ಕೆಲವು ವರ್ಷಗಳ ಹಿಂದೆ ನಿಜಕ್ಕೂ ನಮ್ಮ ಬಹುತೇಕರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ದುಡಿಯುವ ಕೈ ಎರಡಾದರೇ ಕುಳಿತು ತಿನ್ನುವ ಕೈ ಹತ್ತಾರು ಇರುತ್ತಿತ್ತು. ಸರಿಯಾಗಿ ಎರಡು ಹೊತ್ತು ಹೊಟ್ಟೆ ತುಂಬಾ ಊಟವೂ ಇಲ್ಲದಿರುವಂತಹ ಸಂಧರ್ಭವೂ ಇತ್ತು. ಆದರೂ ನಮ್ಮ ಅಜ್ಜ-ಅಜ್ಜಿಯರ ಆಯಸ್ಸು 80-90 ರ ಆಸುಪಾಸಿನಲ್ಲಿಯೇ ಇರುತ್ತಿತ್ತು. ಆಷ್ಟು ವರ್ಷಗಳ ಕಾಲ ಅವರು ಕಷ್ಟದಲ್ಲೇ ಜೀವಿಸಿದರೂ ಅವರಿಗೆಂದೂ ಬಿಪಿ, ಶುಗರ್, ಕಿಡ್ನಿ ತೊಂದರೆಯಾಗಲಿ ಇರಲೇ ಇಲ್ಲ. ಹೃದಯಾಘಾತ ಎನ್ನುವುದನ್ನು ಕೇಳೇ ಇರಲಿಲ್ಲ ಅವರೆಲ್ಲರೂ ಗಂಡಾ ಗುಂಡೀ ಮಾಡಿಯಾದರೂ ತುಪ್ಪಾ ತಿನ್ನು ಎಂದು ಆರಾಮವಾಗಿ ಆರೋಗ್ಯವಾಗಿ ಇರುತ್ತಿದ್ದದ್ದಕ್ಕೆ ಮುಖ್ಯ ಕಾರಣ ಎಂದರೆ ಅವರೆಲ್ಲರೂ ಕಷ್ಟ ಪಟ್ಟು ದೇಹ ದಂಡಿಸಿ ದುಡಿದು ಸಂಪಾದನೆ ಮಾಡುತ್ತಿದ್ದದ್ದಲ್ಲದೇ ಇದ್ದದ್ದರಲ್ಲೇ ಸಂತೋಷವಾಗಿ ಹಂಚಿಕೊಂಡು ತಿನ್ನುತ್ತಿದ್ದ ಕಾರಣ ಅಷ್ಟು ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೇ ಇರುತ್ತಿದ್ದರು.
ಅದಕ್ಕೆ ಏನೋ 70ರ ದಶಕದಲ್ಲಿ ಬಂದ ಭೂತಯ್ಯನ ಮಗ ಅಯ್ಯೂ ಕನ್ನಡದ ಚಿತ್ರದಲ್ಲಿ ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ ನಾ ಮನಸೋತೆನೆ ಚಿನ್ನ… ಹಾಡಿನಲ್ಲಿ ನಾಯಕಿಯ ಸಣ್ಣದಾದ ನಡುವಿನ ಬಗ್ಗೆ ಸೊಗಸಾಗಿ ಹೇಳಿದ್ದಾರೆ. ಅದೇ 2002ರದ ಹೊತ್ತಿಗೆ ಬಿಡುಗಡೆಯಾದ ಸುದೀಪ್ ಅಭಿನಯದ ಚಂದು ಸಿನಿಮಾದಲ್ಲಿ ಸೊಂಟದ ವಿಸ್ಯಾ ಬೇಡವೋ ಸಿಸ್ಯಾ ಸೊಂಟ ಸೂಪರು ಆದ್ರೇ ಡೇಂಜರೂ… ಎಂಬ ಹಾಡನ್ನೂ ಹೇಳುವ ಮೂಲಕ 3 ದಶಕಗಳಲ್ಲಿ ನಮ್ಮ ಯುವಕ ಯುವತಿಯರಲ್ಲಿ ಆದ ಭಾರೀ ಬದಲಾವಣೆಯನ್ನು ಆ ಹಾಡಿನ ಮೂಲಕ ಹೇಳಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.

