ಬಂದಿದೆ ಮತ್ತೊಂದು ಹೊಸ ವರ್ಷ! ಸಲದ ನ್ಯೂ ಇಯರ್ಪಾರ್ಟಿಗಾಗಿ ನವನವೀನ ರೆಸಿಪಿಗಳಾದ ಪಾಸ್ತಾ ಮತ್ತು ನೂಡಲ್ಸ್ ಟ್ರೈ ಮಾಡಬಾರದೇಕೆ? ಇಲ್ಲಿದೆ ನಿಮಗಾಗಿ ಹೊಸ ವರ್ಷಕ್ಕೆ ಹೊಸ ರುಚಿ!

ಟ್ಯಾಂಗಿ ಟೊಮೇಟೋ ಮ್ಯಾಕ್ರೋನಿ

ಸಾಮಗ್ರಿ : 1 ಕಪ್‌ ಶೆಲ್ ‌ಮ್ಯಾಕ್ರೋನಿ, ಕೆಂಪು, ಹಳದಿ, ಹಸಿರು ಕ್ಯಾಪ್ಸಿಕಂ (ಸಣ್ಣದು, ತಲಾ 1-1), 1-2 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 4-5 ಹುಳಿ ಟೊಮೇಟೊ, ಅರ್ಧ ಸೌಟು ರೀಫೈಂಡ್‌ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಎಲ್.ಜಿ. ಇಂಗು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಕರಿಬೇವು.

ವಿಧಾನ : 3 ಕಪ್‌ ನೀರನ್ನು ಬಿಸಿ ಮಾಡಿ. ಇದು ಕುದಿ ಬಂದಂತೆ ತುಸು ಎಣ್ಣೆ, ಚಿಟಕಿ ಉಪ್ಪು, ಮ್ಯಾಕ್ರೋನಿ ಹಾಕಿ ಹದನಾಗಿ ಬೇಯಿಸಿ. ಬೆಂದ ನಂತರ ಕೆಳಗಿಳಿಸಿ ಆರಲು ಬಿಡಿ, ನಂತರ ಸೋಸಿಕೊಂಡು ನೀರನ್ನು ಬೇರ್ಪಡಿಸಿ. (ಇದನ್ನು ಬೇರೆ ಗ್ರೇವಿಗೆ ಬಳಸಿಕೊಳ್ಳಿ). ನುಣ್ಣಗೆ ಹೆಚ್ಚಿದ 1-2 ಹಸಿಮೆಣಸು, ಈರುಳ್ಳಿ, ಟೊಮೇಟೊ ಹಾಕಿ ನುಣ್ಣಗೆ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕರಿಬೇವು, ಎಲ್.ಜಿ. ಇಂಗು ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಅರಿಶಿನ ಸೇರಿಸಿ ಕೆದಕಿರಿ. ಆಮೇಲೆ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ನಂತರ ಬೆಂದ ಮ್ಯಾಕ್ರೋನಿ ಸೇರಿಸಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

pasta-and-nudels-4

ಕ್ರೀಮೀ ರೋಸ್ಟೆಡ್ಬೆಲ್ ಪೆಪ್ಪರ್ಪಾಸ್ತಾ

ಸಾಮಗ್ರಿ : 1-2 ಹಸಿರು ಕ್ಯಾಪ್ಸಿಕಂ, 1 ಕಪ್‌ ಬೆಂದ ಪಾಸ್ತಾ (ಚಿತ್ರದಲ್ಲಿರುವಂಥ), 2-3 ಈರುಳ್ಳಿ, 2-3 ಹಸಿ ಮೆಣಸು, ಅರ್ಧ ಕಪ್ ತುರಿದ ಪನೀರ್‌, ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ, ಫ್ರೆಶ್‌ ಕ್ರೀಂ, ರುಚಿಗೆ ತಕ್ಕಷ್ಟು ಉಪ್ಪು, ಎಲ್.ಜಿ. ಇಂಗು, ಅಲಂಕರಿಸಲು ಕ್ಯಾಪ್ಸಿಕಂ ಹೋಳು.

