ದೇವಾಲಯ ಕಟ್ಟಿದ್ದು ದೇವರಿಗೋ? ಸಮಾಜಕ್ಕೋ? – ದಡಗದ ಶ್ರೀ ಯೋಗ ನರಸಿಂಹಸ್ವಾಮಿ ದೇವಾಲಯದ ಪುನರ್ಜನ್ಮದ ಕಥೆ

ದೇವಾಲಯ ಎಂದರೆ ಕೇವಲ ದೇವರ ಪೂಜೆ ನಡೆಯುವ ಸ್ಥಳ” ಎಂದು ನಾವು ಇಂದು ಭಾವಿಸುತ್ತೇವೆ. ಆದರೆ ನಮ್ಮ ಪೂರ್ವಜರು, ವಿಶೇಷವಾಗಿ ರಾಜರು ಮತ್ತು ಮಹಾರಾಜರು, ಹಳ್ಳಿ ಹಳ್ಳಿಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದು ಕೇವಲ ಧಾರ್ಮಿಕ ಕಾರಣಕ್ಕಾಗಿ ಅಲ್ಲ. ದೇವಾಲಯಗಳು ಅಂದಿನ ಸಮಾಜದ ಶಿಕ್ಷಣ, ಆಡಳಿತ, ಕೃಷಿ, ನ್ಯಾಯ, ಕಲೆ, ಸಂಸ್ಕೃತಿ, ಆರ್ಥಿಕತೆ ಹಾಗೂ ಸಾಮಾಜಿಕ ಏಕತೆಯ ಜೀವನಾಡಿಯಾಗಿದ್ದವು.

ಹೀಗಾಗಿ, ದೇವಾಲಯವೆಂದರೆ ಕೇವಲ ಕಲ್ಲಿನ ಕಟ್ಟಡವಲ್ಲ; ಅದು ಒಂದು ಗ್ರಾಮದ ಆತ್ಮವಾಗಿತ್ತು.

ಹಳ್ಳಿಯ ಹೃದಯವಾಗಿದ್ದ ದೇವಾಲಯಗಳು

ಇಂದು ಗ್ರಾಮ ಪಂಚಾಯಿತಿ ಕಚೇರಿ, ಸಮುದಾಯ ಭವನ, ಗ್ರಂಥಾಲಯ, ಸಭಾಭವನ, ಉದ್ಯಾನ, ಕಲ್ಯಾಣ ಮಂಟಪ, ಶಾಲೆ ಎಂದು ಪ್ರತ್ಯೇಕವಾಗಿ ಕಾಣುವ ವ್ಯವಸ್ಥೆಗಳೆಲ್ಲವೂ ಹಿಂದಿನ ಕಾಲದಲ್ಲಿ ಒಂದೇ ದೇವಾಲಯದ ಆವರಣದಲ್ಲಿ ಅಸ್ತಿತ್ವದಲ್ಲಿದ್ದವು. ರಾಜರು ದೇವಾಲಯಗಳನ್ನು ಕಟ್ಟಿಸಿ ಬಿಡುತ್ತಿರಲಿಲ್ಲ. ಅವುಗಳ ನಿರ್ವಹಣೆಗಾಗಿ ಕೆರೆಗಳು, ತೋಟಗಳು, ಕೃಷಿ ಭೂಮಿ, ಆದಾಯದ ಮೂಲಗಳು ಹಾಗೂ ದಾನಗಳನ್ನು ನೀಡಿ ಶಾಶ್ವತ ವ್ಯವಸ್ಥೆಯನ್ನೇ ರೂಪಿಸುತ್ತಿದ್ದರು. ಅದಕ್ಕಾಗಿಯೇ ವರ್ಷಪೂರ್ತಿ ಪೂಜೆ-ಪುನಸ್ಕಾರಗಳ ಜೊತೆಗೆ ದಾಸೋಹ, ಜಾತ್ರೆ, ರಥೋತ್ಸವ, ಸಂಗೀತ, ನೃತ್ಯ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಊರಿನವರು ಮಾತ್ರವಲ್ಲ, ಊರು ಬಿಟ್ಟು ದೂರದಲ್ಲಿದ್ದವರೂ ಸಹ ವರ್ಷಕ್ಕೊಮ್ಮೆ ಒಂದೆಡೆ ಸೇರುವ ಸಂಪ್ರದಾಯ ಬೆಳೆದಿತ್ತು. ಸಂಬಂಧಗಳು ಗಟ್ಟಿಯಾಗುತ್ತಿದ್ದವು.

ದೇವಾಲಯಗಳೇ ಅಂದಿನ ವಿಶ್ವವಿದ್ಯಾಲಯಗಳು

ದೇವಾಲಯಗಳೇ ಗುರುಕುಲಗಳಾಗಿದ್ದವು. ದೇವಾಲಯಗಳ ಅರ್ಚಕರೇ ಗುರುಗಳಾಗಿದ್ದರು. ಅಲ್ಲಿ ವೇದ, ಸಂಸ್ಕೃತ ಮಾತ್ರವಲ್ಲದೆ ವ್ಯಾಕರಣ, ಗಣಿತ, ಖಗೋಳಶಾಸ್ತ್ರ, ಆಯುರ್ವೇದ, ಯೋಗ, ನೀತಿಶಾಸ್ತ್ರ, ಕೃಷಿ ಹಾಗೂ ಜೀವನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು. ಜಾತಿ-ಧರ್ಮದ ಭೇದಕ್ಕಿಂತ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಅದರ ಪರಿಣಾಮವೇ ಅಂದಿನವರು ಅನೇಕರು ಅನಕ್ಷರಸ್ಥರಾಗಿದ್ದರೂ ಜೀವನಜ್ಞಾನಿಗಳಾಗಿದ್ದರು.

