ಧಾರವಾಡದ ಬಿಜೆಪಿ ಮುಖಂಡ ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಹತ್ತು ಮಂದಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳು ಇತ್ಯರ್ಥವಾಗುವವರೆಗೆ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಅಮಾನತಿನಲ್ಲಿರಿಸಿ, ಮೇಲ್ಮನವಿದಾರರನ್ನು ಷರತ್ತುಬದ್ಧವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಈ ಕುರಿತು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಹಾಗೂ ಜಿ. ಬಸವರಾಜ ಅವರನ್ನೊಳಗೊಂಡ ವಿಭಾಗೀಯ ಪೀಠವು, ಶಿಕ್ಷೆ ಅಮಾನತು ಹಾಗೂ ಜಾಮೀನು ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿದೆ.
ಹೈಕೋರ್ಟ್ ವಿಧಿಸಿರುವ ಪ್ರಮುಖ ಷರತ್ತುಗಳೆಂದರೆ:
- ಪ್ರತಿಯೊಬ್ಬ ಆರೋಪಿಯೂ ₹5 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರು ಭದ್ರತಾ ಜಾಮೀನುದಾರರನ್ನು ಒದಗಿಸಬೇಕು.
- ವಿಶೇಷ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತವನ್ನು ಠೇವಣಿ ಇಡಬೇಕು.
- ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ತೊರೆಯಬಾರದು.
- ಹೈಕೋರ್ಟ್ ಅಥವಾ ವಿಶೇಷ ನ್ಯಾಯಾಲಯ ಸೂಚಿಸಿದಾಗ ಖುದ್ದಾಗಿ ಹಾಜರಾಗಬೇಕು.

ಇದೇ ಪ್ರಕರಣದಲ್ಲಿ ಏಳು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಚನ್ನಕೇಶವ ಬಿ. ಟೆಂಗರಿಕರ್ (ಎ–19) ಅವರ ಶಿಕ್ಷೆಯನ್ನೂ ಹೈಕೋರ್ಟ್ ಅಮಾನತಿನಲ್ಲಿರಿಸಿದ್ದು, ಅವರಿಗೆ ಸಹ ಇದೇ ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದೆ.
ಪ್ರಕರಣದ ಹಿನ್ನೆಲೆ
ಪ್ರಕರಣದ ಹಿನ್ನೆಲೆ
2016ರ ಜೂನ್ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ರಾಜ್ಯದ ಗಮನ ಸೆಳೆದಿತ್ತು. ಎಂದಿನಂತೆ ಜಿಮ್‌ನಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಧಾರವಾಡದ ಸ್ಥಳೀಯ ಪೊಲೀಸರು ನಡೆಸಿದರೂ, ಪ್ರಕರಣದ ಗಂಭೀರತೆ ಹಾಗೂ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಅಂದಿನ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಕೇಂದ್ರ ತನಿಖಾ ದಳ (CBI) ಗೆ ವಹಿಸಿತು.
ಸಿಬಿಐ ತನಿಖೆಯ ವೇಳೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ಸುಮಾರು ಹತ್ತು ವರ್ಷಗಳ ಸುದೀರ್ಘ ತನಿಖೆ, ಸಾಕ್ಷ್ಯ ಸಂಗ್ರಹ, ನೂರಾರು ದಾಖಲೆಗಳ ಪರಿಶೀಲನೆ ಹಾಗೂ ನ್ಯಾಯಾಲಯದ ವಿಚಾರಣೆಯ ನಂತರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿ ಆರೋಪಿಗಳನ್ನು ಕೊಲೆ (IPC 302), ಕ್ರಿಮಿನಲ್ ಸಂಚು (IPC 120B), ಸಾಕ್ಷ್ಯ ನಾಶ (IPC 201), ಮಾರಕಾಸ್ತ್ರಗಳಿಂದ ಹಲ್ಲೆ ಹಾಗೂ ಅಕ್ರಮ ಕೂಟ ಸೇರಿದಂತೆ ವಿವಿಧ ಆರೋಪಗಳಲ್ಲಿ ದೋಷಿಗಳೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ದೋಷಿಗಳಿಗೆ ಜೀವಾವಧಿ ಶಿಕ್ಷೆ ಸೇರಿದಂತೆ ವಿವಿಧ ಶಿಕ್ಷೆಗಳನ್ನು ವಿಧಿಸಿದ್ದರು. ನಂತರ ಶಿಕ್ಷೆ ಮತ್ತು ದೋಷಾರೋಪಣೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ನ್ಯಾಯಾಂಗ ವ್ಯವಸ್ಥೆ ಕುರಿತು ಉದ್ಭವಿಸುವ ಪ್ರಶ್ನೆಗಳು
ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೂಲ ತತ್ವಗಳಲ್ಲಿ ಒಂದೆಂದರೆ, “ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ. ಆದರೆ, ಒಬ್ಬ ನಿರಪರಾಧಿಗೆ ಅನ್ಯಾಯವಾಗಬಾರದು.” ಈ ತತ್ವವು ನ್ಯಾಯದ ಮೂಲಭೂತ ಆತ್ಮವನ್ನು ಪ್ರತಿಬಿಂಬಿಸುತ್ತದೆ.