ವಿಧಾನ : ಮೊದಲು ಕ್ಯಾಪ್ಸಿಕಂ ಶುಚಿಗೊಳಿಸಿ, ಒಲೆ ಮೇಲೆ ನೀಟಾಗಿ ರೋಸ್ಟ್ ಮಾಡಿ. ನಂತರ ಇದರ ಸಿಪ್ಪೆ ಸುಲಿದು, ಬೀಜ ಬೇರ್ಪಡಿಸಿ. ಇದೇ ತರಹ ಈರುಳ್ಳಿ  ಬಿಲ್ಲೆಗಳನ್ನು ರೋಸ್ಟ್ ಮಾಡಿ. ಹಸಿ ಮೆಣಸನ್ನೂ ರೋಸ್ಟ್ ಮಾಡಿಕೊಂಡು, ಮೂರನ್ನೂ ಒಟ್ಟಿಗೆ ಮಿಕ್ಸಿಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಎಲ್.ಜಿ. ಇಂಗು, ರುಬ್ಬಿದ ಪೇಸ್ಟ್ ಹಾಕಿ ಬಾಡಿಸಬೇಕು. ನಂತರ ಪನೀರ್‌, ಕ್ರೀಂ, ಬೆಂದ ಪಾಸ್ತಾ ಹಾಕಿ ಹದನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಕ್ಯಾಪ್ಸಿಕಂನಿಂದ ಅಲಂಕರಿಸಿ ಸವಿಯಲು ಕೊಡಿ.

pasta-and-nudels 5

ಗ್ರಿಲ್ಡ್ ಕಾಲಿಫ್ಲವರ್ಪಾಸ್ತಾ

ಸಾಮಗ್ರಿ : ಶುಚಿಗೊಳಿಸಿ ಹೆಚ್ಚಿಕೊಂಡ 1-2 ಕಪ್‌ ಹೂಕೋಸು, 2 ಕಪ್‌ ಬೆಂದ ಪಾಸ್ತಾ, 1-2 ಸಣ್ಣ ಚಮಚ ಮಿಕ್ಸ್ಡ್ ಹರ್ಬ್ಸ್, 1-2 ಚಮಚ ಆಲಿಲ್ ಆಯಿಲ್‌, 1 ಸಣ್ಣ ಚಮಚ ಎಕ್ಸ್ ಟ್ರಾ ವರ್ಜಿನ್‌ ಆಲಿವ್ ‌ಆಯಿಲ್‌, ಒಂದಿಷ್ಟು ಹೆಚ್ಚಿದ ಹಳದಿ, ಕೆಂಪು, ಹಸಿರು ಕ್ಯಾಪ್ಸಿಕಂ ಹೋಳು (ಒಟ್ಟಾರೆ 1 ಕಪ್‌), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಎಲ್.ಜಿ. ಇಂಗು, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಹೆಚ್ಚಿದ ಹೂಕೋಸು, 3 ಬಗೆಯ ಕ್ಯಾಪ್ಸಿಕಂ ಹೋಳುಗಳನ್ನು ಗ್ರಿಲ್ಲರ್‌ ನಲ್ಲಿ ಆಲಿವ್ ‌ಆಯಿಲ್ ‌ಜೊತೆ ಹದನಾಗಿ ಗ್ರಿಲ್ ಮಾಡಿ ಅಥವಾ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇವನ್ನು ಫ್ರೈ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಬೆಂದ ಪಾಸ್ತಾ, ಉಪ್ಪು, ಮೆಣಸು, ಎಲ್.ಜಿ. ಇಂಗು, ಹರ್ಬ್ಸ್ ಹಾಕಿ ಬಾಡಿಸಿಕೊಂಡು ಅದಕ್ಕೆ ಗ್ರಿಲ್ಡ್ ಪದಾರ್ಥ ಹಾಕಿ ಕೆದಕಬೇಕು. ಇದರ ಮೇಲೆ ಎಕ್ಸ್ ಟ್ರಾ ವರ್ಜಿನ್‌ ಆಯಿಲ್ ‌ಸಿಂಪಡಿಸಿ, ಕೊ.ಸೊಪ್ಪು ಉದುರಿಸಿ ಕೆದಕಿ, ಬಿಸಿಯಾಗಿ ಸವಿಯಲು ಕೊಡಿ.

