ದೇವಾಲಯ ಕಟ್ಟಿದ್ದು ದೇವರಿಗೋ? ಸಮಾಜಕ್ಕೋ? – ದಡಗದ ಶ್ರೀ ಯೋಗ ನರಸಿಂಹಸ್ವಾಮಿ ದೇವಾಲಯದ ಪುನರ್ಜನ್ಮದ ಕಥೆ
“ದೇವಾಲಯ ಎಂದರೆ ಕೇವಲ ದೇವರ ಪೂಜೆ ನಡೆಯುವ ಸ್ಥಳ” ಎಂದು ನಾವು ಇಂದು ಭಾವಿಸುತ್ತೇವೆ. ಆದರೆ ನಮ್ಮ ಪೂರ್ವಜರು, ವಿಶೇಷವಾಗಿ ರಾಜರು ಮತ್ತು ಮಹಾರಾಜರು, ಹಳ್ಳಿ ಹಳ್ಳಿಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದು ಕೇವಲ ಧಾರ್ಮಿಕ ಕಾರಣಕ್ಕಾಗಿ ಅಲ್ಲ. ದೇವಾಲಯಗಳು ಅಂದಿನ ಸಮಾಜದ ಶಿಕ್ಷಣ, ಆಡಳಿತ, ಕೃಷಿ, ನ್ಯಾಯ, ಕಲೆ, ಸಂಸ್ಕೃತಿ, ಆರ್ಥಿಕತೆ ಹಾಗೂ ಸಾಮಾಜಿಕ ಏಕತೆಯ ಜೀವನಾಡಿಯಾಗಿದ್ದವು.
ಹೀಗಾಗಿ, ದೇವಾಲಯವೆಂದರೆ ಕೇವಲ ಕಲ್ಲಿನ ಕಟ್ಟಡವಲ್ಲ; ಅದು ಒಂದು ಗ್ರಾಮದ ಆತ್ಮವಾಗಿತ್ತು.

ಹಳ್ಳಿಯ ಹೃದಯವಾಗಿದ್ದ ದೇವಾಲಯಗಳು
ಇಂದು ಗ್ರಾಮ ಪಂಚಾಯಿತಿ ಕಚೇರಿ, ಸಮುದಾಯ ಭವನ, ಗ್ರಂಥಾಲಯ, ಸಭಾಭವನ, ಉದ್ಯಾನ, ಕಲ್ಯಾಣ ಮಂಟಪ, ಶಾಲೆ ಎಂದು ಪ್ರತ್ಯೇಕವಾಗಿ ಕಾಣುವ ವ್ಯವಸ್ಥೆಗಳೆಲ್ಲವೂ ಹಿಂದಿನ ಕಾಲದಲ್ಲಿ ಒಂದೇ ದೇವಾಲಯದ ಆವರಣದಲ್ಲಿ ಅಸ್ತಿತ್ವದಲ್ಲಿದ್ದವು. ರಾಜರು ದೇವಾಲಯಗಳನ್ನು ಕಟ್ಟಿಸಿ ಬಿಡುತ್ತಿರಲಿಲ್ಲ. ಅವುಗಳ ನಿರ್ವಹಣೆಗಾಗಿ ಕೆರೆಗಳು, ತೋಟಗಳು, ಕೃಷಿ ಭೂಮಿ, ಆದಾಯದ ಮೂಲಗಳು ಹಾಗೂ ದಾನಗಳನ್ನು ನೀಡಿ ಶಾಶ್ವತ ವ್ಯವಸ್ಥೆಯನ್ನೇ ರೂಪಿಸುತ್ತಿದ್ದರು. ಅದಕ್ಕಾಗಿಯೇ ವರ್ಷಪೂರ್ತಿ ಪೂಜೆ-ಪುನಸ್ಕಾರಗಳ ಜೊತೆಗೆ ದಾಸೋಹ, ಜಾತ್ರೆ, ರಥೋತ್ಸವ, ಸಂಗೀತ, ನೃತ್ಯ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಊರಿನವರು ಮಾತ್ರವಲ್ಲ, ಊರು ಬಿಟ್ಟು ದೂರದಲ್ಲಿದ್ದವರೂ ಸಹ ವರ್ಷಕ್ಕೊಮ್ಮೆ ಒಂದೆಡೆ ಸೇರುವ ಸಂಪ್ರದಾಯ ಬೆಳೆದಿತ್ತು. ಸಂಬಂಧಗಳು ಗಟ್ಟಿಯಾಗುತ್ತಿದ್ದವು.
ದೇವಾಲಯಗಳೇ ಅಂದಿನ ವಿಶ್ವವಿದ್ಯಾಲಯಗಳು
ದೇವಾಲಯಗಳೇ ಗುರುಕುಲಗಳಾಗಿದ್ದವು. ದೇವಾಲಯಗಳ ಅರ್ಚಕರೇ ಗುರುಗಳಾಗಿದ್ದರು. ಅಲ್ಲಿ ವೇದ, ಸಂಸ್ಕೃತ ಮಾತ್ರವಲ್ಲದೆ ವ್ಯಾಕರಣ, ಗಣಿತ, ಖಗೋಳಶಾಸ್ತ್ರ, ಆಯುರ್ವೇದ, ಯೋಗ, ನೀತಿಶಾಸ್ತ್ರ, ಕೃಷಿ ಹಾಗೂ ಜೀವನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು. ಜಾತಿ-ಧರ್ಮದ ಭೇದಕ್ಕಿಂತ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಅದರ ಪರಿಣಾಮವೇ ಅಂದಿನವರು ಅನೇಕರು ಅನಕ್ಷರಸ್ಥರಾಗಿದ್ದರೂ ಜೀವನಜ್ಞಾನಿಗಳಾಗಿದ್ದರು.
