ವಿಭಿನ್ನ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಇಡೀ ಭಾರತೀಯರ ಭಾವಾವೇಶಕ್ಕೆ ಒಪ್ಪುವಂತೆ ಮಾಡುವುದೇ ನಮ್ಮ ಬೆಳ್ಳಿತೆರೆಯ ಮೇಲಿನ ಸಿನಿಮಾದ ಮೋಡಿ! ಎಲ್ಲಾ ರೀತಿಯ ಜಾಗೃತಿ ಮೂಡಿಸುವುದೇ ಇದರ ಉದ್ದೇಶ. ಭಾರತೀಯ ಸಿನಿಮಾ ನಮಗೆ ಹಲವು ಹನ್ನೊಂದು ವಿಷಯ ತಿಳಿಸಿಕೊಡುತ್ತದೆ. ಸಿನಿಮಾ ಜನರ ಕಲ್ಪನೆ, ಸೃಜನಶೀಲತೆಗೆ ಕನ್ನಡಿ ಹಿಡಿಯುತ್ತದೆ, ಸಮಾಜದ ಪ್ರತಿಬಿಂಬವಾಗಿದೆ. ಸಮಾಜದಲ್ಲಿ ಹೊಸ ಚಿಂತನಶೀಲ ದೃಷ್ಟಿಕೋನ ಬೆಳೆಸುತ್ತದೆ. ಸಮಾಜ ಸಂಸ್ಕೃತಿಯ ವಿಕಾಸದ ಜೊತೆಯಲ್ಲೇ, ಅದು ನಮ್ಮೆಲ್ಲರ ಉತ್ತಮ ಮನರಂಜನೆಯ ಸಾಧನವಾಗಿದೆ. ಹೀಗಾಗಿ ಇದು ನಮ್ಮ ಸಮಾಜದ್ದೇ ದರ್ಪಣ ಎಂದರೂ ಉತ್ಪ್ರೇಕ್ಷೆಯಲ್ಲ. ಇದು ಅದ್ಭುತ ಶಕ್ತಿ ಹೊಂದಿದ್ದು ಸಾಮಾಜಿಕ ಕಳಕಳಿ, ಜನರ ವಿಚಾರಗಳನ್ನೇ ಪ್ರತಿಬಿಂಬಿಸುತ್ತದೆ. ಇಂಥ ಹಲವು ಭಾಷೆಗಳ ಭಾರತೀಯ ಚಿತ್ರಗಳ ಬಗ್ಗೆ ಈ ಅಂಕಣದಲ್ಲಿ ವಿವರವಾಗಿ ಗಮನಿಸೋಣವೇ….?

ಕನ್ನಡ : ರಕ್ಕಸ ಪುರದೊಳ್
ರಾಜ್ ಬಿ. ಶೆಟ್ಟಿ ಅಭಿನಯದ `ರಕ್ಕಸ ಪುರದೊಳ್’ ಚಿತ್ರ ಇಪ್ಪತ್ತೈದು ದಿನಗಳನ್ನು ಪೂರೈಸಿ ಐವತ್ತನೇ ದಿನದತ್ತ ಮುನ್ನುಗ್ಗುತ್ತಿದೆ.
ಸೈಕಾಲಜಿಕ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ `ರಕ್ಕಸ ಪುರದೊಳ್’ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಶಿವ ಹೆಸರಿನ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಊರಿನಲ್ಲಿ ಕೊಲೆಗಳು ನಡೆಯುತ್ತಿವೆ. ಆ ಕೊಲೆಗಳ ಹಿಂದೆ ದೆವ್ವ, ಪಿಶಾಚಿಯ ಕೈವಾಡ ಇದೆ ಎಂಬುದು ಊರಿನವರ ನಂಬಿಕೆ. ಕುಡಿತದ ವ್ಯಸನ ಮತ್ತು ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವ ಪೊಲೀಸ್ ಒಬ್ಬ, ಹಳ್ಳಿಯಲ್ಲಿ ನಡೆಯುವ ನಿಗೂಢ ಕೊಲೆಗಳನ್ನು ಹೇಗೆ ಭೇದಿಸುತ್ತಾನೆ ಎನ್ನುವುದೇ ಈ ಸಿನಿಮಾದ ಕಥೆ.
ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ರವಿವರ್ಮ ಕೆ.ಎನ್. ಎಂಟರ್ ಪ್ರೈಸಸ್ ನ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇತ್ತೀಚೆಗಷ್ಟೇ `ರಕ್ಕಸ ಪುರದೊಳ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಟ್ರೇಲರ್ ವೀಕ್ಷಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಮೆಚ್ಚುಗೆ ಸೂಚಿಸಿದ್ದರು ಎನ್ನುವುದು ಚಿತ್ರದ ಮತ್ತೊಂದು ಹೆಚ್ಚುಗಾರಿಕೆ. ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಜೊತೆಗೆ ಅನಿರುದ್ಧ್ ಭಟ್, ಅರ್ಚನಾ ಕೊಟ್ಟಿಗೆ, ಸ್ವಾತಿಷ್ಟ ಕೃಷ್ಣ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನವರು ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ.

ಬಂಗಾಳಿ : ಅದಮ್ಯ
ಈ ಚಿತ್ರ ಆರಂಭದಿಂದಲೇ ಪ್ರೇಕ್ಷಕರನ್ನು ಕುತೂಹಲದಿಂದ ಕಟ್ಟಿಹಾಕುತ್ತದೆ. ಈ ಚಿತ್ರದ ನವನಾಯಕ 23ರ ಹರೆಯದ ಪಾಶ್ ಪ್ರೇಕ್ಷಕರಿಗೆ ಹೊಸ ಭರವಸೆ ಹುಟ್ಟಿಸಿದ್ದಾರೆ. ಶಿಕಾರಿಯಾಗಿದ್ದ ಆತ ಹೇಗೆ ಟ್ರಾಪ್ ಆಗಿ, ತಾನೇ ಬಲಿಪಶುವಾದ ಎಂಬುದೇ ಕಥಾಹಂದರ. ಇದು ಪಂ.ಬಂಗಾಳದ ಸುಂದರಬನದಲ್ಲಿ ಘಟಿಸಿದ ಸತ್ಯ ಘಟನೆಯ ಆಧಾರಿತ. ಹಾಗೆ ಸಿಕ್ಕಿಹಾಕಿಕೊಂಡ ಆತ ಮುಂದೆ ಅಲ್ಲಿಂದ ಹೇಗೆ ಪಾರಾಗುತ್ತಾನೆ ಎಂಬುದೇ ಉಳಿದ ಕಥೆ. ಇಲ್ಲಿನ ಸಾಮಾನ್ಯ ಪ್ರಜೆಗಳು ಪ್ರಕೃತಿ ಹಾಗೂ ಆಡಳಿತದ ದರ್ಬಾರಿನ ಮಧ್ಯೆ ಸಿಲುಕಿ ಪಡುವ ಪಡಿಪಾಟಲೇ ಈ ಕಥೆಗೆ ಆಧಾರ.
ಈ ಚಿತ್ರ ನೋಡುತ್ತಿರುವಾಗ ಇಲ್ಲಿ ಪಾಶ್ ನ ಪಾತ್ರ ನಿಜಕ್ಕೂ ಭಯೋತ್ಪಾದಕ ಇರಬಹುದೇ ಅಥವಾ ಕ್ರಾಂತಿಕಾರಿಯೇ ಎಂಬ ಸಂದೇಹ ಪ್ರೇಕ್ಷಕರನ್ನು ಕಾಡುತ್ತದೆ. ಮತ್ತೊಂದು ಪ್ರಮುಖ ಪಾತ್ರ ಆರ್ಯನ್ ಘೋಷ್ ಸಹ ಅಷ್ಟೇ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಉಳಿದ ತಾರಾಗಣದಲ್ಲಿ ಸೇಂಜುತಿ ರಾಯ್, ಶೌರ್ಯ ಮದ್ರಾ, ಆರ್ಯ ಗಿರೀ, ಶುಭಂ ದತ್ತ, ರೆಲಿಶ್ ಖಾನ್, ದೇಬಶಿಷ್ ಗಿರೀ, ಶಂಕರ್ ಬಿಸ್ವಾಸ್ ಮುಂತಾದರಿದ್ದಾರೆ. ಚಿತ್ರದ ನಿರ್ದೇಶಕರು ರಂಜನ್ ಘೋಷ್, ಸಂಗೀತ ಅಭಿಜಿತ್ ಕುಂದು. ಅತಿ ಯಶಸ್ವೀ ಎನಿಸಿರುವ ಈ ಚಿತ್ರದ ಪ್ರೆಸೆಂಟರ್ಅಪರ್ಣಾ ಸೇನ್.

