ಶಿಶುಗಳ ಚರ್ಮ ಬಲು ಸೂಕ್ಷ್ಮ, ನಾಜೂಕು. ಹೀಗಾಗಿ ಬೇಬಿ ಸ್ಕಿನ್ ಕೇರ್ ಬಗ್ಗೆ ಈ ಸಲಹೆಗಳನ್ನು ಗುರುತಿಸಿ.....
ನವಜಾತ ಶಿಶುಗಳ ಚರ್ಮ ಬಲು ನಾಜೂಕು ಹಾಗೂ ಸಂವೇದನಾಶೀಲ. ಹಿರಿಯರು ಬಳಸುವಂಥ ಸಾಬೂನು, ಶ್ಯಾಂಪೂ, ಆಯಿಲ್, ಡಿಟರ್ಜೆಂಟ್, ಪೌಡರ್ ಇತ್ಯಾದಿಗಳಲ್ಲಿನ ರಾಸಾಯನಿಕಗಳು ಅವುಗಳ ಚರ್ಮಕ್ಕೆ ಬಲು ಹಾನಿ ಉಂಟು ಮಾಡುತ್ತವೆ. ಇದರಿಂದ ಮಗುವಿನ ಚರ್ಮದಲ್ಲಿ ಉರಿ, ಡ್ರೈನೆಸ್, ರಾಶೆಸ್ ಇತ್ಯಾದಿ ಸಮಸ್ಯೆ ಕಾಡಬಹುದು. ಇದೇ ತರಹ ಸುವಾಸನೆಯುಳ್ಳ ಬೇಬಿ ಪ್ರಾಡಕ್ಟ್ಸ್ ನ್ನೂ ಎಂದೂ ಬಳಸದಿರಿ.
ಹಾಗಾದರೆ ಮಗುವಿನ ಚರ್ಮ ಸದಾ ಕೋಮಲವಾಗಿರಲು ಅನುಸರಿಸಬೇಕಾದ ಸಲಹೆಗಳೇನು? :
ಸ್ನಾನ : ಮಗು ಹುಟ್ಟಿದ ಮೊದಲ ತಿಂಗಳಲ್ಲಿ, ವಾರಕ್ಕೆ 3-4 ಸಲ ಅಗತ್ಯವಾಗಿ ಸ್ಪಂಜ್ ಬಾಥ್ ಕೊಡಿ. ಹಾಲು ಕುಡಿಸಿದ ನಂತರ ಬಾಯನ್ನು ಸ್ಪಂಜ್ ನಿಂದ ಒರೆಸಿರಿ. ಡೈಪರ್ ಬದಲಾಯಿಸಿದ ನಂತರ, ಆ ಭಾಗವನ್ನು ಸ್ಪಂಜ್ ನಿಂದ ನೀಟಾಗಿ ಒರೆಸಿಕೊಳ್ಳಿ. ಮಗವಿಗೆ 2ನೇ ತಿಂಗಳಲ್ಲಿ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿಸಿ, ಕುದಿನೀರು ಬೇಡ. ಮೈಲ್ಡ್ ಸೋಪ್, ಆ್ಯಂಟಿ ಬ್ಯಾಕ್ಟೀರಿಯಲ್ ಸೋಪ್ ಇತ್ಯಾದಿ ಬಳಸಲೇಬೇಡಿ. ಇಲ್ಲದಿದ್ದರೆ ಇವು ಮಗುವಿನ ಸಂವೇದನಾಶೀಲ ಚರ್ಮವನ್ನು ಹಾಳು ಮಾಡಿಯಾವು. ಸ್ನಾನದ ನಂತರ ಕಾಟನ್ನಿನ ಮೃದು ಟವೆಲ್ ನಿಂದ ನಿಧಾನವಾಗಿ ಒರೆಸಬೇಕು, ಮಗುವಿನ ಕೋಮಲ ಚರ್ಮಕ್ಕೆ ಯಾವುದೇ ಹಾನಿ ಆಗದಂತೆ ಎಚ್ಚರವಹಿಸಿ.