ದೇವಾಲಯಗಳು ಗ್ರಾಮೀಣ ಆರ್ಥಿಕತೆಯ ಜೀವಾಳ

ಬಹುತೇಕ ದೇವಾಲಯಗಳು ನದಿ, ಕೆರೆ, ಕಲ್ಯಾಣಿ ಅಥವಾ ಬಾವಿಗಳ ಸಮೀಪವೇ ನಿರ್ಮಾಣವಾಗುತ್ತಿದ್ದವು. ಇದರಿಂದ ನೀರಿನ ಸಂರಕ್ಷಣೆ, ಕೃಷಿ ಮತ್ತು ಪರಿಸರ ಸಂರಕ್ಷಣೆಯೂ ಸಹಜವಾಗಿ ನಡೆಯುತ್ತಿತ್ತು. ಇನ್ನೊಂದೆಡೆ ದೇವಾಲಯಗಳ ಜಾತ್ರೆ, ಉತ್ಸವಗಳಿಂದ ರೈತರು, ಕುಂಬಾರರು, ಕಮ್ಮಾರರು, ಶಿಲ್ಪಿಗಳು, ನೇಕಾರರು, ಹೂ ಬೆಳೆಗಾರರು, ಸಂಗೀತಗಾರರು, ನೃತ್ಯಗಾರರು ಸೇರಿದಂತೆ ನೂರಾರು ಕುಟುಂಬಗಳಿಗೆ ಉದ್ಯೋಗ ದೊರೆಯುತ್ತಿತ್ತು. ದೇವಾಲಯಗಳು ಕೇವಲ ಭಕ್ತಿಯ ಕೇಂದ್ರಗಳಲ್ಲ; ಗ್ರಾಮೀಣ ಆರ್ಥಿಕತೆಯ ಜೀವನಾಡಿಯಾಗಿದ್ದವು.

ಇತಿಹಾಸ ಸಾಕ್ಷಿಯಾಗಿರುವ ದೇವಾಲಯಗಳು

  • ಹೊಯ್ಸಳರ ಬೇಲೂರು, ಹಳೇಬೀಡು, ಸೋಮನಾಥಪುರದ ದೇವಾಲಯಗಳು ಇಂದು ವಿಶ್ವದ ಗಮನ ಸೆಳೆಯುವ ಶಿಲ್ಪಕಲೆಯ ಅದ್ಭುತಗಳಾಗಿವೆ.
  • ವಿಜಯನಗರ ಸಾಮ್ರಾಜ್ಯದ ವಿರೂಪಾಕ್ಷ ಹಾಗೂ ವಿಠ್ಠಲ ದೇವಾಲಯಗಳು ಪೂಜೆಯ ಜೊತೆಗೆ ವ್ಯಾಪಾರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಾಗಿದ್ದವು.
  • ಚೋಳರ ತಂಜಾವೂರಿನ ಬೃಹದೀಶ್ವರ ದೇವಾಲಯ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದ್ದ ಆರ್ಥಿಕ ಕೇಂದ್ರವಾಗಿತ್ತು.

ಇವೆಲ್ಲವೂ ದೇವಾಲಯಗಳ ನಿಜವಾದ ಪಾತ್ರವನ್ನು ಹೇಳುತ್ತವೆ.


ಆದರೆ… ಕಾಲ ಬದಲಾಯಿತು!

ವಿದೇಶಿ ಆಕ್ರಮಣಗಳು, ಕಾಲಕ್ರಮೇಣ ಬದಲಾಗಿದ ಜೀವನಶೈಲಿ, ನಗರೀಕರಣ ಮತ್ತು ಗ್ರಾಮೀಣ ವಲಸೆ… “ಕೆಟ್ಟು ಪಟ್ಟಣ ಸೇರು” ಎಂಬ ಗಾದೆ ಮಾತಿನಂತೆ ಹಳ್ಳಿಗಳು ಖಾಲಿಯಾಗುತ್ತಾ ಬಂದವು. ಅದರೊಂದಿಗೆ ನೂರಾರು ವರ್ಷಗಳ ಇತಿಹಾಸ ಹೊಂದಿದ್ದ ಅನೇಕ ದೇವಾಲಯಗಳು ನಿರ್ವಹಣೆ ಇಲ್ಲದೆ ಶಿಥಿಲಗೊಂಡವು. ಅಂತಹ ದೇವಾಲಯಗಳಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದಡಗ ಗ್ರಾಮದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯವೂ ಒಂದಾಗಿದೆ. ಶ್ರೀ ಯೋಗ ನರಸಿಂಹಸ್ವಾಮಿಯ ದೇವಾಲಯ ಹೊರನೋಟಕ್ಕೆ ಇಟ್ಟಿಗೆ-ಗಾರೆಗಳಿಂದ ನಿರ್ಮಾಣವಾದಂತೆ ಕಂಡರೂ, ಒಳಗಿನ ಕಂಬಗಳು, ಅಂಕಣಗಳು, ಅರಳಿದ ಪದ್ಮ ಕೆತ್ತನೆಗಳು ಗಂಗರ ಕಾಲದ ವಾಸ್ತುಶೈಲಿಯನ್ನು ನೆನಪಿಸುತ್ತವೆ. ಇಲ್ಲಿನ ಶ್ರೀ ಯೋಗ ನರಸಿಂಹಸ್ವಾಮಿಯ ಮೂಲ ವಿಗ್ರಹ ಭಕ್ತರ ಮನ ಸೆಳೆಯುವ ಅಪರೂಪದ ಶಿಲ್ಪವಾಗಿದೆ.