ಮಲೆಯಾಳಂ : ಮಸ್ತಿಷ್ಕ ಮರಣಂ
ಇದೊಂದು ಅನನ್ಯ ಸೈನ್ಸ್ ಫಿಕ್ಷನ್ ಚಿತ್ರ. ಕೊಚ್ಚಿಯಲ್ಲಿ ನಡೆಯುವ ಈ ಕಥೆಯಲ್ಲಿ, ತಂದೆಯೊಬ್ಬ ಸ್ಪೆಷಲ್ ವರ್ಚುಯೆಲ್ ರಿಯಾಲಿಟಿ ಸಿಸ್ಟಂ ಮೂಲಕ ತನ್ನ ಶೋಕಾಚರಣೆ ನಡೆಸುತ್ತಾನೆ. ಈ ಡಿಜಿಟಲ್ ಲೋಕದಲ್ಲಿ ಈತನ ನೆನಪುಗಳನ್ನೇ ಗ್ರಾಹಕರು ಕೊಂಡು ಮಾರಬಹುದಾಗಿದೆ! ಇಲ್ಲಿ ಸಾಮಾನ್ಯ ಪಬ್ಲಿಕ್ ಹೇಗೆ ಸೆಲೆಬ್ರಿಟಿಗಳ ಖಾಸಗಿ ಜೀವನದ ಕುರಿತು ಅನಗತ್ಯ ಆಸಕ್ತಿ ವಹಿಸುತ್ತಾರೆ ಎಂಬುದರತ್ತ ಚಿತ್ರ ಗಿರಕಿ ಹೊಡೆಯುತ್ತದೆ. ಮಾಮೂಲಿ ಚಿತ್ರಗಳಿಗಿಂತ ವಿಭಿನ್ನವಾಗಿ ಅತಿ ಕ್ರಿಯೇಟಿವ್ ಆಗಿ ಈ ಚಿತ್ರ ಮೂಡಿಬಂದಿದೆ. ಇಲ್ಲಿನ ಬ್ಲ್ಯಾಕ್ ಮಿರರ್ ಡಾರ್ಕ್ ಟೆಕ್ ಫೋಕಸ್ ಚಿತ್ರಣ ಹೆಚ್ಚಿನ ಪ್ರಶಂಸೆಗೆ ಒಳಗಾಗಿದೆ.