70-80 ರ ದಶಕದವರೆಗೂ ಈ ಪರಿಯ ನಗರೀಕರಣವಾಗದೇ ಇದ್ದು ಮಳೆ ಬೆಳೆಯೂ ಚೆನ್ನಾಗಿ ಆಗುತ್ತಿದ್ದ ಕಾರಣ ಬಹುತೇಕರು ಪಟ್ಟಣದಿಂದ ದೂರವೇ ಉಳಿದು ಹಳ್ಳಿಯಿಂದ ಬೆಳೆಗ್ಗೆ ಎದ್ದು ಹೆಣ್ಣು ಮಕ್ಕಳು ಕಸ ಗುಡಿಸಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಬಿಟ್ಟು ಊರಿನ ಮುಂದಿನ ಕೆರೆಕಡೆಗೆ ಹೋಗಿ ಪಾತ್ರೇ ತೊಳೆದುಕೊಂಡು ಊರ ಹೊರಗಿನ ಸಿಹಿ ನೀರಿನ ಭಾವಿಯಿಂದ ಕುಡಿಯಲು ನೀರು ತಂದು ಮನೆಯ ಮುಂದಿನ ಭಾವಿಯಿಂದ ಬಚ್ಚಲು ಮನೆಗೆ ನೀರು ತುಂಬಿಸಿ, ಮನೆಯವರಿಗೆ ಅಡುಗೆ ಮಾಡಲು ಅಡುಗೆ ಮನೆ ಸೇರಿಕೊಂಡರೆ, ಬಂದರೆ ಗಂಡಸರು ಕೊಟ್ಟಿಗೆ ಗುಡಿಸಿ ಸಗಣಿ ಬಾಚಿ ತಿಪ್ಪಗೆ ಹಾಕಿ ದನಕರುಗಳನ್ನು ಹೊಡೆದು ಕೊಂಡು ಸೂರ್ಯ ನೆತ್ತಿಗೆ ಬರುವ ವರೆಗೂ ರೆಟ್ಟೆ ಬಗ್ಗಿಸಿ ಬೆವರು ಬರುವ ವರೆಗೂ ಕೃಷಿ ಚಟುವಟಿಕೆಗಳಲ್ಲಿ ಮಾಡುತ್ತಿದ್ದರೆ, ಮನೆಯವರಿಗಾಗಿ ಬಿಸಿ ಬಿಸಿ ಮುದ್ದೇ ಬಸ್ಸಾರು ಮಾಡಿಕೊಂಡು ಹೊಲಕ್ಕೆ ತೆಗೆದುಕೊಂಡು ಬಂದು ಅಲ್ಲೇ ಮರದ ನೆರಳಿನಲ್ಲಿ ಒಟ್ಟಿಗೆ ಕುಳಿತುಕೊಂಡು ಊಟಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕಾರಣ ಮೈಯ್ಯಲ್ಲಿದ ಕೊಬ್ಬೆಲ್ಲಾ ಅವರಿಗೇ ಅರಿವಿಲ್ಲದಂತೆ ಅವರು ಮಾಡುತ್ತಿದ ಕೆಲಸ ಕಾರ್ಯಗಳ ಮೂಲಕ ಕರಗಿ ಹೋಗಿ ಸ್ಥೂಲಕಾಯ ಎನ್ನುವುದರ ಅರಿವೇ ಇರಲಿಲ್ಲ.