ಇತಿಹಾಸದ ಪುಟಗಳಲ್ಲಿ ದಡಗ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ದಡಗ ಗ್ರಾಮ, ನಾಗಮಂಗಲದಿಂದ ಸುಮಾರು 30 ಕಿಲೋಮೀಟರ್ ಹಾಗೂ ಬೆಳ್ಳೂರು ಕ್ರಾಸ್‌ನಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿದೆ. ಹೇಮಾವತಿ ನೀರಾವರಿ ಪ್ರದೇಶದಲ್ಲಿರುವ ಈ ಗ್ರಾಮ ಇತಿಹಾಸದಲ್ಲಿ ಅತ್ಯಂತ ಮಹತ್ವ ಪಡೆದಿದೆ. ಇಲ್ಲಿನ 15-16ನೇ ಶತಮಾನದ ಕನ್ನಡ ಶಾಸನಗಳು ವಿಜಯನಗರ ಸಾಮ್ರಾಜ್ಯದ ಆಡಳಿತ, ಭೂದಾನ ವ್ಯವಸ್ಥೆ ಹಾಗೂ ಧಾರ್ಮಿಕ ಬದುಕಿನ ಅಮೂಲ್ಯ ದಾಖಲೆಗಳಾಗಿವೆ. ದಡಗ ಗ್ರಾಮದಲ್ಲಿ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ ಮಾತ್ರವಲ್ಲದೆ,  ಚನ್ನಕೇಶವ ದೇವಾಲಯ, ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ,  ಶ್ರೀ ಆಂಜನೇಯಸ್ವಾಮಿ ದೇವಾಲಯ ಹಾಗೂ  ಶಾಂತಿನಾಥ ದೇವಾಲಯಗಳೂ ಶತಮಾನಗಳ ಇತಿಹಾಸವನ್ನು ಹೊತ್ತು ನಿಂತಿವೆ. ದ ಉಲ್ಲೇಖ ಮಾಡಬಹುದಿತ್ತು

ಗಂಗರ ಕಾಲದ ಸ್ಮರಣೆ

ಶಾಸನಗಳ ಅಧ್ಯಯನದ ಪ್ರಕಾರ ದಡಗ ಗ್ರಾಮದ ಇತಿಹಾಸ ಹೊಯ್ಸಳ ರಾಜ ವಿಷ್ಣುವರ್ಧನನ ಕಾಲಕ್ಕೂ, ಇನ್ನೂ ಹಿಂದಕ್ಕೆ ಗಂಗರ ಅರಸ ದಡಿಗನ ನೆನಪಿಗೂ ಕೊಂಡೊಯ್ಯುತ್ತದೆ. ದಡಗದ ಕೆರೆ ಕೊಡಿ ಬಳಿ ಇರುವ  ಕೋಡಿಹಳ್ಳಿಯು  ಹಿಂದೊಮ್ಮೆ ಅಗ್ರಹಾರವಾಗಿತ್ತು. ಈ ಕೆರೆ ಉತ್ತರ ಭಾಗದಲ್ಲಿ “ದಡಗ“ಗ್ರಾಮವಿದೆ. ಮಂಡ್ಯ ಜಿಲ್ಲೆ ಶಾಸನ ಸಂಪುಟ 7 ರಲ್ಲಿ ಉಲ್ಲೇಖವಾಗಿರುವ ಶಾಸನಗಳು ಸಂಖ್ಯೆ.65.66.68.70 ಗ್ರಾಮದ ಐತಿಹಾಸಿಕ ಮಹತ್ವವನ್ನು ಸಾರುತ್ತಿದ್ದು, ಈ ಶಾಸನಗಳಲ್ಲಿ ಗ್ರಾಮದ “ಪಂಚ ಕೂಟ ಬಸದಿ “(ಶಾಸನ ಸಂಖೆ 68) ಹೊಯ್ಸಳ ದೊರೆ ವಿಷ್ಣುವರ್ಧನ ಮಹಾಪ್ರಧಾನ ಮರಿಯನೆ. ದಂಡನಾಯಕ ಭರ್ತಿಮಯ್ಯ ಇವರು ಮಣಿಭದ್ರ ಸಿದ್ಧಾಂತದೇವರ ಶಿಷ್ಯರಾದ ಮೇಘ ಚಂದ್ರ ಸಿದ್ದಾಂತ ದೇವ ಇವರ ಮಾರ್ಗದರ್ಶನದಲ್ಲಿ ಈ ಬಸದಿಯನ್ನು ನಿರ್ಮಿಸಿದ ಮತ್ತು ನಿರ್ವಹಣೆ ಸಲುವಾಗಿ ನೀಡಿದ ದಾನಗಳ ವಿವರವಿದೆ

ಗ್ರಾಮದಲ್ಲಿ ಮತ್ತೊಂದು ಐತಿಹಾಸಿಕ ಚನ್ನಕೇಶವ ದೇವಾಲಯವಿದ್ದು  ಈ ದೇವಾಲಯದ ಉತ್ತರ ದಿಕ್ಕಿನ ತೊಲೆಯ ಮೇಲೆ ಶಾಸನ ಸಂಖ್ಯೆ 66. ಶ್ರೀ ಲಕ್ಷ್ಮೀ ದೇವಾಲಯ ನಿರ್ಮಾಣ ವಿವರ (ಶ್ರೀ ಕಾಳಉಕ್ತಿ ನಾಮ ಸಂವತ್ಸರ. ಅಶ್ವಯುಜ ಮಾಸ) ಸೂಚಿಸುತ್ತದೆ. ಇದೇ ಕೇಶವ ದೇವಾಲಯದ ಪಶ್ಚಿಮ ದಿಕ್ಕಿನ ತೊಲೆ ಯ ಮೇಲಿನ ಶಾಸನ ಸಂಖೆ 67 ಊರಿನ ಸಮಸ್ತ ಮಹಾಜನರ ಸಮ್ಮುಖದಲ್ಲಿ ಈ ದೇವಾಲಯಕ್ಕೆ ಸೇರಿದ ಒಂದು ಮನೆ ಮತ್ತು ಕೆಲವು ಭೂಭಾಗಗಳನ್ನು.5ಪಣ ಗಳಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ಮಾದೇವ (ಈಶ್ವರ )ದೇವಾಲಯದ ವಿಮಾನ ಗೋಪುರ ನಿರ್ಮಾಣ ಮಾಡಿದ ಉಲ್ಲೇಖವಿದೆ. ಈ ಶಾಸನ 13 ರಿಂದ 14 ನೆ ಶತಮಾನಕ್ಕೆ ಸಂಭಂದಿಸಿದ್ದಾಗಿದೆ. ಶಾಸನ ಲಿಪಿಕಾರ “ಕಲಿದೇವ” ನ ಮಗನಾದ “ಲಚ್ಚಣ್ಣ”ಎಂಬ ದಾಖಲೆ ಇದೆ. ಇದೇ ದೇವಾಲಯದ ನವರಂಗ ಮಂಟಪದ ನಾಲ್ಕನೇ ಅಂಕಣದ ತೊಲೆಯ ಮೇಲೆ ಕ್ರಿ. ಶ.1400 ರ ಶಾಸನ ಪಟ್ಟಂಗಿ ವೀರಪಿಳ್ಳನ ಪತ್ನಿ ತನಗೆ ದೇವಾಲಯ ನೀಡಿದ್ದ ಜಮೀನನ್ನು ಮಾರಿ ಬಂದ ಹಣದಿಂದ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಕಲ್ಲಿನ ಮಂಟಪ ನಿರ್ಮಿಸಿದ ಉಲ್ಲೇಖವಿದೆ. ಒಟ್ಟಿನಲ್ಲಿ ಈ ಗ್ರಾಮವು ಶೈವ. ವೈಷ್ಣವ. ಮತ್ತು ಜೈನ ಸಮುದಾಯಗಳ ಸಮನ್ವಯ ಸಾರುವ ಐತಿಹಾಸಿಕ ಗ್ರಾಮ ಎಂಬುದನ್ನು ಶಾಸನಗಳು ಸಾರುತ್ತಿದೆ.


ಶಾಸನಗಳು ಹೇಳುವ ಸಮನ್ವಯದ ಕಥೆ

ಮಂಡ್ಯ ಜಿಲ್ಲಾ ಶಾಸನ ಸಂಪುಟದಲ್ಲಿರುವ ಶಾಸನಗಳು ದಡಗದ ವೈಭವವನ್ನು ಸಾರುತ್ತವೆ.

  • ಪಂಚಕೂಟ ಜೈನ ಬಸದಿ ನಿರ್ಮಾಣ
  • ಚನ್ನಕೇಶವ ದೇವಾಲಯ
  • ಲಕ್ಷ್ಮೀ ದೇವಾಲಯ
  • ಮಹಾದೇವ ದೇವಾಲಯ
  • ವಿವಿಧ ಭೂದಾನಗಳು

ಇವೆಲ್ಲವೂ ದಡಗ ಗ್ರಾಮವು ಶೈವ, ವೈಷ್ಣವ ಹಾಗೂ ಜೈನ ಸಂಪ್ರದಾಯಗಳು ಸಮನ್ವಯದಿಂದ ಬೆಳೆದ ಐತಿಹಾಸಿಕ ಗ್ರಾಮ ಎಂಬುದಕ್ಕೆ ಸಾಕ್ಷಿಯಾಗಿವೆ.


