ದಿನ ಪೂರ್ತಿ ಮನರಂಜನೆಯೇ ಇರದ ನನಗೆ ತುಸು ಬಿಡುವು ಸಿಕ್ಕರೆ ಸಾಕು ತುಂಟ ಹಾಗೂ ಮುಗ್ದ ಮಕ್ಕಳ ವಿಡಿಯೋ ನೋಡುವ ಒಂದು ತವಕ.
ಪ್ರತೀ ಬಾರಿಯಂತೆ ಹೀಗೆ ಒಂದು ದಿನ ವೀಡಿಯೋಗಳನ್ನು ನೊಡುವ ವೇಳೆ ನನ್ನ ಗಮನಕ್ಕೆ ಬಂದದ್ದು ಚಿಕ್ಕ ಮಕ್ಕಳು ಸಹ ದೊಡ್ಡವರಂತೆ ’’ಗೆಟ್ ರೆಡಿ ವಿತ್ ಮಿ ‘‘ ಎನ್ನುವ ಹೊಸ ವಿಚಾರವನ್ನು ಆರಂಭಮಾಡಿರುವುದು.
ಒಂದು ರೀತಿಯಲ್ಲಿ ಆಲೋಚನೆ ಮಾಡಿದರೆ ವಯಸ್ಸಿಗೂ ಮೀರಿದ ಪ್ರಯತ್ನ ಹಾಗೂ ಕಲೆ ಈ ಮಕ್ಕಳಲ್ಲಿ ಇದೆ ಎಂದು ಖುಷಿಪಡುವುದೋ ಅಥವಾ ಕಾಸ್ಮೆಟಿಕ್ ಒರೆಕ್ಸಿಯಾ ಎಂಬ ಗೀಳಿಗೆ ಮಕ್ಕಳು ತುತ್ತಾಗುತಿದ್ದಾರೆ ಎಂದು ನಿರಾಸೆ ಪಡುವುದೋ ಒಂದು ತಿಳಿಯದೇ ಹೋಯಿತು.
ಹಿರಿಯರು ಅಥವಾ ಯುವ ಜನರ ಫ್ಯಾಷನ್ ಪ್ರಯೋಗಗಳು ಮಕ್ಕಳ ಮೇಲೂ ಪರಿಣಾಮ ಬೀರುತ್ತಿದ್ದು, ಇದೀಗ ಅವರೂ ಇಂಥ ಪ್ರಯೋಗಗಳ ಮೊರೆ ಹೋಗುತ್ತಿರುವುದು ಸಮಾಜದಲ್ಲಿನ ಹೊಸ ಬದಲಾವಣೆ.
ಸಹಜತೆಯಲ್ಲೇ ವಿಶೇಷ ಹಾಗೂ ಅಂದವಾಗಿ ಕಾಣುವ ಮಕ್ಕಳಿಗೆ ಕ್ರೀಮ್ ಎಂಬ ಲೇಪನವೇಕೆ ಅಲ್ಲವೇ ಎಂಬುದೇ ನನ್ನ ಪ್ರಶ್ನೆಯಾಗಿದೆ.
ಎಳೆಯರ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ; ಗ್ರಹಿಕೆ ಮತ್ತು ಅನುಕರಣೆ ಅವರ ಸಹಜ ಗುಣ. ವಯಸ್ಸಿಗೆ ಮೀರಿದ ವಿಷಯಗಳ ಅರಿವಿಲ್ಲದಿದ್ದರೂ, ಕಣ್ಣಿಗೆ ಕಂಡದ್ದನ್ನು ತಕ್ಷಣ ಅನುಕರಿಸಲು ಹೊರಡುತ್ತಾರೆ.
ಇಂದಿನ ಡಿಜಿಟಲ್ ಹಾಗೂ ಮೊಬೈಲ್ ಯುಗದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವ “Get ready with me” (GRWM) ವೀಡಿಯೊಗಳು ಮಕ್ಕಳ ಗಮನವನ್ನು ಅಪಾಯಕಾರಿ ಹಂತದಲ್ಲಿ ಸೆಳೆಯುತ್ತಿವೆ ಎಂಬುದು ನಿಮಗೆ ಎಂದಾದರೂ ಅನಿಸಿದೆಯೇ?
