರೆಯರೊಂದಿಗೆ ತೆರೆ ಹಂಚಿಕೊಳ್ಳುವಂತಾಯಿತು. ತನ್ನ ಆಕರ್ಷಣೆ ಮತ್ತು ಅಭಿನಯ ಕೌಶಲ್ಯ ಯಾವುದೇ ಗಡಿ, ಪ್ರಾಂತ್ಯ, ಭಾಷೆಗೆ ಸೀಮಿತವಲ್ಲ ಎಂದು ಸಾಬೀತುಪಡಿಸಿದರು.
ಚಾಲಾ ಚಿತ್ರದಲ್ಲಿನ ಈಕೆಯ ನಟನೆ, ನಿಜಕ್ಕೂ ರಶ್ಮಿಕಾರ ಕೆರಿಯರ್ ನ ಮತ್ತೊಂದು ಮೈಲಿಗಲ್ಲು ಎನಿಸಿತು. ವೀಕ್ಷಕರು, ವಿಮರ್ಶಕರ ಪ್ರಕಾರ ಈಕೆಯ ಆಳವಾದ ಅಭಿನಯ, ಪ್ರಭಾವಶಾಲಿ ನಟನಾ ಪ್ರದರ್ಶನ ಅಪಾರ ಮೆಚ್ಚುಗೆ ಗಳಿಸಿತು. ಹೀಗಾಗಿ ಈಕೆಯ ಹಿಂದಿ ಥಮ್ಮಾ ತೆಲುಗಿನ ದಿ ಗರ್ಲ್ ಫ್ರೆಂಡ್ ಚಿತ್ರಗಳು ವೀಕ್ಷಕರಿಗೆ ಮತ್ತೊಮ್ಮೆ ರೋಮಾಂಚನಕಾರಿ ಚಿತ್ರಗಳಾದವು. ಈ ಪಾತ್ರಗಳ ಮೂಲಕ ಈಕೆಯ ನಟನೆಯಲ್ಲಿನ ತಾಜಾತನ, ಸಂವೇದನಾಶೀಲತೆ, ಮನಮುಟ್ಟುವ ಭಾವನೆಗಳು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿವೆ.

ಶಕ್ತಿ ಮತ್ತು ಆತ್ಮವಿಶ್ವಾಸ
ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ, ಆಫ್ ಸ್ಕ್ರೀನ್ ನಲ್ಲೂ ರಶ್ಮಿಕಾರ ಪರ್ಸನಾಲಿಟಿ ಅಷ್ಟೇ ಹೊಳಿಪಿನಿಂದ ಕೂಡಿದೆ. `ಅಶರ್ಫಿ ಗರ್ಲ್’ ಆಗಿ ಆಕೆ ಹೆಚ್ಚಿನ ಖುಷಿ, ಸಕಾರಾತ್ಮಕತೆ, ಸಂಭ್ರಮಾಚರಣೆಗಳ ಪ್ರತೀಕವಾಗಿದ್ದಾರೆ. ವೀಕ್ಷಕರ ಮನದಲ್ಲಿ ಈ ನಗುಮುಖ ಅಚ್ಚಳಿಯದೆ ಉಳಿದುಬಿಟ್ಟಿದೆ. ಯುವಜನತೆಯ ಅಸಲಿ ಶಕ್ತಿ ಹಾಗೂ ಆತ್ಮವಿಶ್ವಾಸದ ಕುರುಹಾಗಿದೆ.
ರಶ್ಮಿಕಾ ಕೇವಲ ಒಬ್ಬ ಸ್ಟಾರ್ ಆಗಿರದೆ ಒಂದು ಫೆನೊಮೆನಾ ಆಗಿದ್ದಾರೆ, ಆ ಮೂಲಕ ಇಡೀ ದೇಶದ ಜನತೆಯನ್ನು ಒಂದೇ ಸಲ ಸಿನಿಮಾ ಮೂಲಕ ಒಗ್ಗೂಡಿಸಿದ್ದಾರೆ. ಆಕೆಯ ಪ್ರತಿ ಮುಗುಳ್ನಗು, ಪ್ರತಿ ಪರ್ಫಾರ್ಮೆನ್ಸ್, ಪ್ರತಿ ಭಾವಭಂಗಿಯೂ ಜನರ ಮನದಲ್ಲಿ ನೆಲೆ ನಿಂತಿವೆ.
