ಹೆತ್ತ  ತಂದೆ-ತಾಯಿಗಿಂತ ದೇವರಿಲ್ಲ, ಅವರ ಪ್ರೀತಿ,  ತ್ಯಾಗವನ್ನು ಹಣದಿಂದ ಅಳೆಯಲಾಗುವುದಿಲ್ಲ

“ಮಕ್ಕಳಿಗಾಗಿ ಬದುಕನ್ನೇ ತ್ಯಾಗ ಮಾಡಿದ ತಂದೆ… ಕೊನೆಯ ಕ್ಷಣದಲ್ಲಿ ಮಕ್ಕಳ ಮುಖವನ್ನೂ ನೋಡಲಾಗದೆ ಒಂಟಿಯಾಗಿ ಕಣ್ಣು ಮುಚ್ಚಿದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿದೆಯೇ?”

ಮಕ್ಕಳ ಭವಿಷ್ಯ ಉಜ್ವಲವಾಗಬೇಕು, ಅವರು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತ ಜೀವನ ನಡೆಸಬೇಕು ಎಂಬ ಕನಸಿಗಾಗಿ ಅನೇಕ ತಂದೆ-ತಾಯಿಗಳು ತಮ್ಮ ಇಡೀ ಬದುಕನ್ನೇ ತ್ಯಾಗ ಮಾಡುತ್ತಾರೆ. ತಮ್ಮ ಆಸೆಗಳನ್ನು ಬದಿಗೊತ್ತಿ, ತಮ್ಮ ಸುಖವನ್ನು ಮರೆತು, ಮಕ್ಕಳ ಸಂತೋಷವನ್ನೇ ಜೀವನದ ಗುರಿಯಾಗಿಸಿಕೊಂಡು ದುಡಿಯುತ್ತಾರೆ. ಆದರೆ, ಆ ಮಕ್ಕಳೇ ಒಂದು ದಿನ ತಮ್ಮ ತಂದೆ-ತಾಯಿಯನ್ನು ಅನಾಥರಂತೆ ವೃದ್ಧಾಶ್ರಮಕ್ಕೆ ಬಿಟ್ಟು ಮರೆತರೆ, ಅದಕ್ಕಿಂತ ನೋವಿನ ಸಂಗತಿ ಮತ್ತೊಂದಿಲ್ಲ. ಅಂತಹ ಮನಕಲಕುವ ಮತ್ತು ಇಡೀ ಸಮಾಜವೇ ತಲೆತಗ್ಗಿಸುವಂತಹ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದ್ದು, ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದರೆ ಕಣ್ಣಲ್ಲಿ ನೀರು ಬಾರದವರು ವಿರಳ.

ಬದುಕನ್ನೇ ಮಕ್ಕಳಿಗಾಗಿ ಮುಡಿಪಾಗಿಟ್ಟ ತಂದೆ

ಮುಂಬೈನ ಪ್ರಮುಖ ಬಟ್ಟೆ ವ್ಯಾಪಾರಿಯಾಗಿದ್ದ 74 ವರ್ಷದ ಶಿವಚರಣ್ ರಾಮರತನ್ ಗುಪ್ತಾ ಅವರು ತಮ್ಮ ಮೂವರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಗೌರವಯುತ ಕುಟುಂಬಗಳಿಗೆ ವಿವಾಹ ಮಾಡಿಕೊಟ್ಟಿದ್ದರು.

  • ಹಿರಿಯ ಪುತ್ರಿ ಅನಿತಾ – ನೇಪಾಳದಲ್ಲಿ ಶಿಕ್ಷಕಿ.
  • ಎರಡನೇ ಪುತ್ರಿ ನಿಶಾ – ಉತ್ತರ ಪ್ರದೇಶದ ಅಜಂಗಢದಲ್ಲಿ ವಾಸ.
  • ಕಿರಿಯ ಪುತ್ರಿ ಪ್ರಿಯಾ – ಮುಂಬೈನಲ್ಲಿ ನೆಲೆಸಿದ್ದಾರೆ.

ಶಿಕ್ಷಣ, ಸಂಸ್ಕಾರ, ಬದುಕಿನ ಎಲ್ಲ ಸೌಲಭ್ಯಗಳನ್ನು ಮಕ್ಕಳಿಗಾಗಿ ನೀಡಿದ ತಂದೆಗೆ ವಯಸ್ಸಾದಾಗ ಸಿಕ್ಕ ಪ್ರತಿಫಲ ಮಾತ್ರ ವೃದ್ಧಾಶ್ರಮದ ಏಕಾಂತ ಜೀವನ.