ರಾಜೀಶಾ ವಿಜಯನ್ ಒಬ್ಬ ನಟಿಯಾಗಿ ಇಲ್ಲಿ ಗೆಲ್ಲುತ್ತಾರೆ, ಸೆಲೆಬ್ರಿಟಿಯಾದ ಆಕೆ ಇಲ್ಲಿ ತನ್ನ ಖಾಸಗಿ ಬದುಕನ್ನು ಜೀವಿಸಲಾರದೆ ತೊಳಲಾಡುತ್ತಾಳೆ. ಭವಿಷ್ಯತ್ತಿನ ಕಥೆಯನ್ನು ಅಡ್ವಾನ್ಸ್ಡ್ ಗ್ಯಾಜೆಟ್ಸ್ ನಲ್ಲಿ ಹೇಳಲಾಗಿದ್ದರೂ, ಇಲ್ಲಿನ ನವೀನ ಪ್ರಯೋಗ ವಿಜ್ಞಾನ, ಕಾಮಿಡಿ ಎರಡನ್ನೂ ಬೆರೆಸಿಕೊಂಡಿದೆ. ಈ ಚಿತ್ರದ ನಿರ್ದೇಶಕರು ಡಿ. ಕೃಷ್ಣನ್. ಪ್ರಮುಖ ಉಳಿದ ತಾರಾಗಣದಲ್ಲಿ ನಿರಂಜನ್ ಎಂ. ರಾಜು, ಎಸ್. ಬಾಲಚಂದ್ರನ್, ದಿವ್ಯಪ್ರಭಾ, ಸಂಜು ಶಿವರಾಂ, ಸಚಿನ್ ಜೋಸೆಫ್, ಸುರೇಶ್ ಕೃಷ್ಣ ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಸಂಗೀತ ಒದಗಿಸಿದವರು ವಾರ್ಕೆ. ಈ ಚಿತ್ರಕ್ಕೆ ಸೀಕ್ವೆಲ್ ಗ್ಯಾರಂಟಿ ಎಂದು ನಿರ್ದೇಶಕರು ಕೊನೆಯ ದೃಶ್ಯದ ಮೂಲಕ ಸಾರುತ್ತಾರೆ.

ತಮಿಳು : ತಾಯ್ ಕಿಳೈವಿ
ಈ ಅಪ್ಪಟ ಸಾಂಸಾರಿಕ ಗ್ರಾಮೀಣ ಚಿತ್ರದ ನಿರ್ದೇಶಕರು ಶಿವಕುಮಾರ್ ಮುರುಗೇಶನ್. `ಜೀವನ ಚಕ್ರ’ ಖ್ಯಾತಿಯ ರಾಧಿಕಾ ಶರತ್ ಕುಮಾರ್ ಇಲ್ಲಿ ಪ್ರೌಢ ಅಜ್ಜಿ ಪೊನ್ನು ತಾಯಿ ಆಗಿ ನಟಿಸಿದ್ದಾರೆ. ಈಕೆ ಪತಿಯನ್ನು ಕಳೆದುಕೊಂಡು, ಹಳ್ಳಿಯಲ್ಲಿ ಒಬ್ಬಂಟಿ ಜೀವನ ನಡೆಸುತ್ತಾ, ಸಾಲಕ್ಕೆ ಹಣ ಕೊಟ್ಟು ಬಡ್ಡಿ ವಸೂಲು ಮಾಡುತ್ತಿರುತ್ತಾಳೆ. ಹೀಗಾಗಿ ಇಡೀ ಗ್ರಾಮ ಅಜ್ಜಿಯನ್ನು ಕಂಡರೆ ಗಡಗಡ! ಈಕೆಗೆ ಒಬ್ಬ ಮಗ, ಮೂವರು ಮೊಮ್ಮಕ್ಕಳು. ಆಕಸ್ಮಿಕವಾಗಿ ಅಜ್ಜಿ ಜಾರಿ ಬಿದ್ದು ಹಾಸಿಗೆ ಹಿಡಿದಾಗ, ನಗರದ ಮೊಮ್ಮಕ್ಕಳು ಈ ಅಜ್ಜಿ ಅಡಗಿಸಿಟ್ಟಿರುವ 160 ಸವರನ್ ಚಿನ್ನಾಭರಣ ವಶಪಡಿಸಿಕೊಳ್ಳಲು, ಅಜ್ಜಿಯ ಸಾವನ್ನೇ ಕಾಯುತ್ತಾ ಕೂರುತ್ತಾರೆ! ಇವರು ಅಜ್ಜಿಯನ್ನು ಕಾಪಾಡುತ್ತಾರಾ, ಆಸ್ತಿ ಲಪಟಾಯಿಸುತ್ತಾರಾ? ಇದುವೇ ಚಿತ್ರದ ಕಾಮಿಡಿ ಟ್ರಾಕ್.