ರಶ್ಮಿಕಾ ಕೇವಲ ಇಂದಿನ ಭಾರತೀಯ ಸಿನಿಮಾದ ಐಡೆಂಟಿಟಿ ಅಲ್ಲ, ಆಕೆಯ ಹೃದಯದ ಬಡಿತ, ಆಕೆಯ ಶಕ್ತಿ, ಇಡೀ ದೇಶದ ಜನರೆಲ್ಲರ ಪ್ರೀತಿವಾತ್ಸಲ್ಯ ಗಳಿಸಿರುವ ಪರಿ ಆಕೆ ಎಲ್ಲರ ಮನೆಮಗಳಾಗಿ ಎಲ್ಲರ ಮನದಲ್ಲೂ ನೆಲೆ ನಿಂತಿದ್ದಾರೆ ಎಂಬುದಕ್ಕೆ ಸಾಕ್ಷಿ. ಪ್ರೊಫೆಶನಲ್ ಲೈಫ್ ನಲ್ಲಿ ರಶ್ಮಿಕಾ ಸತತ ಯಶಸ್ಸಿನ ಮೆಟ್ಟಿಲೇರುತ್ತಿರುವ ಹಾಗೆಯೇ, ಪರ್ಸನಲ್ ಲೈಫ್ ನಲ್ಲೂ ಸಹ ತನ್ನ ಪ್ರೀತಿ ಪ್ರೇಮ, ಮದುವೆ ಕುರಿತಾಗಿ ಈಕೆ ಬಹು ಚರ್ಚೆಯಲ್ಲಿದ್ದಾರೆ.
`ಕಿರೀಕ್ ಪಾರ್ಟಿ’ ಯಶಸ್ವಿಯಾಗಿ ರಶ್ಮಿಕಾ ಕನ್ನಡದ ಯಂಗ್ ಸ್ಟಾರ್ ಆಗುತ್ತಿದ್ದಂತೆಯೇ, ಆಕೆ ಆ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜೊತೆ 2017ರಲ್ಲಿ ತನ್ನ ತವರೂರಾದ ವಿರಾಜಪೇಟೆಯಲ್ಲಿ ಅಧಿಕೃತವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಕಾರಾಣಾಂತರಗಳಿಂದ ಅದು 2018ರಲ್ಲಿ ರದ್ದಾಯಿತು.
ಮುಂದೆ ಆಕೆ `ಗೀತ ಗೋವಿಂದಂ’ ತೆಲುಗು ಚಿತ್ರದಿಂದ ಇಡೀ ದಕ್ಷಿಣದ ಸೂಪರ್ ಸ್ಟಾರ್ ಎನಿಸಿದ ನಂತರ, 2020ರಿಂದ ಆ ಚಿತ್ರದ ಹೀರೋ ವಿಜಯ್ ದೇವರಕೊಂಡ ಜೊತೆಗೆ ಪ್ರೀತಿಪ್ರೇಮದಲ್ಲಿ ಮುಳುಗಿದರೂ, ಬಹಿರಂಗವಾಗಿ ಇಬ್ಬರೂ ಆ ಬಗ್ಗೆ ಏನೂ ಹೇಳಿಕೊಳ್ಳಲಿಲ್ಲ. ಈ ಮಧ್ಯೆ ವಿಜಯ್ ಮನೆ ಗೃಹಪ್ರವೇಶದಲ್ಲೂ ರಶ್ಮಿಕಾರ ಪಾತ್ರ ಹಿರಿದಾಗಿತ್ತು. ಅದಾಗಿ ಅಕ್ಟೋಬರ್ 2025ರಲ್ಲಿ ಇವರಿಬ್ಬರ ಲಗ್ನಪತ್ರಿಕೆ ವಿಜೃಂಭಣೆಯಿಂದ ನಡೆದು, ಮೀಡಿಯಾ ಮೂಲಕ ಪಬ್ಲಿಕ್ ಗೆ ಅಧಿಕೃತ ವಿಷಯ ತಿಳಿಸಿದ್ದೂ ಆಯ್ತು.

ರಶ್ಮಿಕಾ ಈ ಕುರಿತು ಏನು ಹೇಳುತ್ತಾರೆ?
ದಕ್ಷಿಣದಿಂದ ಬಾಲಿವುಡ್ ಗೆ ಹಾರಿದ ಈಕೆಯ ಜರ್ನಿ ಸುಲಭ ಅಥವಾ ಕಷ್ಟಕರಾಗಿತ್ತೆ? ಹಿಂದಿ ಚಿತ್ರಗಳಲ್ಲಿ ನಟಿಸುವಾಗಿನ ಆಕೆಯ ಅನುಭವ ಹೇಗಿತ್ತು? ದಕ್ಷಿಣಕ್ಕಿಂತ ಅದು ಭಿನ್ನವಾಗಿತ್ತೇ? ಈ ಎಲ್ಲದರ ಕುರಿತು ರಶ್ಮಿಕಾ ಗೃಹಶೋಭಾ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.
