ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ, ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಲಾಗಿದೆ. ಗುಜರಾತ್ನ ಕೆವಾಡಿಯಾದಲ್ಲಿ ಮಂಗಳವಾರ ಏರ್ಪಡಿಸಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಸಂದರ್ಭ ಬಾಲಿವುಡ್, ಮಾಲಿವುಡ್, ಕಾಲಿವುಡ್‌ನ ಪ್ರಶಸ್ತಿ ಪುರಸ್ಕೃತರೆಲ್ಲ ಎದ್ದು ನಿಂತು ಗೌರವಿಸಿದ್ದಾರೆ. ಇದಕ್ಕೂ ಮುನ್ನ ಅನಂತ್ ನಾಗ್ ಅವರ ಸಿನಿಮಾ ಜರ್ನಿಯ ವಿಶೇಷ ವಿಡಿಯೋ ಕೂಡ ಪ್ರದರ್ಶನವಾಯಿತು. ಕೆಜಿಎಫ್, ಗಾಳಿಪಟ ಚಿತ್ರದ ಅಭಿನಯದ ವಿಚಾರವು ಈ ವಿಡಿಯೋದಲ್ಲಿದೆ.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅನಂತ್ ನಾಗ್, ಜನ್ಮ ಭೂಮಿ, ಕರ್ಮ ಭೂಮಿ, ಧರ್ಮ ಭೂಮಿಗೆ ನಮಿಸಿದ್ದಾರೆ. ಈ ಪ್ರಶಸ್ತಿ ಸಿಗಲು ಕೇವಲ ಕರ್ನಾಟಕ ಮತ್ತು ಕನ್ನಡಿಗರು ಮಾತ್ರ ಕಾರಣ. ಕಳೆದ 55 ವರ್ಷಗಳಿಂದ ನನ್ನನ್ನು ಪ್ರೀತಿಯಿಂದ ಸಲುಹಿದ ಸಮಸ್ತ ಕರ್ನಾಟಕದ ಪ್ರೇಕ್ಷಕರಿಗೆ, ಚಿತ್ರರಂಗದ ತಂತ್ರಜ್ಞರಿಗೆ ಮತ್ತು ನಿರ್ದೇಶಕರಿಗೆ ನಾನು ಈ ಅತ್ಯುನ್ನತ ಗೌರವವನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ತಮ್ಮ ಜೀವನ ಮತ್ತು ಸಿನಿಮಾ ಪಯಣದ ಬಗ್ಗೆ ಮಾತನಾಡಿದ ಅವರು, ಮೊದಲ 12-13 ವರ್ಷ ನಾನು ಮಠದಲ್ಲಿದ್ದೆ. ಬಳಿಕ ಮುಂಬೈಗೆ ಹೋದೆ, ಮುಂಬೈ ನಲ್ಲಿ ‘ಚೈತನ್ಯ ಮಹಾಪ್ರಭು’ ಸ್ವಾಮೀಜಿ ಬಗ್ಗೆ ಮಾಡಿದ ನಾಟಕ ನನ್ನ ನಟನಾ ವೃತ್ತಿಯ ಮೊದಲ ನಾಟಕವಾಯಿತು. ಅಲ್ಲಿಂದಲೇ ನಟನಾ ವೃತ್ತಿ ಆರಂಭವಾಯಿತು. ಮಠದಲ್ಲಿದ್ದಾಗ ಆದಿಶಂಕರಾಚಾರ್ಯ ಭಜಗೋವಿಂದಂ ಓದಿದ್ದೆ, ‘ಉದರನಿಮಿತ್ತಂ ಬಹುಕೃತ ವೇಷಂ’, ಕನಕದಾಸರ, ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ಮಾತಿನಂತೆ ಉದರ ನಿಮಿತ್ತವಾಗಿ ಆರಂಭಿಸಿದ ವೃತ್ತಿ ಇದು ಎಂದು ನೆನಪುಗಳನ್ನು ಮೆಲುಕು ಹಾಕಿದರು.
ಮುಂಬೈನಲ್ಲಿ ಇದ್ದ ಐದು ವರ್ಷಗಳಲ್ಲಿ 50 ನಾಟಕಗಳಲ್ಲಿ ನಟಿಸಿದೆ. ಮೊದಲು ಕನ್ನಡದಲ್ಲಿ ನಟಿಸಲು ಅವಕಾಶ ಸಿಕ್ಕಿತು ಬಳಿಕ ಹಿಂದಿಯಲ್ಲಿ. ಎಂಎಸ್ ಸತ್ಯು, ಶ್ಯಾಮ್ ಬೆನಗಲ್ ಇನ್ನೂ ಹಲವರೊಟ್ಟಿಗೆ ಕೆಲಸ ಮಾಡಿದೆ. ಆಗ ಹೊಸ ಅಲೆಯ ಸಿನಿಮಾ, ಆರ್ಟ್ ಸಿನಿಮಾಗಳಿಗೆ ಅವಕಾಶ ಇತ್ತು. ಆ ಬಳಿಕ ಕರ್ನಾಟಕದಲ್ಲಿ ಅವಕಾಶ ನನಗೆ ಹೆಚ್ಚಾಗಿತ್ತು. ಹಾಗಾಗಿ ಕರ್ನಾಟಕಕ್ಕೆ ಮರಳಿದೆ. ಕರ್ನಾಟಕವೇ ನನ್ನ ಕರ್ಮಭೂಮಿಯಾಯಿತು’ ಎಂದು ವಿವರಿಸಿದರು.
ಕಳೆದ ವರ್ಷ, ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಪಡೆದೆ. ಈ ಬಾರಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿರುವುದು ಖುಷಿ ತಂದಿದೆ. ಆದರೆ ಈ ಪ್ರಶಸ್ತಿ ಕೇವಲ ನನ್ನೊಬ್ಬನದ್ದೇ ಅಲ್ಲ. ನನ್ನ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ಸಹ ಕಲಾವಿದರು, ತೆರೆಯ ಮುಂದೆ, ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಈ ಪ್ರಶಸ್ತಿಯನ್ನು ನಾನು ಅರ್ಪಿಸುತ್ತೇನೆ. ನನ್ನ ಜನ್ಮ ಭೂಮಿ, ಧರ್ಮ ಭೂಮಿ ಭಾರತ ಮತ್ತು ಕರ್ಮ ಭೂಮಿ ಕರ್ನಾಟಕಕ್ಕೆ ಋಣಿಯಾಗಿ ಇರುತ್ತೇನೆ’ ಎಂದು ಅನಂತ್ ನಾಗ್ ಭಾವುಕರಾಗಿ ನುಡಿದರು.