ಸಾಮಾನ್ಯವಾಗಿ ಬಾಲ್ಯದಲ್ಲಿ ಚರ್ಮವು ಬಾಲ್ಯದ ಹಾಲುಗಲ್ಲದ ದುಂಡು ಮೊಗವು ಹೆಚ್ಚು ಸೂಕ್ಷ್ಮವಾಗಿಯೂ ಹಾಗೂ ಮೃದುವಾಗಿಯೂ ಇರುತ್ತದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ‘ಲೈಕ್ಸ್’, ‘ಫಾಲೋವರ್ಸ್’ ಮತ್ತು ಜನರ ಮೆಚ್ಚುಗೆಯ ಆಸೆಗೆ ಬಿದ್ದು, ಮಕ್ಕಳು ದೊಡ್ಡವರಂತೆ ವರ್ತಿಸಲು ಮತ್ತು ಮಾತನಾಡಲು ಶ್ರಮಿಸುತ್ತಿದ್ದಾರೆ.
ಇದರ ಪರಿಣಾಮವಾಗಿ, ಅಂಗಡಿಗಳಿಂದ ಅಥವಾ ಆನ್‌ಲೈನ್ ಮೂಲಕ ಸಿಗುವ ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸಿ ತಮ್ಮ ನೈಸರ್ಗಿಕ ರೂಪವನ್ನು ಬದಲಾಯಿಸಿಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ.
ಚರ್ಮದ ಮೇಲೆ ಮೊಡವೆಗಳು, ಸಣ್ಣಪುಟ್ಟ ಕಲೆಗಳು ಮೂಡುವುದು ತೀರಾ ಸಹಜ ಪ್ರಕ್ರಿಯೆ. ಆದರೆ “ಪರಿಪೂರ್ಣ ಚರ್ಮ” (Flawless Skin) ಒಂದೇ ಸೌಂದರ್ಯದ ಮಾನದಂಡ ಎಂಬ ಕಲ್ಪನೆಯನ್ನು ನಾವು ಅತಿಯಾಗಿ ನಂಬುತ್ತಿದ್ದೇವೆ.
ಮುಖದ ಮೇಲಿನ ಸಣ್ಣ ಕಲೆ ಅಥವಾ ಸೂಕ್ಷ್ಮ ರೇಖೆಗಳೂ ಇಂದಿನ ಮಕ್ಕಳಲ್ಲಿ ತೀವ್ರ ಮಾನಸಿಕ ಅಭದ್ರತೆ ಮತ್ತು ಒತ್ತಡವನ್ನುಂಟುಮಾಡುತ್ತಿವೆ.
ಕೋವಿಡ್ ಸಮಯದಲ್ಲಿ ಟಿಕ್‌ಟಾಕ್, ಇನ್‌ಸ್ಟಾಗ್ರಾಮ್ ಹಾಗೂ ಗೂಗಲ್‌ಗಳಲ್ಲಿ ಚರ್ಮದ ಆರೈಕೆಗೆ (Skincare) ಸಂಬಂಧಿಸಿದ ಮಾಹಿತಿಗಳು ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆದವು.
ಇಂತಹ ವೀಡಿಯೊಗಳ ಅತಿಯಾದ ಪ್ರಭಾವದಿಂದ ಮಕ್ಕಳ ಆತ್ಮವಿಶ್ವಾಸ ಮತ್ತು ಆಂತರಿಕ ಸಂತೃಪ್ತಿ ಗಣನೀಯವಾಗಿ ಕುಸಿಯುತ್ತಿದೆ. 2026ರ ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಸುಮಾರು 2,500ಕ್ಕೂ ಹೆಚ್ಚು ಯುವಜನರು ಈ “ಪರಿಪೂರ್ಣ ಸೌಂದರ್ಯದ” ಹಂಬಲದಿಂದಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ.