ಕಷ್ಟದಲ್ಲೇ ಬೆಳೆದ ಬಾಲ್ಯ
“ನಾನು ಬಾಲ್ಯದಲ್ಲಿ ಬಹಳ ಕಷ್ಟ ಕಂಡುಂಡು ಬೆಳೆದವಳು. ಆರ್ಥಿಕ ಅಭಾವದ ಕಾರಣ ವರ್ಷಕ್ಕೆ 3-4 ಸಲ ಬಾಡಿಗೆ ಮನೆ ಬದಲಾಯಿಸಬೇಕಿತ್ತು. ಒಂದು ಸಣ್ಣ ಆಟದ ಗೊಂಬೆ ಖರೀದಿಸಲಿಕ್ಕೂ ನಾನು 10 ಸಲ ಯೋಚಿಸುತ್ತಿದ್ದೆ. ಕೊಡಗು ನನ್ನೂರು, ಅಲ್ಲಿನ ಪ್ರಕೃತಿಯ ಮಡಿಲಲ್ಲಿ, ಕಡು ಕಷ್ಟದ ದಿನಗಳಲ್ಲೇ ಬೆಳೆದಿದ್ದೇನೆ. ಅಪ್ಪ ಅಮ್ಮನ ಪ್ರೀತಿ ವಾತ್ಸಲ್ಯದಿಂದಾಗಿ ಮಕ್ಕಳಾದ ನಮಗೆ ಅದರ ತೀವ್ರತೆ ತಟ್ಟದಂತೆ ನಮ್ಮನ್ನು ದೊಡ್ಡವರಾಗಿಸಿದರು. ಇಂದು ನಾನು ಸಿನಿಮಾರಂಗ ಸೇರಿ, ಬೆಂಗಳೂರಿನಿಂದ ಹೈದರಾಬಾದ್ ಗೆ ಬಂದು, ಇಲ್ಲಿಯೇ ಸೆಟಲ್ ಆಗಿದ್ದೇನೆ. ನನ್ನ ತವರಿನವರೆಲ್ಲ ಈಗ ಮೈಸೂರಿನಲ್ಲಿ ಸೆಟ್ ಆಗಿದ್ದಾರೆ. ಅವರೆಲ್ಲರಿಂದ ದೂರ ಇದ್ದೀನಲ್ಲ ಅನ್ನುವ ಕೊರಗೊಂದನ್ನು ಬಿಟ್ಟರೆ, ಇನ್ನಾವ ಚಿಂತೆಯೂ ಇಲ್ಲ. ಕುಟುಂಬದವರು, ಊರಿನ ಫ್ರೆಂಡ್ಸ್ ಇಲ್ಲದೆ ಇಲ್ಲಿ ಬಹಳ ಖಾಲಿ ಖಾಲಿ ಅನ್ಸುತ್ತೆ. ಹೀಗಾಗಿ ನಾನು ಸತತ ಅವರ ಕಾಂಟ್ಯಾಕ್ಟ್ ನಲ್ಲಿರುತ್ತೇನೆ. ಕುಟುಂಬ ನನ್ನ ಮೊದಲ ಆದ್ಯತೆ! ವರ್ತಮಾನ ಮಾತ್ರವಲ್ಲದೆ ಭವಿಷ್ಯದ ಜೀವನಕ್ಕೂ ಅದು ಬಲು ಮುಖ್ಯ.
“ನಾನು ಇದನ್ನು ಬಹಳ ಪರ್ಸನಲ್ ಆಗಿ ಭಾವಿಸುತ್ತೇನೆ. ಹೀಗಾಗಿ ಕುಟುಂಬದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿಗೆ ಚರ್ಚಿಸಲು ಹೋಗುವುದಿಲ್ಲ. ನನ್ನ ತಾಯಿ ಒಬ್ಬ ಆದರ್ಶ ಗೃಹಿಣಿ. ಜೀವನದಲ್ಲಿ ಪ್ರಾಕ್ಟಿಕಲ್ ಆಗಿರಬೇಕೆಂದು ನನಗೆ ಕಲಿಸಿದರು. ಆದ್ದರಿಂದ ಇಂದು ಯಶಸ್ಸಿನ ತುದಿಗೇರಿದ್ದರೂ, ನಾಳೆ ಬೀಳುವ ಸಾಧ್ಯತೆಗಳಿವೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ನನಗೊಬ್ಬ ತಂಗಿ ಇದ್ದಾಳೆ, ಶೀಮನ್.