ಜೀರ್ಣೋದ್ಧಾರದ ಕನಸು

ಇಷ್ಟೊಂದು ಇತಿಹಾಸ ಹೊಂದಿರುವ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ ಕಾಲಕ್ರಮೇಣ ಶಿಥಿಲಗೊಂಡಿತು. ಅದನ್ನು ಕಂಡು ಮನಸ್ಸಿಗೆ ನೋವಾದವರು ಗ್ರಾಮದವರೇ. ವಿಶೇಷವಾಗಿ, ದಡಗ ಸತೀಶ್ ನರಸಿಂಹ ಹಾಗೂ ಹವ್ಯಾಸಿ ವೀಕ್ಷಣಾ ಬಳಗದ ಸದಸ್ಯರಾದ ಬಿಎಸ್‌ಎನ್‌ಎಲ್ ಚಕ್ರಪಾಣಿ ಅವರು ದೇವಾಲಯದ ದುಸ್ಥಿತಿಯನ್ನು ಬಿಂಬಿಸುವ ಕೆಲವು ಛಾಯಾಚಿತ್ರಗಳನ್ನು ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ದೇವಾಲಯ ಮತ್ತು ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ತುರುವೇಕೆರೆ ನಟರಾಜ್ ಪಂಡಿತ್ ಅವರಿಗೆ ಕಳುಹಿಸಿದ್ದರು. ಆ ಚಿತ್ರಗಳನ್ನು ಕಂಡ ತಕ್ಷಣವೇ ಅವರು ವಿಷಯವನ್ನು ನಿರ್ಲಕ್ಷಿಸದೆ, ದಡಗ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಾದ ಶ್ರೀ ಸತೀಶ್ ಅವರೊಂದಿಗೆ ದೇವಾಲಯವನ್ನು ಪರಿಶೀಲಿಸಿದರು. ದೇವಾಲಯದ ಜೀರ್ಣಾವಸ್ಥೆಯನ್ನು ಕಣ್ಣಾರೆ ಕಂಡ ಅವರು, ಅದನ್ನು ಪುನಃ ವೈಭವದ ಸ್ಥಿತಿಗೆ ತರಬೇಕೆಂಬ ಸಂಕಲ್ಪದ ಬೀಜವನ್ನು ಗ್ರಾಮಸ್ಥರ ಮನಸ್ಸಿನಲ್ಲಿ ಬಿತ್ತಿದರು. ಸುಂದರ ಕಲ್ಲಿನ ನೂತನ ದೇವಾಲಯದ ವಿನ್ಯಾಸ ಸಿದ್ಧಪಡಿಸಿ, ಸರ್ಕಾರ, ವಿವಿಧ ಸಂಘ-ಸಂಸ್ಥೆಗಳು ಮತ್ತು ದಾನಿಗಳನ್ನು ಸಂಪರ್ಕಿಸಲು ಆರಂಭಿಸಿದರು.  ಸಾಮಾಜಿಕ ಜಾಲತಾಣಗಳಲ್ಲಿಯೂ ಈ ದೇವಾಲಯದ ಜೀರ್ಣೋದ್ಧಾರ ಕುರಿತಾಗಿ ವಿವರಗಳನ್ನು ತಿಳಿಸಿ ಆಸ್ತಕ ಧರ್ಮಾಸಕ್ತರ ಸಹಾಯವನ್ನು ಕೊರಿದರು. 


ಈಗ ದೇವಾಲಯ ಮತ್ತೆ ಎದ್ದುನಿಂತಿದೆ…

ಸತೀಶ್ ಮತ್ತು ನಟರಾಜ್ ಅಲ್ಲದೇ ಡಡಗ ಗ್ರಾಮಸ್ಥರು ಮತ್ತಿರರೇ ಆಸ್ತಿಕ ಬಂಧುಗಳ ಕೋರಿಕೆ ಸ್ಪಂದಿಸಿ, “ಧರ್ಮೋ ರಕ್ಷತಿ ರಕ್ಷಿತಃ” ಎಂಬ ವಾಕ್ಯಕ್ಕೆ ತಕ್ಕಂತೆ ದೇಶ-ವಿದೇಶಗಳಲ್ಲಿರುವ ಅನೇಕ ಭಕ್ತರು, ಇಂಜಿನಿಯರ್‌ಗಳು, ವೈದ್ಯರು, ಉದ್ಯಮಿಗಳು ಹಾಗೂ ಶ್ರೀ ಯೋಗಾ ನರಸಿಂಹಸ್ವಾಮಿಯನ್ನು ಮನೆದೇವರಾಗಿ ಆರಾಧಿಸುವ ಕುಟುಂಬಗಳು ದಾನ ನೀಡಲು ಆರಂಭಿಸಿದರು.

ಅಂದಿನ ದೇವಾಲಯದ ಪರಿಸ್ಥಿತಿ ನಿಜಕ್ಕೂ ಮನಕಲಕುವಂತಿತ್ತು. ಕುಸಿದು ಬೀಳುವ ಹಂತದಲ್ಲಿದ್ದ ಮಣ್ಣಿನ ಗೋಡೆಗಳು, ಜೀರ್ಣಗೊಂಡ ಮೇಲ್ಚಾವಣಿ, ಕಂಬಿಗಳಿಲ್ಲದ ಕಿಟಕಿಗಳು, ದೇವಾಲಯದ ಒಳಗೆ ಹಾವುಗಳ ಸಂಚಾರ—ಇವೆಲ್ಲವೂ ದೇವಾಲಯದ ದುರವಸ್ಥೆಯನ್ನು ಎತ್ತಿ ತೋರಿಸುತ್ತಿದ್ದವು. ಆ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವುದಕ್ಕೂ ಭಕ್ತರು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ದೃಶ್ಯವನ್ನು ಕಂಡ ಯಾವುದೇ ಸನಾತನ ಹಿಂದುವಿನ ಕಣ್ಣಲ್ಲೂ ನೀರು ತುಂಬದೇ ಇರಲಾರದು.