ಪೌಡರ್ : ಹ್ಞಾಂ, ಇಲ್ಲೂ ಎಚ್ಚರವಹಿಸಿ. ಹಿರಿಯರ ಫೇಸ್ ಪೌಡರ್ ಬೇಡ. ಬೇಬಿ ಟಾಲ್ಕಂ ಪೌಡರ್ ನ್ನೇ ಬಳಸಬೇಕು. ಸುವಾಸನೆ ತುಂಬಿದ, ಹೆಚ್ಚಿನ ರಾಸಾಯನಿಕ ಬೆರೆಸಲ್ಪಟ್ಟ ಪೌಡರ್ ಬಳಸದಿರಿ, ಡೈಪರ್ ಏರಿಯಾಗೆ ಪೌಡರ್ ಬೇಡ.
ಮಸಾಜ್ : ನವಜಾತ, ಸಣ್ಣ ಶಿಶುಗಳ ಮೈ ಚರ್ಮ ಬಲು ನಾಜೂಕು. ಹೀಗಾಗಿ ಅವುಗಳ ಮಸಾಜ್ ಮಾಡುವ ಮೊದಲು ಮಸಾಜ್ ಮಾಡುವ ಟೆಕ್ನಿಕ್ಸ್, ಎಂಥ ಬೇಬಿ ಆಯಿಲ್ ಬಳಸಬೇಕು ಇತ್ಯಾದಿ ಚೆಕ್ ಮಾಡಿ. ಎಷ್ಟು ಹೊತ್ತು ಮಸಾಜ್ ಮಾಡಬೇಕು, ಯಾವಾಗ ಮಾಡಬಾರದು ಇತ್ಯಾದಿಗಳ ಮಾಹಿತಿ ಅಗತ್ಯವಾಗಿ ಸಂಗ್ರಹಿಸಿ. ಮಕ್ಕಳ ವಿಶೇಷ ಅಗತ್ಯಗಳ ಅನುಸಾರ, ಮಸಾಜ್ ನ ವಿಭಿನ್ನ ಟೆಕ್ನಿಕ್ಸ್ ಬಳಸಿಕೊಳ್ಳಿ.
ಮಸಾಜ್ ನ ಸಾಮಾನ್ಯ ವಿಧಾನ ಅನುಸರಿಸುವುದೇ ಸರಿ. ನಿಮ್ಮ ತಾಯಿ, ಅತ್ತೆ ಅಥವಾ ಹಿರಿಯ ಮಹಿಳೆಯರಿಂದ ಇದನ್ನು ಕಲಿತು ಅನುಸರಿಸಿ. ಮಕ್ಕಳದು ಬಲು ಸೆನ್ಸಿಟಿವ್ ಸ್ಕಿನ್, ಹೀಗಾಗಿ ಹಾರ್ಶ್ ಕೆಮಿಕಲ್ಸ್ ಬೆರೆತ ಬೇಬಿ ಆಯಿಲ್ ಬಳಸಲೇಬೇಡಿ. ಗಾಣವಾಡಿದ ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಶಿಶುಗಳ ಚರ್ಮಕ್ಕೆ ಬಲು ಹಿತಕರ. ಕಾಲು ಚಾಚಿ, ಅದರ ಮೇಲೆ ದಪ್ಪ ಟರ್ಕಿ ಟವೆಲ್ ಹರಡಿಕೊಂಡು, ಮಗುವನ್ನು ಮಲಗಿಸಿಕೊಂಡು (ಅಂಗಾತ ಹಾಗೂ ಬೋರಲು), ಎಣ್ಣೆ ಹಚ್ಚಿ ನೀವುತ್ತಾ, ನೀಟಾಗಿ ಮಸಾಜ್ ಮಾಡಿ.
ಡೈಪರ್ ನ್ಯಾಪೀಸ್ : ಮಗುವಿಗಾಗಿ ನ್ಯಾಪಿ ಆರಿಸುವಾಗ ಬಲು ಎಚ್ಚರಿಕೆ ವಹಿಸಿ. ಇದನ್ನು ಕೊಳ್ಳುವಾಗ, ಅದರ ಫಿಟ್ಟಿಂಗ್ಸ್ ಸವರಿ ಇದೆ ತಾನೇ ಎಂದು ಪರೀಕ್ಷಿಸಿ. ಅದರ ಹೀರಿಕೊಳ್ಳುವ ಗುಣ ಹಿರಿದಾಗಿರಬೇಕು. ಅದರ ಫ್ಯಾಬ್ರಿಕ್ ಮಗುವಿನ ಸೆನ್ಸಿಟಿವ್ ಸ್ಕಿನ್ ಗೆ ಹಾನಿ ಉಂಟು ಮಾಡುವಂತಿರಬಾರದು.