ಶಿಕ್ಷಣ ಆ್ಯಕ್ಟಿಂಗ್ ಕೆರಿಯರ್
“ನಮ್ಮ ಮನೆಯಲ್ಲಿ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ಹೀಗಾಗಿ ನಾನು ಡಿಗ್ರಿ ಮುಗಿಸಿದ ನಂತರವೇ ಕೆರಿಯರ್ ಗೆ ಅವಕಾಶ ಎಂದಿದ್ದರು, ಹೀಗಾಗಿ ನಾನು ಸಿನಿಮಾರಂಗದ ಬಗ್ಗೆ ಯೋಚಿಸಿದ್ದು ನಂತರವೇ. ನಾನು ಸೈಕಾಲಜಿ ಜರ್ನಲಿಸಂ ಇಂಗ್ಲಿಷ್ ಲಿಟರೇಚರ್ ನಲ್ಲಿ, ಬೆಂಗಳೂರಿನಲ್ಲಿ ಪದವಿ ಪಡೆದೆ, ಶಿಕ್ಷಣದ ನಂತರ ಅಪ್ಪನ ಬಿಸ್ ನೆಸ್ ಮುಂದುವರಿಸೋಣ ಎಂದುಕೊಂಡಿದ್ದೆ, ಆದರೆ ನನ್ನ ಪಾಲಿಗೆ ಸಿನಿಮಾರಂಗ ಕದ ತೆರೆಯಿತು.
“ಎಲ್ಲಕ್ಕೂ ಮೊದಲು ನಾನು `ಕ್ಲೀನ್ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ 2014′ ಸ್ಪರ್ಧೆಯಲ್ಲಿ ವಿಜೇತಳಾದೆ. ಹೀಗಾಗಿ ನಾನು ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟೆ. ಮಾಡೆಲಿಂಗ್ ನಿಂದ ನನ್ನ ಆರ್ಥಿಕ ಸ್ಥಿತಿ ಎಷ್ಟೋ ಸುಧಾರಿಸಿತು. ಅಲ್ಲಿ ನಾನು ಮೊದಲ ಬಾರಿಗೆ 25 ಸಾವಿರದ ಸಂಬಳ ಪಡೆದಿದ್ದೆ!
ದಕ್ಷಿಣದಿಂದ ಬಾಲಿವುಡ್ ನತ್ತ
“ಇಷ್ಟೆಲ್ಲ ಆದ ಮೇಲೆ ನಾನು ಹೀರೋಯಿನ್ ಆಗುವೆ ಎಂದು ಕನಸು ಕಂಡಿರಲಿಲ್ಲ. ದಕ್ಷಿಣದಲ್ಲಿ ಸ್ಟಾರ್ ಎನಿಸಿ, ಬಾಲಿವುಡ್ ಗೆ ಎಂಟ್ರಿ ಪಡೆಯುವೆ ಎಂದು ನೆನೆಸಿರಲಿಲ್ಲ! ನಾನು 2016ರಲ್ಲಿ ಕನ್ನಡದ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಜೊತೆ, ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ `ಕಿರೀಕ್ ಪಾರ್ಟಿ’ ಮೊದಲ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದೆ. ಇದರಿಂದ ನನ್ನ ಖುಷಿ ಮೇರೆ ಮೀರಿತ್ತು! ನನ್ನ ಮಟ್ಟಿಗೆ ಇದು ಬಹು ದೊಡ್ಡ ಅಚೀವ್ ಮೆಂಟ್ ಆಗಿತ್ತು. ಆ್ಯಕ್ಟಿಂಗ್ ಕೆರಿಯರ್ ಕುರಿತಾಗಿ ನಾನು ಎಷ್ಟು ಎಗ್ಸೈಟೆಡ್ ಆಗಿದ್ದೆನೋ, ನನ್ನ ಕುಟುಂಬದವರು ಅದಕ್ಕಿಂತ 2 ಪಟ್ಟು ಹೆಚ್ಚು ಖುಷಿಪಟ್ಟರು. ನಟನಾಗಬೇಕೆಂಬ ನಮ್ಮಪ್ಪನ ಕನಸನ್ನು ನಟಿಯಾಗಿ ನಾನು ಪೂರೈಸಿದ್ದೆ!
