ನಮ್ಮ ಹಣೆಬರಹಕ್ಕೆ ಒಮ್ಮೊಮ್ಮೆ ಉಪಾಯ ಕೂಡ ಅಪಾಯ ಆಗುತ್ತೆ ಅನ್ನೋದಿಕ್ಕೆ ಉದಾ :

ಭಿಕಾರಿ : ಅಮ್ಮಾ….. ತಾಯಿ… ನೀವು ದಿನಾ ಭಿಕ್ಷೆ ಹಾಕುತ್ತೀರಿ ನಿಜ, ಬಹಳ ಒಳ್ಳೆಯವರು ಅನ್ನೋದೂ ನಿಜ. ಆದರೆ ತಪ್ಪು ತಿಳೀಬೇಡಿ ಅಮ್ಮ…. ಉಪ್ಪು, ಹುಳಿ, ಖಾರ ಇಲ್ಲದ ಇಂಥ ಅಡುಗೆಯನ್ನು ದಿನಾ ತಿನ್ನೋದಾದರೂ ಹೇಗೆ? ನೀವೇ ಹೇಳಿ ನೋಡೋಣ.

ಗೃಹಿಣಿ : ಏ ಹೋಗೋ ಭಿಕಾರಿ…. ನನ್ನ ಗಂಡನೇ ಒಂದು ದಿನಾನೂ ಏನೂ ಹೇಳದೆ ಬಾಯಿ ಮುಚ್ಚಿಕೊಂಡು ತಿಂತಾರಂತೆ….. ನಿಂದೇನು ಹೊಸ ಕ್ಯಾತೆ?

ಭಿಕಾರಿ : ಅಮ್ಮಾ….. ನಿಮ್ಮ ಯಜಮಾನ್ರೇ 20/ ರೂ. ಕೊಟ್ಟು ನಿಮ್ಮನ್ನು ಈ ಬಗ್ಗೆ ಕೇಳಿ ತಿಳ್ಕೊ ಅಂದ್ರಮ್ಮ. ನೋಡಿ, ಇಲ್ಲೇ ಕಾಂಪೌಂಡ್‌ ಗೋಡೆ ಹಿಂದೆ ಅವಿತುಕೊಂಡು, ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದಾರೆ!

ಸ್ಟೈಲಿಶ್‌ ಸಿತಾರಾ ಸರಸರನೆ ಹೊಸ ಚಪ್ಪಲಿ ಅಂಗಡಿಗೆ ಹೋದಳು. ಅಲ್ಲಿ ಸುಮಾರು ಒಂದೂವರೆ ಘಂಟೆ ಕಾಲ, ಅಂಗಡಿಯಲ್ಲಿದ್ದ ಎಲ್ಲಾ ಬಗೆಯ ಚಪ್ಪಲಿ, ಶೂ, ಸ್ಯಾಂಡಲ್ಸ್ ಹೊರೆಗೆಳೆಸಿ ತನಗೆ ಬೇಕಾದುದನ್ನು ಹುಡುಕಾಡಿದಳು. ಅಲ್ಲಿದ್ದ ಸೇಲ್ಸ್ ನವರ ಜೀವ ಬಾಯಿಗೆ ಬಂತೇ ಹೊರತು ಇವಳಿಗೆ ಯಾವುದೂ ಇಷ್ಟ ಆಗಲೇ ಇಲ್ಲ.

ಕೊನೆಯಲ್ಲಿ ಹೊಸ ಚಪ್ಪಲಿಗಳ ಅಡಿ ರಾಕ್‌ ನಲ್ಲಿದ್ದ ಹಳೆ ಬ್ರಾಂಡಿನದೊಂದು ಚಪ್ಪಲಿ ಅಂತೂ ಇಂತೂ ಇವಳ ಮೆಚ್ಚುಗೆ ಗಳಿಸಿತು. ಅದನ್ನು ಹಿಡಿದುಕೊಂಡು ಸಂಭ್ರಮದಿಂದ ಓಡಿಹೋಗಿ ಕ್ಯಾಶ್‌ ಕೌಂಟರಿನಲ್ಲಿದ್ದ ಮಾಲೀಕರಿಗೆ ತೋರಿಸಿದಳು, “ಇದರ ಬೆಲೆ ಎಷ್ಟು ಅಂತ ನೋಡಿ ಇವರೇ… ಇದನ್ನೇ ಪ್ಯಾಕ್‌ ಮಾಡಿಸಿ!” ಎಂದಳು.

