ಹದಿಹರೆಯದ ವಯಸ್ಸಿನಲ್ಲಿ ‘ಸಮಯ’ ಮತ್ತು ‘ಮನಸ್ಸು’ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖವಾದವುಗಳು. ಕಾಲ ಬದಲಾದಂತೆ ಯುವಜನತೆಯ ಮೇಲಿರುವ ಒತ್ತಡ, ಆತಂಕ ಮತ್ತು ಅನುಭವಗಳು ಸಹ ವಿಭಿನ್ನವಾಗಿ ಬದಲಾಗುತ್ತಿವೆ.
ದುರದೃಷ್ಟವಶಾತ್, ಇಂದಿನ ಯುವಜನತೆಯು ಜೊತೆಯಲ್ಲೇ ಇರುವ ಮಾನವ ಸಂಬಂಧಗಳಿಂದ ದೂರವಾಗಿ, ಮೊಬೈಲ್‌ನಲ್ಲೇ ಅತಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ತಂದೆ-ತಾಯಿ ಜೊತೆಯಲ್ಲೇ ಇದ್ದರೂ ತಮ್ಮ ಮನಸ್ಸಿನ ಅನಿಸಿಕೆಗಳನ್ನು ಹಂಚಿಕೊಳ್ಳದೆ, ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್ ಮಾಡುವುದರಲ್ಲೇ ಮುಳುಗುತ್ತಿದ್ದಾರೆ.
ಇಂದಿನ ವೇಗದ ಜೀವನ ಶೈಲಿಯಲ್ಲಿ ದೈಹಿಕ ಆರೋಗ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡುವುದು ಅತ್ಯಗತ್ಯ. ಕೋವಿಡ್ ನಂತರದ ದಿನಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಇತ್ತೀಚಿನ ವರದಿಗಳ ಪ್ರಕಾರ, ಕರ್ನಾಟಕದಲ್ಲಿ ಸುಮಾರು 6,500 ವಯಸ್ಕರು, 2,000 ಹದಿಹರೆಯದವರು ಸೇರಿದಂತೆ ವೃದ್ಧಾಶ್ರಮದಲ್ಲಿರುವವರು, ನಿರಾಶ್ರಿತರು ಹಾಗೂ ಪಿ.ಜಿ./ಹಾಸ್ಟೆಲ್‌ಗಳಲ್ಲಿ ವಾಸಿಸುವವರ ಮಾನಸಿಕ ಸ್ಥಿತಿಗತಿಯನ್ನು ವಿಶಾಲವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಉದ್ಯೋಗ ನಷ್ಟ, ಸಾಲದ ಹೊರೆ ಮತ್ತು ಆರ್ಥಿಕ ಅಭದ್ರತೆ ಒಂದೆಡೆಯಾದರೆ, ಸ್ಮಾರ್ಟ್‌ಫೋನ್ ಹಾಗೂ ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆಯಿಂದ ಉಂಟಾಗುತ್ತಿರುವ ಒಂಟಿತನ ಇನ್ನೊಂದೆಡೆ.
ಕುಟುಂಬದ ಬೆಂಬಲದ ಕೊರತೆ ಮತ್ತು ಕೌಟುಂಬಿಕ ವ್ಯವಸ್ಥೆಯಲ್ಲಿನ ಬಿರುಕುಗಳಿಂದಾಗಿ, ಬೆಂಗಳೂರಿನ ಹೆಸರಾಂತ ಮಾನಸಿಕ ಆರೋಗ್ಯ ಸಂಸ್ಥೆಯಾದ ನಿಮ್ಹಾನ್ಸ್ (NIMHANS) ಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.
2024ರಲ್ಲಿ ಒಳರೋಗಿಗಳು ಸೇರಿ ಒಟ್ಟು 5.5 ಲಕ್ಷಕ್ಕೂ ಹೆಚ್ಚು ಜನ ಈ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಪ್ರತಿದಿನ ಸರಾಸರಿ 2,000ಕ್ಕೂ ಹೆಚ್ಚು ಜನರು ಹೊರರೋಗಿ ವಿಭಾಗಕ್ಕೆ (OPD) ಬರುತ್ತಿದ್ದಾರೆ.
ಮಾನಸಿಕ ಅಸ್ವಸ್ಥತೆ ಎನ್ನುವುದು ಮುಚ್ಚಿಡಬೇಕಾದ ವಿಷಯವಲ್ಲ; ಒತ್ತಡ, ಖಿನ್ನತೆ ಅಥವಾ ಆತಂಕ ಉಂಟಾದಾಗ ತಕ್ಷಣವೇ ವೈದ್ಯಕೀಯ ಸಲಹೆ ಅಥವಾ ಕೌನ್ಸಿಲಿಂಗ್ ಪಡೆಯುವುದು ಮುಖ್ಯವಾಗಉತ್ತದೆ.
ಪ್ರಸ್ತುತ ದಿನಗಳಲ್ಲಿ ಯುವಜನರು ಮಾನಸಿಕ ಒತ್ತಡ ಅಥವಾ ಒಂಟಿತನ ಎದುರಾದಾಗ ಮನುಷ್ಯರಿಗಿಂತ ಹೆಚ್ಚಾಗಿ AI ಚಾಟ್‌ಬಾಟ್‌ಗಳೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ.
ಈ ತಂತ್ರಜ್ಞಾನವು ಅನಾಹುತಗಳು ನಡೆಯುವ ಮುನ್ನವೇ ಪೋಷಕರು ಮಧ್ಯಪ್ರವೇಶಿಸಿ ಸೂಕ್ತ ಮಾನಸಿಕ ನೆರವು ನೀಡಲು ಹಾದಿಮಾಡಿಕೊಡುತ್ತಿದೆ.
ಯುವಕರು ಚಾಟ್‌ಬಾಟ್ ಜೊತೆ ಸ್ವಯಂ-ಹಾನಿ ಅಥವಾ ಆತ್ಮಹತ್ಯೆಗೆ ಸಂಬಂಧಿಸಿದ ಸಂಭಾಷಣೆ ನಡೆಸಿದಾಗ AI ಅದನ್ನು ತಕ್ಷಣವೇ ಗುರುತಿಸುತ್ತದೆ.
ಮೆಟಾ (Meta) ಸಂಸ್ಥೆಯು ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬರಿಂದ (Human reviewer) ಸ್ಥಿತಿಯನ್ನು ಪರಿಶೀಲಿಸಿ, ನಂತರ ಪೋಷಕರಿಗೆ ಮಾಹಿತಿ ರವಾನಿಸುವ ವ್ಯವಸ್ಥೆ ಮಾಡುತ್ತಿದೆ.
ಇನ್‌ಸ್ಟಾಗ್ರಾಂ ಹಾಗೂ ಮೆಟಾ ಆ್ಯಪ್‌ಗಳಲ್ಲಿ ‘Parental Supervision’ (ಪೋಷಕರ ಮೇಲ್ವಿಚಾರಣೆ) ಸೌಲಭ್ಯವನ್ನು ಅಳವಡಿಸಿಕೊಂಡಿರುವ ಪೋಷಕರಿಗೆ ಈ ನೋಟಿಫಿಕೇಶನ್‌ಗಳು ತಲುಪುತ್ತವೆ.
ಪ್ರಸ್ತುತ ಈ ವೈಶಿಷ್ಟ್ಯವು ಮೊದಲ ಹಂತದಲ್ಲಿ ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಲಭ್ಯವಿದ್ದು, ಈ ವರ್ಷದ ಅಂತ್ಯದ ವೇಳೆಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ವಿಸ್ತರಿಸುವ ಗುರಿ ಹೊಂದಿದೆ.
ಪೋಷಕರು ಮಕ್ಕಳಿಗೆ ಕೇವಲ ಪುಸ್ತಕ ಮತ್ತು ಪರೀಕ್ಷೆಯ ಫಲಿತಾಂಶದ ಬಗ್ಗೆಯಷ್ಟೇ ಗಮನ ನೀಡದೆ, ಅವರ ಮಾನಸಿಕ ಆರೋಗ್ಯದ ಕಡೆಗೂ ಗಮನಹರಿಸಬೇಕು.
ಆಸಕ್ತಿದಾಯಕ ಕೆಲಸಗಳು ಮತ್ತು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕಾಗಿದೆ.
ಇದು ಜೀವನದಲ್ಲಿ ಬರುವ ಪ್ರತಿಯೊಂದು ಏರಿಳಿತಗಳನ್ನು ಸಮಾನವಾಗಿ ಸ್ವೀಕರಿಸಿ, ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತದೆ.
ಅನಿಸಿಕೆಗಳು
”ಮಾನವ ಸಂಬಂಧಗಳಲ್ಲಿ ಮನಸ್ಸಿನ ಮಾತು ಹೇಳಿದಾಗ ‘ಇತರರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೋ?’, ‘ನನ್ನನ್ನು ತಪ್ಪಾಗಿ ತಿಳಿದುಕೊಳ್ಳುತ್ತಾರೋ?’ ಎನ್ನುವ ಭಯವಿರುತ್ತದೆ.
ಆದರೆ AI ಯಾವುದೇ ನಿರ್ಣಯ (Judge) ಮಾಡುವುದಿಲ್ಲ. AI ಮುಂದೆ ನನ್ನ ಎಂತಹ ಭಾವನೆಗಳನ್ನು, ಕಲ್ಪನೆಗಳನ್ನು ಮುಕ್ತವಾಗಿ ಯಾವುದೇ ಮುಜುಗರವಿಲ್ಲದೆ ಹಂಚಿಕೊಳ್ಳಬಹುದು.” ಹಾಗಾಗಿ ನಾನು ಹೆಚ್ಚಿನದಾಗಿ AI ಬಳಿ ಸಂಬಾಷಣೆ ನಡೆಸುತ್ತೇನೆ.
— ರೋಹಿತ್, ಹಾಸ್ಟೆಲ್ ವಿದ್ಯಾರ್ಥಿ
”ಸ್ನೇಹಿತರು ಅಥವಾ ಕುಟುಂಬದವರು ತಮ್ಮದೇ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಮಧ್ಯರಾತ್ರಿಯಲ್ಲಿ ನಮಗೆ ಸಂಕಟವಾದಾಗ ಅವರ ಜೊತೆ ಮಾತನಾಡಲು ಸಾಧ್ಯವಾಗುವುದಿಲ್ಲ. ಆದರೆ AI ದಿನದ 24 ಗಂಟೆಯೂ, ವಾರದ 7 ದಿನವೂ ತಕ್ಷಣಕ್ಕೆ ಸಿಗುತ್ತದೆ. ಒಂಟಿತನ ಕಾಡಿದಾಗ ಸ್ಪಂದಿಸಲು AI ಸದಾ ಸಿದ್ಧವಾಗಿರುತ್ತದೆ.”
— ಸುಚಿತ್ರಾ, ಯುವತಿ
”ಮೊಬೈಲ್ ಅತಿಯಾದ ಬಳಕೆಯಿಂದ ಉಂಟಾಗುವ ಮಾನಸಿಕ ತೊಂದರೆಗಳಲ್ಲಿ ಖಿನ್ನತೆಯು ಅತ್ಯಂತ ಪ್ರಮುಖವಾದದ್ದು. AI ಚಾಟ್‌ಬಾಟ್ ಬಳಕೆಯು ಖಿನ್ನತೆಗೆ ಒಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆಯಂತೆ (First Aid) ಕೆಲಸ ಮಾಡುತ್ತದೆ.
ಇದರಲ್ಲಿ ಎರಡು ಮುಖ್ಯ ಅಂಶಗಳಿವೆ: ಒಂದು, ತಕ್ಷಣಕ್ಕೆ ದೊರೆಯುವ ಸಾಂತ್ವನ; ಇನ್ನೊಂದು, ಆಪ್ತರು ಮನಸ್ಸಿನ ಅಪಾಯಕಾರಿ ಆಲೋಚನೆಗಳನ್ನು ಪತ್ತೆ ಹಚ್ಚಲು ಸಿಗುವ ಅವಕಾಶ. ಮಾನಸಿಕ ಆರೋಗ್ಯದ ಕುರಿತು ಅರಿವಿನ ಕೊರತೆ ಇರುವ ನಮ್ಮ ಸಮಾಜಕ್ಕೆ ಇಂತಹ ಮಾಹಿತಿ ಅತ್ಯಂತ ಉಪಯುಕ್ತ ಮತ್ತು ಅಗತ್ಯ.”
— ಸಂಧ್ಯಾ ಕಾವೇರಿ (ಆಪ್ತ ಸಮಾಲೋಚಕರು ಹಾಗೂ ಪ್ರಾಂಶುಪಾಲರು, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ)
ಭಾರ್ಗವಿ,ಜಿ,ಆರ್