“ಈ ಚಿತ್ರಕ್ಕಾಗಿ ನನಗೆ 2 ಲಕ್ಷ ರೂ.ಗಳ ಚೆಕ್ ಸಿಕ್ಕಿದಾಗ, ನಂಬಲಾಗದೆ ನಾನು ಹೌಹಾರಿದ್ದೆ! ಇಷ್ಟು ದೊಡ್ಡ ಮೊತ್ತ ಅದೂ ನನ್ನ ಹೆಸರಲ್ಲಿ! ಯಾರೂ ನಿರೀಕ್ಷಿಸಿರದಿದ್ದ ಈ ಅನಿರೀಕ್ಷಿತ ತಿರುವು ಮನೆಯವರೆಲ್ಲರಿಗೂ ದೊಡ್ಡ ಸರ್ ಪ್ರೈಸ್ ಆಗಿತ್ತು.
“ಇದಾದ ಮೇಲೆ ಮೊದಲ ಚಿತ್ರದಲ್ಲೇ ನಾನು ಚಿಂದಿ ಉಡಾಯಿಸಿದ್ದೆ! ಅದಾದ ಮೇಲೆ ನಾನು ಕನ್ನಡ, ತೆಲುಗು, ತಮಿಳು ಸೇರಿದಂತೆ ಸತತ 5 ಹಿಟ್ ಚಿತ್ರಗಳನ್ನು ನೀಡಿದೆ. ಇದಾದ ನಂತರ `ಗೀತ ಗೋವಿಂದಂ, ಸರಿಲೇರು ನೀಕೆವರು,’ ನನಗೆ ದಕ್ಷಿಣದ ಸ್ಟಾರ್ ಪಟ್ಟ ಕೊಡಿಸಿದ. `ಪುಷ್ಪಾ : 2 : ದಿ ರೂಲ್’ ತೆಲುಗು ಚಿತ್ರದಿಂದ `ದಿ ಗರ್ಲ್ ಫ್ರೆಂಡ್’ ಹಿಂದಿ ಚಿತ್ರದವರೆಗೂ ಒಂದೇ ವರ್ಷದಲ್ಲಿ 5 ಸ್ಟಾರ್ ಪಾತ್ರಗಳ ನಿರ್ವಹಣೆ
“2025 ನನ್ನ ಮಟ್ಟಿಗಂತೂ ಬೊಂಬಾಟ್ ವರ್ಷ! ಈ ವರ್ಷ ನನಗೆ ಅತ್ಯುತ್ತಮ ಚಿತ್ರಗಳಲ್ಲಿ ಅವಕಾಶ ಸಿಕ್ಕಿದ್ದೇ ಅಲ್ಲದೆ, ಈ ಎಲ್ಲಾ ಚಿತ್ರಗಳೂ ಯಶಸ್ವೀ ಎನಿಸಿದವು. ತೆಲುಗಿನ `ಗರ್ಲ್ ಫ್ರೆಂಡ್’ ನಂತರ ನನ್ನ ಲೇಟೆಸ್ಟ್ ಹಿಂದಿ ಚಿತ್ರ `ಥಮ್ಮಾ’ ಸಹ ಯಶಸ್ವಿಯಾಗಿದ್ದು ಹೆಚ್ಚಿನ ಖುಷಿ ತಂದಿದೆ! ಈ ಚಿತ್ರಗಳ ದೆಸೆಯಿಂದ ನನಗೆ ಉತ್ಕೃಷ್ಟ ಪಾತ್ರಗಳು ದೊರೆತು, ನನ್ನ ಅಭಿಮಾನಿಗಳು ಸಿಕ್ಕಾಪಟ್ಟೆ ದಿಲ್ ಖುಷ್ ಆಗಿದ್ದಾರೆ. `ಪುಷ್ಪಾ-2, ಗರ್ಲ್ ಫ್ರೆಂಡ್, ಥಮ್ಮಾ’ ಇತ್ಯಾದಿ ಇವುಗಳಿಂದ ಬಾಲಿವುಡ್ ನಲ್ಲಿ ನನ್ನ ನೆಲೆ ಬಲವಾಗಿ ಬೇರೂರಿದೆ.