ಪತ್ನಿಯನ್ನು ಕಳೆದುಕೊಂಡು, ಕೊನೆಗೆ ಒಂಟಿಯಾದ ತಂದೆ

ಎರಡು ವರ್ಷಗಳ ಹಿಂದೆ ಅವರ ಪತ್ನಿ ಮೀನಾ ಇದೇ ವೃದ್ಧಾಶ್ರಮದಲ್ಲಿ ನಿಧನರಾಗಿದ್ದರು. ಆ ನಂತರ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಚರಣ್ ಗುಪ್ತಾ ಅವರು ಸೋನಿಪತ್‌ನ ವೃದ್ಧಾಶ್ರಮದಲ್ಲೇ ಜೀವನ ಸಾಗಿಸುತ್ತಿದ್ದರು. ಕಳೆದ ಮಂಗಳವಾರ ಬೆಳಗಿನ ಜಾವ ಅವರು ಕೊನೆಯುಸಿರೆಳೆದರು. ಸುದ್ದಿ ತಿಳಿದ ಕೂಡಲೇ ಆಶ್ರಮದ ಆಡಳಿತ ಮಂಡಳಿ ಮೂವರು ಪುತ್ರಿಯರಿಗೂ ಕರೆ ಮಾಡಿ ವಿಷಯ ತಿಳಿಸಿತು. ಆದರೆ… ಅವರಿಂದ ಬಂದ ಉತ್ತರ ಎಲ್ಲರ ಮನಸ್ಸನ್ನೇ ನಡುಗಿಸಿತು.

“ನಾವು ಬರಲು ಆಗಲ್ಲ… ಹಣ ಕಳಿಸುತ್ತೇವೆ”

ಮಕ್ಕಳು ತಂದೆಯ ಅಂತಿಮ ದರ್ಶನಕ್ಕೆ ಬರುತ್ತಾರೆ ಎಂದು ನಿರೀಕ್ಷಿಸಿದ್ದ ಆಶ್ರಮದ ಸಿಬ್ಬಂದಿಗೆ ಪುತ್ರಿಯರು ಹೀಗೆ ಹೇಳಿದ್ದಾರೆ.

“ನಾವು ಬರಲು ಸಾಧ್ಯವಿಲ್ಲ. ಆನ್‌ಲೈನ್‌ನಲ್ಲಿ ₹5,100 ಕಳುಹಿಸುತ್ತೇವೆ. ಅಲ್ಲಿಯೇ ಅಂತ್ಯಕ್ರಿಯೆ ಮಾಡಿ. ಚಿತೆಗೆ ಬೆಂಕಿ ಹಚ್ಚುವಾಗ ವೀಡಿಯೋ ಕಾಲ್ ಮಾಡಿ… ನಾವು ನೋಡುತ್ತೇವೆ.”

ಒಬ್ಬ ತಂದೆಯ ಅಂತಿಮ ಸಂಸ್ಕಾರವೂ ಈಗ ಡಿಜಿಟಲ್ ಪರದೆಯ ಮೂಲಕ ನಡೆಯುವ ಮಟ್ಟಕ್ಕೆ ಸಂಬಂಧಗಳು ಕುಸಿದಿವೆಯೇ ಎಂಬ ಪ್ರಶ್ನೆ ಸಮಾಜದ ಮುಂದೆ ಮೂಡಿದೆ.

“ಇನ್ನೂ ಎಷ್ಟು ಹೊತ್ತು ಹಿಡಿಯುತ್ತದೆ?”

ಇದಕ್ಕಿಂತಲೂ ನೋವು ತಂದ ಘಟನೆ ಮುಂದೆ ನಡೆಯಿತು. ವೃದ್ಧಾಶ್ರಮದ ಸಿಬ್ಬಂದಿ ವೀಡಿಯೋ ಕಾಲ್ ಮೂಲಕ ಅಂತ್ಯಕ್ರಿಯೆಯನ್ನು ತೋರಿಸುತ್ತಿದ್ದಾಗ, ಪುತ್ರಿಯೊಬ್ಬರು ಕೇಳಿದ ಪ್ರಶ್ನೆ ಅಲ್ಲಿದ್ದ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತರಿಸಿತು.

“ಇದು ಮುಗಿಯಲು ಇನ್ನೂ ಎಷ್ಟು ಹೊತ್ತು ಹಿಡಿಯುತ್ತದೆ? ನಾವು ಊಟ ಮಾಡಿ ಸ್ನಾನ ಮಾಡಬೇಕು.”