ಇಲ್ಲಿ ಒಂಟಿ ಮುದುಕಿ ರಾಧಿಕಾರ ಅಭಿನಯವೇ ಇಡೀ ಚಿತ್ರಕ್ಕೆ ಜೀವಾಳ! ಹಳ್ಳಿಯ ಪರಿಸರ, ಅಸಹಾಯಕ ಮದುಕಿಯಾಗದೆ ಜೋರುವ ಮಾಡುವ ಅಜ್ಜಿ, ಆಕೆಯ ತೂತುಬಿದ್ದ ಕಿವಿಯ ಮೇಕಪ್, ಮೊಮ್ಮಕ್ಕಳನ್ನು ದಬಾಯಿಸುವ ಪರಿ ನಗೆಗಡಲಲ್ಲಿ ತೇಲಿಸುತ್ತದೆ. ಸೆಂಟಿಮೆಂಟ್ ಆಧಾರಿತ ದ್ವಿತೀಯಾರ್ಧ ತೀವ್ರ ಪರಿಣಾಮಕಾರಿ. ಚಿತ್ರದ ಉಳಿದ ತಾರಾಗಣದಲ್ಲಿ ಸಿಂಗಂಪುಲಿ, ಅರುಳ್ ದಾಸ್, ಮುನೀಶ್ ಕಾಂತ್, ಬಾಲ ಸರವಣನ್, ಇಳವರಸು, ಜಾರ್ಜ್ ಮುಂತಾದವರಿದ್ದಾರೆ. ಚಿತ್ರಕ್ಕೆ ಸಂಗೀತ ಒದಗಿಸಿದವರು ಕೆ. ಪ್ರಸನ್ನ.

ತೆಲುಗು : ಬುಟ್ಟ ಬೊಮ್ಮ
ಇದು ಮೂಲತಃ ಮಲೆಯಾಳಂನ `ಕಪ್ಪೆಲಾ’ ಚಿತ್ರದ ರೀಮೇಕ್. ಈ ಚಿತ್ರ ಯುವಜನತೆಗೆ, ಮುಖ್ಯವಾಗಿ ಎಲ್ಲವನ್ನೂ ಕಣ್ಣುಮುಚ್ಚಿ ನಂಬಿಬಿಡುವ ನಮ್ಮ ಹೆಣ್ಣುಮಕ್ಕಳಿಗೆ ಕಣ್ತೆರೆಸುವ ಮೆಸೇಜ್ ನೀಡುತ್ತದೆ. ಮಧ್ಯಮ ವರ್ಗದ ಹಳ್ಳಿ ಹುಡುಗಿ ಸತ್ಯಾ, ಗ್ರಾಮೀಣ ಪರಿಸರದಲ್ಲಿ ಬೆಳೆದ ಮುಗ್ಧೆ. ತನ್ನ ಮನದಾಳದ ಸಿಹಿಕಹಿಯನ್ನು ಊರ ದೇವತೆ ಗಣಪನಲ್ಲಿ ಬಂದು ನಿವೇದಿಸಿಕೊಳ್ಳುವುದು ಅವಳ ಅಭ್ಯಾಸ. ಅವಳಿಗಿರುವ ಒಂದೇ ಕನಸು, ಒಂದು ಸ್ಮಾರ್ಟ್ ಫೋನ್ ಕೊಂಡು, ರೀಲ್ಸ್ ಮಾಡಿ ನಗರದೆಲ್ಲೆಡೆ ಹೆಸರು ಗಳಿಸಬೇಕೆಂಬುದು!