“ಐತಿಹಾಸಿಕ `ಛಾಲಾ’ ಚಿತ್ರ ನನಗೆ ನಟನೆಯಲ್ಲಿ ಹೊಸ ಆಯಾಮ ನೀಡಿತು. ಈ ಐತಿಹಾಸಿಕ ಡ್ರಾಮಾ ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆ ನಾಯಕಿಯಾಗಿ ನಾನು ಬಹಳ ಹೆಮ್ಮೆಪಟ್ಟೆ. ಮರಾಠ ಸಾಮ್ರಾಜ್ಯದ ಪೃಷ್ಠಭೂಮಿ ಆಧರಿಸಿದ ಈ ಚಿತ್ರದಲ್ಲಿ ನಾನು ಛತ್ರಪತಿ ಸಾಂಭಾಜಿ ಮಹಾರಾಜನ ಧರ್ಮಪತ್ನಿ ಯಶೂಭಾಯಿ ಆಗಿದ್ದೀನಿ. ಈ ಪಾತ್ರವಂತೂ ನನ್ನ ಕೆರಿಯರ್ ನಲ್ಲೇ ಒಂದು ಮೈಲಿಗಲ್ಲು! ಆ ಪಾತ್ರಕ್ಕಿದ್ದ ಆಳ, ಗಾಂಭೀರ್ಯ, ಶಕ್ತಿ ಬಲು ಪ್ರಚಂಡವೆಂದೇ ಹೇಳಬೇಕು.
“ಇಷ್ಟು ಮಾತ್ರವಲ್ಲದೆ ನನ್ನ ಮತ್ತೊಂದು ಚಿತ್ರ `ಕುಬೇರ’ ಬಲು ಮಹತ್ವಪೂರ್ಣ ಎನಿಸಿದೆ. ಈ ಚಿತ್ರ ತೆಲುಗಿನ ನಾಗಾರ್ಜುನ, ತಮಿಳಿನ ಧನುಷ್ ಜೊತೆ ಒಂದು ಇಂಟೆನ್ಸ್ ಆ್ಯಕ್ಷನ್ ಥ್ರಿಲ್ಲರ್. ಈ ಚಿತ್ರದ ಕಥೆ ಸೀಕ್ರೆಟ್, ಸಸ್ಪೆನ್ಸ್, ರೊಮ್ಯಾಂಟಿಕ್ ಥ್ರಿಲ್ಲರ್. ಇದರಲ್ಲಿ ನನ್ನ ಪಾತ್ರಕ್ಕೆ ಹಲವು ಹರಹುಗಳಿವೆ. ಭಾವನಾತ್ಮಕ ಆಳದೊಂದಿಗೆ, ಫುಲ್ ಪ್ಯಾಕ್ಡ್ ಆ್ಯಕ್ಷನ್ಸ್ ಇವೆ. ಇದಾದ ಮೇಲಿನ ನನ್ನ ಚಿತ್ರವೇ `ಥಮ್ಮಾ.’ ಇದಂತೂ ಎಲ್ಲರ ಮನಮುಟ್ಟಿದ ಕಾಮಿಡಿ ಹಾರರ್ ಚಿತ್ರವಾಗಿ ಗಮನ ಸೆಳೆಯಿತು. ಈ ಸಲದ ದೀಪಾಳಿಗೆ ಇದು ಬಲು ದೊಡ್ಡ ಆಟಂಬಾಂಬ್ ಆಯ್ತು.
“ಈ ಚಿತ್ರದಲ್ಲಿನ ನನ್ನ ಕೆಲಸದ ಅನುಭವ ಬಲು ವಿಭಿನ್ನ. ಇದರಲ್ಲಿ ನನ್ನ ಪಾತ್ರ ಪ್ರೀತಿ, ಪ್ರೇಮ, ಪರಂಪರೆ, ತ್ಯಾಗಗಳ ಸುತ್ತಾ ಹೆಣೆಯಲ್ಪಟ್ಟಿದೆ. ಬಲು ಮಜಾ ನೀಡಿದ ಪಾತ್ರವಿದು. ಅದೇ ತರಹ ನನ್ನ ಬರಲಿರುವ ಚಿತ್ರ `ದಿ ಗರ್ಲ್ ಫ್ರೆಂಡ್’ ಇಂದಿನ ಯುವ ಪೀಳಿಗೆಯ ಆಶೋತ್ತರಗಳನ್ನು ಒಳಗೊಂಡಿದೆ. ಇದು ನನ್ನ ಕೆರಿಯರ್ ನ ಸಾಹಸದ ಒಂದು ಭಾಗವೇ ಸರಿ. ಇದು ಪ್ರಸ್ತುತ ಆಧುನಿಕ ಪೀಳಿಗೆಯ ಸಂಬಂಧಗಳು, ಅದರಲ್ಲಿನ ಜಟಿಲತೆಗಳು ಇತ್ಯಾದಿಗಳನ್ನು ಆಳವಾಗಿ ಪರಿಚಯಿಸುತ್ತದೆ. ಇದರಲ್ಲಿ ನನ್ನ ಪಾತ್ರ ಭಾವುಕತೆ, ಪ್ರೇಮಕಾಮ, ಸ್ವಯಂ ಅನ್ವೇಷಣೆಯ ಜರ್ನಿಯ ಕುರಿತಾಗಿದೆ. ಈ ಪಾತ್ರ ಹುಡುಗಾಟದ ಹುಡುಗಿಯಾದರೂ, ಇಂದಿನ ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿ ಬಲು ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಬಾಲಿವುಡ್ ಹೀರೋಸ್ ಕುರಿತಾಗಿ
“ಬಾಲಿವುಡ್ ನಲ್ಲಿ ನಾನು ಎಲ್ಲ ಹೀರೋಗಳ ಜೊತೆಯಲ್ಲೂ ಉತ್ತಮ ಟ್ಯೂನಿಂಗ್ ಹೊಂದಿದ್ದೇನೆ. ರಣಬೀರ್ಕಪೂರ್ ಜೊತೆ `ಅನಿಮಲ್’ನಲ್ಲಿ ನಟಿಸಿದ್ದೆ. ಆತ ನನ್ನೊಂದಿಗೆ ಬಲು ಉತ್ತಮ ರೀತಿಯಲ್ಲಿ ನಡೆದುಕೊಂಡಿದ್ದರು. ಬಿಲ್ ಕುಲ್ ಕೂಲ್ಕಾಮ್, ತಮ್ಮ ಕೆಲಸಕ್ಕೆ ಬಲು ಸಮರ್ಪಿತರು. ಶೂಟಿಂಗ್ ಸಂದರ್ಭದಲ್ಲಿ ಆತನ ಗಮನವೆಲ್ಲ ಕೇವಲ ಪಾತ್ರದ ಕಡೆಗೆ ಮಾತ್ರ ಪೋಕಸ್ ಆಗಿರುತ್ತಿತ್ತು. ಇದೇ ತರಹ `ಸಿಕಂದರ್’ ಚಿತ್ರದಲ್ಲಿ ಸಲ್ಮಾನ್ ಜೊತೆ ಸಹ ನನ್ನ ಟ್ಯೂನಿಂಗ್ ನೀಟ್ ಆಗಿತ್ತು. ಆತ ಬಹು ಕೇರಿಂಗ್, ಫನ್ ಲವಿಂಗ್ ಪರ್ಸನ್. ಆತ ಸೀರಿಯಸ್ ವಾತಾವರಣವನ್ನೂ ಸದಾ ನಗೆಗಡಲಲ್ಲಿ ತೇಲಿಸುತ್ತಿದ್ದರು.
“ಅದೇ ತರಹ `ಛಾಲಾ’ ಚಿತ್ರದಲ್ಲಿ ಅದ್ಭುತ ನಟ ವಿಕ್ಕಿ ಕೌಶಲ್ ಜೊತೆ ಕೆಲಸ ಮಾಡುವಾಗಲೂ. ಆತನಿಂದ ನಾನು ಬಹಳ ಕಲಿತಿದ್ದೇನೆ. ಇದೀಗ ತಾನೇ ನಾನು ಆಯುಷ್ಮಾನ್ ಖುರಾನಾ ಜೊತೆ `ಥಮ್ಮಾ’ ಚಿತ್ರ ಮುಗಿಸಿದ್ದೇನೆ, ಪ್ರೇಕ್ಷಕರಿಂದಲೂ ಉತ್ತಮ ರೆಸ್ಪಾನ್ಸ್ ಇದೆ. ಆತ ಬಹು ಪ್ರತಿಭಾವಂತ, ಮಹಾನ್ ಪರ್ಫೆಕ್ಷನಿಸ್ಟ್! ನಟನೆ ಮಾತ್ರವಲ್ಲದೆ ಚಿತ್ರದ ಇತರ ವಿಭಾಗಗಳನ್ನೂ ಆತ ಗಮನಿಸುತ್ತಾರೆ, ಹಾಡುಗಾರಿಕೆಯಲ್ಲೂ ಎತ್ತಿದ ಕೈ! ಅಮಿತಾಭ್ ರ ಮಗಳಾಗಿ ನಾನು `ಗುಡ್ ಬೈ’ ಚಿತ್ರದಲ್ಲಿ ನಟಿಸಿರುವೆ. ಈ ಇಂಡಸ್ಟ್ರಿಯ ಮಹಾನಾಯಕರಾದ ಅವರ ಬಗ್ಗೆ ನಾನು ಏನು ತಾನೇ ಹೇಳಬಲ್ಲೆ? ಅವರನ್ನು ಒಂದು ಆ್ಯಕ್ಟಿಂಗ್ ಇನ್ ಸ್ಟಿಟ್ಯೂಟ್ ಎನ್ನುವುದೇ ಸರಿ.”