ಆದರೆ, ಮತ್ತೊಂದೆಡೆ ಕೆಲವು ಪ್ರಶ್ನೆಗಳೂ ಸಾರ್ವಜನಿಕರಲ್ಲಿ ಸಹಜವಾಗಿಯೇ ಉದ್ಭವಿಸುತ್ತವೆ.

ಒಂದು ಪ್ರಕರಣದ ತನಿಖೆಗೆ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ವೆಚ್ಚವಾಗಿರುತ್ತದೆ. ಅನೇಕ ವರ್ಷಗಳ ಕಾಲ ತನಿಖೆ, ಸಾಕ್ಷ್ಯ ಸಂಗ್ರಹ, ನೂರಾರು ಸಾಕ್ಷಿಗಳ ವಿಚಾರಣೆ ಮತ್ತು ಸುದೀರ್ಘ ನ್ಯಾಯಾಂಗ ಪ್ರಕ್ರಿಯೆಯ ನಂತರ ವಿಚಾರಣಾ ನ್ಯಾಯಾಲಯವು ತೀರ್ಪು ನೀಡಿರುತ್ತದೆ. ಅಂತಹ ಸಂದರ್ಭಗಳಲ್ಲಿ, ಮೇಲ್ಮನವಿ ಬಾಕಿಯಿರುವಾಗಲೇ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತದೆ.
ಕಾನೂನು ಪ್ರಕಾರ ಮೇಲ್ಮನವಿ ಸಲ್ಲಿಸುವುದು ಪ್ರತಿಯೊಬ್ಬ ಶಿಕ್ಷಿತ ವ್ಯಕ್ತಿಯ ಹಕ್ಕು. ಅದೇ ಸಮಯದಲ್ಲಿ, ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೆ ಒಳಗಾದ ಆರೋಪಿಗಳಿಗೆ ಜಾಮೀನು ನೀಡಿದರೆ,
- ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ,
- ಸಾಕ್ಷ್ಯಾಧಾರಗಳ ಮೇಲೆ ಪರಿಣಾಮ ಬೀರುವ ಅಪಾಯ,
- ಪ್ರಕರಣದ ನ್ಯಾಯಸಮ್ಮತ ವಿಚಾರಣೆಯ ಮೇಲಿನ ಸಾರ್ವಜನಿಕ ನಂಬಿಕೆ ಕುಗ್ಗುವ ಸಾಧ್ಯತೆ,
ಇವುಗಳ ಬಗ್ಗೆ ಕೂಡ ಸಮಾಜದಲ್ಲಿ ಚರ್ಚೆ ನಡೆಯುವುದು ಸಹಜ.
ಇದರಿಂದಲೇ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ.