ಹೀಗೆ ಕನಸು ಕಾಣುವವಳಿಗೆ ಒಂದು ರಾಂಗ್ ನಂಬರ್ ಏನೇನೋ ಆಶಾಭಾವನೆ ಹುಟ್ಟಿಸುತ್ತದೆ. ಆಕೆ ಈ ರಾಂಗ್ ನಂಬರ್ ನಿಂದ ಪರಿಚಯವಾಗುವ ಶ್ರೀಮಂತ ಹುಡುಗನ ಪ್ರೇಮಕ್ಕೆ ಸಿಲುಕುತ್ತಾಳೆ. ಅವನನ್ನು ಮುಖತಃ ಭೇಟಿಯಾಗದೆಯೇ ಪ್ರೇಮಕ್ಕೆ ಸಿಲುಕಿ, ಮನೆಯವರಿಗೂ ಹೇಳದೇ ಕೇಳದೇ, ಮನೆ ಬಿಟ್ಟು ಬಂದುಬಿಡುತ್ತಾಳೆ. ಮೊದಲ ಬಾರಿಗೆ ರಾಜಧಾನಿ ಹೈದರಾಬಾದ್ ಗೆ ಬಂದ ಈ ಹಳ್ಳಿಹುಡುಗಿ ಎದುರಿಸಿದ ಎಡವಟ್ಟುಗಳೇನು? ಮುಂದೆ ಸುರಕ್ಷಿತವಾಗಿ ಮನೆ ಸೇರಿದಳೇ ಎಂಬುದೇ ಮುಂದಿನ ಕುತೂಹಲಕಾರಿ ಕಥೆ. ಮುಖ್ಯ ತಾರಾಗಣದಲ್ಲಿ ಅನೀಖಾ, ಅರ್ಜುನ್ ದಾಸ್, ಸೂರ್ಯ ವಸಿಷ್ಠ, ನ್ಯಾಯ ಸ್ವಾಮಿ ಮುಂತಾದವರಿದ್ದಾರೆ. ಈ ಚಿತ್ರದ ನಿರ್ದೇಶನ ಶೌರಿ ಚಂದ್ರಶೇಖರ್/ಟಿ. ರಮೇಶ್ ಅವರದು. ಸಂಗೀತ : ಗೋಪಿ ಸುಂದರ್/ ಸ್ವೀಕಾರ್ ಅಗಸ್ಥಿ.

ಮರಾಠಿ : ತಿಘೀ
ಇದು ಮರಾಠಿ ಚಿತ್ರಗಳಲ್ಲಿ ಸುಖದಾಯಕ ಆಶ್ಚರ್ಯ ಮೂಡಿಸಿರುವ ಚಿತ್ರ. ಎಷ್ಟೋ ದಿನಗಳಿಂದ ಒಂದು ಉತ್ತಮ ಚಿತ್ರಕ್ಕಾಗಿ ಕಾಯುತ್ತಿದ್ದ ಮಹಾರಾಷ್ಟ್ರದ ಪ್ರೇಕ್ಷಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ಕ್ರೆಡಿಟ್ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಜೀವಜೀವಿಷಾ ಕಲಾಕಾರರಿಗೆ ಸಲ್ಲುತ್ತದೆ.
ಚಿತ್ರದ ಕಥೆ ಮೂವರು ಹೆಂಗಸರನ್ನು ಆಧರಿಸಿದೆ. ಕ್ಯಾನ್ಸರ್ ಪೀಡಿತೆ ಹೇಮಲತಾ ಕೆಲವೇ ದಿನಗಳಲ್ಲಿ ಸಾಯಲಿರುವ ವಯೋವೃದ್ಧ ರೋಗಿ. ಈಕೆಯ ಹಿರಿಯ ಮಗಳು ಸ್ವಾತಿ ವಿವಾಹಿತೆ, ಆಫೀಸ್ ನಲ್ಲಿ ಬಾಸ್ ಪೀಡನೆಯಿಂದ ಹಿಂಸೆ ಅನುಭವಿಸುತ್ತಿರುತ್ತಾಳೆ. ಚಿಕ್ಕ ಮಗಳು ಸಾರಿಕಾ ತಾಯಿಯ ಸೇವೆ ಮಾಡುತ್ತಾ, ಕೆರಿಯರ್ ನಲ್ಲಿ ಏಳಿಗೆ ಕಾಣಿಸದೆ ತತ್ತರಿಸುತ್ತಾಳೆ. ಮುಂದೆ ಇವರುಗಳ ಜೀವನದಲ್ಲಿ ನಡೆದುದೇನು ಎಂಬುದೇ ಚಿತ್ರದ ಉಳಿದ ಭಾಗ. ಭಾವನಾತ್ಮಕ ಎಳೆ, ಸರಳ ಸಂಭಾಷಣೆ, ಬಿಗಿಯಾದ ಚಿತ್ರಕಥೆ, ಚಿತ್ರವನ್ನು ಎತ್ತಿಹಿಡಿದಿದೆ. ಪ್ರಮುಖ ತಾರಾಗಣದಲ್ಲಿ ಭಾರತಿ ಅಚರೇಕರ್, ನೇಹಾ ಪೀಂಡ್ಸೆ, ಸೋನಾಲಿ ಕುಲಕರ್ಣಿ, ನಿಪುಣ್, ಪುಷ್ಪರಾಜ್, ಜೆಮಿನಿ ಮುಂತಾದವರಿದ್ದಾರೆ. ಸಂಗೀತ : ಅದ್ವೈತ್ ನೇಮ್ಲೇಕರ್/ನೀಲೇಶ್ ಮೊಹರಿ.