ದೇವಾಲಯದ ಈ ದುಸ್ಥಿತಿಯನ್ನು ಸಮಾಜದ ಗಮನಕ್ಕೆ ತರಲು ನಟರಾಜ್ ಪಂಡಿತ್ ಅವರು ಫೇಸ್‌ಬುಕ್‌ನಲ್ಲಿ ಛಾಯಾಚಿತ್ರಗಳೊಂದಿಗೆ ವಿವರವಾದ ಲೇಖನವನ್ನು ಪ್ರಕಟಿಸಿದರು. ಆ ಲೇಖನವು ಅನೇಕ ಭಕ್ತರ ಮನಸ್ಸನ್ನು ತಟ್ಟಿತು. ಈ ಪೋಸ್ಟ್‌ಗಳನ್ನು ಗಮನಿಸಿದ ಬೆಂಗಳೂರಿನ ಶೃಂಗೇರಿ ಪರಂಪರೆಯ ಶ್ರೀ ಮಯಸ್ಕರ ಶಾಸ್ತ್ರಿ ಹಾಗೂ ಅವರ ತಂಡ ದಡಗ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಯೋಗ ನರಸಿಂಹಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು. ಈ ಮೂಲಕ ದೇವಾಲಯದಲ್ಲಿ ಮತ್ತೆ ಧಾರ್ಮಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯಿತು.

ಇದೇ ವೇಳೆ ಫೇಸ್‌ಬುಕ್‌ನಲ್ಲಿದ್ದ ಈ ಮಾಹಿತಿಯನ್ನು ಗಮನಿಸಿದ ಮೈಸೂರಿನ ಭಾರತೀಯ ಸೇನೆಯ ನಿವೃತ್ತ ವೈದ್ಯಾಧಿಕಾರಿಗಳಾದ ಡಾ. ಆನಂದ್ ಅವರ ಮನಸ್ಸು ಕೂಡ ದೇವಾಲಯದ ದುಸ್ಥಿತಿಯಿಂದ ಮರುಗಿತು. ಅವರು ಸ್ವತಃ ದಡಗ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಸತೀಶ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ, ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಘೋಷಿಸಿದರು.

ಅದರ ಮುಂದುವರಿದ ಭಾಗವಾಗಿ 23-07-2023 ರಂದು ಮೈಸೂರಿನಲ್ಲಿರುವ ಡಾ. ಆನಂದ್ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು. ಆ ಸಭೆಯಲ್ಲಿ ದಡಗ ಗ್ರಾಮದ ಪ್ರತಿನಿಧಿಗಳು, ನಟರಾಜ್ ಪಂಡಿತ್ ಹಾಗೂ ಅನೇಕ ಭಕ್ತರು ಸೇರಿ ಶ್ರೀ ಯೋಗ ನರಸಿಂಹಸ್ವಾಮಿಯ ಭಾವಚಿತ್ರದ ಸಮ್ಮುಖದಲ್ಲಿ ದೇವಾಲಯದ ಪುನರ್‌ನಿರ್ಮಾಣಕ್ಕಾಗಿ ಸತ್ ಸಂಕಲ್ಪ ಕೈಗೊಂಡರು. ಆ ದಿನವೇ ಈ ಮಹತ್ತರ ಕಾರ್ಯಕ್ಕೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಅಡಿಪಾಯ ಹಾಕಲಾಯಿತು.

ಈ ಸಂಕಲ್ಪವೇ ಮುಂದೆ ಕಾರ್ಯರೂಪಕ್ಕೆ ಬಂದು 31-05-2024 ರಂದು “ಶ್ರೀ ಯೋಗ ನರಸಿಂಹಸ್ವಾಮಿ ದೇವಾಲಯ ಸಂರಕ್ಷಣಾ ಟ್ರಸ್ಟ್ (ರಿ.), ದಡಗ” ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ಸುಮಾರು ಹದಿನೈದು ಮಂದಿ ಟ್ರಸ್ಟಿಗಳನ್ನು ಒಳಗೊಂಡ ಈ ಸಂಸ್ಥೆಯಲ್ಲಿ ಶ್ರೀ ಡಿ.ವಿ. ಶೇಖರ್ ಅವರು ಅಧ್ಯಕ್ಷರಾಗಿ, ಶ್ರೀ ಡಿ.ಜೆ. ಜಯರಾಮೇಗೌಡ ಹಾಗೂ ಶ್ರೀ ಡಿ.ಎನ್. ರಾಮಮೂರ್ತಿ ಅವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಟ್ರಸ್ಟ್ ದೇವಾಲಯದ ಪುನರ್‌ನಿರ್ಮಾಣ ಕಾರ್ಯಕ್ಕೆ ಆಡಳಿತಾತ್ಮಕ ರೂಪ ನೀಡಿದರೂ, ನಿಜವಾದ ಶಕ್ತಿ ದಡಗ ಗ್ರಾಮದ ಸಮಸ್ತ ಗ್ರಾಮಸ್ಥರು, ದೇಶ-ವಿದೇಶಗಳಲ್ಲಿ ನೆಲೆಸಿರುವ ಭಕ್ತರು ಹಾಗೂ ಅನೇಕ ಆಸ್ತಿಕ ಬಂಧುಗಳ ಒಗ್ಗಟ್ಟಿನ ಸಹಕಾರದಲ್ಲಿದೆ. ಟ್ರಸ್ಟ್ ಕೇವಲ ಕಾರ್ಯನಿರ್ವಾಹಕ ಮಂಡಳಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದೇವಾಲಯದ ಪುನರುತ್ಥಾನವೆಂಬ ಮಹಾಯಜ್ಞದಲ್ಲಿ ಪ್ರತಿಯೊಬ್ಬ ಭಕ್ತರೂ ತಮ್ಮ ಶಕ್ತಿ, ಸಮಯ ಮತ್ತು ಸಂಪನ್ಮೂಲಗಳನ್ನು ಅರ್ಪಿಸುತ್ತಿದ್ದಾರೆ.

