ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೈಸೂರು ಭೇಟಿಗೆ ನಗರ ಸಂಪೂರ್ಣ ಸಜ್ಜಾಗಿದ್ದು, ಈ ವೇಳೆ ಅವರು ರಾಮಕೃಷ್ಣ ಆಶ್ರಮದಲ್ಲಿ ನೂತನವಾಗಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ (ವಿವೇಕ ಸ್ಮಾರಕ)ವನ್ನು ಉದ್ಘಾಟಿಸಲಿದ್ದಾರೆ.
1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿನಲ್ಲಿ ತಂಗಿದ್ದ ಐತಿಹಾಸಿಕ ಘಟನೆಯನ್ನು ಸ್ಮರಿಸುವ ಉದ್ದೇಶದಿಂದ ಈ ಸ್ಮಾರಕ ನಿರ್ಮಿಸಲಾಗಿದ್ದು, ಅವರ ಬೋಧನೆಗಳು ಹಾಗೂ ಆದರ್ಶಗಳ ಮೂಲಕ ಯುವಜನತೆಗೆ ಸ್ಫೂರ್ತಿ ನೀಡುವ ಉದ್ದೇಶ ಹೊಂದಿದೆ.
ಪ್ರಧಾನ ಮಂತ್ರಿಗಳು ಮಧ್ಯಾಹ್ನ 2.55ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನಕ್ಕೆ ತೆರಳಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ರಾಮಕೃಷ್ಣ ಆಶ್ರಮಕ್ಕೆ ತೆರಳಿ ವಿವೇಕ ಸ್ಮಾರಕವನ್ನು ಉದ್ಘಾಟಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ರಾಮಕೃಷ್ಣ ಆಶ್ರಮ ಶಾಲೆಗೆ ಭೇಟಿ ನೀಡಿ, ಸಂಜೆ ವೇಳೆಗೆ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬೆಳಗ್ಗೆ ಮೈಸೂರಿಗೆ ತೆರಳಿ ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಓವಲ್ ಮೈದಾನದಲ್ಲಿ ಪ್ರಧಾನಿಯನ್ನು ಸ್ವಾಗತಿಸಿ, ಉದ್ಘಾಟನಾ ಸಮಾರಂಭ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರೊಂದಿಗೆ ಭಾಗವಹಿಸಲಿದ್ದಾರೆ.
ವಿವಿಐಪಿ ಭೇಟಿ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ, ಹೆಲಿಪ್ಯಾಡ್, ರಾಮಕೃಷ್ಣ ಆಶ್ರಮ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರವೇಶವನ್ನು ಹಲವು ಹಂತದ ಭದ್ರತಾ ತಪಾಸಣೆಗಳ ಮೂಲಕ ಮಾತ್ರ ಅನುಮತಿಸಲಾಗುತ್ತದೆ.
ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ. ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಿ, ಸಂಚಾರ ಸಂಬಂಧಿತ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.





