ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ, ಸ್ಥಾನಮಾನ, ಸ್ವಾತಂತ್ರ್ಯ, ಸಾಧನೆ, ನ್ಯಾಯ, ಮಾನವೀಯತೆ, ಧೈರ್ಯ, ಹಕ್ಕು, ಸ್ತ್ರೀಯ ತನ್ನತನಕ್ಕಾಗಿ ಮಾತ್ರವಲ್ಲ, ಎಲ್ಲ ಮಹಿಳಾಪರ ಧ್ವನಿಗಾಗಿ ಇಟ್ಟ ದಿಟ್ಟ ಹೆಜ್ಜೆಯೇ….. `ಅವಳ ಹೆಜ್ಜೆ!’

ಹೆಣ್ಣುಮಕ್ಕಳು ತಮ್ಮ ಬದುಕಿನ ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಡಳಿತವನ್ನು ಪ್ರಭಾವಿಸಬೇಕು. ಸಮಾನತೆ ಬೇಕೆಂದರೆ ಸಮಾನವಾದ ಜವಾಬ್ದಾರಿ ವಹಿಸಿಕೊಳ್ಳಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ತಾನು ಮುಂದಡಿ ಇಡಬೇಕು. ಮನೆಯಿಂದಾಚೆಗೂ ಬಂದು ವಿಶಾಲ ಜಗತ್ತನ್ನು ನೋಡಬೇಕು ಎಂಬುದೇ `ಅವಳ ಹೆಜ್ಜೆ’ ಸಂಸ್ಥೆಯ ಮುಖ್ಯ ಧ್ಯೇಯ!

ಅವಳ ಹೆಜ್ಜೆ ಮಹಿಳೆಯು ತನ್ನ ಬದುಕಿನಲ್ಲಿ ಇಡುವ ಮಹತ್ವದ ಹೆಜ್ಜೆಯ ಗುರುತು. ಆಟದ ಮೈದಾನದಿಂದ ಹಿಡಿದು ಕೋರ್ಟ್ ರೂಮ್, ಪಾರ್ಲಿಮೆಂಟ್‌ ತನಕ, ಬಾಹ್ಯಾಕಾಶದಲ್ಲಿ ಚಂದ್ರನೂ ಸೇರಿದಂತೆ ಎಲ್ಲಾ ಕಡೆ ಅವಳ ಹೆಜ್ಜೆ ಇರಲಿ. ಪ್ರತಿ ಕ್ಷೇತ್ರದಲ್ಲೂ ಆಕೆ ಕಾಣಿಸಬೇಕು ಎಂಬುದರ ಆಶಯವೇ ಅವಳ ಹೆಜ್ಜೆ! ಹೀಗೆ ಸ್ತ್ರೀ ಸಬಲೀಕರಣಕ್ಕಾಗಿ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಅವಳ ಹೆಜ್ಜೆಯ ಹಿಂದಿರುವ ಶಕ್ತಿಯೇ ಅದರ ನಿರ್ದೇಶಕಿ ಶಾಂತಲಾ ದಾಮ್ಲೆ.

ಲಿಂಗ ಸಂವೇದನೆ, ವೈಯಕ್ತಿತ್ವ ವಿಕಸನ, ಮುಟ್ಟಿನ ನೈರ್ಮಲ್ಯ, ಕನ್ನಡತಿ ಕಿರುಚಿತ್ರೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು, ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು, ಸಮಾಜಕ್ಕೆ ತನ್ನ ಜವಾಬ್ದಾರಿ ಏನು ಅನ್ನುವುದರ ಬಗ್ಗೆ ಅರಿವು ಮೂಡಿಸುತ್ತಾ, ಪ್ರತಿಯೊಬ್ಬ ಹೆಣ್ಣೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಮನೆಯಿಂದ ಹೊರಗೆ ಬನ್ನಿ ಎಂದು ಅವಳ ಹೆಜ್ಜೆ ಮೂಲಕ ಸ್ತ್ರೀಯರಿಗೆ ಪ್ರೇರೇಪಣೆ ನೀಡುತ್ತಾ ಬಂದಿರುವವರೇ ನಮ್ಮ ಸ್ತ್ರೀಕುಲದ ಮೆಚ್ಚಿನ ಶಾಂತಲಾ ದಾಮ್ಲೆ.

ಮೈಸೂರಿನ ಗುಬ್ಬಿವಾಣಿ ಟ್ರಸ್ಟ್ ನಡೆಸುತ್ತಿರುವ ಅವಳ ಹೆಜ್ಜೆಯ ನಿರ್ದೇಶಕಿ ಶಾಂತಲಾ ದಾಮ್ಲೆ, ಅಮೆರಿಕಾದ ವರ್ಜೀನಿಯಾ ಟೆಕ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಮತ್ತು ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದರು. ಐಟಿ ಕ್ಷೇತ್ರದಲ್ಲಿ 4 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಮತ್ತು 12 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕಾದಲ್ಲಿ ಕೆಲಸ ನಿರ್ವಹಿಸಿದರು.