ಧರ್ಮರಕ್ಷಣೆ ಕೇವಲ ಮಾತಿನಲ್ಲಲ್ಲ, ಕಾರ್ಯದಲ್ಲಿಯೂ ಸಾಧ್ಯ ಎಂಬುದಕ್ಕೆ ದಡಗ ಗ್ರಾಮದ ಈ ಪುನರುಜ್ಜೀವನ ಚಳವಳಿಯೇ ಜೀವಂತ ಸಾಕ್ಷಿಯಾಗಿದೆ. ಶಿಥಿಲಗೊಂಡಿದ್ದ ದೇವಾಲಯವು ಇಂದು ಮತ್ತೆ ವೈಭವದತ್ತ ಹೆಜ್ಜೆಯಿಡುತ್ತಿರುವುದು ಸಮೂಹ ಸಂಕಲ್ಪ, ಭಕ್ತಿ ಮತ್ತು ಸೇವಾಭಾವಗಳ ಸಮ್ಮಿಲನದಿಂದ ಮಾತ್ರ ಸಾಧ್ಯವಾಗಿದೆ.

ಈ ಮಹತ್ತರ ಕಾರ್ಯದ ಹಿಂದೆ ನಿಸ್ವಾರ್ಥ ಪ್ರೇರಣಾಶಕ್ತಿಯಾಗಿ, ಮಾರ್ಗದರ್ಶಕರಾಗಿ ಹಾಗೂ ಆಧಾರಸ್ತಂಭವಾಗಿ ನಿಂತಿರುವ ಡಾ. ಆನಂದ್ ಅವರ ಕೊಡುಗೆಯನ್ನು ಎಷ್ಟೇ ಹೊಗಳಿದರೂ ಕಡಿಮೆಯೇ. ಅದೇ ರೀತಿ ಟಿ.ವಿ. ನಟರಾಜ್ ಪಂಡಿತ್, ಶ್ರೀ ಸತೀಶ್, ಮಯಸ್ಕರ ಶಾಸ್ತ್ರಿ ಹಾಗೂ ಅವರ ತಂಡ, ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತು ಸಹೃದಯ ದಾನಿಗಳ ಸಮರ್ಪಣಾಭಾವದಿಂದ ಶ್ರೀ ಯೋಗ ನರಸಿಂಹಸ್ವಾಮಿ ದೇವಾಲಯವು ಮತ್ತೊಮ್ಮೆ ತನ್ನ ಐತಿಹಾಸಿಕ ವೈಭವವನ್ನು ಮರಳಿ ಪಡೆಯುತ್ತಿರುವುದು ನಿಜಕ್ಕೂ ಧರ್ಮದ ವಿಜಯದ ಸಂಕೇತವಾಗಿದೆ.

ಇವರೆಲ್ಲರ ತನು ಮನ ಮತ್ತು ಧನ ಸಹಾಯದ ಫಲವಾಗಿ,

  • ಗರ್ಭಗುಡಿ ಸೇರಿದಂತೆ ಸುಮಾರು 40 ರಿಂದ 60 ಶೇಕಡಾ ಕಾಮಗಾರಿ ಪೂರ್ಣಗೊಂಡಿದೆ.
  • ಆದರೆ ಇದುವರೆಗೆ ಸಂಗ್ರಹವಾಗಿದ್ದ ದೇಣಿಗೆ ಸಂಪೂರ್ಣವಾಗಿ ವೆಚ್ಚವಾಗಿದೆ.

ದೇವಾಲಯದ ಪುನರ್‌ನಿರ್ಮಾಣದ ಸಂದರ್ಭದಲ್ಲಿ, ಹಿಂದಿನ ದೇವಾಲಯ ಸಂಪೂರ್ಣ ಶಿಥಿಲಗೊಂಡಿದ್ದರೂ, ಪುನಃ ಬಳಸಲು ಯೋಗ್ಯವಾಗಿದ್ದ ಎರಡು ಪ್ರಾಚೀನ ಕಲ್ಲಿನ ಕಂಬಗಳನ್ನು ಹೊಸ ದೇವಾಲಯದ ನಿರ್ಮಾಣದಲ್ಲಿ ಅಳವಡಿಸಲಾಗಿದೆ. ಈ ಮೂಲಕ ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರ ಅಥವಾ ಪುನರ್‌ನಿರ್ಮಾಣದ ವೇಳೆ ಸಾಧ್ಯವಾದಷ್ಟು ಮೂಲ ರಚನೆಗಳನ್ನು ಸಂರಕ್ಷಿಸಿ, ಹಳೆಯ ಕಟ್ಟಡದ ಉಪಯುಕ್ತ ಕಲ್ಲು, ಕಂಬಗಳು ಹಾಗೂ ಇತರೆ ನಿರ್ಮಾಣ ಸಾಮಗ್ರಿಗಳನ್ನು ಪುನರ್‌ಬಳಕೆ ಮಾಡಬೇಕು ಎಂಬ ಉತ್ತಮ ಮಾದರಿಯನ್ನು ಇಲ್ಲಿ ಅನುಸರಿಸಲಾಗಿದೆ. ಇದು ಕೇವಲ ಕಟ್ಟಡ ನಿರ್ಮಾಣವಲ್ಲ, ನಮ್ಮ ಪರಂಪರೆ, ಇತಿಹಾಸ ಮತ್ತು ವಾಸ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಸಂರಕ್ಷಣಾ ಮನೋಭಾವದ ಪ್ರತೀಕವಾಗಿದೆ.

