ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ ಖಾಸಗಿ ಕಕ್ಷಾ (Orbital-Class) ರಾಕೆಟ್ ‘ವಿಕ್ರಮ್-1’ ಶನಿವಾರ ಯಶಸ್ವಿಯಾಗಿ ಉಡಾವಣೆಯಾಗಿದೆ.
‘ಮಿಷನ್ ಆಗಮನ’ (Mission Aagaman) ಎಂಬ ಈ ಪರೀಕ್ಷಾ ಉಡಾವಣೆಯನ್ನು ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಯಶಸ್ವಿಯಾಗಿ ನಡೆಸಿದ್ದು, ಇದು ಭಾರತದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಅಧ್ಯಾಯ ಬರೆದಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ವೇದಿಕೆಯಿಂದ ಶನಿವಾರ ಮಧ್ಯಾಹ್ನ 12.05ಕ್ಕೆ ಏಳು ಅಂತಸ್ತಿನ ಎತ್ತರದ, ನಾಲ್ಕು ಹಂತಗಳ ವಿಕ್ರಮ್-1 ರಾಕೆಟ್ ಯಶಸ್ವಿಯಾಗಿ ಆಕಾಶಕ್ಕೇರಿತು.
ಬೆಳಿಗ್ಗೆ 11.30ಕ್ಕೆ ಉಡಾವಣೆ ನಿಗದಿಯಾಗಿದ್ದರೂ, ನ್ಯಾವಿಗೇಶನ್ ವ್ಯವಸ್ಥೆಯಲ್ಲಿ ಕಂಡುಬಂದ ತಾಂತ್ರಿಕ ಸಮಸ್ಯೆಯಿಂದ ‘ಪ್ಲ್ಯಾನ್ಡ್ ಹೋಲ್ಡ್’ ಘೋಷಿಸಿ, ಸುಮಾರು 35 ನಿಮಿಷಗಳ ಬಳಿಕ ಉಡಾವಣೆ ನಡೆಸಲಾಯಿತು.
ಸುಮಾರು 16 ನಿಮಿಷಗಳ ಆರಂಭಿಕ ಹಾರಾಟದ ಬಳಿಕ, ವಿಕ್ರಮ್-1 ರಾಕೆಟ್ ದೇಶೀಯ ಹಾಗೂ ವಿದೇಶಿ ತಂತ್ರಜ್ಞಾನ ಪ್ರದರ್ಶನ ಪೇಲೋಡ್‌ಗಳನ್ನು 450 ಕಿಲೋಮೀಟರ್ ಎತ್ತರದ ಲೋ ಅರ್ಥ್ ಆರ್ಬಿಟ್ (LEO) ಕಕ್ಷೆಗೆ, 60 ಡಿಗ್ರಿ ಇನ್‌ಕ್ಲಿನೇಶನ್ ಕೋನದಲ್ಲಿ ಯಶಸ್ವಿಯಾಗಿ ಸ್ಥಾಪಿಸುವ ನಿರೀಕ್ಷೆಯಿದೆ.
ಈ ಐತಿಹಾಸಿಕ ಉಡಾವಣೆಯ ವಿಶೇಷವೆಂದರೆ, ರಾಕೆಟ್‌ನಲ್ಲಿ ವಿವಿಧ ತಂತ್ರಜ್ಞಾನ ಪ್ರದರ್ಶನ ಪೇಲೋಡ್‌ಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟ್‌ಕಾರ್ಡ್ ಕೂಡ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.
ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯಿ ಅವರ ಗೌರವಾರ್ಥ ಈ ರಾಕೆಟ್‌ಗೆ ‘ವಿಕ್ರಮ್-1’ ಎಂದು ಹೆಸರಿಡಲಾಗಿದೆ. ಈ ರಾಕೆಟ್ ಸಂಪೂರ್ಣ ಕಾರ್ಬನ್ ಕಾಂಪೋಸಿಟ್ ರಚನೆ ಹೊಂದಿದ್ದು, ಸಂಸ್ಥೆಯೇ ಅಭಿವೃದ್ಧಿಪಡಿಸಿದ 3D-ಮುದ್ರಿತ ಎಂಜಿನ್‌ಗಳು ಹಾಗೂ ಹೆಚ್ಚಿನ ಸಾಮರ್ಥ್ಯದ ಘನ ಇಂಧನ ಬೂಸ್ಟರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ.
ವಿಕ್ರಮ್-1 ರಾಕೆಟ್‌ನಲ್ಲಿ ಗ್ರಾಹಾ ಸ್ಪೇಸ್, ಕಾಸ್ಮೋಸರ್ವ್, ಡಿಕ್ಯೂಬ್ಡ್ ಸೇರಿದಂತೆ ಹಲವು ಸಂಸ್ಥೆಗಳ ತಂತ್ರಜ್ಞಾನ ಪ್ರದರ್ಶನ ಪೇಲೋಡ್‌ಗಳು ಹಾಗೂ ಸ್ಕೈರೂಟ್‌ನ ‘SCOPE’ ಪೇಲೋಡ್ ಸಾಗಿಸಲಾಗುತ್ತಿದೆ. ಜೊತೆಗೆ ‘ಕಾಸ್ಮಿಕ್ ಬ್ಲೂಮ್’ ಎಂಬ ವಿಶೇಷ ಕಲಾಕೃತಿಯನ್ನೂ ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗಿದೆ.
ಭಾರತದಲ್ಲಿ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಹೊಸ ಎತ್ತರಕ್ಕೆ ಏರಿದ್ದು, ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.