AA-palak-sabudane-ki-tikki-9

ಪಾಲಕ್ಸಾಬೂದಾಣಿಯ ಟಿಕ್ಕಿ

ಸಾಮಗ್ರಿ : 1 ಕಪ್‌ ಸಬ್ಬಕ್ಕಿ (ಸಾಬೂದಾಣಿ), 1-2 ಕಪ್‌ ಸಣ್ಣಗೆ ಹೆಚ್ಚಿದ ಪಾಲಕ್‌ ಸೊಪ್ಪು, ಅರ್ಧ ಕಪ್‌ ಹುರಿದ ಕಡಲೆಬೀಜ (ಇದನ್ನು ತರಿಯಾಗಿಸಿ), ಅರ್ಧ ಕಪ್‌ ತುರಿದ ಪನೀರ್‌, 2-3 ಬೆಂದ ಆಲೂ, 3-4 ಹಸಿ ಮೆಣಸು, ಒಂದಿಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ 1-2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಎಲ್.ಜಿ. ಇಂಗು, ತುಸು ಹೆಚ್ಚಿದ ಕೊ.ಸೊಪ್ಪು, ಕರಿಬೇವು, ಪುದೀನಾ, ಕರಿಯಲು ಎಣ್ಣೆ.

ವಿಧಾನ : ಸಬ್ಬಕ್ಕಿಯನ್ನು 2 ಕಪ್‌ ನೀರಲ್ಲಿ 4-5 ಗಂಟೆ ಕಾಲ ನೆನೆಹಾಕಿ, ಬಸಿದು, ನೀರು ಬೇರ್ಪಡಿಸಿ. ನಂತರ ಇದಕ್ಕೆ ಹೆಚ್ಚಿದ ಉಳಿದೆಲ್ಲ ಸಾಮಗ್ರಿ, ಮಸೆದ ಆಲೂ, ಎಲ್.ಜಿ. ಇಂಗು, ಇತ್ಯಾದಿ ಎಲ್ಲವನ್ನೂ ಹಾಕಿ ಬೆರೆಸಿಕೊಂಡು, ತುಸುವೇ ನೀರು ಚಿಮುಕಿಸಿ ವಡೆ ಮಿಶ್ರಣ ಕಲಸಿಡಿ. ಇದರಿಂದ ಜಿಡ್ಡು ಸವರಿದ ಅಂಗೈ ಮೇಲೆ ವಡೆ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಇರುವಾಗಲೇ ಪುದೀನಾ ಚಟ್ನಿ ಯಾ ಟೊಮೇಟೊ ಸಾಸ್‌ ಜೊತೆ ಸವಿಯಿರಿ.

AA-steamed-allo-kofta-8

ಸ್ಟೀಮ್ಡ್ ಆಲೂ ಕೋಫ್ತಾ

ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ಬೇಯಿಸಿ ಮಸೆದ 3 ಆಲೂ, ಅರ್ಧ ಕಪ್‌ ತುರಿದ ಪನೀರ್‌, ಸಣ್ಣಗೆ ಹೆಚ್ಚಿದ ಹಳದಿ, ಕೆಂಪು, ಹಸಿರು ಕ್ಯಾಪ್ಸಿಕಂ (ಒಟ್ಟಾರೆ 1 ಕಪ್‌), ಹೆಚ್ಚಿದ 1-2 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, ತುಸು ಕೊ.ಸೊಪ್ಪು, ಪುದೀನಾ, ಒಗ್ಗರಣೆಗೆ ಎಣ್ಣೆ, ಎಲ್.ಜಿ. ಇಂಗು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ.