ದೇವಾಲಯದ ಸಂಪೂರ್ಣ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಆರ್ಥಿಕ ಸಹಾಯದ ಅಗತ್ಯವಿದೆ.


ನಿಮ್ಮ ಸಹಾಯವೂ ಈ ಪುಣ್ಯಕಾರ್ಯಕ್ಕೆ ಅಳಿಲು ಸಹಾಯವಾಗಬಹುದು

ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಸಹಕರಿಸಲು ಬಯಸುವವರು:

ದಡಗ ಸತೀಶ್ ನರಸಿಂಹ – 8970605056

ನಟರಾಜ್ ಪಂಡಿತ್  ಪಂಡಿತ್ – 99645 36150

ಇವರನ್ನು ಸಂಪರ್ಕಿಸಬಹುದು.

ಈಗಾಗಲೇ ನೀವು ಈ ದೇವಾಲಯಕ್ಕೆ ದೇಣಿಗೆ ನೀಡಿದ್ದು, ಅಥಾವಾ ವಿವಿಧ ಕಾರಣಗಳಿಂದ ಸದ್ಯಕ್ಕೆ ದೇಣಿಗೆ ನೀಡಲು ಸಾಧ್ಯವಾಗದೇ ಹೋದರೂ,   ಕನಿಷ್ಠ ಪಕ್ಷ ಈ ಲೇಖನವನ್ನು ನಿಮ್ಮ ಕುಟುಂಬ, ಸ್ನೇಹಿತರು, ಇಲ್ಲವೇ ನಿಮಗೆ ತಿಳಿಸಿರುವ ವಾಟ್ಸ್ಆಪ್ ಗುಂಪುಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದೂ ಒಂದು ಅಳಿಲು ಸೇವೆಯೇ.


ಕೊನೆಯ ಮಾತು…

ಇಂದು ದೇವಾಲಯಗಳು ಮತ್ತೆ ತಮ್ಮ ಮೂಲ ಸ್ವರೂಪವನ್ನು ಪಡೆಯುವ ಸಮಯ ಬಂದಿದ್ದು, ಹೆಚ್ಚು ಹೆಚ್ಚು ಶಿಥಿಲಗೊಂಡಿರುವ ದೇವಾಲಯಗಳು ಜೀರ್ಣೋದ್ಧಾರವಾಗಿ,  ಅವು ಕೇವಲ ಪೂಜೆಯ ಕೇಂದ್ರಗಳಾಗದೇ,

  • ಶಿಕ್ಷಣ,
  • ಪರಿಸರ ಸಂರಕ್ಷಣೆ,
  • ಆರೋಗ್ಯ ಸೇವೆ,
  • ಸಂಸ್ಕೃತಿ,
  • ಗ್ರಾಮಾಭಿವೃದ್ಧಿ

ಇವೆಲ್ಲಕ್ಕೂ ಪುನಃ ಜೀವ ತುಂಬುವ ಕೇಂದ್ರಗಳಾಗಬೇಕು. ಆಗ “ಕೆಟ್ಟು ಪಟ್ಟಣ ಸೇರು” ಎಂಬ ಗಾದೆ ಬದಲಿಗೆ, ಆಗ ಪಟ್ಟಣದ ಜಂಜಾಟ, ಕಲುಷಿತ ವಾತಾರಣದಿಂದ ಬೇಸತ್ತಿರುವ ಜನರು ಖಂಡಿತವಾಗಿಯೂ, ಮತ್ತೆ ಊರಿಗೆ ವಾಪಸ್ಸಾಗಿ ಸಾವಯವ ಕೃಷಿಯ ಮತ್ತು ಹೈನುಗಾರಿಕೆಯನ್ನು ಮಾಡುತ್ತಾ ನೆಮ್ಮದಿಯ ಜೀವನ  ನಡೆಸುವ ಮೂಲಕ  “ಉಳಿವಿಗಾಗಿ ಊರು ಸೇರು” ಎಂಬ ಹೊಸ ಗಾದೆ ಹುಟ್ಟುವ ದಿನ ದೂರವಿಲ್ಲ. ದೇವಾಲಯವನ್ನು ಕಟ್ಟುವುದು ಎಂದರೆ ಕೇವಲ ಕಲ್ಲು-ಗಾರೆಗಳನ್ನು ಜೋಡಿಸುವುದಲ್ಲ; ಅದು ಸಮಾಜವನ್ನು, ಸಂಸ್ಕೃತಿಯನ್ನು ಮತ್ತು ಸನಾತನ ಧರ್ಮದ ಆತ್ಮವನ್ನು ಪುನಃ ಜಾಗೃತಗೊಳಿಸುವ ಪವಿತ್ರ ಯಜ್ಞ ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?

ನಿಮ್ಮವನೇ

ಉಮಾಸುತ

ಪ್ರಸ್ತುತ ದೇವಾಲಯ ನಿರ್ಮಾಣದ ಕಾರ್ಯದ ಪ್ರಗತಿಯನ್ನು ಈ ಲಿಂಕ್ ಮೂಲಕ ನೋಡಬಹುದಾಗಿದೆ

https://www.instagram.com/reels/DWxk5amkWnG/

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