ಗುಜರಾತಿ : ಬೇಹದ್
ಇದೊಂದು ಅಪ್ಪಟ ಥ್ರಿಲ್ಲರ್ ಚಿತ್ರ. ಒಬ್ಬ 18ರ ಹುಡುಗಿ, ಪ್ರೇಮಕ್ಕೆ ಸಿಲುಕಿ ಅವನ ಹಿಂದೆ ಬೀಳುತ್ತಾಳೆ. ಅವನು ತನ್ನ ಪೂರ್ವಾಪರ ಸತ್ಯ ಮರೆಮಾಚಿರುತ್ತಾನೆ. ಇದರಲ್ಲಿನ ಭಾವನಾತ್ಮಕತೆ, ಸಸ್ಪೆನ್ಸ್, ಸಾಮಾಜಿಕ ಕಳಕಳಿ ಪ್ರಶಂಸನೀಯ. ಮಗಳು ಹೀಗೆ ನಿಗೂಢ ವ್ಯಕ್ತಿಯಿಂದ ಕಣ್ಮರೆಯಾದಾಗ, ತಂದೆ ಅವಳ ಹುಡುಕಾಟದಲ್ಲಿ ಪತ್ತೇದಾರಿ ಗೆಳೆಯನ ನೆರವು ಕೋರುವುದು ಅನಿವಾರ್ಯವಾಗುತ್ತದೆ. ಇಲ್ಲಿನ ಪ್ರತಿಯೊಂದು ದೃಶ್ಯ ಮಧ್ಯಮ ವರ್ಗದ ಟೆನ್ಶನ್ಸ್ ಬವಣೆಗಳನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ.
ಇಲ್ಲಿ ನಂಬಿಕೆಯೇ ಮೋಸಕ್ಕೆ, ನಂಬಿಕೆದ್ರೋಹಕ್ಕೆ ತಿರುಗಿದಾಗ ಆ ಅಸಹಾಯಕ ಹೆಣ್ಣು ಬಚಾವಾಗುವುದಾದರೂ ಹೇಗೆ? ಮುಂದೆ ಅವಳ ಗತಿ ಏನಾಯಿತು ಎಂಬುದೇ ಚಿತ್ರದ ಉಳಿದಾರ್ಧ. ಕೌಟುಂಬಿಕ ಕಥಾಹಂದರ ಚಿತ್ರದ ಸಸ್ಪೆನ್ಸ್, ಥ್ರಿಲ್ಲರ್ ಜೊತೆ ಬೆರೆತು ಉತ್ತಮ ಹೂರಣ ಒದಗಿಸಿದೆ. ಈ ಚಿತ್ರದ ನಿರ್ದೇಶಕರು ಅಂಕುಶ್ ಭಟ್. ಮುಖ್ಯ ತಾರಾಗಣದಲ್ಲಿ ದಿನೇಶ್ ಗಾಂಧಿ, ಹಿತು ಕನೋಡಿಯಾ, ಜಾಹ್ನವಿ ಚೌಹಾನ್ ಮುಂತಾದವರಿದ್ದಾರೆ. ಸಂಗೀತ : ಋತ್ವಿಜ್ ಪಾಂಡ್ಯ/ ಅಧೇಶ್ ಬಾಬೇರಿಯಾ/ ಮಯೂರ್ ಗಲ್ಚಾರ್.