ವಿಧಾನ : ಮಸೆದ ಆಲೂಗೆ ಸಣ್ಣಗೆ ಹೆಚ್ಚಿದ ಇತರ ಎಲ್ಲಾ ಪದಾರ್ಥ, ಉಪ್ಪು, ಖಾರ, ಎಲ್ಲಾ ಸೇರಿಸಿ ಮಿಶ್ರಣ ಕಲಸಿ, ಸಣ್ಣ ನಿಂಬೆ ಗಾತ್ರದಲ್ಲಿ ಉಂಡೆ ಕಟ್ಟಿಡಿ. ಇದನ್ನು ಇಡ್ಲಿ ತರಹ ಹಬೆಯಲ್ಲಿ ಹದನಾಗಿ ಬೇಯಿಸಿ. ನಂತರ ತುಸು ಎಣ್ಣೆಗೆ ಸಾಸುವೆ, ಜೀರಿಗೆ, ಎಲ್.ಜಿ. ಇಂಗು, ಕರಿಬೇವು ಹಾಕಿ ಒಗ್ಗರಣೆ ಕೊಟ್ಟು, ಇದರ ಮೇಲೆ ಉದುರಿಸಿ, ಕೆಂಪು ಕ್ಯಾಪ್ಸಿಕಂ ಹೋಳಿನಿಂದ ಅಲಂಕರಿಸಿ ಸವಿಯಲು ಕೊಡಿ.

pasta-and-nudels-6

ರೈಸ್ನೂಡಲ್ಸ್ ವಿತ್ಕೋಕೋನಟ್ಮಿಲ್ಕ್

ಸಾಮಗ್ರಿ : ಅರ್ಧ ಕಪ್‌ ತೆಂಗಿನ ಹಾಲು, 1 ಕಪ್‌ ಬೆಂದ ರೈಸ್‌ ನೂಡಲ್ಸ್, 1 ಕಪ್‌ ಬೆಂದ ಮಿಶ್ರ ತರಕಾರಿ ಹೋಳು (ಬೀನ್ಸ್, ಆಲೂ, ಬಟಾಣಿ, ಕ್ಯಾಪ್ಸಿಕಂ, ಹೂಕೋಸು), ಹೆಚ್ಚಿದ ಒಂದಿಷ್ಟು ಈರುಳ್ಳಿ, ಟೊಮೇಟೊ, ಹಸಿಮೆಣಸು, ಕೊ.ಸೊಪ್ಪು, 3-4 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಎಲ್.ಜಿ. ಇಂಗು, ಪಾಸ್ತಾ ಮಸಾಲೆ.

ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಬೆಂದ ತರಕಾರಿ ಹಾಕಿ ಬಾಡಿಸಿ. ಇದಕ್ಕೆ ಹೆಚ್ಚಿದ ಉಳಿದೆಲ್ಲ ಪದಾರ್ಥ ಹಾಕಿ ಹದನಾಗಿ ಕೆದಕಬೇಕು. ನಂತರ ಉಪ್ಪು, ಖಾರ, ಎಲ್.ಜಿ. ಇಂಗು, ಉಳಿದ ಮಸಾಲೆ, ಕೊನೆಯಲ್ಲಿ ಬೆಂದ ರೈಸ್ ನೂಡಲ್ಸ್, ಕಾಯಿ ಹಾಲು ಸೇರಿಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಬಿಸಿ ಬಿಸಿಯಾಗಿ ಸವಿಯಲು ಕೊಡಿ.

