–   ರಾಘವೇಂದ್ರ ಅಡಿಗ ಎಚ್ಚೆನ್.

ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಾಣ ಮತ್ತು ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಲವ್ ಸೀಸನ್ಸ್” ಚಿತ್ರ ಯಶಸ್ವಿಯಾಗಿ ಇಪ್ಪತೈದು ದಿನಗಳನ್ನು ಪೂರೈಸಿಕೊಂಡಿದೆ. ರಂಗಭೂಮಿ ಹಿನ್ನೆಲೆಯ ಹೊಸಬರ ತಂಡದಿಂದ ರೂಪುಗೊಂಡಿದ್ದ ಲವ್ ಸೀಸನ್ಸ್ ಒಂದಷ್ಟು ಅಡೆತಡೆಗಳನ್ನು ದಾಟಿಕೊಂಡು, ತನ್ನೊಳಗಿನ ಕಂಟೆಂಟಿನ ಕಸುವಿನಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಬಾಯಿಂದ ಬಾಯಿಗೆ ಹಬ್ಬಿದ ಒಳ್ಳೆ ಅಭಿಪ್ರಾಯಗಳಿಂದಲೇ ಇಪ್ಪತೈದು ದಿನಗಳ ಮೈಲಿಗಲ್ಲು ದಾಟಿಕೊಂಡಿರುವ ಈ ಘಳಿಗೆಯಲ್ಲಿ, ಬೆಂಬಲ ನೀಡಿ ಪ್ರೋತ್ಸಾಹಿಸಿದ, ನೋಡಿ ಹರಸಿದ ಎಲ್ಲರಿಗೂ ಚಿತ್ರತಂಡ ಧನ್ಯವಾದ ಸಮರ್ಪಿಸಿದೆ.

1001679252

ಜುಲೈ ತಿಂಗಳ ೩ನೇ ತಾರೀಕಿನಂದು ಲವ್ ಸೀಸನ್ಸ್ ಚಿತ್ರ ಬಿಡುಗಡೆಗೊಂಡಿತ್ತು. ಭಿನ್ನ ಪರಿಭಾಷೆಯ ಪ್ರೇಮಕಥೆ ಮತ್ತು ಅದಕ್ಕೆ ದೃಶ್ಯರೂಪ ನೀಡಿರುವ ಪರಿಯನ್ನು ನೋಡುಗರು ಮೊದಲ ದಿನದಿಂದಲೇ ಮೆಚ್ಚಿಕೊಂಡಿದ್ದರು. ಆ ನಂತರದಲ್ಲಿ ಸಾಕಷ್ಟು ಸವಾಲುಗಳೆದುರಾದರೂ ಕೂಡಾ, ಚಿತ್ರತಂಡ ಕ್ರಿಯಾಶೀಲ ಹಾದಿಯಲ್ಲಿಯೇ ಎದುರಿಸುತ್ತಾ ಸಾಗಿತ್ತು. ಸಿನಿಮಾ ರಂಗದ ಕಡೆಯಿಂದಲೂ ಬೆಂಬಲ ಲಭಿಸಿ, ನೋಡುಗರ ಕಡೆಯಿಂದ ಹೊಮ್ಮಲಾರಂಭಿಸಿದ್ದ ಸದಭಿಪ್ರಾಯಗಳಿಂದಲೇ ಯಶಸ್ವೀ ಪ್ರದರ್ಶನ ಸಾಧ್ಯವಾಗಿತ್ತು. ಇದೆಲ್ಲದರ ಫಲವೆಂಬಂತೆ ಲವ್ ಸೀಸನ್ಸ್ ಚಿತ್ರತಂಡವನ್ನೀಗ ಇಪ್ಪತೈದು ದಿನಗಳನ್ನು ದಾಟಿಕೊಂಡ ಸಂಭ್ರಮ ಆವರಿಸಿಕೊಂಡಿದೆ.

1001679259

ಇಂದಿನ ವಾತಾವರಣದಲ್ಲಿ ಯಾವುದೇ ಸಿನಿಮಾ ಇಪ್ಪತೈದು ದಿನಗಳ ಗಡಿ ದಾಟಿಕೊಳ್ಳೋದು ಸಾಹಸವೆಂಬಂತಿದೆ. ಅಂಥಾದ್ದರಲ್ಲಿ ಹೊಸಬರೇ ತುಂಬಿಕೊಂಡಿರುವ ಲವ್ ಸೀಸನ್ಸ್ ಆ ಹಂತವನ್ನು ತಲುಪಿಕೊಂಡಿರುವುದು ಚಿತ್ರರಂಗದ ಪಾಲಿಗೆ ಸಕಾರಾತ್ಮಕ ಬೆಳವಣಿಗೆ. ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಾಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