“ಏನೂ ಬೇಡ ತಾಯಿ…. ಇದು ನಮ್ಮ ಅಂಗಡಿಯದಲ್ಲ… ಹೊಸ ಚಪ್ಪಲಿ ಟ್ರೈ ಮಾಡಲೆಂದು ನಿಮ್ಮದೇ ಹಳೇ ಚಪ್ಪಲಿ ನಮ್ಮ ರಾಕ್‌ ಕೆಳಗೆ ಇಟ್ಟಿದ್ದಿರಿ,” ಎಂದಾಗ ಸಿತಾರಾ ತಲೆ ಚಚ್ಚಿಕೊಳ್ಳುತ್ತಾ ಅಲ್ಲಿಂದ ಹೊರನಡೆದಳು.

ನೀತಿ : ಇರುವ ಗಂಡನನ್ನು ಬಿಟ್ಟು ಹೊಸ ಗಂಡನ್ನ ಹುಡುಕಿದರೆ ಆಗೋದೂ ಇದೇ ಗತಿ!

ನವ ವಿವಾಹಿತ ಪತಿ ರೊಮ್ಯಾಂಟಿಕ್‌ ಮೂಡ್‌ ನಲ್ಲಿದ್ದ. ಅವನ ಪತ್ನಿ ಆಗ ತಾನೇ ಅಡುಗೆ ಕಲಿಯ ತೊಡಗಿದ್ದಳು. ಹಾಗೆಂದು ಅವಳ ಅಡುಗೆ ಸರಿ ಇಲ್ಲ ಎಂದು ಟೀಕಿಸಿ ಅವನು ನೆಮ್ಮದಿ ಕಳೆದುಕೊಳ್ಳಲು ಸಾಧ್ಯವೇ?

ಪತ್ನಿ : ಏನ್ರೀ…. ಇವತ್ತಿನ ಅಡುಗೆ ತುಂಬಾ ಚೆನ್ನಾಗಿತ್ತು, ಅಲ್ಲವೇ? ನೀವೇನಂತೀರಿ….? ಊಟ ಮಾಡುವಾಗ ಏನೂ ಹೇಳಲೇ ಇಲ್ಲವಲ್ಲ…..?

ಪತಿ : ನಿನ್ನ ಈ ಬಿರಿದ ಕೇಶರಾಶಿಯ ಹಾಗೆ, ಹರಡಿದ ಈ ಮೇಘಮಾಲೆಗೆ ಸರಿಸಾಟಿಯುಂಟೇ? ಹಾಗಾಗಿಯೇ ಇದು ಗ್ರೇವಿಯಿಂದ ಹಿಡಿದು, ಚಪಾತಿಯವರೆಗೂ ಅನ್ನವನ್ನೂ ಬಿಡದೇ ಎಲ್ಲೆಲ್ಲೂ ತನ್ನ ಬೆಡಗು ಪ್ರದರ್ಶಿಸಿದೆ ಡಾರ್ಲಿಂಗ್‌!

ರೋಗಿ : ಡಾಕ್ಟ್ರೇ….. ಮೊನ್ನೆ ನೀವು ಔಷಧಿ ಚೀಟಿ (ಪ್ರಿಸ್‌ ಕ್ರಿಪ್ಶನ್‌) ಬರೆದು ಕೊಟ್ಟಿದ್ರಲ್ಲ, ಅದರ ಹಿಂದೆ ಕೊನೆ ಘಳಿಗೀಲಿ ಅವಸರದಲ್ಲಿ ಏನೋ ಬರೆದು ಕೊಟ್ಟಿರಿ. ಅದಕ್ಕಾಗಿ ಬೆಂಗಳೂರು ಪೂರ್ತಿ ಹುಡುಕಾಡಿದೆ, ಒಂದು ಅಂಗಡಿಯಲ್ಲಾದರೂ ಆ ಟಾನಿಕ್‌ಸಿಕ್ಕಿದ್ರೆ ಕೇಳಿ!

ಡಾಕ್ಟರ್‌ : ಬಡ್ಕೊಂಡ್ರು…. ನನ್ನ ಪೆನ್‌ ಸರಿಯಾಗಿ ಬರೆಯುತ್ತಿಲ್ಲ ಅಂತ ಚೀಟಿ ತಿರುವಿ ಹಾಕಿ, ಅದರ ಹಿಂದೆ ಗೀಚಿದ್ದಷ್ಟೇ ಅದು…..  ಟಾನಿಕ್‌ ಅಂತೇ ಟಾನಿಕ್ಕು!

ಒಂದು ಖಾಸಗಿ ಕಂಪನಿಯ ನಡುವಯಸ್ಸು ಮೀರಿದ ಬಾಸ್‌, ತನಗಾಗಿ ಒಬ್ಬ ಅತಿ ಬ್ಯೂಟಿಫುಲ್, ಅಪ್‌ ಟೇಡೆಟ್‌, ಗ್ಲಾಮರಸ್ ವೈಯಾರಿಯನ್ನು ಹೊಸದಾಗಿ ಸೆಕ್ರಿಟರಿ ಆಗಿ ನೇಮಿಸಿಕೊಂಡರು.

ಅದಾಗಿ ಒಂದು ತಿಂಗಳ ನಂತರ, ಅದೇನಾಯಿತೋ ಏನೋ, ಬಾಸ್‌ ತಮ್ಮ 25ನೇ ಮಹಡಿಯ ಛೇಂಬರ್‌ ನಿಂದ ಕೆಳಗೆ ಹಾರಿಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದೇ? ಅಲ್ಲಿಗೆ ಓಡಿಬಂದ ಪೊಲೀಸ್‌ ಪಡೆ ತಕ್ಷಣ ವಿಚಾರಣೆ ಆರಂಭಿಸಿತು.

ಇನ್ಸ್ಪೆಕ್ಟರ್‌ : ಆ ಸಮಯದಲ್ಲಿ ಬಾಸ್‌ ಛೇಂಬರ್‌ ನಲ್ಲಿ ಯಾರು ಯಾರು ಇದ್ದರು?

ಸೆಕ್ರೆಟರಿ : ಬೇರೆ ಯಾರೂ ಇರಲಿಲ್ಲ…. ನಾನು ಮಾತ್ರ ಇದ್ದೆ!

ಇನ್ಸ್ಪೆಕ್ಟರ್‌ : ಅಂದ್ರೆ…. ಅಸಲಿಗೆ ಆ ದಿನ ನಡೆದಿದ್ದಾರೂ ಏನು?

ಸೆಕ್ರೆಟರಿ : ಸರ್‌, ಅವರು ಬಹಳ ಒಳ್ಳೆಯ ವ್ಯಕ್ತಿ. ಮೊದಲ ದಿನದಿಂದಲೇ ನನ್ನ ಮೇಲೆ ಜೀವ ಇಟ್ಟಿದ್ದರು, ಅಂತಾನೇ ಧಾರಾಳವಾಗಿ ಹೇಳಬಹುದು. ನಾನು ಕೆಲಸಕ್ಕೆ ಸೇರಿದ 2ನೇ ವಾರವೇ ನನಗೆ 2 ಲಕ್ಷ ರೂ.ಗಳ ಹೊಸ ಗ್ಲಾಮರಸ್‌ ಡ್ರೆಸ್‌ ಗಿಫ್ಟ್ ಆಗಿ ನೀಡಿದರು. ಅದಾದ 2 ವಾರಗಳ ನಂತರ ನನಗೆ 15 ಲಕ್ಷದ ವಜ್ರದ ನೆಕ್ಲೇಸ್‌ ಪ್ರೆಸೆಂಟ್‌ ಮಾಡಿದರು. ಮೊನ್ನೆ ಅಂತೂ 50 ಲಕ್ಷ ಬೆಲೆ ಬಾಳುವ ಪ್ಲಾಟಿನಂ ಉಂಗುರ ತೊಡಿಸುತ್ತಾ, ನನ್ನನ್ನು ಮದುವೆ ಆಗ್ತೀಯಾ ಎಂದು ಪ್ರಪೋಸ್‌ಮಾಡಿದರು.

ಇನ್ಸ್ಪೆಕ್ಟರ್‌ : ಮುಂದೆ… ಏನಾಯ್ತು?

ಸೆಕ್ರೆಟರಿ : ಅಷ್ಟರಲ್ಲಿ ಅದೇ ಸಮಯಕ್ಕೆ ನನ್ನ ಫೋನ್‌ ರಿಂಗಾಯಿತು. ಬಾಸ್‌ ಹೇಗೆ, ಏನು ಎತ್ತ…. ಎಂದೆಲ್ಲ ಹೊಸ ಕಂಪನಿ ಬಗ್ಗೆ ನನ್ನ ತಂದೆ ವಿಚಾರಿಸಿದರು. ನಾನು ನನ್ನ ಬಾಸ್‌ ಬಗ್ಗೆ ಹೇಳುತ್ತಾ, ಅವರು ಬಹಳ ಒಳ್ಳೆಯರು ಎಂದು ವಿವರಿಸಿದೆ. `ಡ್ಯಾಡಿ, ನೀವು ಇಲ್ಲಿಗೆ ಬಂದು ನೋಡಬೇಕು…. ನನ್ನ ಬಾಸ್‌ ನನ್ನ ಮೇಲೆ ಪಂಚಪ್ರಾಣ ಇರಿಸಿಕೊಂಡಿದ್ದಾರೆ. ನನ್ನನ್ನು ಎಷ್ಟು ಪ್ರೀತಿಯಿಂದ ವಿಚಾರಿಸಿಕೊಳ್ಳುತ್ತಾರೆ ಗೊತ್ತಾ? ನೀವು ನೋಡಿದ್ರೆ… ಯಾವಾಗಲೂ ನನ್ನನ್ನು ಹುಡುಗಿ ತರಹ ಡ್ರೆಸ್‌, ಮೇಕಪ್‌ ಮಾಡಿಕೊಂಡು ಊರೆಲ್ಲ ಅಲೆಯಬೇಡ ಅಂತ ಬೈತಾ ಇರ್ತೀರಾ….’ ಎಂದು ಡ್ಯಾಡಿಗೆ ಹೇಳಿ ಮುಗಿಸಿ ಇತ್ತ ತಿರುಗಿ ನೋಡ್ತೀನಿ, ಭ್ರಮನಿರಸನಕ್ಕೆ ಒಳಗಾದ ಬಾಸ್‌, ಒಂದೇ ಸಲ 25ನೇ ಮಹಡಿಯಿಂದ ಕೆಳಗೆ ದುಮುಕಿ ಬಿಡುವುದೇ?

ಗುಂಡೂರಾಯರ ಬೋಳುತಲೆಯ ಮೇಲೆ ಡಿಂಗ್ರಿ ನೊಣ ಬಂದು ಕುಳಿತಿತ್ತು. ಅದನ್ನು ಕಂಡು ಸುಂದ್ರಿ ನೊಣ ಹೇಳಿತು, “ಆಹಾ…. ಎಂಥ ಭವ್ಯ ಮನೆ ಸಿಕ್ಕಿದೆ ನಿನಗೆ!”

ಅದಕ್ಕೆ ಡಿಂಗ್ರಿ ತುಸು ಬೇಸರದಿಂದ, “ಎಲ್ಲಿ ಬಂತು ಡಾರ್ಲಿಂಗ್‌…. ಈಗಿನ್ನೂ ಪ್ಲಾಟ್‌ ಕೊಂಡಿದ್ದೀನಷ್ಟೆ…..” ಎಂದು ಗೊಣಗುವುದೇ?

ಕಿಟ್ಟಿಯ ಹೆಂಡತಿ ಮಹಾ ಘಟವಾಣಿ, ಗಯ್ಯಾಳಿ. ಮಾತು ಮಾತಿಗೆ ಗಂಡನ ಜೊತೆ ಜಗಳವಾಡಿ ತವರು ಸೇರುತ್ತಿದ್ದಳು.

ಕಿಟ್ಟಿ ಈ ಸಲ ತವರಿಗೆ ಹೋದ ಅವಳ ಬಗ್ಗೆ ವಿಚಾರಿಸಲು ನೇರ ಮಾವನಿಗೆ ಫೋನ್‌ ಮಾಡಿದ.

ಕಿಟ್ಟಿ : ಮಾವ…. ಅವಳು ತವರಿಗೆ ಬಂದು ಈಗಾಗಲೇ 3 ವಾರ ಆಯ್ತು. ಇನ್ನಾದರೂ ಅವಳನ್ನು ಕಳಿಸಬಾರದೇ?

ಮಾವ : ಖಂಡಿತಾ ಅವಳು ಬರಲ್ಲ ಕಣಯ್ಯ! ಜಪ್ಪಯ್ಯ ಅಂದ್ರೂ ತಾನು ಗಂಡನ ಮನೆಗೆ ಹೋಗಲಾರೆ ಅಂತ ಕುಳಿತಿದ್ದಾಳೆ!

ಅದಾಗಿ 3 ವಾರ ಬಿಟ್ಟು ಮಾವನಿಗೆ ಮತ್ತೆ ಫೋನ್‌ ಮಾಡಿದ.

ಕಿಟ್ಟಿ : ಮಾವ, ಈಗಲಾದರೂ ಅವಳನ್ನು ಕಳಿಸಬಾರದೇ?

ಮಾವ : ಖಂಡಿತಾ ಅವಳು ಬರಲ್ಲ ಕಣಯ್ಯ… ಹೋಗೋದೇ ಇಲ್ಲ ಅಂತಾಳೆ!

ಕಿಟ್ಟಿ : ಈ ಮಾತನ್ನು ಮತ್ತೆ ಮತ್ತೆ ನಿಮ್ಮ ಬಾಯಲ್ಲಿ ಕೇಳೋಕ್ಕೆ ಎಷ್ಟು ಖುಷಿ ಆಗ್ತಿದೆ ಗೊತ್ತೇ?

ಪತ್ನಿ : ನೋಡ್ರಿ….. ನಮ್ಮ ಹಳೇ ಮಾಮರದ ಮೇಲೆ ಎಷ್ಟೊಂದು ಜೋಡಿ ಹಕ್ಕಿಗಳು ಗೂಡು ಕಟ್ಟಿಕೊಂಡು ಎಷ್ಟು ಪ್ರೀತಿಪ್ರೇಮದಿಂದ ಸಂಸಾರ ಮಾಡುತ್ತಾ, ಸದಾಕಾಲ ಕಲರವದಿಂದ ನಸುನಗುತ್ತಿರುತ್ತವೆ. ಮನುಷ್ಯರಾಗಿ ನಾವು ಇದ್ದೇವೆ…. ಅವುಗಳ ಮುಂದೆ ದಂಡಕ್ಕೆ! ಸದಾ ಕಿತ್ತಾಡೋದೇ ಆಗೋಯ್ತು……

ಪತಿ : ಆದರೆ ಡಾರ್ಲಿಂಗ್‌, ನೀನೊಂದು ವಿಷಯ ಗಮನಿಸಿದ್ದೀಯಾ? ಇಲ್ಲಿ ಬರುವ ಜೋಡಿ ಹಕ್ಕಿಗಳಲ್ಲಿ ಯಾವುದೂ ರಿಪೀಟ್ ಇರೋಲ್ಲ…. ಪುಣ್ಯ ಮಾಡಿವೆ…. ಹಾಯಾಗಿ ದಿನಾ ಜೋಡಿ ಬದಲಾಯಿಸುತ್ತಾ ಜೀವಿಸುತ್ತವೆ!

ಆ ಬ್ಯಾಚುಲರ್‌ ಗ್ಯಾಂಗ್‌ ನಲ್ಲಿ ಕಿಟ್ಟಿಯೇ ಮೊದಲು ಮದುವೆ ಆದದ್ದು. ಹನೀಮೂನ್‌ ಕಳೆದು, ಮದುವೆಯ ಜೋಶ್‌ ಇಳಿದು, ಮತ್ತೆ ಸ್ನೇಹಿತರನ್ನು ಸಂಜೆ ಭೇಟಿ ಆಗಲೆಂದು ಬರುವಷ್ಟರಲ್ಲಿ 6 ತಿಂಗಳೇ ಕಳೆದುಹೋಗಿತ್ತು.

ನಾಣಿ : ಯಾಕಯ್ಯ ಕಿಟ್ಟಿ…. ಡಲ್ ಆಗಿದ್ದೀಯಾ?

ಕಿಟ್ಟಿ : ಏನೂ ಇಲ್ಲ ಕಣೋ…. ಹೀಗೇ…..

ವೆಂಕಿ : ಅದೇನೂಂತ ಹೇಳಬಾರದೇ? ನೀನಾದರೋ ಸಂಸಾರಸ್ಥ…. ನಾವೆಲ್ಲ ಇನ್ನೂ ಗುಂಡ್ರುಗೋವಿಗಳು…..

ಕಿಟ್ಟಿ : ನಿಮ್ಮತ್ತಿಗೆ ಜೊತೆ ಸ್ವಲ್ಪ ವಾದವಿವಾದ ಆಯ್ತು…. ಸಂಸಾರ ಅಂದ ಮೇಲೆ ಇದ್ದೇ ಇರುತ್ತಲ್ಲ ತಲೆನೋವು….

ಸೀನ : ಅವಳು ಹೇಳಿದ್ದಕ್ಕೆಲ್ಲ ಗೋಣು ಆಡಿಸುತ್ತಾ ಬಂದಿರ್ತೀಯಾ…. ಬಹುಶಃ 15 ದಿನ ನಿಮ್ಮತ್ತೆ ಬಂದು ಟೆಂಟ್‌ ಹಾಕ್ತಾರೆ ಅಂತ ಕಾಣ್ಸುತ್ತೆ…..

ಕಿಟ್ಟಿ : ……..

ಗುಂಡ : ಸಾರ್‌, ಈಗಲಾದರೂ ನನ್ನ ಸಂಬಳ ಜಾಸ್ತಿ ಮಾಡಿ, ನನಗೆ ಮದುವೆ ಫಿಕ್ಸ್ ಆಗಿದೆ….

ಮ್ಯಾನೇಜರ್‌ : ಆಗಲ್ಲ…. ಆಫೀಸ್‌ ಹೊರಗೆ ನಡೆಯುವ ದುರ್ಘಟನೆಗಳಿಗೆ ಕಂಪನಿ ಖಂಡಿತಾ ಹೊಣೆಯಲ್ಲ!

ಗೋಪಿ : ಅರೇ ಅಂಜಲಿ…. ದಿನಾ ಮೆಟ್ರೋದಲ್ಲಿ ಮೀಟ್‌ ಮಾಡ್ತಾ ಇರ್ತೀನಿ, ನಿನಗೆ ನನ್ನ ಗುರುತು ಸಿಗಲಿಲ್ಲವೇ?

ಅಂಜಲಿ : ಇಲ್ಲವಲ್ಲ… ಯಾರು ನೀನು?

ಗೋಪಿ : ಅರೇ…. ನಿನ್ನೆಯೂ ಎಂ.ಜಿ ರೋಡ್‌ ಸ್ಟೇಷನ್‌ ನಲ್ಲಿ ಇಳಿಯುವಾಗ ನಿನ್ನನ್ನು ಇದೇ ಮಾತನ್ನು ಕೇಳಿದ್ದೆನಲ್ಲ, ಅವನೇ ನಾನು….!

ಜಪಾನೀ ವ್ಯಕ್ತಿ : ಅವರು ಯಾರೋ ಈ ಕೆಲಸ ಮಾಡಬಹುದು ಅಂದ್ರೆ, ನಾನೂ ಸಹ ಖಂಡಿತಾ ಆ ಕೆಲಸ ಮಾಡಬಲ್ಲೆ! ಅಕಸ್ಮಾತ್‌ ಬೇರೆ ಯಾರಿಂದಲೂ ಆ ಕೆಲಸ ಮಾಡಲು ಆಗುತ್ತಿಲ್ಲ ಅಂದ್ರೆ ಆಗಲೂ ನಾನು ಅದನ್ನು ಖಂಡಿತಾ ಮಾಡಿ ತೋರಿಸಬಲ್ಲೆ!

ನಮ್ಮವರು : ಅವರು ಯಾರೋ ಈ ಕೆಲಸ ಮಾಡಬಹುದು ಅಂದ್ರೆ, ನಾನು ಯಾಕ್ರಿ ಆ ಕೆಲಸ ಮಾಡಲಿ? ಬೇರೆ ಯಾರಿಗೂ ಆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಅಂದ ಮೇಲೆ, ನನ್ನಿಂದ ಮಾತ್ರ ಸಾಧ್ಯ ಅಂತ ಹೇಗೆ ಅಂದುಕೊಂಡ್ರೀ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