ತಮ್ಮನ್ನು ಹೆತ್ತು-ಹೊತ್ತು ಬೆಳೆಸಿದ ತಂದೆಯ ಅಂತಿಮ ಯಾತ್ರೆಯನ್ನೂ ಒಂದು “ಕಾರ್ಯಕ್ರಮ”ದಂತೆ ನೋಡಿದ ಈ ಮಾತು ಕೇಳಿ ಅಲ್ಲಿದ್ದ ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ.

ವೃದ್ಧಾ ಶ್ರಮದವರೇ ಮಕ್ಕಳಾದರು

ಅಂತಿಮವಾಗಿ… ಶಿವಚರಣ್ ಗುಪ್ತಾ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಂತ ಮಕ್ಕಳು ಅಲ್ಲ… ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರೇ ಸೇರಿ ಹಿಂದೂ ಸಂಪ್ರದಾಯದಂತೆ ನೆರವೇರಿಸಿದರು. ತಂದೆಯ ಅಂತಿಮ ವಿಧಿವಿಧಾನಗಳ ಜವಾಬ್ದಾರಿಯನ್ನು ಅಪರಿಚಿತರು ಹೊತ್ತರೆ, ಸ್ವಂತ ಮಕ್ಕಳು ಮೊಬೈಲ್ ಪರದೆಯ ಹಿಂದೆ ಉಳಿದದ್ದು ಇಂದಿನ ಸಮಾಜದ ಕಠೋರ ವಾಸ್ತವ.

ನೇತ್ರದಾನ ಮಹಾದಾನ, ಸಾವಿನ ನಂತರವೂ ಬೆಳಕಾದ ತಂದೆ

ಇಷ್ಟೆಲ್ಲ ನೋವಿನ ನಡುವೆಯೂ ಶಿವಚರಣ್ ಗುಪ್ತಾ ಅವರು ತಮ್ಮ ಕೊನೆಯ ಆಸೆಯನ್ನು ನೆರವೇರಿಸಿಕೊಂಡರು. ಅವರ ನೇತ್ರದಾನ ಮಾಡಲಾಯಿತು. ತಮ್ಮ ಮಕ್ಕಳು ತಮ್ಮನ್ನು ಮರೆತರೂ… ಅವರು ಸಾವಿನ ನಂತರವೂ ಇಬ್ಬರ ಬದುಕಿಗೆ ಬೆಳಕಾದರು. ಇದಕ್ಕಿಂತ ದೊಡ್ಡ ಮಾನವೀಯತೆ ಮತ್ತೊಂದಿಲ್ಲ.

ಅಸ್ತಿಯನ್ನೂ ಪಡೆಯಲು ಬರಲಿಲ್ಲ

ಅಂತ್ಯಕ್ರಿಯೆ ಮುಗಿದ ಬಳಿಕವೂ ಪುತ್ರಿಯರು ಅಲ್ಲಿಗೆ ಬರಲಿಲ್ಲ. ತಂದೆಯ ಅಸ್ತಿಯನ್ನು ಪಡೆದುಕೊಳ್ಳಲೂ ಆಸಕ್ತಿ ತೋರದೆ, “ಅಸ್ತಿಯನ್ನು ಗಂಗಾ ನದಿಯಲ್ಲಿ ನೀವೇ ವಿಸರ್ಜನೆ ಮಾಡಿ” ಎಂದು ಆಶ್ರಮದ ಸಿಬ್ಬಂದಿಗೆ ತಿಳಿಸಿದರು. ಒಂದು ಕಾಲದಲ್ಲಿ ತಂದೆಯ ಹೆಗಲ ಮೇಲೆ ಕೂತು ಲೋಕವನ್ನು ಕಂಡ ಮಕ್ಕಳು, ಇಂದು ತಂದೆಯ ಅಸ್ತಿಯನ್ನೂ ತಮ್ಮ ಕೈಯಲ್ಲಿ ಹಿಡಿಯಲು ಬರದಿರುವುದು ಎಷ್ಟು ದೊಡ್ಡ ವಿಪರ್ಯಾಸ!

ನಾವು ಯಾವ ಸಮಾಜವನ್ನು ಕಟ್ಟುತ್ತಿದ್ದೇವೆ?

