ಈ ಸಲಹೆಗಳನ್ನು ಫಾಲೋ ಮಾಡುತ್ತಾ, ಕೊರೆಯುವ ಚಳಿಗಾಲದಲ್ಲೂ ನಿಮ್ಮ ಗುಲಾಬಿ ತುಟಿಗಳ ಸೌಂದರ್ಯ ಮಾಸದ ಹಾಗೆ, ಸದಾ ಅದನ್ನು ಹೈಡ್ರೇಟೆಡ್ ಆಗಿ ಇರಿಸಿಕೊಳ್ಳುವುದು ಹೇಗೆ….?
ಧನುರ್ಮಾಸದ ಕೊರೆಯುವ ಚುಮು ಚುಮು ಚಳಿಗಾಲದಲ್ಲಿ ಶೀತ ಗಾಳಿ, ಥಂಡಿ ಹವೆ, ಒಣಗುವ ಚರ್ಮ, ಒಡೆಯುವ ತುಟಿಗಳ ಸಮಸ್ಯೆ ಮಾಮೂಲಿ ಬಿಡಿ. ಅದರಲ್ಲೂ ಹೆಣ್ಣಿನ ಗುಲಾಬಿಯಂಥ ತುಟಿಗಳು ಬಲು ನಾಜೂಕು ಹಾಗೂ ಕೋಮಲ ಎನಿಸುತ್ತದೆ. ಆರ್ದ್ರತೆಯ ಕೊರತೆ ಹಾಗೂ ಶೀತ ಗಾಳಿಯ ಕಾರಣ ತುಟಿಗಳು ಬೇಗ ಬೇಗ ಡ್ರೈ ಆಗಿ, ಒಡೆಯ ತೊಡಗುತ್ತವೆ, ಬಿರುಕುಬಿಟ್ಟು ಒಮ್ಮೊಮ್ಮೆ ರಕ್ತ ಜಿನುಗುವುದೂ ಉಂಟು. ಊಟ ಮಾಡುವಾಗ ಖಾರ ತಗುಲಿದರೆ ಉರಿ ಹೆಚ್ಚುತ್ತದೆ. ಚಳಿಗಾಲದಲ್ಲಿ ತುಟಿಗಳನ್ನು ಸದಾ ಸ್ವಸ್ಥ, ಮೃದು, ಬ್ಯೂಟಿ ಆಗಿರಿಸಿಕೊಳ್ಳಲು ಸರಿಯಾದ ಆರೈಕೆ ಹಾಗೂ ಪರಿಪಾಲಿಸಬೇಕಾದ ಅಭ್ಯಾಸಗಳು ಯಾವುವು ಎಂದು ಗಮನಿಸೋಣ. ಅದರ ನೆರವಿನಿಂದ ನಿಮ್ಮ ತುಟಿ ಒಡೆಯುವುದೂ ಇಲ್ಲ, ಡ್ರೈ ಆಗುವುದಿಲ್ಲ ಬದಲಿಗೆ ಗುಲಾಬಿಯಂತೆ ಮೃದುವಾಗಿ, ಕೋಮಲವಾಗುತ್ತದೆ. ಇಂಥ ತೊಂಡೆ ಹಣ್ಣಿನಂಥ ತುಟಿಗಳು ನಿಮ್ಮ ಮುಖದ ಸೌಂದರ್ಯಕ್ಕೆ ಕುಂದಣ ಇಟ್ಟಂತೆ ಎದ್ದು ಕಾಣುತ್ತದೆ.
