–  ರಾಘವೇಂದ್ರ ಅಡಿಗ ಎಚ್ಚೆನ್.

ದಕ್ಷಿಣ ಭಾರತೀಯ ಚಿತ್ರರಂಗದ ಸುವರ್ಣ ಯುಗದ ಅಪರೂಪದ ಕಂಠಸಿರಿ, ಹಿರಿಯ ಹಿನ್ನೆಲೆ ಗಾಯಕಿ ಕೆ. ಜಮುನಾ ರಾಣಿ (88) ಅವರು ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನ ವೃದ್ಧಾಶ್ರಮದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಳಿಗ್ಗೆ ಸುಮಾರು 5.30ರ ವೇಳೆಗೆ ಕೊನೆಯುಸಿರೆಳೆದಿದ್ದು, ಕೋಟ್ಯಂತರ ಸಂಗೀತಾಭಿಮಾನಿಗಳನ್ನು ಶೋಕಸಾಗರದಲ್ಲಿ ತಳ್ಳಿದ್ದಾರೆ.

ಏಳನೇ ವಯಸ್ಸಿನಲ್ಲೇ ಸಂಗೀತ ಪಯಣ ಆರಂಭ: ಮೂಲತಃ ಆಂಧ್ರ ಪ್ರದೇಶದವರಾದ ಜಮುನಾ ರಾಣಿ ಅವರು ಬಾಲ್ಯದಿಂದಲೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಕೇವಲ ಏಳು ವರ್ಷದವರಾಗಿದ್ದಾಗಲೇ ತೆಲುಗಿನ ‘ತ್ಯಾಗಯ್ಯ’ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. ಅವರ ಧ್ವನಿಯಲ್ಲಿದ್ದ ಸ್ಪಷ್ಟತೆ ಮತ್ತು ಮಧುರತೆ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕರನ್ನು ಆಕರ್ಷಿಸಿತು.

6,000ಕ್ಕೂ ಹೆಚ್ಚು ಗೀತೆಗಳಿಗೆ ಜೀವ ತುಂಬಿದ ಗಾಯಕಿ: ಐದಾರು ದಶಕಗಳ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ 6,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಅಪರೂಪದ ಸಾಧನೆ ಇವರದ್ದು. ಭಾರತದ ಭಾಷೆಗಳಷ್ಟೇ ಅಲ್ಲದೆ, 1953ರಲ್ಲಿ ಶ್ರೀಲಂಕಾದ ‘ಸುಜಾತಾ’ ಚಿತ್ರಕ್ಕೆ ಆನಂದ ಸಮರಕೂನ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಗಾಯನದ ಛಾಪು ಮೂಡಿಸಿದ್ದರು.

jamuna1

ಕನ್ನಡದಲ್ಲೂ ಅಮರವಾದ ಗೀತೆಗಳು: ಕನ್ನಡ ಚಿತ್ರರಂಗದಲ್ಲೂ ಜಮುನಾ ರಾಣಿ ಅವರ ಕೊಡುಗೆ ಸ್ಮರಣೀಯ. ‘ಸ್ಕೂಲ್ ಮಾಸ್ಟರ್’ ಚಿತ್ರದ ಸೂಪರ್ ಹಿಟ್ ಹಾಡು “ಅತಿ ಮಧುರ ಅನುರಾಗ” ಹಾಗೂ ‘ರತ್ನಮಂಜರಿ’ ಚಿತ್ರದ ಸದಾ ಹಸಿರಾಗಿರುವ “ಯಾರು ಯಾರು ನೀ ಯಾರು” ಹಾಡುಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿವೆ

ಇನ್ನು ತಮಿಳಿನಲ್ಲಿ ಕಮಲ್ ಹಾಸನ್ ಹಾಗೂ ಮಣಿರತ್ನಂ ಕಾಂಬಿನೇಷನ್‌ನ ‘ನಾಯಗನ್’ ಚಿತ್ರದ “ನಾನ್ ಸಿತ್ತಲ್ ದೀಪಾವಳಿ” ಹಾಡು ಸೇರಿದಂತೆ “ಕಾಳೈ ವಯಸು”, “ಕಟ್ಟನಾ ಸೈಸು” ನಂತಹ ಹತ್ತು ಹಲವು ಜನಪ್ರಿಯ ಗೀತೆಗಳನ್ನು ಇವರು ಹಾಡಿದ್ದಾರೆ.

ಚಿತ್ರರಂಗದ ಗಣ್ಯರ ಸಂತಾಪ: ದಶಕಗಳ ಕಾಲ ದಕ್ಷಿಣ ಭಾರತದ ಸಂಗೀತ ಲೋಕವನ್ನು ತಮ್ಮ ಕಂಠಸಿರಿಯಿಂದ ಆಳಿದ ಹಿರಿಯ ಗಾಯಕಿಯ ನಿಧನಕ್ಕೆ ಚಿತ್ರರಂಗದ ಪ್ರಮುಖ ನಟ-ನಟಿಯರು, ಸಂಗೀತ ನಿರ್ದೇಶಕರು ಹಾಗೂ ರಾಜಕೀಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಮುನಾ ರಾಣಿ ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