ಲವ್ ಎಂಗೇಂಜ್ ಮೆಂಟ್ ರೊಮಾನ್ಸ್
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಅಬ್ಬರದ ಸುದ್ದಿ ಎಂದರೆ, ಕಳೆದ ಅಕ್ಟೋಬರ್ 3 ರಂದು ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡಾರ ಲಗ್ನಪತ್ರಿಕೆ ವಿಜೃಂಭಣೆಯಿಂದ ನಡೆಯಿತೆಂಬುದು. ಇದಾದ ನಂತರ ಇಬ್ಬರ ಕೈಗಳಲ್ಲೂ ಎಂಗೇಜ್ಮೆಂಟ್ ರಿಂಗ್ಸ್ ಫಳಫಳ! ಇವರಿಬ್ಬರ ಲಗ್ನ ಮುಂದಿನ ವ್ಯಾಲೆಂಟೈನ್ಸ್ ಡೇ ಹತ್ತಿರದ ಮುಹೂರ್ತದಲ್ಲಿದೆ.

ಇದು ನಿಜವಷ್ಟೆ?
ಇದಕ್ಕೆ ರಶ್ಮಿಕಾ ಹೇಳುತ್ತಾರೆ, “ಸಾಮಾನ್ಯವಾಗಿ ನಾನು ನನ್ನ ಪರ್ಸನಲ್ ವಿಷಯ ಹಂಚಿಕೊಳ್ಳುವವಳಲ್ಲ. ಮುಂದೆ ಹೇಗೆ ನಡೆಯಲಿದೆಯೋ ಅದು ನಿಮಗೆಲ್ಲ ಖಂಡಿತಾ ತಿಳಿದೇ ತಿಳಿಯುತ್ತದೆ, ಅಲ್ಲಿಯವರೆಗೂ ವೆಯ್ಟ್ ವಾಚ್!”
ಮುಂದಿನ ಚಿತ್ರಗಳ ಕುರಿತು…..
ಇತ್ತೀಚೆಗಷ್ಟೇ `ಥಮ್ಮಾ’ ಅದ್ಧೂರಿಯಾಗಿ ಸಕ್ಸೆಸ್ ಕಂಡಿದೆ. ಇದರ ಟ್ರೇಲರ್ ಸಹ ಅದ್ಭುತವಾಗಿತ್ತು. ಇನ್ನು ಬರಲಿರುವ ಚಿತ್ರಗಳು ಹಲವಾರಿವೆ. ಇದಾದ ನಂತರ ಬಹುನಿರೀಕ್ಷಿತ `ಪುಷ್ಪಾ-3′ ಚಿತ್ರದಲ್ಲಿ ಮತ್ತೆ ತನ್ನ ಐಕಾನಿಕ್ ಶ್ರೀವಲ್ಲಿ ಅವತಾರದಲ್ಲಿ ಪ್ರಕಟಗೊಳ್ಳಲಿದ್ದಾರೆ. `ದಿ ಗರ್ಲ್ ಫ್ರೆಂಡ್’ ತೆಲುಗು ಮೂಲದ `ರಶ್ಮಿಕಾ : ದಿ ಗರ್ಲ್ ಫ್ರೆಂಡ್’ ಹಿಂದಿ ಅವತರಣಿಕೆ ಬರಲಿದೆ. ಅದಾದ ಮೇಲೆ `ರೇನ್ ಬೋ.’ ಒಟ್ಟಾರೆ ಕನ್ನಡದ ಈ ಕಣ್ಮಣಿ, ಹಿಂದಿ ಚಿತ್ರಗಳಲ್ಲಿ ಬಿಝಿಯೋ ಬಿಝಿ! ತನ್ನ ಭಾವನಾತ್ಮಕ, ಸವಾಲು ತುಂಬಿದ, ದಟ್ಟ ಆಳದ ನಟನೆಯುಳ್ಳ ಚಿತ್ರಗಳಿಂದ ಎಲ್ಲರನ್ನೂ ರಂಜಿಸಲಿದ್ದಾರೆ, ಆಲ್ ದಿ ಬೆಸ್ಟ್ ರಶ್ಮಿಕಾ!