ಮೊದಲಿಗೆ ತುಟಿಗಳನ್ನು ಸದಾ ಮಾಯಿಶ್ಚರೈಸ್ಟ್ ಆಗಿ ಇರಿಸುವುದು ಮುಖ್ಯ : ಚಳಿಗಾಲದಲ್ಲಿ ತುಟಿಗಳನ್ನು ಜೋಪಾನ ಮಾಡಿ. ಇವು ಡ್ರೈ ಆಗದಂತೆ ತಡೆಯಲು ಆಗಾಗ ಅಗತ್ಯವಾಗಿ ವ್ಯಾಸಲೀನ್, ಲಿಪ್ ಬಾಮ್ ಇತ್ಯಾದಿ ಸವರುತ್ತಾ ಅವನ್ನು ಸದಾ ಮಾಯಿಶ್ಚರೈಸ್ ಗೊಳಿಸುತ್ತಿರಿ. ಇದಕ್ಕಾಗಿ ಉತ್ತಮ ಗುಣಮಟ್ಟದ ಲಿಪ್ ಬಾಮ್ ಆರಿಸಿಕೊಳ್ಳಿ. ಇದರಲ್ಲಿ ನೈಸರ್ಗಿಕ ಘಟಕಗಳಾದ ಶಿಯಾ ಬಟರ್, ಕೋಕೋ ಬಟರ್ ಇರಬೇಕು. ಇವೆಲ್ಲ ತುಟಿಗಳ ಆಳಕ್ಕಿಳಿದು ಆರ್ದ್ರತೆ ಒದಗಿಸುತ್ತವೆ. ತುಟಿಗಳನ್ನು ಸದಾ ಹೈಡ್ರೇಟೆಡ್ ಆಗಿರಿಸಲು ರಾತ್ರಿ ಮಲಗುವ ಮುನ್ನ ಪೆಟ್ರೋಲಿಯಂ ಜೆಲಿ (ಅಂದ್ರೆ ವ್ಯಾಸಲೀನ್) ಸವರಿಕೊಳ್ಳುವುದು ಅತ್ಯಗತ್ಯ. ಇದು ಸುಲಭಕರ, ಪ್ರಭಾವಶಾಲಿ ಉಪಾಯ. ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ಆಯಿಲ್ ಇತ್ಯಾದಿ ಸಹ ಬೆಟರ್ ಮಾಯಿಶ್ಚರೈಸರ್ಸ್. ಇವನ್ನು ದಿನಕ್ಕೆ 4-5 ಸಲ ಹಚ್ಚಿಕೊಳ್ಳಬೇಕು.
ಡೆಡ್ ಸ್ಕಿನ್ ತೊಲಗಿಸಿ : ಇದನ್ನೇ ಎಕ್ಸ್ ಫಾಲಿಯೇಶನ್ ಅಂತಾರೆ. ತುಟಿಯ ಮೇಲೆ ಜಮೆಗೊಂಡ ಡೆಡ್ ಸ್ಕಿನ್ ತೊಲಗಿಸಬೇಕಾದುದು ಅತಿ ಅವಶ್ಯಕ ಕೆಲಸ. ಇದರಿಂದ ತುಟಿ ಶುಭ್ರ, ಮೃದು, ಕೋಮಲ ಆಗುತ್ತದೆ.
ಸಕ್ಕರೆ ಜೇನುತುಪ್ಪದ ಸ್ಕ್ರಬ್ : ಪುಡಿ ಸಕ್ಕರೆಗೆ ಜೇನುತುಪ್ಪ ಬೆರೆಸಿ, ಲಘುವಾಗಿ ನಿಮ್ಮ ಬೆರಳ ತುದಿಯಿಂದ ಮಸಾಜ್ ಮಾಡಿ. ಇದು ಆ ಭಾಗದ ಡೆಡ್ ಸ್ಕಿನ್ ತೊಲಗಿಸಿ, ಅದಕ್ಕೆ ಆರ್ದ್ರತೆ ಸಹ ಒದಗಿಸುತ್ತದೆ.
ಮೃದು ಬ್ರಶ್ ನ ಬಳಕೆ : ಮೃದು ಬ್ರಿಸ್ಸ್‌ಳ್ಳ ಒಂದು ಸಾಫ್ಟ್ ಟೂಥ್ ಬ್ರಶ್ ಬಳಸುತ್ತಾ, ನಿಮ್ಮ ಕೈಗಳಿಂದ ಮೃದುವಾಗಿ ಮಸಾಜ್ ಮಾಡಿ. ಇದರಿಂದ ಆ ಭಾಗದ ರಕ್ತ ಸಂಚಾರ ವೃದ್ಧಿಗೊಂಡು, ತುಟಿಗಳು ಗುಲಾಬಿಯಂತೆ ರಂಗೇರುತ್ತವೆ.
ಸದಾ ಹೈಡ್ರೇಟೆಡ್ ಆಗಿರಿ : ಚಳಿಗಾಲದಲ್ಲಿ ಸಾಮಾನ್ಯವಾಗಿ ನೀರು ಕುಡಿಯುವ ಅಭ್ಯಾಸ ಕಡಿಮೆ ಆಗುತ್ತದೆ. ಆಗ ಇದರ ನೇರ ಪರಿಣಾಮ ತುಟಿಗಳ ಮೇಲಾಗುತ್ತದೆ. ದೇಹದಲ್ಲಿ ನೀರಿನ ಕೊರತೆಯಿಂದಾಗಿ ತುಟಿಗಳು ಬೇಗ ಒಣಗುತ್ತವೆ. ಹೀಗಾಗಿ ದಿನಕ್ಕೆ 8-10 ಗ್ಲಾಸ್ ಧಾರಾಳ ನೀರು ಕುಡಿಯುತ್ತಾ, ನಿಮ್ಮ ತುಟಿಗಳನ್ನು ಸದಾ ಆರ್ದ್ರತೆಯಿಂದ ಕೂಡಿರುವಂತೆ, ಹೈಡ್ರೇಟೆಡ್ ಆಗಿರಿಸಿಕೊಳ್ಳಿ. ನಿಮ್ಮ ದೈನಂದಿನ ಸಲಾಡ್ ನಲ್ಲಿ ಅಗತ್ಯವಾಗಿ ನೀರಿನ ಅಂಶ ಹೆಚ್ಚಾಗಿರುವ ಈರುಳ್ಳಿ, ಕ್ಯಾರೆಟ್, ಸೌತೇಕಾಯಿ, ಮೂಲಂಗಿ, ಮೂಸಂಬಿ, ಕಿತ್ತಳೆ ಹಣ್ಣುಗಳನ್ನು ಬೆರೆಸಿಕೊಳ್ಳಿ.
ಸೂರ್ಯನ UV ಕಿರಣಗಳಿಂದ ಸುರಕ್ಷಿತರಾಗಿರಿ : ಚಳಿಗಾಲದಲ್ಲೂ ಸಹ ಸೂರ್ಯನ UV ಕಿರಣಗಳು ತುಟಿಗಳಿಗೆ ಹಾನಿ ಉಂಟು ಮಾಡಬಲ್ಲವು. ಹೀಗಾಗಿ 30 40 SPF ಯುಕ್ತ ಸನ್ ಸ್ಕ್ರೀನ್ ಲೋಶನ್ ಯಾ ಬಾಮ್ ತೀಡಿಕೊಳ್ಳಲು ಮರೆಯದಿರಿ. ಇದು ತುಟಿಗಳನ್ನು UV ಕಿರಣಗಳಿಂದ ರಕ್ಷಿಸುವುದಲ್ಲದೆ, ಅವಕ್ಕೆ ಹೆಚ್ಚಿನ ಮೃದುತ್ವ, ಕೋಮಲತೆ, ಆರ್ದ್ರತೆ ಒದಗಿಸುತ್ತದೆ.
ಚಳಿಗಾಲದಲ್ಲಿ ತುಟಿಗಳಿಗಾಗಿ ಬಳಸಬೇಕಾದ ವಿಶೇಷ ಮನೆಮದ್ದು ಯಾವುದೆಂದು ತಿಳಿಯೋಣವೇ?
ಜೇನುತುಪ್ಪದ ಮಿಶ್ರಣ : ರಾತ್ರಿ ಮಲಗುವ ಮುನ್ನ ನಿಮ್ಮ ತುಟಿಗಳಿಗೆ ಅಗತ್ಯವಾಗಿ ಜೇನುತುಪ್ಪ ಬೆರೆತ ಮಿಶ್ರಣ ಹಚ್ಚಿಕೊಳ್ಳಲು ಮರೆಯದಿರಿ. ಇದು ತುಟಿಗಳ ಆಳಕ್ಕಿಳಿದು ಉತ್ತಮ ಪೋಷಣೆ ನೀಡುತ್ತದೆ, ಒಡೆದ ತುಟಿಗಳನ್ನು ರಿಪೇರಿ ಮಾಡಲು ನೆರವಾಗುತ್ತದೆ.
ಆ್ಯಲೋವೇರಾ ಜೆಲ್ : ಆ್ಯಲೋವೇರಾದಲ್ಲಿ ನೈಸರ್ಗಿಕ ಹೀಲಿಂಗ್ ಗುಣ ಅಡಗಿದೆ. ತಾಜಾ ಆ್ಯಲೋವೇರಾ ಜೆಲ್ ನ್ನು ತುಟಿಗಳಿಗೆ ಸವರುವುದರಿಂದ, ಅದರ ಒಡೆತ, ಉರಿ, ಊತ ಇತ್ಯಾದಿ ಎಷ್ಟೋ ತಗ್ಗುತ್ತದೆ.
ಗುಲಾಬಿ ದಳಗಳು : ಹಸಿ ಹಾಲಿನಲ್ಲಿ ನೆನೆಸಿಡಲಾದ ಗುಲಾಬಿ ಹೂವಿನ (ಯಾವ ಬಣ್ಣವಾದರೂ ಸರಿ) ದಳಗಳನ್ನು ಪೇಸ್ಟ್ ಮಾಡಿಕೊಂಡು, ಅದಕ್ಕೆ ತುಸು ಬೆಣ್ಣೆ, ಕೆಲವು ಹನಿ ಜೇನು ಬೆರೆಸಿ, ತುಟಿಗಳಿಗೆ ಆಗಾಗ ತೀಡುವುದರಿಂದ ಅದರ ನೈಸರ್ಗಿಕ ಮೃದುತ್ವ ಹಿಂದಿರುಗುತ್ತದೆ.
ಈ ಕೆಳಗಿನ ಉತ್ತಮ ಅಭ್ಯಾಸ ರೂಢಿಸಿಕೊಂಡಿ, ತುಟಿಗಳು ದಣಿಯದಂತೆ ಎಚ್ಚರವಹಿಸಿ.
ಆಗಾಗ ತುಟಿಗಳನ್ನು ನಾಲಿಗೆಯಿಂದ ತೀಡದಿರಿ : ತುಟಿಗಳನ್ನು ಆಗಾಗ ನಾಲಿಗೆಯಿಂದ ತೀಡುವುದರಿಂದ, ಅವು ಮತ್ತಷ್ಟು ಬೇಗ ಒಣಗುತ್ತವೆ. ಏಕೆಂದರೆ ನಮ್ಮ ಲಾಲಾರಸದಲ್ಲಿನ ಕಿಣ್ವಗಳು ತುಟಿಗಳ ಆರ್ದ್ರತೆಯನ್ನು ಹಾಳು ಮಾಡುತ್ತವೆ.
ಧೂಮಪಾನದಿಂದ ದೂರವಿರಿ : ಧೂಮಪಾನದಂಥ ದುಶ್ಚಟದಿಂದ ಶಾಶ್ವತವಾಗಿ ದೂರವಿರಿ. ಇದರಿಂದ ನಿಮ್ಮ ತುಟಿ ಕಪ್ಪಾಗಿ, ಬೇಗ ಶುಷ್ಕಗೊಳ್ಳುತ್ತದೆ.
ಥಂಡಿ ಹವೆ, ಶೀತ ಗಾಳಿಯಿಂದ ರಕ್ಷಿಸಿಕೊಳ್ಳಿ : ಹೊರಗೆ ಹೋಗುವಾಗ ಪ್ರತಿ ಸಲ ಉತ್ತಮ ವುಲ್ಲನ್ ಡ್ರೆಸೆಸ್ ಧರಿಸಿರಿ. ಜೊತೆಗೆ ಸ್ಕಾರ್ಫ್ ಯಾ ಮಫ್ಲರ್ ನಿಂದ ತುಟಿಗಳನ್ನು ಕವರ್ ಮಾಡಿಕೊಳ್ಳಿ.
ಆಹಾರದ ಪ್ರಭಾವ : ಇದು ಸಹ ತುಟಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಮುಖ್ಯವಾಗಿ ವಿಟಮಿನ್ ಹಾಗೂ ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ ಧಾರಾಳವಾಗಿ ಇರುವಂಥ ಹಣ್ಣು, ತರಕಾರಿ, ಡ್ರೈ ಫ್ರೂಟ್ಸ್, ನಟ್ಸ್, ಬೀಜಗಳು, ಮೊಳಕೆಕಾಳು ಇತ್ಯಾದಿ ಸೇವಿಸಿ. ಆ್ಯಂಟಿಆಕ್ಸಿಡೆಂಟ್ಸ್ ತುಂಬಿರುವಂಥ ಹಣ್ಣುಗಳಾದ ದಾಳಿಂಬೆ, ಕಿತ್ತಳೆ, ಮೂಸಂಬಿ, ಬ್ಲೂಬೆರಿ ಇತ್ಯಾದಿ ಸೇವಿಸಿ.
ನಿಮ್ಮ ಮುಖದಲ್ಲಿನ ಮಂದಹಾಸ ಎಷ್ಟು ಪರಿಶುಭ್ರವಾಗಿರುತ್ತದೋ, ನಿಮ್ಮ ಒಟ್ಟಾರೆ ಪರ್ಸನಾಲಿಟಿ ಅಷ್ಟೇ ಆಕರ್ಷಕವಾಗಿ ಇರುತ್ತದೆ. ಇದಕ್ಕಾಗಿ ತುಟಿಗಳ ಆರೈಕೆಯತ್ತ ಖಂಡಿತಾ ಗಮನ ಕೊಡಬೇಕು.
– ಪ್ರತಿನಿಧಿ