ಇಂದು ಉತ್ತಮ ಉದ್ಯೋಗ, ದೊಡ್ಡ ಸಂಬಳ, ವಿದೇಶಿ ಜೀವನ, ಆಧುನಿಕ ಸೌಲಭ್ಯಗಳು ಎಲ್ಲವೂ ಹೆಚ್ಚಾಗಿವೆ. ಆದರ,  ಮಾನವೀಯತೆ, ಕೃತಜ್ಞತೆ, ಕುಟುಂಬದ ಬಂಧ, ಹಿರಿಯರ ಮೇಲಿನ ಗೌರವ ಮಾತ್ರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ತಂದೆ-ತಾಯಿಯರು ಮಕ್ಕಳಿಗೆ ಆಸ್ತಿ, ವಿದ್ಯೆ, ಸಂಸ್ಕಾರ ಎಲ್ಲವನ್ನೂ ಕೊಡಬಹುದು. ಆದರೆ… ಅವರಿಗೆ ಬೇಕಾಗಿರುವುದು ಕೊನೆಯ ದಿನಗಳಲ್ಲಿ ಸ್ವಲ್ಪ ಸಮಯ, ಸ್ವಲ್ಪ ಪ್ರೀತಿ ಮತ್ತು ಎರಡು ಸಮಾಧಾನದ ಮಾತುಗಳು ಮಾತ್ರ.

ಪ್ರತಿಯೊಬ್ಬ ಮಗ-ಮಗಳು ಒಂದು ಕ್ಷಣ ಯೋಚಿಸೋಣ

ಇಂದು ನಾವು ಕೆಲಸ, ವ್ಯಾಪಾರ, ಹಣ, ಹುದ್ದೆ, ವಿದೇಶಿ ಜೀವನದ ಹಿಂದೆ ಓಡುತ್ತಿದ್ದೇವೆ. ಆದರೆ ನಮ್ಮ ತಂದೆ-ತಾಯಿಯರು ನಿಧಾನವಾಗಿ ವಯಸ್ಸಾಗುತ್ತಿದ್ದಾರೆ. ಅವರು ನಮ್ಮಿಂದ ಹಣ ಕೇಳುವುದಿಲ್ಲ. ಅವರಿಗೆ ಬೇಕಾಗಿರುವುದು,

  • ಒಂದು ಫೋನ್ ಕರೆ,
  • ಒಂದು ಭೇಟಿ,
  • ಒಂದು ಅಪ್ಪುಗೆ,
  • “ನೀವು ಹೇಗಿದ್ದೀರಾ?” ಎಂಬ ನಾಲ್ಕು ಮಾತುಗಳು.

ಅವರು ಬದುಕಿರುವಾಗ ನೀಡುವ ಪ್ರೀತಿ, ಅವರು ಹೋದ ನಂತರ ಮಾಡುವ ಲಕ್ಷಾಂತರ ರೂಪಾಯಿಗಳ ಶ್ರದ್ಧಾಂಜಲಿಗಿಂತ ಸಾವಿರ ಪಟ್ಟು ಮೌಲ್ಯಯುತ.

ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಸಮಾಜದ ಅಭಿವೃದ್ಧಿಯ ಸಂಕೇತವಲ್ಲ…
ನಮ್ಮ ಕುಟುಂಬ ವ್ಯವಸ್ಥೆ ಕುಸಿಯುತ್ತಿರುವ ಎಚ್ಚರಿಕೆಯ ಗಂಟೆ.

ತಂದೆ-ತಾಯಿಯರು ನಮ್ಮ ಜೀವನದ ಮೊದಲ ದೇವರುಗಳು. ಅವರನ್ನು ಗೌರವಿಸುವುದು ಕೇವಲ ಸಂಪ್ರದಾಯವಲ್ಲ. ಅದು ನಮ್ಮ ಮಾನವೀಯತೆಯ ನಿಜವಾದ ಪರೀಕ್ಷೆ.

ಇದ್ದಾಗ ಪ್ರೀತಿ ತೋರಿಸದೇ, ಸತ್ತ ನಂತರ ಅಳುವುದರಿಂದ ಏನು ಪ್ರಯೋಜನ?

ಹೆತ್ತವರು ಬದುಕಿರುವಾಗ ಅವರನ್ನು ಪ್ರೀತಿಯಿಂದ ನೋಡಿಕೊಳ್ಳದೇ, ಅವರ ಕಷ್ಟ-ಸುಖಗಳಲ್ಲಿ ಜೊತೆಯಾಗದೇ, ಅವರು ಕಣ್ಮುಚ್ಚಿದ ನಂತರ ನೂರಾರು ಜನರನ್ನು ಕರೆದು ಭಕ್ಷ್ಯ-ಭೋಜನಗಳನ್ನು ಬಡಿಸಿ, ಕಣ್ಣೀರು ಸುರಿಸಿದರೆ ಅವರು ಮತ್ತೆ ಎದ್ದು ಬರುವವರೇ?