ಮಕ್ಕಳ ಚರ್ಮ ನೈಸರ್ಗಿಕವಾಗಿಯೇ ಆರೋಗ್ಯಕರವಾಗಿರುತ್ತದೆ. ಇವರಿಗೆ ವಯಸ್ಸಾಗುವುದನ್ನು ತಡೆಯುವ (Anti-aging) ಉತ್ಪನ್ನಗಳಾಗಲಿ ಅಥವಾ ಯಾವುದೇ ರಾಸಾಯನಿಕ ಲೇಪನಗಳಾಗಲಿ ಅಗತ್ಯವಿರುವುದಿಲ್ಲ.
ಇಲ್ಲದಿರುವ ದೋಷವನ್ನು ‘ಸರಿಪಡಿಸಲು’ ಹೋಗಿ, ಚರ್ಮದ ನೈಸರ್ಗಿಕ ಸೌಂದರ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.
ವಿವಿಧ ರೀತಿಯ ಕಾಸ್ಮೆಟಿಕ್ಸ್‌ಗಳನ್ನು ಒಂದರ ಮೇಲೊಂದರಂತೆ ಪದರ ಪದರವಾಗಿ ಬಳಸುವುದರಿಂದ ಚರ್ಮದಲ್ಲಿ ಕಿರಿಕಿರಿ ಮತ್ತು ಉರಿಯೂತ ಉಂಟಾಗುತ್ತದೆ.
ಫೋಟೋಸೆನ್ಸಿಟಿವಿಟಿ (ಸೂರ್ಯನ ಬೆಳಕಿಗೆ ಚರ್ಮ ಶೀಘ್ರವಾಗಿ ಹಾನಿಗೊಳಗಾಗುವುದು) ಹೆಚ್ಚಾಗುತ್ತದೆ. ಗಂಭೀರ ಸ್ವರೂಪದ ಚರ್ಮದ ಅಲರ್ಜಿಗಳು ಮತ್ತು ಚರ್ಮದ ನೈಸರ್ಗಿಕ ತಡೆಗೋಡೆ ಹಾಳಾಗುವ ಅಪಾಯವಿರುತ್ತದೆ.
ಪ್ರತಿಯೊಬ್ಬರ ಚರ್ಮದ ಸ್ವಭಾವ ಬೇರೆ ಬೇರೆಯಾಗಿರುತ್ತದೆ (ಕ್ಷಾರ, ಎಣ್ಣೆ,ಶುಷ್ಕ ಅಥವಾ ನ್ಯೂಟ್ರಲ್– ತಟಸ್ಥ). ಚರ್ಮದ ನೈಸರ್ಗಿಕ pH ಮೌಲ್ಯವು ಸಾಮಾನ್ಯವಾಗಿ ಸ್ವಲ್ಪ ಕ್ಷಾರ (pH 6.5 ಅಂದಾಜು) ಆಗಿರುತ್ತದೆ.
ಗಾಯ, ಅಲರ್ಜಿಯಂತಹ ಸಮಸ್ಯೆಗಳಾದಾಗ ಚರ್ಮದ ಕ್ಷಾರ ಸ್ವಭಾವವು ಆಲ್ಕಲೈನ್ ಗೆ ಬದಲಾಗುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ಜಾಹೀರಾತುಗಳ ಕಾಸ್ಮೆಟಿಕ್ ಉತ್ಪನ್ನಗಳನ್ನು ವೈದ್ಯರು ರೆಕಮೆಂಡ್ ಮಾಡುವುದಿಲ್ಲ.
ಡ್ರೈ ಸ್ಕಿನ್ ಇರುವವರು ಆಯಿಲ್ ಸ್ಕಿನ್‌ಗೆ ಬಳಸುವ ಕ್ರೀಮ್ ಹಚ್ಚಿದರೆ ಚರ್ಮ ಇನ್ನಷ್ಟು ಒಣಗುತ್ತದೆ. ಅದೇ ರೀತಿ ಆಯಿಲ್ ಸ್ಕಿನ್‌ನವರು ಕೋಲ್ಡ್ ಕ್ರೀಮ್ ಹಚ್ಚಿದರೆ ಮೊಡವೆ, ಗುಳ್ಳೆಗಳು ಮತ್ತು ರಾಶಸ್ ಉಂಟಾಗುತ್ತವೆ.