pasta-and-nudels-7

ಪನೀರ್ನೂಡಲ್ಸ್ ಸೂಪ್

ಸಾಮಗ್ರಿ : ಅರ್ಧ ಕಪ್‌ ಬೆಂದ ಆಟಾ ನೂಡಲ್ಸ್ (ರೆಡಿಮೇಡ್‌ ಲಭ್ಯ), ಹೆಚ್ಚಿದ ಕೆಂಪು, ಹಳದಿ, ಹಸಿರು ಕ್ಯಾಪ್ಸಿಕಂ ಹೋಳು (ಒಟ್ಟಾರೆ 1 ಕಪ್‌), 2-3 ಚಮಚ ತುರಿದ ಕ್ಯಾರೆಟ್‌, ತುಸು ಹೆಚ್ಚಿದ ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 1-2 ಹಸಿಮೆಣಸು, 4-5 ಚಮಚ ತುರಿದ ಪನೀರ್‌, ಅರ್ಧ ಕಪ್‌ ಟೊಮೇಟೊ ಪೇಸ್ಟ್ ಯಾ ಕೆಚಪ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಎಲ್.ಜಿ. ಇಂಗು, ನೂಡಲ್ಸ್ ಮಸಾಲ, 2-3 ಚಮಚ ಬೆಣ್ಣೆ, ಅರ್ಧ ಕಪ್‌ ಬೆಂದ ಹಸಿ ಬಟಾಣಿ.

ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಇದಕ್ಕೆ ಕ್ಯಾರೆಟ್‌ ತುರಿ, ಬೆಂದ ಬಟಾಣಿ, ಶುಂಠಿ, ಹಸಿ, ಮೆಣಸು ಎಲ್ಲಾ ಹಾಕಿ ಬಾಡಿಸಿ. ಆಮೇಲೆ ಪನೀರ್‌ ತುರಿ, ಟೊಮೇಟೊ ಪೇಸ್ಟ್, ಉಪ್ಪು, ಮೆಣಸು, ಎಲ್.ಜಿ. ಇಂಗು, ನೂಡಲ್ ಮಸಾಲೆ ಎಲ್ಲಾ ಹಾಕಿ ಕೆದಕಬೇಕು. ಕೊನೆಯಲ್ಲಿ ಬೆಂದ ನೂಡಲ್ಸ್ (ನೀರಿನ ಸಮೇತ) ಬೆರೆಸಿ, ಧಾರಾಳ ಕುದಿಸಿ, ಕೆಳಗಿಳಿಸಿ. ಇದನ್ನು ಊಟಕ್ಕೆ ಮುಂಚೆ ಬಿಸಿಯಾಗಿ ಸವಿಯಲು ಕೊಡಿ.

pasta-and-nudels 2

ರೆಡ್ಸಾಸ್ಪಾಸ್ತಾ

ಸಾಮಗ್ರಿ : 150 ಗ್ರಾಂ ಪಂಜಾನಿ ಪಾಸ್ತಾ (ಚಿತ್ರದಲ್ಲಿರುವಂಥ), ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ, ಪಲಾವ್ ‌ಎಲೆ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸಕ್ಕರೆ, ಎಲ್.ಜಿ. ಇಂಗು, ತುಳಸಿ ಎಲೆ, ಕೊ.ಸೊಪ್ಪು.

ವಿಧಾನ : ಬಾಣಲೆಯಲ್ಲಿ ಅರ್ಧ ಲೀ. ನೀರು ಬಿಸಿ ಮಾಡಿ. ಇದು ಕುದಿ ಬಂದಂತೆ ಉಪ್ಪು, ಎಣ್ಣೆ ಬೆರೆಸಿ ಪಂಜಾನಿ ಪಾಸ್ತಾ ಹಾಕಿ ಹದನಾಗಿ ಬೇಯಿಸಿ, ನೀರು ಬೇರ್ಪಡಿಸಿ. ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಂದೊಂದಾಗಿ ಹೆಚ್ಚಿದ ಪದಾರ್ಥ ಹಾಕಿ ಬಾಡಿಸಿ. ನಂತರ ಉಪ್ಪು, ಮೆಣಸು, ಎಲ್.ಜಿ. ಇಂಗು, ತುಳಸಿ ಎಲೆ ಹಾಕಿ ಕೆದಕಿರಿ. ಆಮೇಲೆ ಬೆಂದ ಪಾಸ್ತಾ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