2010ರಲ್ಲಿ ಭಾರತಕ್ಕೆ ಮರಳಿದ ನಂತರ, ಅವರು ಭ್ರಷ್ಟಾಚಾರ ವಿರೋಧಿ ಚಳುವಳಿ ಮತ್ತು ಮಹಿಳಾ ಸಶಕ್ತೀಕರಣದತ್ತ ಗಮನಹರಿಸಿ ಸಾಮಾಜಿಕ ಕೆಲಸ ಹಾಗೂ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ವಿಶೇಷ ಅಂದ್ರೆ, ವೃತ್ತಿ ಅರಸಿ ಅಮರಿಕಾಕ್ಕೆ ತೆರಳಿ ಅಲ್ಲಿ ನೆಲೆಸಿದರು ಮತ್ತೆ ಭಾರತಕ್ಕೆ ಹಿಂದಿರುಗಿ ಬರುವವರ ಸಂಖ್ಯೆ ಬಹಳ ವಿರಳ. ಅಂತಹುದರಲ್ಲಿ, ಶಾಂತಲಾ ದಾಮ್ಲೆಯರಿಗೆ ಅಲ್ಲಿನ ವ್ಯವಸ್ಥೆ ಇಷ್ಟವಾದರೂ ತಾನು ತನ್ನ ದೇಶದಲ್ಲಿ ಏನಾದರೂ ಮಾಡಬೇಕು ಅಂದುಕೊಂಡು ಭಾರತಕ್ಕೆ ವಾಪಸ್ಸಾದರು.

Individual-photo-1-copy

ಆರಂಭಿಕ ದಿನಗಳು

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಾಂತಲಾ ದಾಮ್ಲೆಯವರ ತಂದೆ ಎಚ್‌.ಎಂ.ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಅವರಿಗೆ ಹೆಣ್ಣುಮಕ್ಕಳು ಎದುರಿಸುವ ತಾರತಮ್ಯದ ಜೀವನಗಳ ಬಗ್ಗೆ ಚಿಕ್ಕಂದಿನಲ್ಲೇ ಅರಿವಿತ್ತು. ನಾಲ್ಕು ಮಂದಿ ಮಕ್ಕಳಲ್ಲಿ ಹಿರಿಯರಾಗಿದ್ದ ಶಾಂತಲಾ, ಆಗಾಗ ಕೇಳುತ್ತಿದ್ದ ಪ್ರಶ್ನೆಯೆಂದರೆ, `ನಮ್ಮ ಮನೆಗಳಲ್ಲಿ ಮಗನಿಗೆ ನೀಡುವ ಆದ್ಯತೆ ಮಗಳಿಗೆ ಏಕೆ ನೀಡುವುದಿಲ್ಲ….?’ ಎಂಬುದಾಗಿತ್ತು.

17ನೇ ವಯಸ್ಸಿನಲ್ಲಿ ಎಂಜಿನಿಯರಿಂಗ್‌ ಪದವಿಗಾಗಿ ಪರ ಊರಿ (ದಾವಣಗೆರೆ)ಗೆ ಹೋಗುವುದು ಆ ಕಾಲದಲ್ಲಿ ದಿಟ್ಟ ನಿರ್ಧಾರವೇ ಆಗಿತ್ತು. ಅವರ ನೇರ ಮಾತು, ದೃಢ ನಿರ್ಧಾರ, ನಡೆನುಡಿಗಳಿಂದ ಅವರು ತಮ್ಮ ತಪ್ಪಿಲ್ಲದಿದ್ದರೂ ಬಹಳಷ್ಟು ಅವಮಾನ ಅನುಭವಿಸಿದರು. ತಮ್ಮ ಕಣ್ಣೆದುರೇ ನಡೆದ ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತನಾಡಿದರು. ಹೊರ ದೇಶಕ್ಕೆ ಹೋಗಿ ದುಡಿಯಲು ತಾನೊಬ್ಬ ಹೆಣ್ಣು ಎಂಬ ಕಾರಣಕ್ಕೆ ವೀಸಾ ಪಡೆಯಲು ಪಾಡುಪಟ್ಟರು.