ದೇವಾಲಯಗಳು ಗ್ರಾಮೀಣ ಆರ್ಥಿಕತೆಯ ಜೀವಾಳ
ಬಹುತೇಕ ದೇವಾಲಯಗಳು ನದಿ, ಕೆರೆ, ಕಲ್ಯಾಣಿ ಅಥವಾ ಬಾವಿಗಳ ಸಮೀಪವೇ ನಿರ್ಮಾಣವಾಗುತ್ತಿದ್ದವು. ಇದರಿಂದ ನೀರಿನ ಸಂರಕ್ಷಣೆ, ಕೃಷಿ ಮತ್ತು ಪರಿಸರ ಸಂರಕ್ಷಣೆಯೂ ಸಹಜವಾಗಿ ನಡೆಯುತ್ತಿತ್ತು. ಇನ್ನೊಂದೆಡೆ ದೇವಾಲಯಗಳ ಜಾತ್ರೆ, ಉತ್ಸವಗಳಿಂದ ರೈತರು, ಕುಂಬಾರರು, ಕಮ್ಮಾರರು, ಶಿಲ್ಪಿಗಳು, ನೇಕಾರರು, ಹೂ ಬೆಳೆಗಾರರು, ಸಂಗೀತಗಾರರು, ನೃತ್ಯಗಾರರು ಸೇರಿದಂತೆ ನೂರಾರು ಕುಟುಂಬಗಳಿಗೆ ಉದ್ಯೋಗ ದೊರೆಯುತ್ತಿತ್ತು. ದೇವಾಲಯಗಳು ಕೇವಲ ಭಕ್ತಿಯ ಕೇಂದ್ರಗಳಲ್ಲ; ಗ್ರಾಮೀಣ ಆರ್ಥಿಕತೆಯ ಜೀವನಾಡಿಯಾಗಿದ್ದವು.
ಇತಿಹಾಸ ಸಾಕ್ಷಿಯಾಗಿರುವ ದೇವಾಲಯಗಳು
- ಹೊಯ್ಸಳರ ಬೇಲೂರು, ಹಳೇಬೀಡು, ಸೋಮನಾಥಪುರದ ದೇವಾಲಯಗಳು ಇಂದು ವಿಶ್ವದ ಗಮನ ಸೆಳೆಯುವ ಶಿಲ್ಪಕಲೆಯ ಅದ್ಭುತಗಳಾಗಿವೆ.
- ವಿಜಯನಗರ ಸಾಮ್ರಾಜ್ಯದ ವಿರೂಪಾಕ್ಷ ಹಾಗೂ ವಿಠ್ಠಲ ದೇವಾಲಯಗಳು ಪೂಜೆಯ ಜೊತೆಗೆ ವ್ಯಾಪಾರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಾಗಿದ್ದವು.
- ಚೋಳರ ತಂಜಾವೂರಿನ ಬೃಹದೀಶ್ವರ ದೇವಾಲಯ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದ್ದ ಆರ್ಥಿಕ ಕೇಂದ್ರವಾಗಿತ್ತು.
ಇವೆಲ್ಲವೂ ದೇವಾಲಯಗಳ ನಿಜವಾದ ಪಾತ್ರವನ್ನು ಹೇಳುತ್ತವೆ.
ಆದರೆ… ಕಾಲ ಬದಲಾಯಿತು!

ವಿದೇಶಿ ಆಕ್ರಮಣಗಳು, ಕಾಲಕ್ರಮೇಣ ಬದಲಾಗಿದ ಜೀವನಶೈಲಿ, ನಗರೀಕರಣ ಮತ್ತು ಗ್ರಾಮೀಣ ವಲಸೆ… “ಕೆಟ್ಟು ಪಟ್ಟಣ ಸೇರು” ಎಂಬ ಗಾದೆ ಮಾತಿನಂತೆ ಹಳ್ಳಿಗಳು ಖಾಲಿಯಾಗುತ್ತಾ ಬಂದವು. ಅದರೊಂದಿಗೆ ನೂರಾರು ವರ್ಷಗಳ ಇತಿಹಾಸ ಹೊಂದಿದ್ದ ಅನೇಕ ದೇವಾಲಯಗಳು ನಿರ್ವಹಣೆ ಇಲ್ಲದೆ ಶಿಥಿಲಗೊಂಡವು. ಅಂತಹ ದೇವಾಲಯಗಳಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದಡಗ ಗ್ರಾಮದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯವೂ ಒಂದಾಗಿದೆ. ಶ್ರೀ ಯೋಗ ನರಸಿಂಹಸ್ವಾಮಿಯ ದೇವಾಲಯ ಹೊರನೋಟಕ್ಕೆ ಇಟ್ಟಿಗೆ-ಗಾರೆಗಳಿಂದ ನಿರ್ಮಾಣವಾದಂತೆ ಕಂಡರೂ, ಒಳಗಿನ ಕಂಬಗಳು, ಅಂಕಣಗಳು, ಅರಳಿದ ಪದ್ಮ ಕೆತ್ತನೆಗಳು ಗಂಗರ ಕಾಲದ ವಾಸ್ತುಶೈಲಿಯನ್ನು ನೆನಪಿಸುತ್ತವೆ. ಇಲ್ಲಿನ ಶ್ರೀ ಯೋಗ ನರಸಿಂಹಸ್ವಾಮಿಯ ಮೂಲ ವಿಗ್ರಹ ಭಕ್ತರ ಮನ ಸೆಳೆಯುವ ಅಪರೂಪದ ಶಿಲ್ಪವಾಗಿದೆ.