ತಂದೆ-ತಾಯಿಗಿಂತ ದೊಡ್ಡ ದೇವರು ಯಾರೂ ಇಲ್ಲ. ಅವರ ಸೇವೆ ಮಾಡುವುದು ನಮ್ಮ ಜೀವನದ ಅತ್ಯುನ್ನತ ಧರ್ಮ. ಸೇವೆ ಮಾಡಲಾಗದಿದ್ದರೂ ಕನಿಷ್ಠ ಪಕ್ಷ ಅವರ ಅಂತಿಮ ಕ್ಷಣಗಳಲ್ಲಿ ಜೊತೆಯಾಗಿ ನಿಂತು, ಅಂತಿಮ ವಿಧಿ-ವಿಧಾನಗಳನ್ನು ಗೌರವದಿಂದ ನೆರವೇರಿಸುವುದು ಪ್ರತಿಯೊಬ್ಬ ಮಗ-ಮಗಳ ಕರ್ತವ್ಯ.

ಅದಕ್ಕೂ ಸಮಯವಿಲ್ಲ, ಮನಸ್ಸಿಲ್ಲ, ಮಮಕಾರವಿಲ್ಲ ಎಂದಾದರೆ ಹೆತ್ತವರಿಗೂ ಮಕ್ಕಳಿಗೂ ಇರುವ ಆ ಕರುಳಿನ ಸಂಬಂಧಕ್ಕೆ ಅರ್ಥವೇನು?

ಇಂದು ಹಣವೇ ಎಲ್ಲವನ್ನೂ ಮಾಡಬಲ್ಲದು ಎಂಬ ಭ್ರಮೆಯಲ್ಲಿ ಬದುಕುತ್ತಿರುವ ಕೆಲವರು, ಸಂಬಂಧಗಳ ಮೌಲ್ಯವನ್ನೇ ಮರೆತಿದ್ದಾರೆ. ಆದರೆ ನಮ್ಮ ಸನಾತನ ಸಂಸ್ಕೃತಿ ನಮಗೆ ಕಲಿಸಿರುವುದು ಹಣವಲ್ಲ, ಸಂಬಂಧಗಳೇ ಬದುಕಿನ ನಿಜವಾದ ಸಂಪತ್ತು ಎಂಬ ಸತ್ಯವನ್ನು.

ಬದುಕಿರುವಾಗ ಕೊಡುವ ಪ್ರೀತಿಯೇ ನಿಜವಾದ ಶ್ರದ್ಧಾಂಜಲಿ.

ಸತ್ತ ನಂತರ ಮಾಡುವ ಆಡಂಬರದ ಕಾರ್ಯಕ್ರಮಗಳು, ದುಬಾರಿ ಅಂತ್ಯಕ್ರಿಯೆಗಳು ಅಥವಾ ಸಾವಿರಾರು ರೂಪಾಯಿಗಳ ಖರ್ಚು ಹೆತ್ತವರ ಪ್ರೀತಿಗೆ ಪರ್ಯಾಯವಾಗಲಾರವು.  ಹಣದಿಂದ ಮನೆ, ಕಾರು, ಆಸ್ತಿ, ಐಶ್ವರ್ಯ ಎಲ್ಲವನ್ನೂ ಖರೀದಿಸಬಹುದು. ಆದರೆ ತಂದೆ-ತಾಯಿಯ ಪ್ರೀತಿ, ಆಶೀರ್ವಾದ ಮತ್ತು ಕರುಳಿನ ಸಂಬಂಧವನ್ನು ಎಂದಿಗೂ ಖರೀದಿಸಲು ಸಾಧ್ಯವಿಲ್ಲ.

ಹೀಗಾಗಿ, ನಮ್ಮ ಹೆತ್ತವರು ಬದುಕಿರುವಾಗಲೇ ಅವರಿಗೆ ಸಮಯ ಕೊಡಿ, ಪ್ರೀತಿ ಕೊಡಿ, ಗೌರವ ಕೊಡಿ. ಅವರು ಬಯಸುವುದು ನಿಮ್ಮ ಹಣವಲ್ಲ, ನಿಮ್ಮ ಸಾನ್ನಿಧ್ಯ.

ಏನಂತೀರೀ?

ನಿಮ್ಮವನೇ, 

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