ಹೊಸ ಜೀವನ

ದಾವಣಗೆರೆಯಲ್ಲಿ ವಿದ್ಯಾಭ್ಯಾಸದ ನಂತರ ಶಾಂತಲಾ ಬೆಂಗಳೂರಿಗೆ ಹಿಂತಿರುಗಿದಾಗ, ಐಟಿ ಬೂಮ್ ಪ್ರಾರಂಭವಾಗಿತ್ತು, ಕೆಲಸವನ್ನೂ ಕಂಡುಕೊಂಡರು. ಆದರೆ, ವಿದೇಶಕ್ಕೆ ಹೋಗಲು ಅವರ ಮನಸ್ಸು ಹಾತೊರೆಯುತ್ತಿತ್ತು. ‌ವೀಸಾಕ್ಕೆ ಅರ್ಜಿ ಸಲ್ಲಿಸಿದರು. ಹಲವು ಬಾರಿ ಸಂದರ್ಶನ ಹೊರತಾಗಿಯೂ ಅವರಿಗೆ ವೀಸಾ ದೊರೆಯುತ್ತಿರಲಿಲ್ಲ.

ತಾನು ಯುವತಿಯಾಗಿರುವುದರಿಂದ, ನನ್ನ ಪೋಷಕರು ನನ್ನನ್ನು ಮದುವೆಯಾಗಲೂ ಹೇಳುತ್ತಾರೆ ಮತ್ತು ನಾನು ಹೋಗುವುದನ್ನು ತಡೆಯುತ್ತಾರೆ. ಇದೊಂದು ವ್ಯರ್ಥ ಪ್ರಯತ್ನ ಎಂದು ಏಜೆಂಟ್‌ ಒಬ್ಬರು ಅವರಿಗೆ ಹೇಳಿದರಂತೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಉದ್ಯೋಗದಾತರು ಕೆಲಸದ ವೀಸಾಗಳಿಗೆ ಅರ್ಜಿ ಸಲ್ಲಿಸುವ ಮಹಿಳೆಯರ ಮೇಲೆ ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸುವುದೇ ಇಲ್ಲ.

“ನಾನು ಮದುವೆಯಾಗುವುದಿಲ್ಲ ಎಂದು ಹೇಳಿದೆ, ಆ ಸಮಯದಲ್ಲಿ ಅದು ನನ್ನ ನಿಲುವಾಗಿತ್ತು ಮತ್ತು ಆದ್ದರಿಂದ, ಅವರು ನನಗೆ ‌ವೀಸಾ ಪಡೆಯಲು ಸಹಾಯ ಮಾಡಿದರು,” ಎಂದು ನೆನಪಿಸಿಕೊಳ್ಳುತ್ತಾರೆ ಶಾಂತಲಾ.

ವೈವಿಧ್ಯತೆಯಿಂದ ಸಮೃದ್ಧವಾಗಿದ್ದ ವಾಷಿಂಗ್ಟನ್‌ ನಗರಕ್ಕೆ ಕಾಲಿಟ್ಟ ಶಾಂತಲಾ, ಅಲ್ಲಿ ಕೇವಲ ಹೊಸ ಜಗತ್ತನ್ನು ಮಾತ್ರ ಕಾಣಲಿಲ್ಲ. ಹೊಸ ದೃಷ್ಟಿಕೋನದಿಂದ ಜಗತ್ತನ್ನು ನೋಡಲು ಶುರುವಿಟ್ಟರು. ಅಲ್ಲಿ ಎಲ್ಲ ಬಹಳ ಸರಳವಾಗಿ ಗೋಚರಿಸುತ್ತಿತ್ತು.

“ನಾನು ಕೆಲಸ ಕಂಡುಕೊಂಡ ಕೂಡಲೇ, ಮೊದಲು ಕಾರಿಗೆ ಮತ್ತು ನಂತರ ಮನೆಗೆ ಸಾಲ ಪಡೆಯಲು ಸಾಧ್ಯವಾಯಿತು. ಎಲ್ಲಾ ಪ್ರಕ್ರಿಯೆ ತುಂಬಾ ಸುಲಭ ಮತ್ತು ನೇರವಾಗಿದ್ದ. ನಾನು ಯಾವುದೇ ಲಂಚವನ್ನೂ ಕೊಡಬೇಕಾಗಿರಲಿಲ್ಲ. ಕಡಿಮೆ ಅಭಿವೃದ್ಧಿ ಹೊಂದಿದ ನೆರೆಹೊರೆಗಳಲ್ಲೂ ಜನರು ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದರು. ಅವರ ಮನೆಗಳಲ್ಲಿ ಎಸಿ ಮತ್ತು ಫ್ರಿಜ್‌ ಇದ್ದವು. ಅವರು 6 ತಿಂಗಳವರೆಗೆ ನಿರುದ್ಯೋಗ ಭತ್ಯೆಗಳನ್ನು ಪಡೆಯಬಹುದಾಗಿತ್ತು.