ತಪ್ಪಾದ ಕ್ರೀಮ್‌ಗಳಿಂದ ಚರ್ಮದಲ್ಲಿ ಪಿಗ್ಮೆಂಟೇಷನ್ (ಕಪ್ಪು ಮಚ್ಚೆಗಳು), ಕೆಮಿಕಲ್ ಬರ್ನ್ ಅಥವಾ ಬಿಳಿ ಮಚ್ಚೆಗಳು (ವಿಟಿಲಿಗೋ) ಉಂಟಾಗಬಹುದು.
ಚರ್ಮದ ಬಣ್ಣ ಅಥವಾ ಸ್ವರೂಪ ಹಾಳಾದಾಗ, ಅದು ವ್ಯಕ್ತಿಯ ಆತ್ಮವಿಶ್ವಾಸವನ್ನು ಕುಗ್ಗಿಸಿ ಮಾನಸಿಕ ಖಿನ್ನತೆ ಮತ್ತು ಸಾಮಾಜಿಕವಾಗಿ ದೂರವಿರುವ ನಡವಳಿಕೆಗೆ (Behavioral Changes) ಕಾರಣವಾಗುತ್ತದೆ.
ವಿಟಮಿನ್ D3 ಸಿಗಲು ಇಡೀ ದೇಹಕ್ಕೆ ಶೇ 60ರಿಂದ 70 ರಷ್ಟು ಸೂರ್ಯನ ಎಳೆ ಬಿಸಿಲನ್ನು ದೇಹಕ್ಕೆ ತಾಕುವಂತೆ ತಗೆದುಕೊಳ್ಳಬೇಕು.
ಸೂರ್ಯನ ಅಲ್ಟ್ರಾವಯೋಲೆಟ್ (UV) ರಶ್ಮಿಗಳು ಕಾಸ್ಮೆಟಿಕ್ಸ್‌ಗಳಲ್ಲಿರುವ ಕೆಮಿಕಲ್ಸ್‌ಗಳೊಂದಿಗೆ ವರ್ತಿಸಿ ‘ಫೋಟೋ ಕಾಂಟ್ಯಾಕ್ಟ್ ಡರ್ಮಟೈಟಿಸ್’ (Photo Contact Dermatitis) ಉಂಟುಮಾಡುತ್ತವೆ.
ಇದರಿಂದ ಚರ್ಮಕ್ಕೆ ಸುಕ್ಕು, ಕಪ್ಪು ಟ್ಯಾನ್ ಮತ್ತು ಬೇಗ ವಯಸ್ಸಾದಂತೆ ಕಾಣುವ ಲಕ್ಷಣಗಳು ಬರುತ್ತವೆ.ನಾವು ಸೌಂದರ್ಯದ ನೈಜ ಅರ್ಥವನ್ನು ಮಕ್ಕಳಿಗೆ ತಿಳಿಸಿಕೊಡಬೇಕಿದೆ.
ಕೃತಕ ಸೌಂದರ್ಯದ ಬೆನ್ನತ್ತಿ ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಈ “ಕಾಸ್ಮೆಟಿಕ್ಸ್ ಒರೆಕ್ಸಿಯಾ”ದಿಂದ ಅವರನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
”Healthy skin is a divine bliss” ಎಂಬ ಮಾತು ಅತ್ಯಂತ ಅರ್ಥಪೂರ್ಣವಾಗಿದೆ. ಆದರೆ ಜನರು ಟಿವಿ ಜಾಹೀರಾತುಗಳನ್ನು ನೋಡಿ ಅಥವಾ ಮೆಡಿಕಲ್ ಶಾಪ್‌ಗಳಲ್ಲಿ ಸಿಗುವ ಕ್ರೀಮ್‌ಗಳನ್ನು ನೇರವಾಗಿ ತಂದು ಹಚ್ಚಿಕೊಳ್ಳುವ ಅಭ್ಯಾಸ ಎಷ್ಟೊಂದು ಅಪಾಯಕಾರಿ ಎಂಬುದನ್ನು ಇನ್ನು ತಿಳಿದೇ ಇಲ್ಲ ಎಂದು ಅನಿಸುತ್ತದೆ.
