ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳಗ್ಗೆ ಸುಮಾರು 7 ಗಂಟೆ ಸುಮಾರಿಗೆ ಲೆವೆಲ್-ಕ್ರಾಸಿಂಗ್ ಗೇಟ್‌ನಲ್ಲಿ ಹಳಿಗಳನ್ನು ದಾಟುತ್ತಿದ್ದಾಗ ಶಾಲಾ ವಾಹನವು ಸ್ಥಳೀಯ ರೈಲಿಗೆ ಡಿಕ್ಕಿ ಹೊಡೆದಿದ್ದು ಈ ಅಪಘಾತ ಸಂಭವಿಸಿದೆ.

ಲೆವೆಲ್ ಕ್ರಾಸಿಂಗ್‌ನಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲೊಂದು ಶಾಲಾ ಮಕ್ಕಳಿದ್ದ ವ್ಯಾನ್​ ಹಾಗೂ ಸೈಕ್ಲಿಸ್ಟ್‌ಗೆ ಡಿಕ್ಕಿ ಹೊಡೆದಿದೆ. ಬರ್ಹಾಂಪೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಣಸುಬರ್ಣ ಮತ್ತು ಗೋಬಿಂದಾಪುರ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್‌ನಲ್ಲಿ ಶುಕ್ರವಾರ ಬೆಳಗ್ಗೆ ಈ ಅಪಘಾತ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಮ್ಟಿತಾ-ಕಟ್ವಾ ಮಾರ್ಗದಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲು ಬರುತ್ತಿದ್ದಾಗ, ಕ್ರಾಸಿಂಗ್ ಗೇಟ್ ತೆರೆದೇ ಇತ್ತು. ಗೇಟ್ ಇಲ್ಲದ ಕಾರಣ ಶಾಲಾ ವ್ಯಾನ್ ಹಾಗೂ ಸೈಕಲ್ ಸವಾರ ಹಳಿ ದಾಟಲು ಮುಂದಾದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತದ ರಭಸಕ್ಕೆ ಶಾಲಾ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಹಾಗೂ ಮತ್ತೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಕಾರಣವನ್ನು ತನಿಖೆ ಮಾಡಲು 10 ಸದಸ್ಯರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ರೈಲು ಸಮೀಪಿಸುತ್ತಿದ್ದಾಗ ಲೆವೆಲ್ ಕ್ರಾಸಿಂಗ್ ಗೇಟ್ ಏಕೆ ತೆರೆದಿತ್ತು ಎಂಬ ಬಗ್ಗೆ ತಂಡವು ತನಿಖೆ ಮಾಡುತ್ತದೆ ಎಂದು ಹೇಳಿದ್ದಾರೆ.

ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಕರ್ಣಸುಬರ್ಣ ಬ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