“ಹಾಗಂತ ಯುಎಸ್‌ ಎಲ್ಲಾ ರೀತಿಯಲ್ಲೂ ಪರಿಪೂರ್ಣ ಎಂದು ನಾನು ಹೇಳುವುದಿಲ್ಲ. ಆದರೆ, ಸರ್ಕಾರಿ ನಿಯಮಗಳು, ವ್ಯವಸ್ಥೆ ಬಹಳ ಸರಳ, ಜನರಿಗೆ ಹತ್ತಿರ. ಅಲ್ಲಿ ಒಬ್ಬ ವ್ಯಕ್ತಿಯ ಆದಾಯ ಎಷ್ಟೇ ಕಡಿಮೆ ಇದ್ದರೂ, ಅವನು ಹಸಿವಿನಿಂದ ಸಾಯುವುದಿಲ್ಲ,” ಎಂದು ದಾಮ್ಲೆ ನೆನಪಿಸಿಕೊಳ್ಳುತ್ತಾರೆ.

ಆದಾಗ್ಯೂ, ಭಾರತದಲ್ಲಿ ತನ್ನ ಏಜೆಂಟ್‌ ತನಗೆ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳಲು ಅವರಿಗೆ ಕಾರಣವಿತ್ತು. ವಲಸೆ ಬಂದವರೊಂದಿಗೆ ಬೆರೆತಾಗ, ಅತೃಪ್ತ ಮತ್ತು ನಿರಾಶೆಗೊಂಡ ಅನೇಕ ಮಹಿಳೆಯರನ್ನು ಭೇಟಿಯಾಗಿದ್ದರು. ಉನ್ನತ ಶಿಕ್ಷಣ ಪಡೆದ ಹಲವರು ಒಳ್ಳೊಳ್ಳೆ ಉದ್ಯೋಗ ತೊರೆದು ಅಮೆರಿಕಾದಲ್ಲಿ ತಮ್ಮ ಸಂಗಾತಿಗಳೊಂದಿಗೆ 4 ವೀಸಾದಲ್ಲಿ ಸೇರಲು ಮನೆಗೆ ಮರಳಿದ್ದರು.

“ಅವರು ಕ್ಲಾಸ್‌ ಟಾಪರ್‌ ಗಳಾಗಿದ್ದರು ಮತ್ತು ಭಾರತದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದರು. ಅಮೆರಿಕಾದಲ್ಲಿ, ಅವರು 4 ವೀಸಾಗಳಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅನೇಕ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಿದ್ದರು.”

Shimoga-workshop

ಮಹತ್ವದ ತಿರುವು

“ಇದೆಲ್ಲ ವಿಭಿನ್ನ ರಾಜಕೀಯ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಪರೀಕ್ಷಿಸಲು ನನ್ನನ್ನು ಪ್ರೇರೇಪಿಸಿತು,” ಎಂದು ಶಾಂತಲಾ ಹೇಳುತ್ತಾರೆ. ಅವರು 1921ರಲ್ಲಿ ಅಮೆರಿಕಾದ ಇತಿಹಾಸ ಅವರ ಸ್ವಾತಂತ್ರ್ಯ ಹೋರಾಟ, ನಾಗರಿಕ ಹಕ್ಕುಗಳ ಚಳುವಳಿ ಮತ್ತು ಮತದಾನದ ಹಕ್ಕಿಗಾಗಿ ಮಹಿಳೆಯರ ಹೋರಾಟದ ಬಗ್ಗೆ ಅಧ್ಯಯನ ಮಾಡಿದರು. ಅಮೆರಿಕಾದಲ್ಲಿ ಶಾಂತಲಾ 3 ವರ್ಷಗಳ ಕಾಲ ಅಪ್ಲಿಕೇಶನ್‌ ಡೆವಲಪ್‌ ಮೆಂಟ್‌ ವ್ಯವಸ್ಥಾಪಕಿಯಾಗಿ ಕೆಲಸ ಮಾಡಿದರು. ಭಾರತದಲ್ಲಿ ತಿಳಿದಿದ್ದ ವಿಷಯಗಳು ಮತ್ತು ಅಮೆರಿಕಾದಲ್ಲಿ ಅಸ್ತಿತ್ವದಲ್ಲಿದ್ದ ವ್ಯವಸ್ಥೆಯ ನಡುವಿನ ದೊಡ್ಡ ಅಂತರವನ್ನು ಕಂಡುಕೊಂಡರು.