ಹಿಂದಿನ ನ್ಯಾಯಾಧೀಶರು ಈ ಪ್ರಕರಣದದ ಆರೋಪಿಗಳು ಸಾಕ್ಷಿನಾಶ ಮಾಡಿರುವುದನ್ನು ಸ್ಪಷ್ಟವಾಗಿ ತಿಳಿಸಿರುವಾಗ ಮತ್ತೆ ಅದೇ ಜನರಿಗೆ ಜಾಮೀನು ನೀಡಿರುವಾಗ ಮತ್ತ ಬಿಜೆಪಿ ಮುಖಂಡ ಯೋಗೀಶ್ ಕೊಲೆಯಾಗಿದ್ದಾಗ, ಖುದ್ದಾಗಿ ವಿನಯ್ ಕುಲಕರ್ಣಿ ವಿರುದ್ದ ಪೋಲೀಸರ ಬಳಿ ದೂರು ನೀಡಿದ್ದ ಯೋಗೀಶ್ ಅವರ ಪತ್ನಿ ಮಲ್ಲಮ್ಮ ಅದಾದ ನಂತರದ ದಿನಗಳಲ್ಲಿ ನಡೆದ ಕಾನೂನು ಹೋರಾಟದಲ್ಲಿ ಅಷ್ಟೇನೂ ಆಸ್ಥೆ ವಹಿಸದೇ ಹೋದಾಗ, ಅವರ ಕುಟುಂಬದವರೇ ಮಲ್ಲಮ್ಮನವರು ವಿನಯ್ ಕುಲಕರ್ಣಿಯವ ಹಣದ ಅಮೀಷಕ್ಕೆ ಬಲಿಯಾಗಿದ್ದಾರೆ ಎಂದು ಆರೋಪ ಮಾಡಿದ್ದನ್ನು ನೆನಪಿಸಿಕೊಂಡಾಗ ಸಹಜವಾಗಿ ಸಾರ್ವಜನಿಕರಲ್ಲಿ ನ್ಯಾಯಾಲಯದ ಈ ಆದೇಶದ ಕುರಿತಾಗಿ ಬೇಸರ ವ್ಯಕ್ತವಾಗುತ್ತಿದೆ

ಜೀವಾವಧಿ ಶಿಕ್ಷೆ ಅಥವಾ ಅದಕ್ಕಿಂತ ಗಂಭೀರ ಶಿಕ್ಷೆಗೆ ಗುರಿಯಾದವರು ಮೇಲ್ಮನವಿ ಸಲ್ಲಿಸಿದ ಸಂದರ್ಭಗಳಲ್ಲಿ, ಅಂತಿಮ ತೀರ್ಪು ಬರುವವರೆಗೆ ಜಾಮೀನು ನೀಡುವ ಮಾನದಂಡಗಳು ಇನ್ನಷ್ಟು ಕಟ್ಟುನಿಟ್ಟಾಗಬೇಕೇ?
ಇದು ಕೇವಲ ಈ ಒಂದು ಪ್ರಕರಣಕ್ಕೆ ಸೀಮಿತವಾದ ಪ್ರಶ್ನೆಯಲ್ಲ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಮತ್ತು ಸಾರ್ವಜನಿಕ ವಿಶ್ವಾಸದ ನಡುವಿನ ಸಮತೋಲನ ಹೇಗಿರಬೇಕು ಎಂಬ ಕುರಿತು ನಡೆಯುತ್ತಿರುವ ವಿಶಾಲ ಚರ್ಚೆಯ ಭಾಗವಾಗಿದೆ.
ಈ ಕುರಿತು ಕಾನೂನು ತಜ್ಞರು, ನ್ಯಾಯಾಂಗ ವಲಯ ಮತ್ತು ಸಾರ್ವಜನಿಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ಅಭಿಪ್ರಾಯವೇನು?
- ಮೇಲ್ಮನವಿ ಬಾಕಿಯಿರುವಾಗ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡುವುದು ನ್ಯಾಯಸಮ್ಮತವೇ?
- ಅಥವಾ ಜೀವಾವಧಿ ಶಿಕ್ಷೆಯಂತಹ ಗಂಭೀರ ಪ್ರಕರಣಗಳಲ್ಲಿ ಅಂತಿಮ ಮೇಲ್ಮನವಿ ತೀರ್ಪು ಬರುವವರೆಗೆ ಶಿಕ್ಷೆ ಅನುಭವಿಸುವ ವ್ಯವಸ್ಥೆಯೇ ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸಬಹುದೇ?
ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ತಪ್ಪದೇ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ
ಉಮಾಸುತ