pasta-and-nudels-3

ಗ್ರೀನ್ಸ್ಪೆಗೆಟಿ

ಸಾಮಗ್ರಿ : 1 ಕಪ್‌ ಸಣ್ಣಗೆ ಹೆಚ್ಚಿ ಬೇಯಿಸಿದ ಪಾಲಕ್‌ ಸೊಪ್ಪಿನ ಪೇಸ್ಟ್, ತುಸು ಹೆಚ್ಚಿದ ಹಸಿ ಮೆಣಸು, ಕೊ.ಸೋಪ್ಪು, ಪುದೀನಾ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹುರಿದು ತರಿ ಮಾಡಿದ ಕಡಲೆಬೀಜ, ತುಸು ಆಲಿಲ್ ಆಯಿಲ್‌, ಉಪ್ಪು, ಮೆಣಸು, ಎಲ್.ಜಿ. ಇಂಗು, 1-2 ಕಪ್‌ ಬೆಂದ ಸ್ಪೆಗಟಿ ನೂಡಲ್ಸ್.

ವಿಧಾನ : ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಬೆಳ್ಳುಳ್ಳಿ, ಶುಂಠಿ ಸೇರಿಸಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಬೆಳ್ಳುಳ್ಳಿ ಬಾಡಿಸಿಕೊಂಡು ಅದಕ್ಕೆ ಪಾಲಕ್‌ ಪೇಸ್ಟ್, ಹಸಿ ಮೆಣಸಿನ ಪೇಸ್ಟ್, ಉಪ್ಪು, ಮೆಣಸು, ಎಲ್.ಜಿ. ಇಂಗು, ಕಡಲೆ ಬೀಜ ಎಲ್ಲಾ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಸ್ಪೆಗೆಟಿ ಸೇರಿಸಿ ಕೈಯಾಡಿಸಿ ಕೆಳಗಿಳಿಸಿ.

pasta-and-nudels-10

ಪಾಸ್ತಾ ವಿತ್ವೈಟ್ಸಾಸ್ವೆಜಿಟೆಬಲ್ಸ್

ಸಾಮಗ್ರಿ : 1 ಕಪ್‌ ಬೆಂದ ಪಾಸ್ತಾ, 3 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, ಒಂದಿಷ್ಟು ಬೆಂದ ಮಿಶ್ರ ತರಕಾರಿ (ಬೀನ್ಸ್, ಬಟಾಣಿ, ಆಲೂ, ಹೂಕೋಸು), ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಅರ್ಧ ಸೌಟು ಬೆಣ್ಣೆ, ತುಸು ಓಟ್ಸ್ ಆಟಾ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಎಲ್.ಜಿ. ಇಂಗು, ತುರಿದ ಚೀಸ್‌, 1 ಕಪ್‌ ಹಾಲು.

ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಕ್ಯಾಪ್ಸಿಕಂ, ಹೆಚ್ಚಿದ ಹೂಕೋಸು ಸೇರಿಸಿ ಬಾಡಿಸಿ. ಆಮೇಲೆ ಬೆಂದ ತರಕಾರಿ ಹಾಕಿ ಕೈಯಾಡಿಸಿ. ನಂತರ 1 ಕಪ್‌ ಬಿಸಿ ಹಾಲಲ್ಲಿ ಕದಡಿಕೊಂಡ ಓಟ್ಸ್ ಆಟಾ ಇದಕ್ಕೆ ಬೆರೆಸಿ ಕೆದಕಬೇಕು. ನಂತರ ಉಪ್ಪು, ಮೆಣಸು, ಎಲ್.ಜಿ. ಇಂಗು, ಬೆಂದ ಪಾಸ್ತಾ ಹಾಕಿ ಕೆದಕಬೇಕು. ನಂತರ ಕೆಳಗಿಳಿಸಿ ಬಿಸಿ ಬಿಸಿಯಾಗಿ ಬೆಳಗಿನ ಉಪಾಹಾರಕ್ಕೆ ಬಿಸಿ ಕಾಫಿ-ಟೀ ಜೊತೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