80ರ ಅಂತ್ಯದ ಹೊತ್ತಿಗೆ ನಿಧಾನವಾಗಿ ಒಂದೊಂದೇ ಯಾಂತ್ರಿಕೃತವಾಗಿ ಬತ್ತ ಕುಟ್ಟುವ ಒನಕೆ ಮತ್ತು ಹಿಟ್ಟು ಬೀಸುವ ಬೀಸೋ ಕಲ್ಲಿನ ಜಾಗದಲ್ಲಿ ಊರಿನಲ್ಲಿ floor millಗಳು ಬಂದವೋ ಒನಕೆ ಮತ್ತು ಬೀಸೋಕಲ್ಲು ಅಟ್ಟ ಸೇರಿಕೊಂಡವು. ಇನ್ನು ರುಬ್ಬಲು, ತಿರುವಲು ಬಳಸುತ್ತಿದ್ದ ಒರಳುಕಲ್ಲಿನ ಜಾಗಕ್ಕೆ mixer grinder/wet grinderಗಳು ಬಂದು ಹೆಣ್ಣು ಮಕ್ಕಳನ್ನು ಮತ್ತಷ್ಟು ಸೋಮಾರಿಗಳನ್ನಾಗಿಸಿತು ಎಂದರೂ ತಪ್ಪಾಗದು. ಇನ್ನು ಕಾಡೆಲ್ಲಾ ಕಡಿದು ನಾಡು ಮಾಡಿದ ಕಾರಣ ಮಳೆ ಎಲ್ಲವೂ ಕಡಿಮೆ ಆಗಿ ಅಂತರ್ಜಲ ಮಟ್ಟ ಕುಸಿದು ಊರಿನ ಬಾವಿಗಳು ಬರಿದಾದಾಗ ನೂರಾರು ಅಡಿಗಳ ಆಳಕ್ಕೆ ಕೊಳವೇ ಭಾವಿ ಕೊರೆದು ಅದಕ್ಕೆ ಮೋಟರ್ ಪಂಪ್ ಅಳವಡಿಸಿ, ಯಾವಾಗ ಸ್ವಿಚ್ ಒತ್ತಿದ ತಕ್ಷಣ ನೀರು ಬರಲು ಆರಂಭಿಸಿತೋ, ಅದುವರೆಗೂ ಸಾವಿರಾರು ನೀರಿನ ಕೊಡವನ್ನು ಹೊತ್ತಿದ್ದ ಸೊಂಟಗಳು ನಿಸ್ತೇಜವಾಗಿದ್ದಲ್ಲದೇ ನಿಧಾನವಾಗಿ ದೇಹದಲ್ಲಿ ಕೊಬ್ಬು ನಮಗೇ ಅರಿವಿಲ್ಲದಂತೆಯೇ ಬೆಳೆಯುತ್ತಾ ಹೋಗಿದ್ದಲ್ಲದೇ ಕಲಬೆರಕೆ ಎಣ್ಣೆ, ಆಹಾರಗಳಿಂದ ಮೂವತ್ತಕ್ಕೆಲ್ಲಾ ಕೂದಲು ಬೆಳ್ಳಗಾಗುವುದೋ ಇಲ್ಲವೇ ಸಂಪೂರ್ಣ ಉದುರಿಹೋಗುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ, ದೇಹಕ್ಕೆ ಯಾವುದೇ ವ್ಯಾಯಾಮವಿಲ್ಲದಿರುವ ಕಾರಣ, ಹೆಂಗಸು ಮತ್ತು ಗಂಡಸರು ಎನ್ನುವ ಬೇಧ ಭಾವವಿಲ್ಲದೇ, ಯದ್ವಾ ತದ್ವಾ ದಪ್ಪವಾಗಿ ಸ್ಥೂಲಕಾಯವಾಗುತ್ತಿರುವ ಕಾರಣದಿಂದ ಸಣ್ಣ ವಯಸ್ಸಿನಲ್ಲಿಯೇ ಬಿಪಿ, ಶುಗರ್, ಕಿಡ್ನಿ ತೊಂದರೆ ಅನುಭವಿಸುತ್ತಿದ್ದು 40-45ರ ವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗಿ 50+ ಇರುವುದೇ ಬೋನಸ್ ಎನಿಸುವಂತಾಗಿರುವುದು ಸುಳ್ಳಲ್ಲ.