ಚರ್ಮದ ಸಮಸ್ಯೆಗೆ ಅಥವಾ ಸೌಂದರ್ಯಕ್ಕೆ ಯಾವುದೇ ಕ್ರೀಮ್ ಅಥವಾ ಸೋಪ್ ಬಳಸುವ ಮುನ್ನ ಚರ್ಮ ರೋಗ ತಙ್ಞರ ಸಲಹೆ ಪಡೆಯುವುದು ಸೂಕ್ತವಾಗುತ್ತದೆ.
ಚರ್ಮದ ಹೊರಗಿನ ಬಣ್ಣಕ್ಕಿಂತ ಆಂತರಿಕ ಆರೋಗ್ಯ ಮತ್ತು ಮಾನಸಿಕ ಸಂತೋಷ ಮುಖ್ಯ. ಮಾರುಕಟ್ಟೆಯ ಸಿಂಥೆಟಿಕ್ ಕಾಸ್ಮೆಟಿಕ್ಸ್ ಮತ್ತು ತಪ್ಪು ಕ್ರೀಮ್‌ಗಳ ಬಳಕೆಯಿಂದ ಮಕ್ಕಳ ಚರ್ಮ ಹಾಳಾಗುವುದಲ್ಲದೆ, ಮಾನಸಿಕ ನೆಮ್ಮದಿಯು ಹಾಳಾಗುತ್ತದೆ.
ಚರ್ಮದ ಪ್ರಕಾರಕ್ಕೆ ತಕ್ಕಂತೆ ವೈದ್ಯರ ಸಲಹೆ ಮೇರೆಗೆ ಮಾತ್ರ ಉತ್ಪನ್ನಗಳನ್ನು ಬಳಸುವುದು ಸುರಕ್ಷಿತವಾಗುತ್ತದೆ.
ಮಕ್ಕಳ ಮೃದು ಚರ್ಮಕ್ಕೂ ಸಹ ಈ ಅಭ್ಯಾಸ ಸೂಕ್ತವಾಗಿ ಮತ್ತು ಅನುಕೂಲಕರವಾಗಿರುತ್ತದೆ ಎನ್ನುತ್ತಾರೆ ಮೈಸೂರಿನ ಖ್ಯಾತ ಚರ್ಮ ರೋಗ ತಙ್ಞರಾದ–ಡಾ. ಹನುಮಂತಪ್ಪ.
ಕಾಸ್ಮೆಟಿಕ್ಸ್ ಗೀಳಿನಿಂದ ಹೊರಬರುವುದು ಹೇಗೆ? ಮಕ್ಕಳಿಗೆ ನೈಸರ್ಗಿಕ ಸೌಂದರ್ಯದ ಬಗ್ಗೆ ಜಾಗೃತಿ ನೀಡಬೇಕಾಗುತ್ತದೆ.
ಮುಖದ ಮೇಲಿನ ಸಣ್ಣ ಕಲೆ, ಮೊಡವೆಗಳು ಬೆಳವಣಿಗೆಯ ಸಹಜ ಭಾಗ. ‘ಪರಿಪೂರ್ಣತೆ’ ಎಂಬುದು ಸಾಮಾಜಿಕ ಜಾಲತಾಣಗಳು ಸೃಷ್ಟಿಸಿದ Filter Culture ಹೊರತು ನಿಜ ಜೀವನವಲ್ಲ ಎಂಬುದನ್ನು ಮನವರಿಕೆ ಮಾಡಿ.
ಡಿಜಿಟಲ್ ಡಿಟಾಕ್ಸ್: ಮಕ್ಕಳು ಸ್ಕಿನ್‌ಕೇರ್ ಮತ್ತು ಮೇಕಪ್ ಟ್ರೆಂಡಿಂಗ್ ವೀಡಿಯೊಗಳನ್ನು ನೋಡುವ ಸಮಯವನ್ನು ಹಂತಹಂತವಾಗಿ ಕಡಿಮೆ ಮಾಡಿ. ಬದಲಿಗೆ ಪುಸ್ತಕ, ಕ್ರೀಡೆ, ಕುಟುಂಬದ ಜೊತೆ ಸಮಯ ಕಳೆಯಲು ಪ್ರೋತ್ಸಾಹಿಸಿ.