New-Zealand-Trip-with-women-friends

ಮರಳಿ ಮನೆಗೆ

ಇದುವರೆಗಿನ ಅವರ ಎಲ್ಲಾ ನಿರ್ಧಾರಗಳು ಸವಾಲಿನ ಕೆಲಸವಾಗಿದ್ದರೆ, ಅಮೆರಿಕಾದಲ್ಲಿ ಸುಸ್ಥಿರವಾಗಿದ್ದ ಕೆಲಸ ಬಿಟ್ಟು ಭಾರತಕ್ಕೆ ಹಿಂದಿರುಗುವುದು, ಬೇರೆಯವರಿಗೆ ಅದು ಮೂರ್ಖತನದ ನಿರ್ಧಾರದಂತೆ ಕಾಣುತ್ತಿತ್ತು. ಭಾರತೀಯ ಸ್ನೇಹಿತರು `ಭಾರತ ಎಷ್ಟು ಹದಗೆಟ್ಟ ದೇಶ,’ ಎಂದು ಹೇಳುತ್ತಿದ್ದರಂತೆ. ಅದನ್ನೆಲ್ಲಾ ಕೇಳಿದಾಗ ಶಾಂತಲಾಗೆ ತೀವ್ರ ಬೇಸರವಾಗುತ್ತಿತ್ತು. ಆದರೆ, ಬದಲಾವಣೆ ತರುವವರು ಯಾರು….? ತಾವು ಆ ಬದಲಾವಣೆಗೆ ಕಾರಣವಾಗಬೇಕೆಂಬ ಆಶಯದಿಂದಲೇ ಜನರಿಗೆ ಹತ್ತಿರವಾಗುವ ನೆಪದಲ್ಲಿ ರಾಜಕೀಯವನ್ನು ಆಯ್ದುಕೊಂಡರು.

ರಾಜಕೀಯದ ಮೊದಲ ಹೆಜ್ಜೆಗಳು ಅಮೆರಿಕಾದಿಂದ ಬಂದ ನಂತರ, `ಸಾಕು’ ಎಂಬ ಬೆಂಗಳೂರಿನ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡರು. ಅದು ಮುಂದೆ `ಇಂಡಿಯಾ ಎಗೆನೆಸ್ಟ್ ಕರೆಪ್ಶನ್‌’ ಚಳುವಳಿಗೆ ಮುನ್ನುಡಿಯಾಯಿತು. ನಂತರ ಡಾ. ಜೆ.ಪಿ. ನಾರಾಯಣ್‌ ರ ರಾಜಕೀಯ ಸಿದ್ಧಾಂತಗಳು ಅವರನ್ನು ಆಕರ್ಷಿಸಿದವು. ಲೋಕಸತ್ತಾ ಪಕ್ಷದ ಮೂಲಕ ಚುನಾವಣೆಗೆ ನಿಂತರು. ತದನಂತರ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು.

`ಜೀವನ ವಿಭಿನ್ನವಾಗಿರಬಹುದು ಎಂದು ನಾನು ನೋಡಿದ್ದೆ,’ ಎನ್ನುವ ಶಾಂತಲಾ ದಾಮ್ಲೆ, “ನಾವು ಭಾರತೀಯರು ನಿಯಮಗಳನ್ನು ಪಾಲಿಸುವುದು ಮತ್ತು ಸರಿಯಾದ ಕೆಲಸನ್ನು ಮಾಡುವುದು ನಮ್ಮಲ್ಲಿದೆ. ಆದರೆ, ಒಂದು ದೇಶವಾಗಿ ವ್ಯವಸ್ಥಿತ ಬದಲಾವಣೆಯನ್ನು ಸೃಷ್ಟಿಸಲು ನಾವು ಪಾಲಿಸಿಗಳ ಅನುಷ್ಠಾನ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ಅದಕ್ಕಾಗಿ ನಮಗೆ ರಾಜಕೀಯ ಬದಲಾವಣೆಯ ಅಗತ್ಯವಿದೆ,” ಎನ್ನುತ್ತಾರೆ.

2013ರಲ್ಲಿ ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಲೋಕಸತ್ತಾ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದರು. ಗೆಲವು ಕಾಣದಿದ್ದರೂ ಮೊದಲ ಬಾರಿಗೆ 9 ಸಾವಿರ ಮತ ಪಡೆದರು. ನಂತರ, ಫೆಬ್ರವರಿ 1, 2014 ರಂದು ಅಧಿಕೃತವಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದರು. ಆ ವೇಳೆ, ಅರವಿಂದ್‌ ಕೇಜ್ರಿವಾಲ್ ‌ದೆಹಲಿ ಮುಖ್ಯಮಂತ್ರಿ ಆಗಿದ್ದರು. ಪಕ್ಷ ಐತಿಹಾಸಿಕ ಗೆಲುವನ್ನು ದಾಖಲಿಸಿತ್ತು. ಶಾಂತಲಾ, ಈಗಲೂ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭಾರತಕ್ಕೆ ಬಂದು, ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಂತರ ಶಾಂತಲಾ ಬದುಕುವ ಹೂವಿನ ಹಾದಿಯೇನೂ ಆಗಿರಲಿಲ್ಲ. ಓವೇರಿಯನ್‌ ಕ್ಯಾನ್ಸರ್‌ ಗೂ ತುತ್ತಾದರು. ಅದನ್ನು ದಿಟ್ಟವಾಗಿ ಎದುರಿಸಿದರು. ಆರೋಗ್ಯ ಚೇತರಿಸಿದ ನಂತರ ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದನ್ನೂ ಅರಿತರು. ಬಳಿಕ 2017ರಲ್ಲಿ ಲಿಂಗ ಸಮಾನತೆಗಾಗಿ `ಅವಳ ಹೆಜ್ಜೆ’ ಎಂಬ ಹೆಸರಿನಲ್ಲಿ ಹೊಸ ಹಾದಿಗೆ ಕಾಲಿಟ್ಟರು.

Film-Festival-2025---Giving-first-prize

ಅವಳ ಹೆಜ್ಜೆ ಈ ಸಂಸ್ಥೆ ಕುರಿತು ಮಾತನಾಡಿದ ಶಾಂತಲಾ ದಾಮ್ಲೆ, “ನಮ್ಮ ಸಮಾಜದಲ್ಲಿ ಇನ್ನೂ ಬಹಳಷ್ಟು ಬದಲಾವಣೆ ಆಗಬೇಕು. ಮಹಿಳೆ ಸಮಾನತೆಯನ್ನು ಕೇಳಿದ್ದೇ ತಪ್ಪು ಎನ್ನುವ ರೀತಿಯ ವರ್ತನೆಗಳು ಇಂದಿಗೂ ಇವೆ. ಇದು ಬದಲಾಗಬೇಕು. ಪುರುಷರಷ್ಟೇ ಮಹಿಳೆ ಎಲ್ಲದರಲ್ಲೂ ಸಮಾನಳೂ ಎಂದಾದ ಮೇಲೆ ಯಾಕೀ ತಾರತಮ್ಯ….? ಇದನ್ನು ಹೋಗಲಾಡಿಸಬೇಕೆಂದರೆ ಅವಳ ಹೆಜ್ಜೆ ಮುಖ್ಯ. ಎಲ್ಲ ಮಹಿಳೆಯರು ಸ್ತ್ರೀ ಒಗ್ಗಟ್ಟನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಚಿಕ್ಕವರಿರಲಿ, ದೊಡ್ಡವರಿರಲಿ, ಸಹಾಯ, ಸಹಕಾರ, ಸಲಹೆ ಏನೇ ಇರಬಹುದು, ಅವೆಲ್ಲ ಅವಳ ಹೆಜ್ಜೆಯಿಂದಲೇ ದೊರೆಯುತ್ತದೆ.

“ಒಬ್ಬ ಮಹಿಳೆ ಒಬ್ಬ ವಕೀಲರನ್ನು ಭೇಟಿ ಮಾಡಬೇಕು ಎಂದಿದ್ದರೆ, ಮಹಿಳಾ ಲಾಯರ್‌ ಗಳನ್ನು ನಮ್ಮ ನೆಟ್‌ ವರ್ಕ್‌ ನಲ್ಲಿ ಹುಡುಕಬಹುದು. ವ್ಯಕ್ತಿತ್ವ ವಿಕಸನ, ಮಹಿಳೆಯರು ಹೇಗೆ ಸ್ಥಳೀಯ ಆಡಳಿತದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಸ್ಥಳೀಯ ಸಮಸ್ಯೆಗಳಿದ್ದರೆ ಅವರೇ ಅದರ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಅರಿವು ಮೂಡಿಸಲಾಗುತ್ತದೆ. “ಕರ್ನಾಟಕದಾದ್ಯಂತ ಇವರು ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗುತ್ತದೆ. ಮಹಿಳೆಯರದ್ದು ಅಂದರೆ ಬರೀ ಕಣ್ಣೀರ ಕಥೆಯೇ ಆಗಿರಬಾರದು. ಶೋಷಣೆ ವಿರುದ್ಧ ಹೋರಾಡಬೇಕು. ಅದರ ಜೊತೆಗೆ ಅವರ ಆಸೆ, ಆಕಾಂಕ್ಷೆಗಳಿಗೊಂದು ರೆಕ್ಕೆ ಅಂದರೆ ಗೂಡಿನಿಂದ ಗಗನದೆಡೆಗೆ ಅವನ್ನು ಉದ್ದೇಶ ಇಟ್ಟುಕೊಂಡು `ಅವಳ ಹೆಜ್ಜೆ’ ಕೆಲಸ ಮಾಡುತ್ತದೆ,” ಎಂಬುದು ಶಾಂತಲಾರ ಭರವಸೆ.

“ಸಮಾನತೆಯಲ್ಲೂ ಒಂದು ಗೌರವವಿದೆ. ಆ ಗೌರವವನ್ನು ಕೇಳಿದ್ದೇ ತಪ್ಪು ಎನ್ನುವ ರೀತಿಯ ನಡವಳಿಕೆಗಳು ಈಗಲೂ ಇವೆ. ಯಾವುದೇ ಮಹಿಳಾ ಕಾರ್ಯಕ್ರಮ ಎಂದ ತಕ್ಷಣ ಫ್ಯಾಷನ್‌, ಶೋಷಣೆ ವಿರುದ್ಧ ಅಥವಾ ಅಡುಗೆಗೆ ಸಂಬಂಧಿಸಿದ ವಿಷಯಗಳಿರುತ್ತವೆ. ಅದರ ಜೊತೆಗೆ ಅದರಾಚೆಗೂ ಯೋಚಿಸಬೇಕು. ಮುಖ್ಯ ವೇದಿಕೆಗಳಲ್ಲೂ ಹೆಣ್ಣು ಸರಿಸಮಾನವಾಗಿ ಕಾಣಿಸಿಕೊಳ್ಳಬೇಕು.

“ಮುಟ್ಟಿನ ವಿಚಾರದಲ್ಲಿ ಮಹಿಳೆಯರು ತಮ್ಮನ್ನು ತಾವು ಅಸಹ್ಯಪಟ್ಟುಕೊಳ್ಳಬಾರದು. ಅದು ನೈಸರ್ಗಿಕ ಪ್ರಕ್ರಿಯೆ. ಅದಕ್ಕೆ ಧೃತಿಗೆಡಬಾರದು. ಇವನ್ನು ಎಲ್ಲಾ ಕಾಲೇಜುಗಳಲ್ಲಿ ವಿಮೆನ್‌ ಸೆಲ್ ‌ಇರೋದರಿಂದ ಲಿಂಗ ಸಂವೇದನೆ ಟ್ರೇನಿಂಗ್‌ ಕೊಡಲಾಗುತ್ತಿದೆ. ಇದರ ಜೊತೆಗೆ ಕನ್ನಡತಿ ಉತ್ಸವವನ್ನು ಈಗ ಲಿಂಗ ಸಮಾನತೆಯನ್ನು ಉತ್ತೇಜಿಸುವ ಒಂದು ಸಾಂಸ್ಕೃತಿಕ ಚಳುವಳಿ `ಅವಳ ಹೆಜ್ಜೆ ಕಿರುಚಿತ್ರೋತ್ಸವ’ ಮಾಡಲಾಗುತ್ತಿದೆ. ಮಹಿಳಾ ನಿರ್ದೇಶಕಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷ ಕಿರುಚಿತ್ರೋತ್ಸವ ನಡೆಸಿ ಮೊದಲನೇ ಬಹುಮಾನ 1 ಲಕ್ಷ ರೂ. ನೀಡಲಾಗುತ್ತಿದೆ,” ಎಂದು ಶಾಂತಲಾ ಹೇಳುತ್ತಾರೆ.

Meeting-with-Rotaract-Ballari

ಬದಲಾವಣೆ ಆಗಬೇಕು

“ನಾವು ಶೇ.50ರಷ್ಟು ಜನಸಂಖ್ಯೆಯನ್ನು ವೇಸ್ಟ್ ಮಾಡ್ತಿದ್ದೀವಿ. ಗಂಡುಮಕ್ಕಳನ್ನು ರೆಡಿ ಮಾಡಿದಷ್ಟು ನಾವು ಹೆಣ್ಣುಮಕ್ಕಳನ್ನು ತಯಾರಿ ಮಾಡುತ್ತಿಲ್ಲ. ಕುಟುಂಬ ಮತ್ತು ಸಮಾಜದಲ್ಲಿ ಕಾನೂನು ಪ್ರಕಾರ ಅವಳಿಗೆ ಸ್ವಲ್ಪ ಸಪೋರ್ಟ್‌ಬೇಕಾಗುತ್ತದೆ. ಎಲ್ಲವನ್ನೂ ಆಕೆ ಸಮರ್ಥವಾಗಿ ನಿಭಾಯಿಸುತ್ತಾಳೆ. ಶೇ.50ರಷ್ಟು ಮಹಿಳೆಯರಿದ್ದೇವೆ ಎಂದರೆ, ಅಷ್ಟೂ ಮಂದಿ ಟ್ಯಾಕ್ಸ್ ನೀಡುವಂತಾಗಬೇಕು.”

“ಮಹಿಳೆಯರು ರಾಜಕೀಯಕ್ಕೆ ಹೋದಷ್ಟು ರಾಜಕೀಯ ಕ್ಲೀನ್‌ ಆಗುತ್ತೆ. ಕ್ಲೀನ್‌ ಆಗ್ಲಿ ಎಂದು ಕಾಯುತ್ತಾ ಇರಬಾರದು. ನಾವೇ ಹೋಗಿ ಕ್ಲೀನ್‌ ಮಾಡಬೇಕು. ಇದೇ ಪಕ್ಷ ಅಂತಲ್ಲ. ಎಲ್ಲಾ ಪಕ್ಷಗಳಲ್ಲೂ ಮಹಿಳೆಯರ ಭಾಗವಹಿಸುವಿಕೆ ಬಹಳ ಮುಖ್ಯ. ಅವಳ ಹೆಜ್ಜೆ ಮೂಲಕ ವಾರ್ಡ್‌ ಸಮಿತಿಯನ್ನು ಹೇಗೆ ಸೇರಿಕೊಳ್ಳಬಹುದು, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ.”

“ನಾವು 50 ಪರ್ಸೆಂಟ್‌ ಜನಸಂಖ್ಯೆ ಇದ್ದೀವಿ ಅಂದ್ರೆ, 50 ಪರ್ಸೆಂಟ್‌ ಹಕ್ಕು ಮತ್ತು ಜವಾಬ್ದಾರಿನೂ ನಮ್ಮದೇ. ನಮಗೆ ಬೇಕಾಗಿರುವ ಸಮಾಜವನ್ನು ನಾವೇ ನಿರ್ಮಾಣ ಮಾಡಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಹೆಣ್ಣಿಗೆ ಹೆಣ್ಣೇ ಬೆನ್ನೆಲುಬು ಅಂದುಕೊಂಡು, ಬೇರೆ ಹೆಣ್ಣುಮಕ್ಕಳನ್ನೂ ಸಪೋರ್ಟ್‌ ಮಾಡ್ತಾ, ಅವರ ಹತ್ರ ಸಪೋರ್ಟ್‌ ತಗೊಳ್ತಾ, ಮುಂದೆ ಬರಬೇಕು. ಮನೆ ಮುಖ್ಯ, ಮನೆ ಬದುಕೂ ಮುಖ್ಯ. ಅದಕ್ಕಿಂತ ವಿಶಾಲವಾಗಿರುವ ಜಗತ್ತಿನಲ್ಲಿ ನಮ್ಮ ಪಾತ್ರ ಏನು ಅಂತ ಕಂಡುಕೊಳ್ಳುವುದು ಮುಖ್ಯ.”

Conducting-Avalahejje-Workshop

ಕ್ಯಾನ್ಸರ್ಎದುರಿಸಿದ್ದೇ ರೋಚಕ

“ಕ್ಯಾನ್ಸರ್‌ ಬರದೇ ಇರೋ ತರಹ ಮಾಡಲು ಆಗುವುದಿಲ್ಲ. ಯಾವಾಗೆಲ್ಲಾ ಮೆಡಿಕಲ್ ಟೆಸ್ಟ್ ಮಾಡಿಸಿ ಬೇಗ ಕ್ಯಾಚ್‌ ಮಾಡಿದರೆ ಸರ್ವೈವ್‌ ಚಾನ್ಸ್ ಜಾಸ್ತಿ ಇರುತ್ತೆ. ಒಂದು ವೇಳೆ ಕಾಯಿಲೆ ಬಂದೇಬಿಡ್ತು ಅಂದ್ರೆ, ಸಾಧ್ಯವಾದಷ್ಟು ಬೇಗ ಟ್ರೀಟ್‌ ಮೆಂಟ್ ತೆಗೆದುಕೊಳ್ಳಲು ಸಾಧ್ಯ. ಯಾವುದೇ ಕಾರಣಕ್ಕೂ ಇದರಿಂದ ಕುಗ್ಗಿ ಹೋಗಬಾರದು. ಮನೆಯವರ ಸಪೋರ್ಟ್‌ ಕೂಡ ಬಹಳ ಅಗತ್ಯ. ಸಾಮಾನ್ಯವಾಗಿ ಕ್ಯಾನ್ಸರ್‌ ಆದಾಗ ಕೂದಲು ಉದುರುವುದು ಸಣ್ಣ ತೊಂದರೆ. ಅದಕ್ಕಿಂತ ಮುಖ್ಯವಾಗಿ ದೇಹದಲ್ಲಿ ರಕ್ತಹೀನತೆ ಸೇರಿದಂತೆ ಬೇರೆಲ್ಲಾ ತೊಂದರೆಯೂ ಶುರುವಾಗಿತ್ತೆ. ಆದರೆ, ಯಾವುದೇ ಕಾರಣಕ್ಕೂ ಕುಗ್ಗದೇ ಧೈರ್ಯವಾಗಿ ಎದುರಿಸಿದಲ್ಲಿ ಕ್ಯಾನ್ಸರ್‌ ಗೆಲ್ಲಬಹುದು.”

ಸುನೀತಾ ಬಿ.ಎಂ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