ಆಂತರಿಕ ಸಾಮರ್ಥ್ಯ ಬೆಳೆಸಿ: ಮಗುವಿನ ಗಮನವನ್ನು ರೂಪದಿಂದ ಅವರ ಕಲೆ, ಕ್ರೀಡೆ, ಸಾಹಿತ್ಯದಂತಹ ಪ್ರತಿಭೆಗಳತ್ತ ಸೆಳೆಯಿರಿ. ಆತ್ಮವಿಶ್ವಾಸವು ಕೇವಲ ಮುಖದ ಮೇಲೆ ಆಧಾರಿತವಾಗದಂತೆ ನೋಡಿಕೊಳ್ಳಿ.
ಸ್ವಾಭಾವಿಕ ಆರೈಕೆ ಅಭ್ಯಾಸ: ದುಬಾರಿ ಕೆಮಿಕಲ್ ಕ್ರೀಮ್‌ಗಳ ಬದಲಿಗೆ ದಿನಕ್ಕೆ 3 ಲೀಟರ್ ನೀರು, ಪೌಷ್ಟಿಕ ಆಹಾರ ಮತ್ತು 8 ಗಂಟೆ ನಿದ್ರೆ ಇದ್ದರೆ ಚರ್ಮವೇ ಹೊಳೆಯುತ್ತದೆ ಎಂಬುದನ್ನು ಅಭ್ಯಾಸ ಮಾಡಿಸಿ.
ಮಕ್ಕಳಿಗೆ ಸೂಕ್ಷ್ಮವಾಗಿ ಅರ್ಥಮಾಡಿಸುವುದು ಹೇಗೆ?
ಗದರಿಸಿ ನಿಷೇಧಿಸಿದರೆ ಮಕ್ಕಳು ಗುಟ್ಟಾಗಿ ಕ್ರೀಮ್‌ಗಳನ್ನು ಬಳಸುತ್ತಾರೆ.
ಆದ್ದರಿಂದ ಸ್ನೇಹಿತರಂತೆ ಮಾತನಾಡಿ.ಸರಳ ಉದಾಹರಣೆ ಕೊಡಿ: “ನಿನ್ನ ಚರ್ಮ ಈಗ ಮೃದುವಾದ ಮೊಗ್ಗಿನಂತೆ. ಇದರ ಮೇಲೆ ದೊಡ್ಡವರ ಕೆಮಿಕಲ್ ಹಾಕಿದರೆ ಅದು ಬೇಗ ಬಾಡಿ ಹೋಗುತ್ತದೆ, ಬೇಗ ಸುಕ್ಕು ಬರುತ್ತದೆ ”
ಸೋಶಿಯಲ್ ಮೀಡಿಯಾದ ಸತ್ಯ: “ನೀನು ನೋಡುವ ಆ ಸುಂದರ ಮುಖಗಳು ಲೈಟಿಂಗ್, ಫಿಲ್ಟರ್ ಮತ್ತು ಎಡಿಟಿಂಗ್‌ನ ಮ್ಯಾಜಿಕ್. ಅವರೆಲ್ಲ ಜಾಹೀರಾತಿಗಾಗಿ ಹಣ ಪಡೆದು ಮಾಡುತ್ತಾರೆ” ಎಂದು ವಿವರಿಸಿ.
ಪಾಲಕರು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು?
ಮನೆಯಲ್ಲಿ ಅತಿಯಾಗಿ ಮೇಕಪ್ ಬಳಸುವುದನ್ನು ಕಡಿಮೆ ಮಾಡಿ.
“ನಾನು ಕಪ್ಪಾಗಿದ್ದೇನೆ” ಎಂದು ನಿಮ್ಮ ರೂಪದ ಬಗ್ಗೆ ದೂರು ಹೇಳುವುದನ್ನು ತಪ್ಪಿಸಿ.
ಮಕ್ಕಳು ನಿಮ್ಮನ್ನು ನೋಡಿಯೇ ಕಲಿಯುತ್ತಾರೆ.
ಮಕ್ಕಳ ಫೋನ್‌ನಲ್ಲಿ Parental Control ಅಳವಡಿಸಿ ಹಾಕಿ. ಸೌಂದರ್ಯ ಜಾಹೀರಾತುಗಳು ಮತ್ತು GRWM ವಿಡಿಯೋಗಳು ಕಡಿಮೆ ಬರುವಂತೆ ಮಾಡಿ.
ಆನ್‌ಲೈನ್ ಅಥವಾ ಅಂಗಡಿಯಿಂದ ಗೊತ್ತಾಗದಂತೆ ಕಾಸ್ಮೆಟಿಕ್ಸ್‌ಗಳನ್ನು ತಾರದಂತೆ ತಿಳಿ ಹೇಳುವುದು ಹೇಗೆ?
ಮಕ್ಕಳ ಹಣದ ಬಳಕೆ ಮತ್ತು ಬರುವ ಪಾರ್ಸೆಲ್‌ಗಳ ಮೇಲೆ ಗಮನವಹಿಸಿ. ಅನುಮತಿ ಇಲ್ಲದೆ ಶಾಪಿಂಗ್ ಮಾಡದಂತೆ ನೋಡಿಕೊಳ್ಳಿ.
ಚರ್ಮದಲ್ಲಿ ನಿಜವಾದ ಸಮಸ್ಯೆ ಇದ್ದರೆ YouTube ಕ್ರೀಮ್ ಬದಲು ನೇರವಾಗಿ ಚರ್ಮರೋಗ ವೈದ್ಯರ ಬಳಿ ಕರೆದೊಯ್ಯಿರಿ.
ಬ್ರಾಂಡ್ ಇಲ್ಲದ, ಅಗ್ಗದ ಕಾಸ್ಮೆಟಿಕ್ಸ್ ಬಳಸಿದರೆ Chemical Burn, ಶಾಶ್ವತ ಕಲೆಗಳು ಬರಬಹುದು ಎಂದು ಫೋಟೋ/ಉದಾಹರಣೆಗಳೊಂದಿಗೆ ಜಾಗೃತಿ ಮೂಡಿಸಿ.
ಅವರ “ಬೇಡಿಕೆ”ಗೆ ಬೇರೇ ದಾರಿ ಕೊಡಿ.
ಮಗುವಿಗೆ ಸ್ಕಿನ್‌ಕೇರ್ ಆಸೆ ಇದ್ದರೆ, ರಾಸಾಯನಿಕ ಕ್ರೀಮ್‌ಗಳ ಬದಲು ವೈದ್ಯರು ಹೇಳಿದ ನೈಸರ್ಗಿಕ ಮಾಯಿಶ್ಚರೈಸರ್ ಅಥವಾ ಸನ್‌ಸ್ಕ್ರೀನ್ ಮಾತ್ರ ಬಳಸಲು ಅನುಮತಿ ಕೊಡಿ.
ಇದರಿಂದ ಅವರ ಆಸೆಯೂ ಈಡೇರುತ್ತದೆ, ಚರ್ಮಕ್ಕೂ ಹಾನಿಯಾಗುವುದಿಲ್ಲ.
ಸೌಂದರ್ಯ ಎಂದರೆ ಹೊಳಪು ಅಲ್ಲ, ಧೈರ್ಯ .ಮಕ್ಕಳಿಗೆ “ನೀನು ಇರುವಂತೆಯೇ ಸುಂದರ” ಎಂಬ ಸಂದೇಶವನ್ನು ದಿನಾ ಹೇಳಿ.
ಫೋನ್‌ನ ಫಿಲ್ಟರ್‌ಗಿಂತ ಪೋಷಕರಾದ ನಿಮ್ಮ ಮಾತೇ ಅವರಿಗೆ ದೊಡ್ಡ ಧೈರ್ಯವನ್ನು ಹಿಮ್ಮಡಿಗೊಳಿಸುತ್ತದೆ.
ಭಾರ್ಗವಿ, ಜಿ, ಆರ್





